ಭಾನುವಾರ, ಏಪ್ರಿಲ್ 11, 2021
28 °C

ಅಮೆರಿಕ ಚಿತ್ರಮಂದಿರದಲ್ಲಿ ಯದ್ವಾತದ್ವ ಗುಂಡಿನ ದಾಳಿ: 14 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಕೊಲರಾಡೊ ಪ್ರಾಂತ್ಯದ ಡೆನ್ವರ್ ನಗರದ ಹೊರವಲಯದ ಚಿತ್ರಮಂದಿರವೊಂದರಲ್ಲಿ ಬಹು ನಿರೀಕ್ಷಿತ ಬ್ಯಾಟ್‌ಮನ್ ಸರಣಿಯ ಚಿತ್ರ `ದ ಡಾರ್ಕ್ ನೈಟ್ ರೈಸಸ್~ ವೀಕ್ಷಣೆ ವೇಳೆ ಅನಿಲ ನಿರೋಧಕ , ಮುಖವಾಡಧಾರಿ ವ್ಯಕ್ತಿಗಳಿಬ್ಬರು ಮನ ಬಂದಂತೆ ಗುಂಡು ಹಾರಿಸಿದ ಪರಿಣಾಮವಾಗಿ 14 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ತಲೆ ಮರೆಸಿಕೊಂಡಿರುವ ಇನ್ನೊಬ್ಬ ವ್ಯಕ್ತಿಯ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಹತ್ತು ಮಂದಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ನಾಲ್ವರು ಆಸ್ಪತ್ರೆಯಲ್ಲಿ ಅಸುನೀಗಿದರು. ಬ್ಯಾಟ್‌ಮನ್ ಸರಣಿಯ `ದ ಡಾರ್ಕ್ ನೈಟ್ ರೈಸಸ್~ ಚಿತ್ರ ಔರೋರಾ ಮಾಲ್‌ನ `ಸೆಂಚುರಿ 16~ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿತ್ತು.

`ಭಯೋತ್ಪಾದಕ ಕೃತ್ಯವಲ್ಲ~: ಘಟನೆ ನಡೆಯುತ್ತಿದ್ದಂತೆಯೇ ಎಫ್‌ಬಿಐ ತಂಡ ಸ್ಥಳಕ್ಕೆ ಆಗಮಿಸಿ  ಸಾಕ್ಷ್ಯ ಸಂಗ್ರಹ ಮಾಡಿತು. ಪ್ರಾಥಮಿಕ ತನಿಖೆ ನಡೆಸಿರುವ ಎಫ್‌ಬಿಐ, ಈ ಘಟನೆಯ ಹಿಂದೆ ಯಾವುದೇ ಭಯೋತ್ಪಾದಕರ ಕೈವಾಡವಿಲ್ಲ ಎಂದು ಮೇಲ್ನೋಟಕ್ಕೆ ತಿಳಿದು ಬಂದಿರುವುದಾಗಿ ಹೇಳಿದೆ.

ಪೊಲೀಸರ ವಶದಲ್ಲಿರುವ ಶಂಕಿತ ವ್ಯಕ್ತಿಯ ಹೇಳಿಕೆ ಪ್ರಕಾರ, ಅವನು ಇಡೀ ಕಟ್ಟಡ ಸ್ಫೋಟಿಸುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ. ಮತ್ತೊಬ್ಬ ಶಂಕಿತ ವ್ಯಕ್ತಿಯ ವಿರುದ್ಧ ಯಾವುದೇ ಸುಳಿವು ದೊರೆತಿಲ್ಲ ಎಂದು ಔರೋರ್ ಪೊಲೀಸ್ ಮುಖ್ಯಸ್ಥ ಡಾನ್ ಓಟ್ಸ್ ಹೇಳಿದ್ದಾರೆ.

ಘಟನೆಯ ವಿವರ:  ಡೆನ್ವರ್ ಹೊರವಲಯದ ಔರೋರಾ ಮಾಲ್‌ನಲ್ಲಿರುವ  `ಸೆಂಚುರಿ 16~  ಚಿತ್ರಮಂದಿರದಲ್ಲಿ  ಕ್ರಿಸ್ಟಿಯನ್ ಬೇಲ್  ಮತ್ತು ಆ್ಯನಿ ಹಾತ್‌ವೇ  ಅವರು ನಟಿಸಿರುವ ಈ ಚಿತ್ರ ಪ್ರದರ್ಶನವಾಗುತ್ತಿತ್ತು. ಆ ವೇಳೆ ಅನಿಲ ನಿರೋಧಕ ಮುಸುಕುಧಾರಿ ದುಷ್ಕರ್ಮಿಗಳು ತುರ್ತು ನಿರ್ಗಮನದ ಬಾಗಿಲು ಮುರಿದು ಒಳ ಪ್ರವೇಶಿಸಿದರು.  ಸಿನಿಮಾ ವೀಕ್ಷಿಸುತ್ತಿದ್ದ ಪ್ರೇಕ್ಷಕರ ಮಧ್ಯೆ ಹೊಗೆ ಬಾಂಬ್ ಎಸೆದು, ಹೊಗೆ ದಟ್ಟವಾಗಿ ಹರಡಿದ ನಂತರ ಸ್ವಯಂ ಚಾಲಿತ ಬಂದೂಕಿನಿಂದ ಗುಂಡಿನ ಮಳೆ ಸುರಿಸಿದರು ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ  `9ನ್ಯೂಸ್~ ವರದಿ ಮಾಡಿದೆ.

`ನಾನು ಸಿನಿಮಾ ವೀಕ್ಷಣೆ ಮಾಡುತ್ತಿದ್ದ ವೇಳೆ ಸ್ಫೋಟದ ಶಬ್ಧ ಕೇಳಿಸಿತು. ನಂತರ ಜನರು ಓಡಲು ಆರಂಭಿಸಿದರು. ಜತೆಗೆ ಗುಂಡಿನ ದಾಳಿ ನಡೆಯಿತು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಂದೂಕು ಕೆಳಗೆ ಹಾಕಿ ಶರಣಾಗುವಂತೆ ಸೂಚಿಸಿದರು~ ಎಂದು ಪ್ರತ್ಯಕ್ಷದರ್ಶಿ ಬೆಜಿಮಿನ್ ಫರ್ನಾಂಡೊ ತಿಳಿಸಿದ್ದಾನೆ.  ಘಟನೆಗೆ ಮೊದಲು ದಾಳಿಕೋರರು ಚಿತ್ರ ಮಂದಿರದ ಹೊರಗೆ ಸಂಶಯಾಸ್ಪ ದವಾಗಿ ಓಡಾಡುತ್ತಿದ್ದ ದೃಶ್ಯಗಳನ್ನು ಅಮೆಚೂರ್ ವಿಡಿಯೊ ಯೂಟೂಬ್‌ನಲ್ಲಿ ಬಿತ್ತರಿಸಿದೆ.

ಒಬಾಮ ದಿಗ್ಭ್ರಮೆ:  ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ  ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ  ಅವರು ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಆರೋಪಿಗಳಿಗೆ ಶಿಕ್ಷೆ ಖಚಿತ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.