ಅಮೆರಿಕ: ಕಗ್ಗತ್ತಲಲ್ಲೇ ಉಳಿದ 50 ಲಕ್ಷ ಮನೆಗಳು

7

ಅಮೆರಿಕ: ಕಗ್ಗತ್ತಲಲ್ಲೇ ಉಳಿದ 50 ಲಕ್ಷ ಮನೆಗಳು

Published:
Updated:
ಅಮೆರಿಕ: ಕಗ್ಗತ್ತಲಲ್ಲೇ ಉಳಿದ 50 ಲಕ್ಷ ಮನೆಗಳು

ವಾಷಿಂಗ್ಟನ್ (ಐಎಎನ್‌ಎಸ್): ಐರಿನ್ ಚಂಡಮಾರುತದಿಂದ ಅಮೆರಿಕದ ಪೂರ್ವ ಕರಾವಳಿಯ 11 ರಾಜ್ಯಗಳಲ್ಲಿ ಒಟ್ಟು 38 ಜನರು ಸತ್ತಿದ್ದಾರೆ. 50 ಲಕ್ಷಕ್ಕೂ ಹೆಚ್ಚು ಮನೆಗಳು ಮತ್ತು ವ್ಯಾಪಾರ ಕೇಂದ್ರಗಳು ಇನ್ನೂ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗದೆ ಕಗ್ಗತ್ತಲಲ್ಲಿವೆ.ಸೋಮವಾರ ಬೆಳಿಗ್ಗೆ ನ್ಯೂಜೆರ್ಸಿ ಮತ್ತಿತರ ಕಡೆಗಳಿಂದ ನ್ಯೂಯಾರ್ಕ್‌ಗೆ ರೈಲು ಸಂಪರ್ಕ ಇಲ್ಲದ ಕಾರಣ ಹೊರವಲಯ ಪ್ರದೇಶದ ಅನೇಕ ನಿವಾಸಿಗಳು ಮನೆಯಲ್ಲೇ ಉಳಿಯಬೇಕಾಯಿತು ಎಂದು ಮಾಧ್ಯಮ ವರದಿಗಳು ಹೇಳಿವೆ. ಐರಿನ್ ಚಂಡಮಾರುತದಿಂದಾಗಿ ಅನೇಕ ನದಿಗಳು ದಾಖಲೆ ಮಟ್ಟದಲ್ಲಿ ಉಕ್ಕಿ ಹರಿದಿದ್ದು ವಿವಿಧ ಪ್ರದೇಶಗಳಲ್ಲಿ ಪ್ರವಾಹ ಕಾಣಿಸಿಕೊಂಡಿದೆ ಎಂದು ನ್ಯೂಯಾರ್ಕ್ ಡೈಲಿ ನ್ಯೂಸ್ ವರದಿ ಮಾಡಿದೆ.ನ್ಯೂಯಾರ್ಕ್‌ನ ಹೊರವಲಯದಲ್ಲಿ ಸಣ್ಣ ನದಿಗಳು ಕೂಡಾ ನಿಯಂತ್ರಣ ಮೀರಿ ಹರಿದಿವೆ. ಅನೇಕ ಕಡೆಗಳಲ್ಲಿ ಚಂಡಮಾರುತ ಬೀಸಿ ಹೋದ ನಂತರ ಗರಿಷ್ಠ ಪ್ರಮಾಣದ ಅಪಾಯದ ಕ್ಷಣಗಳು ಎದುರಾಗಿವೆ. ಮಳೆ ನೀರು ನದಿ, ತೊರೆಗಳಲ್ಲಿ ಹರಿದು ಅವುಗಳಲ್ಲೂ ಪ್ರವಾಹ ಕಾಣಿಸಿಕೊಳ್ಳುವಂತೆ ಮಾಡಿದೆ.ನ್ಯೂಯಾರ್ಕ್‌ನ ಜನರು ಈ ಪ್ರವಾಹದಿಂದ ಬೆಚ್ಚಿ ಬಿದ್ದಿದ್ದಾರೆ. ಕಾರು ಮತ್ತು ಇತರ ವಾಹನಗಳು ಪ್ರವಾಹದಲ್ಲಿ ಆಟಿಕೆಯಂತೆ  ತೇಲುತ್ತಿದ್ದರೆ, ಮನೆಗಳ ಅಡಿಪಾಯ ಕುಸಿದು ಬಿತ್ತು. ಮರಗಳು ಬುಡಸಮೇತ ನೆಲಕ್ಕುರುಳಿದವು. ಐರಿನ್‌ನಿಂದಾಗಿ ವೆರ್ಮಾಂಟ್‌ನಲ್ಲಿ 11 ಇಂಚು ಮತ್ತು ನ್ಯೂಯಾರ್ಕ್‌ನ ಕೆಲವೆಡೆ 13 ಇಂಚಿಗೂ ಹೆಚ್ಚು ಮಳೆ ಆಗಿದೆ. ಶತಮಾನ ಕಂಡ ಅತ್ಯಂತ ಕೆಟ್ಟ ಪ್ರವಾಹ ಇದು ಎಂದು ವೆರ್ಮಾಂಟ್‌ನ ಗವರ್ನರ್ ಬಣ್ಣಿಸಿದ್ದಾರೆ.ಈ ಮಧ್ಯೆ, ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದ ಮತ್ತು ಕೆಳಗೆ ಬಿದ್ದ ವಿದ್ಯುತ್‌ತಂತಿಗಳಿಂದಾಗಿ ಸಂಭವಿಸಿದ ವಿದ್ಯುತ್ ಆಘಾತದಲ್ಲಿ ಸತ್ತವರ ಶವಗಳು ಪತ್ತೆಯಾಗಿದ್ದು ಒಟ್ಟು ಸಾವಿನ ಸಂಖ್ಯೆ 38ಕ್ಕೆ ಏರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry