ಅಮೆರಿಕ -ಪಾಕ್ ನಡುವೆ ಹಿಗ್ಗಿದ ಕಂದಕ

7

ಅಮೆರಿಕ -ಪಾಕ್ ನಡುವೆ ಹಿಗ್ಗಿದ ಕಂದಕ

Published:
Updated:
ಅಮೆರಿಕ -ಪಾಕ್ ನಡುವೆ ಹಿಗ್ಗಿದ ಕಂದಕ

ಇಸ್ಲಾಮಾಬಾದ್: (ಪಿಟಿಐ): ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಭಾಗದ ಚೆಕ್‌ಪೋಸ್ಟ್ ವಲಯದಲ್ಲಿ ಶನಿವಾರ ಬೆಳಿಗ್ಗೆ ನ್ಯಾಟೊ ಪಡೆ ನಡೆಸಿದ ವಾಯುದಾಳಿಗೆ 24 ಪಾಕ್ ಸೈನಿಕರು ಹತರಾಗಿರುವ ಘಟನೆ ಈಗ ಪಾಕ್ ಮತ್ತು ಅಮೆರಿಕ ನಡುವೆ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದೆ.

 

ಹೆಚ್ಚಿದ ಸಂಘರ್ಷ
ನ್ಯೂಯಾರ್ಕ್ ವರದಿ: 24 ಪಾಕ್ ಸೈನಿಕರನ್ನು ಕೊಂದು ಹಾಕಿರುವ ನ್ಯಾಟೊ ಪಡೆಯ ವರ್ತನೆಯಿಂದಾಗಿ ಪಾಕ್ ಮತ್ತು ಅಮೆರಿಕ ನಡುವಣದ ಕಂದಕ ಮತ್ತಷ್ಟು ಹಿಗ್ಗಿದೆ ಎಂದು `ನ್ಯೂಯಾರ್ಕ್ ಟೈಂಸ್~ ಅಭಿಪ್ರಾಯಪಟ್ಟಿದೆ. ಈ ಹೊಸ ಸಂಘರ್ಷದಿಂದಾಗಿ ಉಭಯ ದೇಶಗಳ ನಡುವಿನ ಅಪನಂಬಿಕೆ ದುರಸ್ತಿ ಮಾಡಲಾಗದ ಸ್ಥಿತಿಗೆ ಜಾರುತ್ತಿದೆ ಎಂದು `ಟೈಂಸ್~ ಹೇಳಿದೆ. `ಈ ವಾಯುದಾಳಿಯು ಅಮೆರಿಕ ಮತ್ತು ಪಾಕಿಸ್ತಾನದ ನಡುವಿನ ಕೆಲವು ಮೂಲಭೂತ ಸಂಬಂಧಗಳ ಬಗ್ಗೆ ಮತ್ತೆ ವಿಶ್ಲೇಷಿಸುವಂತೆ ಮಾಡಿದೆ~ ಎಂದು ಲೇಖನ ಹೇಳಿದೆ.

ತನ್ನ ದೇಶದ 24 ಸೈನಿಕರನ್ನು ಕೊಂದು ಹಾಕಿರುವ ನ್ಯಾಟೊ ಪಡೆಯ ಈ ವರ್ತನೆಗೆ ಕೆಂಡಾಮಂಡಲವಾಗಿರುವ ಪಾಕಿಸ್ತಾನವು `ಇದರ ಗಂಭೀರ ಪರಿಣಾಮವನ್ನು ನ್ಯಾಟೊ ಎದುರಿಸ ಬೇಕಾಗಿ ಬರುತ್ತದೆ~ ಎಂದು  ಎಚ್ಚರಿಸಿದೆ.

ಪ್ರತೀಕಾರದ ಮೊದಲ ಹೆಜ್ಜೆ ಎಂಬಂತೆ ನ್ಯಾಟೊ ಪಡೆಗಳಿಗೆ ಪಾಕ್ ಪ್ರದೇಶದಲ್ಲಿ ನೀಡಲಾಗಿದ್ದ ಸಂಚಾರ ಮತ್ತು ಸರಕು ಸಾಗಾಣಿಕೆಯ ಮಾರ್ಗ ಗಳನ್ನು ಶಾಶ್ವತವಾಗಿ ಮುಚ್ಚ ಲಾಗಿದೆ ಎಂದು ಪಾಕ್ ಆಂತರಿಕ ಭದ್ರತಾ ಸಚಿವ ರೆಹಮಾನ್ ಮಲಿಕ್ ತಿಳಿಸಿದ್ದಾರೆ.`ನ್ಯಾಟೊ ಪಡೆಗಳಿಗೆ ಪಾಕ್ ನೆಲದಲ್ಲಿ ನೀಡಿದ್ದ ಸಂಚಾರ-ಸರಬರಾಜು ಮಾರ್ಗವನ್ನು ಸ್ಥಗಿತಗೊಳಿಸಿಲ್ಲ, ಬದಲಾಗಿ ಕಾಯಂ ಆಗಿ ನಿಲ್ಲಿಸಲಾಗಿದೆ~ ಎಂದು ಅವರು ಭಾನುವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಪಾಕ್ ಯೋಧರ ಮೇಲೆ ನ್ಯಾಟೊ ಪಡೆಗಳು ನಡೆಸಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದ ಅವರು, `ನ್ಯಾಟೊ ಪಡೆಗಳು ಪಾಕಿಸ್ತಾನದ ಭಾವನೆಗಳನ್ನು ಗೌರವಿಸಬೇಕು~ ಎಂದು ಸೂಚಿಸಿದ್ದಾರೆ.`ದಾಳಿಯಲ್ಲಿ ಹತರಾಗಿರುವ ಯೋಧರ ಸಾವಿನ ಬಗ್ಗೆ ದೇಶವು ದುಃಖಿತವಾಗಿದೆ~ ಎಂದ ಅವರು, `ತಡೆದು ನಿಲ್ಲಿಸಿರುವ ನ್ಯಾಟೊ ಸರಕು ಸಾಗಣೆ ವಾಹನಗಳನ್ನು ಪಾಕ್-ಆಫ್ಘಾನಿಸ್ತಾನ ಗಡಿ ದಾಟಲು ಬಿಡುವುದಿಲ್ಲ~ ಎಂದೂ ಸ್ಪಷ್ಟಪಡಿಸಿದರು.ಇದೇ ವೇಳೆ ಶಮ್ಸಿ ವಲಯದಲ್ಲಿರುವ ತನ್ನ ವಾಯುನೆಲೆಯನ್ನು ಅಮೆರಿಕ ಕೂಡಲೇ ತೆರವುಗೊಳಿಸಬೇಕೆಂದು ಪಾಕ್ ತಾಕೀತು ಮಾಡಿದೆ. 

ಪಾಕ್ ಬೆನ್ನಿಗೆ ನಿಂತ ಚೀನಾ
ಬೀಜಿಂಗ್ (ಐಎಎನ್‌ಎಸ್):  ಪಾಕಿಸ್ತಾನದ ಸ್ವಾತಂತ್ರ್ಯ, ಸಾರ್ವಭೌಮತೆ, ಹಾಗೂ ಪ್ರಾದೇಶಿಕ ಏಕತೆಯನ್ನು ಗೌರವಿಸಬೇಕು ಎಂದು ಹೇಳುವ ಮೂಲಕ ಚೀನಾ ಪಾಕ್ ಬೆನ್ನಿಗೆ ನಿಂತಿದೆ.

ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ನಡೆದಿರುವ ನ್ಯಾಟೊ ಪಡೆಯ ವಾಯುದಾಳಿ ಸುದ್ದಿಯಿಂದ ಚೀನಾ ಆಘಾತಕ್ಕೊಳಗಾಗಿದೆ ಎಂದು ಹೇಳಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹಾಂಗ್ ಲೀ ಅವರು, ಈ ದಾಳಿಯ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸ್ದ್ದಿದಾರೆ.

ವಿಷಾದಕ್ಕೆ ಅತೃಪ್ತಿ: ವಾಯುದಾಳಿಯ ಕುರಿತಂತೆ ನ್ಯಾಟೊ ಪಡೆಯು ವ್ಯಕ್ತಪಡಿಸಿರುವ ವಿಷಾದವನ್ನು ಪಾಕಿಸ್ತಾನವು ಖಡಾಖಂಡಿತ ಧ್ವನಿಯಲ್ಲಿ ತಿರಸ್ಕರಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಬಿಸಿ ಉರ್ದು ವಾರ್ತಾ ಸಂಸ್ಥೆಯೊಂದಿಗೆ ಮಾತನಾಡಿರುವ ಪಾಕಿಸ್ತಾನ ಸೇನೆಯ ಮುಖ್ಯ ವಕ್ತಾರ ಮೇಜರ್ ಜನರಲ್ ಅತ್ತರ್ ಅಬ್ಬಾಸ್ ಅವರು, `ನ್ಯಾಟೊ ವಿಷಾದ ತೃಪ್ತಿದಾಯಕವಾಗಿಲ್ಲ~ ಎಂದು ಹೇಳಿದ್ದಾರೆ.ನ್ಯಾಟೊ ಪತ್ರ: ದಾಳಿಗೆ ಸಂಬಂಧಿ ಸಿದಂತೆ ವಿಷಾದ ಸೂಚಿಸಿ ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ಯವರಿಗೆ ಪತ್ರವನ್ನು ಬರೆಯಲಾಗಿದೆ ಎಂದು ನ್ಯಾಟೊ ಕಾರ್ಯದರ್ಶಿ ಆ್ಯಂಡರ್ಸ್‌ ಫಾಗ್ ರ‌್ಯಾಸ್ಮುಸ್ಸೆನ್ ಭಾನುವಾರ ಹೇಳಿದ್ದಾರೆ.`ನ್ಯಾಟೊ ಪಡೆಯ ದಾಳಿಯನ್ನು ಒಪ್ಪಲಾಗುವುದಿಲ್ಲ. ನಿಜವಾಗಿಯೂ ಇದೊಂದು ಶೋಚನೀಯ ಘಟನೆ~ ಎಂದು ಹೇಳಿಕೆ ತಿಳಿಸಿದೆ.`ಪಾಕ್ ಪ್ರಚೋದನೆಯೇ ಕಾರಣ~ (ವಾಷಿಂಗ್ಟನ್ ವರದಿ):
ಪಾಕ್ ಸೈನಿಕರ ಮೇಲಿನ ನ್ಯಾಟೊ ಪಡೆಯ ದಾಳಿಗೆ ಪಾಕ್ ಸೈನಿಕರ ಪ್ರಚೋದನೆಯೇ ಮುಖ್ಯ ಕಾರಣವಾಗಿರಬಹುದು ಎಂದು ಆಫ್ಘಾ ನಿಸ್ತಾದ ಅಧಿಕಾರಿಗಳು ಅಂದಾ ಜಿಸಿದ್ದಾರೆ.ಅತಿಕ್ರಮಣಕಾರರು ಪಾಕ್ ಗಡಿಭಾಗದ ಪಾಕ್ ಸೈನಿಕರ ನೆಲೆಗಳ ಸಮೀಪದಿಂದ ಆಫ್ಘಾನಿಸ್ತಾನದ ವಲಯದಲ್ಲಿ ಮೊದಲಿಗೆ ದಾಳಿ ನಡೆಸಿದೆ. ಇದರಿಂದ ಮೈತ್ರಿ ಪಡೆಯು ನಡೆಸಿದ ವಾಯುದಾಳಿಗೆ ಪಾಕ್ ಸೈನಿಕರ ಎರಡು ನೆಲೆಗಳು ಗುರಿಯಾಗಿವೆ ಎಂದು `ವಾಲ್‌ಸ್ಟ್ರೀಟ್ ಜರ್ನಲ್~ ಪತ್ರಿಕೆ ತಿಳಿಸಿದೆ. ಅಮೆರಿಕ ಹಾಗೂ ಆಫ್ಘಾನಿಸ್ತಾದ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ಪತ್ರಿಕೆ ಈ ವರದಿ ಮಾಡಿದೆ.`ವಾಸ್ತವವಾಗಿ ಪಾಕಿಸ್ತಾನ ಗಡಿಯೊಳಗಿನ ತಾಲಿಬಾನ್ ನೆಲೆಗಳನ್ನು ಗುರಿಯಾಗಿಸಿ ಮೈತ್ರಿಪಡೆಗಳು ದಾಳಿ ನಡೆಸಿದ್ದವು. ಈ ಬಗ್ಗೆ ಪಾಕ್ ಸೈನಿಕರಿಗೆ ಮೈತ್ರಿಪಡೆಗಳಿಂದ ಮೊದಲೇ ಮುನ್ನೆಚ್ಚರಿಕೆ ರವಾನೆಯಾಗಿತ್ತು~ ಎಂದು ಗಡಿ ಭಾಗದಲ್ಲಿ ಕಾರ್ಯ ನಿರ್ವಹಿಸುವ ಆಫ್ಘನ್ ಅಧಿಕಾರಿಗಳ ಹೇಳಿಕೆಗಳನ್ನು ವರದಿ ಉಲ್ಲೇಖಿಸಿದೆ.ಮೂರು ವರ್ಷಗಳಲ್ಲಿ ನ್ಯಾಟೊ ದಾಳಿಗೆ ಸಿಲುಕಿ ಸತ್ತ ಪಾಕ್ ಸೈನಿಕರ ಸಂಖ್ಯೆ 72. ಹತ್ತಿರತ್ತಿರ 250ಕ್ಕೂ ಹೆಚ್ಚು ಜನರು ಈ ಅವಧಿಯಲ್ಲಿ ಗಾಯಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry