ಅಮೆರಿಕ ಕಡೆಗೆ ಗುಲ್ಬರ್ಗ ವಿವಿ ನಡಿಗೆ

7

ಅಮೆರಿಕ ಕಡೆಗೆ ಗುಲ್ಬರ್ಗ ವಿವಿ ನಡಿಗೆ

Published:
Updated:
ಅಮೆರಿಕ ಕಡೆಗೆ ಗುಲ್ಬರ್ಗ ವಿವಿ ನಡಿಗೆ

ಜಾಗತೀಕರಣದಿಂದ ತೆರೆದುಕೊಂಡ ಶೈಕ್ಷಣಿಕ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಂಡಿರುವ ಗುಲ್ಬರ್ಗ ವಿಶ್ವವಿದ್ಯಾಲಯವು ಅಮೆರಿಕದ `ಕೊಲೊರಾಡೊ ಸ್ಟೇಟ್ ಯುನಿವರ್ಸಿಟಿ~ (ಸಿಎಸ್‌ಯು) ಜತೆ ಮಹತ್ವದ ಅಂತರರಾಷ್ಟ್ರೀಯ ಸಂಶೋಧನಾ ಒಪ್ಪಂದವೊಂದನ್ನು ಈಚೆಗೆ ಮಾಡಿಕೊಂಡಿದೆ. ಈ ಮೂಲಕ ದೇಶದ ಹಲವು ವಿಜ್ಞಾನ ಸಂಶೋಧನಾ ಸಂಸ್ಥೆಗಳ ಗಮನವನ್ನು ಗುಲ್ಬರ್ಗ ವಿವಿ ಸೆಳೆಯುತ್ತಿದೆ.ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನಕ್ಕಿಂತ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯ ಕೈಗೊಂಡು `ಪೇಟೆಂಟ್~ ಹಕ್ಕು ಪಡೆಯುವುದು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಹೀಗಾಗಿಯೆ ಗುಲ್ಬರ್ಗ ವಿವಿ, ಹೈದರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶ ಹಲವು ಸಮಸ್ಯೆಗಳಿಗೆ ಸಂಶೋಧನೆ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದುವರಿದ ದೇಶದ ಅದರಲ್ಲೂ ಬಿಸಿಲು ಹೆಚ್ಚಾಗಿರುವ ಪ್ರದೇಶದಲ್ಲಿರುವ ವಿದೇಶಿ ವಿಶ್ವವಿದ್ಯಾಲಯವೊಂದರ ಜತೆ ಜ್ಞಾನ ವಿನಿಮಯಕ್ಕೆ ಮುಂದಾಗಿದೆ.ಹಿಂದಿನ ವರ್ಷ ಡಿಸೆಂಬರ್‌ನಲ್ಲಿ ಗುಲ್ಬರ್ಗ ವಿವಿ ಕುಲಪತಿ ಡಾ. ಈ.ಟಿ. ಪುಟ್ಟಯ್ಯ ನೇತೃತ್ವದ ನಿಯೋಗವೊಂದು ಕೊಲೊರಾಡೊ ವಿವಿ ಕ್ಯಾಂಪಸ್‌ಗೆ ಭೇಟಿ ಕೊಟ್ಟು, ಆಹಾರ, ನೀರು, ಸೂರ್ಯನ ಬೆಳಕಿನ ಪರಿಣಾಮಕಾರಿ ಬಳಕೆಗೆ ಸಂಬಂಧಿಸಿದ ವಿವಿಧ ಸಂಶೋಧನೆ ಮತ್ತು ಅದರ ಅನುಷ್ಠಾನ ಪರಿಶೀಲಿಸಿತ್ತು. `ಗುಲ್ಬರ್ಗದಲ್ಲಿ ವರ್ಷದ 11 ತಿಂಗಳು ಬಿಸಿಲಿರುತ್ತದೆ. ಕೊಲೊರಾಡೊದಲ್ಲಿ ಒಂಬತ್ತು ತಿಂಗಳು ಬಿಸಿಲು ಇರುತ್ತದೆ.ಬಿಸಿಲಿನಿಂದಲೆ ಇಡೀ ಕ್ಯಾಂಪಸ್‌ಗೆ ವಿದ್ಯುತ್ ಪೂರೈಸಿ, ಸರ್ಕಾರಕ್ಕೆ ವಿದ್ಯುತ್ ಮಾರಾಟ ಮಾಡುವಷ್ಟು ಅಭಿವೃದ್ಧಿ ಹೊಂದಿದ ತಂತ್ರಜ್ಞಾನವನ್ನು ಸಿಎಸ್‌ಯು ಅನುಷ್ಠಾನಗೊಳಿಸಿದೆ. ಸೂರ್ಯನಗರ ಎಂದು ಕರೆಸಿಕೊಳ್ಳುವ ಗುಲ್ಬರ್ಗದಲ್ಲಿ ಇದೇಕೆ ಸಾಧ್ಯವಿಲ್ಲ~ ಎನ್ನುವುದು ಪುಟ್ಟಯ್ಯ ಅವರ ಮಾರ್ಮಿಕ ಪ್ರಶ್ನೆ.

 

ಒಪ್ಪಂದದ ರೂವಾರಿ ಕುಲಪತಿ ಪುಟ್ಟಯ್ಯ

ಕೊಲೊರಾಡೊ ಸ್ಟೇಟ್ ಯುನಿವರ್ಸಿಟಿಯಲ್ಲಿ ಕೈಗೊಂಡಿರುವ ವಿವಿಧ ಸಂಶೋಧನೆಗಳನ್ನು ಗುಲ್ಬರ್ಗ ಪ್ರದೇಶಕ್ಕೆ ಹೊಂದಿಸಿಕೊಳ್ಳುವ ಬಗ್ಗೆ ಸಂಶೋಧನೆಗಳನ್ನು ಕೈಗೊಳ್ಳುವ ಸಲುವಾಗಿ  `ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಫಾರ್ ಫುಡ್ ಎನರ್ಜಿ ಅಂಡ್ ವಾಟರ್ ಸೆಕ್ಯುರಿಟಿ~ ಹೆಸರಿನ `ಸಂಶೋಧನೆ ಮತ್ತು ಅಭಿವೃದ್ಧಿ~ ಪ್ರಯೋಗಾಲಯಗಳನ್ನು ಗುಲ್ಬರ್ಗ ವಿವಿಯ `ಜ್ಞಾನಗಂಗಾ~ ಕ್ಯಾಂಪಸ್‌ನಲ್ಲಿ ಸ್ಥಾಪಿಸಲು ಈಗಾಗಲೇ ರೂಪುರೇಷೆಗಳನ್ನು ಸಿದ್ಧಗೊಳಿಸಲಾಗಿದೆ. ಇದನ್ನು ಅನುಮೋದನೆಗಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ ಕಳುಹಿಸಿಕೊಟ್ಟಿದೆ.ಒಟ್ಟು ರೂ. 116 ಕೋಟಿ ಅನುದಾನ ಬಳಕೆ ಮಾಡಿಕೊಂಡು ಕೈಗೊಳ್ಳುವ ಸಂಶೋಧನಾ ಪ್ರಸ್ತಾವಕ್ಕೆ ಕೊಲೊರಾಡೊ ವಿವಿ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಎಲ್ಲ ಒಪ್ಪಂದದ ವಿವರಗಳು ಸದ್ಯ ಕೇಂದ್ರ ಸರ್ಕಾರದ  ಪರಿಶೀಲನೆಯಲ್ಲಿವೆ. `ಇದೊಂದು ಮಹತ್ವದ ಒಪ್ಪಂದ. ಹಿಂದುಳಿದ ಪ್ರದೇಶದಲ್ಲಿ ಈ ರೀತಿಯ ಸಂಶೋಧನೆಗೆ ಬುನಾದಿ ಹಾಕಿರುವುದು ಒಳ್ಳೆಯ ಬೆಳವಣಿಗೆ ಎಂದು ಈಗಾಗಲೇ ಯುಜಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಖಂಡಿತವಾಗಿಯೂ ಮುಂದಿನ ಆರ್ಥಿಕ ವರ್ಷದಲ್ಲಿ ಶೇ 70ರಷ್ಟು ಅನುದಾನ ದೊರೆಯುತ್ತದೆ ಎನ್ನುವ ವಿಶ್ವಾಸವಿದೆ~ ಎನ್ನುತ್ತಾರೆ ಕುಲಪತಿ ಪುಟ್ಟಯ್ಯ.ಕೊಲೊರಾಡೊದಲ್ಲಿ ಹರಿಯುವ ಏಕೈಕ ನದಿಯ ನೀರನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಸಿಎಸ್‌ಯು ಹಲವಾರು ಸಂಶೋಧನೆಗಳನ್ನು ಕೈಗೊಂಡು, ವಿವಿಧ ಕೈಗಾರಿಕೆಗಳ ಸಹಯೋಗದಲ್ಲಿ ಅನುಷ್ಠಾನಗೊಳಿಸಿದೆ. `ಹೈದರಾಬಾದ್ ಕರ್ನಾಟಕ ವಿಭಾಗದಲ್ಲಿ ನೀರಿನ ಲಭ್ಯತೆ ಕಡಿಮೆ ಇದೆ. ಕಡಿಮೆ ನೀರಿನಲ್ಲಿ ಹೆಚ್ಚಿನ ಫಸಲು ಪಡೆಯುವುದು ಹೇಗೆ ಎಂಬುದರ ಬಗ್ಗೆ ಅವರೊಂದಿಗೆ ಸಂವಾದ, ಸಂಶೋಧನೆಗಳನ್ನು ಕೈಗೊಂಡು ಪೇಟೆಂಟ್ ಪಡೆಯಲಾಗುವುದು. ಒಟ್ಟಾರೆ ಈ ಪ್ರದೇಶದಲ್ಲಿ ನಡೆಯುವ ಸಂಶೋಧನೆಗಳು ಈ ಭಾಗದ ಅಭಿವೃದ್ಧಿಗೆ ಪೂರಕವಾಗಬೇಕು ಎನ್ನುವುದು ಮುಖ್ಯ ಉದ್ದೇಶ~ ಎನ್ನುತ್ತಾರೆ.ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಗುಲ್ಬರ್ಗ ವಿವಿ ಕ್ಯಾಂಪಸ್‌ನಲ್ಲಿ ಒಂದು ಅತ್ಯಾಧುನಿಕ ಪ್ರಯೋಗಾಲಯ, ಜಲ ಮತ್ತು ಸೂರ್ಯಶಕ್ತಿ ಬಳಕೆ ಬಗ್ಗೆ ಸೇಡಂ ತಾಲ್ಲೂಕಿನ ಕಾಗಿಣಾ ನದಿಯ ಹತ್ತಿರ ಇನ್ನೊಂದು ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪನೆಯಾಗಲಿವೆ.ಐದು ವರ್ಷದ ಮಟ್ಟಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಗುಲ್ಬರ್ಗ ಮತ್ತು ಕೊಲೊರಾಡೊ ಸಂಶೋಧಕರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವುದರ ಜತೆಯಲ್ಲೆ ಸಂದರ್ಭಕ್ಕೆ ಅನುಗುಣವಾಗಿ ಪರಸ್ಪರ ನಿಯೋಗಗಳು ಪ್ರಯೋಗಾಲಯಗಳಿಗೆ ಭೇಟಿಕೊಡಲಿವೆ. ಬರುವ ಮಾರ್ಚ್ ಎರಡನೇ ವಾರ ಕೊಲೊರಾಡೊ ವಿವಿಯಿಂದ ವಿಜ್ಞಾನಿಯೊಬ್ಬರು ಗುಲ್ಬರ್ಗ ವಿವಿ ಕ್ಯಾಂಪಸ್‌ಗೆ ಆಗಮಿಸುತ್ತಿದ್ದಾರೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದ ವಿವಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಸಿಎಸ್‌ಯು ಇತಿಹಾಸದಲ್ಲಿ ಇದೇ ಮೊದಲು.ಹೈದರಾಬಾದ್ ಕರ್ನಾಟಕದ ಹಿಂದುಳಿದ ಪ್ರದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೈಗೊಳ್ಳುವುದಕ್ಕೆ ಭೂಮಿಕೆ ಸಿದ್ಧಗೊಳಿಸುವುದು ಸವಾಲಿನ ಕೆಲಸ. ಸಸ್ಯಶಾಸ್ತ್ರದಲ್ಲಿ ಪ್ರಾವಿಣ್ಯತೆ ಪಡೆದ ಕುಲಪತಿ ಪುಟ್ಟಯ್ಯ ಅವರ ಶೈಕ್ಷಣಿಕ ವಲಯದ ಆಸಕ್ತಿಯ ಪರಿಣಾಮ, ಇತಿಹಾಸದಲ್ಲೆ ಮೊದಲ ಬಾರಿಗೆ ವಿದೇಶಿ ವಿ.ವಿ. ಜತೆ ಗುಲ್ಬರ್ಗ ವಿ.ವಿ. ಜ್ಞಾನ ವಿನಿಮಯದ ಬಾಗಿಲು ತೆರೆಯಲು ಸಾಧ್ಯವಾಗಿದೆ. ಈ ಭಾಗದ ವೈಜ್ಞಾನಿಕ ಸಂಶೋಧನೆಗಳಿಗೆ ಹೊಸ ದಿಕ್ಕು ತೋರಿಸಲು ಪುಟ್ಟಯ್ಯ ಪಣ ತೊಟ್ಟಿದ್ದಾರೆ. ರಾಜ್ಯದ ಉನ್ನತ ಶಿಕ್ಷಣ ಆಯುಕ್ತರಾಗಿದ್ದ ಮದನ್‌ಗೋಪಾಲ ಅವರು ಕೊಲೊರಾಡೊ ವಿವಿಯೊಂದಿಗೆ ಈ ಒಪ್ಪಂದ ಏರ್ಪಡಲು ಮುಖ್ಯವಾಗಿ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಿದ್ದಾರೆ.`ವಿಶ್ವದ ಎಲ್ಲ ಮೂಲೆಗಳಿಂದಲೂ ಜ್ಞಾನ ಹರಿದು ಬರಲಿ~ ಎನ್ನುವ ವೇದವಾಕ್ಯವನ್ನು ಅನುಸರಿಸಿದ ಗುಲ್ಬರ್ಗ ವಿವಿ, ಹೈ.ಕ. ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಯತ್ನ ಮುಂದುವರಿಸಿದೆ. ರಾಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಜೈವಿಕ ತಂತ್ರಜ್ಞಾನ, ಪರಿಸರ ವಿಜ್ಞಾನ, ಗ್ರಂಥಾಲಯ ವಿಜ್ಞಾನ ವಿಭಾಗಗಳ ಸಂಶೋಧಕರು ಈ ನೂತನ ಅಂತರರಾಷ್ಟ್ರೀಯ ಪ್ರಯೋಗಾಲಯದಲ್ಲಿ ಸಂಶೋಧನೆ ಕಾರ್ಯ ಕೈಗೊಳ್ಳಲಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry