ಗುರುವಾರ , ಏಪ್ರಿಲ್ 22, 2021
30 °C

ಅಮೆರಿಕ ಮಹಿಳಾ ರಿಲೆ ತಂಡದ ವಿಶ್ವದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ಮಿಂಚಿನ ಸಂಚಲನ ಮೂಡಿಸಿದ ಅಮೆರಿಕದ ಮಹಿಳೆಯರ  4x100 ಮೀ. ರಿಲೆ ತಂಡ ನೂತನ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿತು.ಶುಕ್ರವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಅಮೆರಿಕ ತಂಡ 40.82 ಸೆಕೆಂಡ್‌ಗಳಲ್ಲಿ ಗುರಿ ತಲುಪಿತು. ಈ ಮೂಲಕ 27 ವರ್ಷಗಳ ಹಿಂದಿನ ವಿಶ್ವದಾಖಲೆಯನ್ನು ಮುರಿಯಿತು. ಪೂರ್ವ ಜರ್ಮನಿ ತಂಡ 1985 ರಲ್ಲಿ ನಡೆದಿದ್ದ ಸ್ಪರ್ಧೆಯೊಂದರಲ್ಲಿ 41.37 ಸೆ.ಗಳಲ್ಲಿ ಗುರಿ ತಲುಪಿದ್ದು ಇದುವರೆಗಿನ ದಾಖಲೆಯಾಗಿತ್ತು.ಟಿಯಾನಾ ಮ್ಯಾಡಿಸನ್, ಆ್ಯಲಿಸನ್ ಫೆಲಿಕ್ಸ್, ಬಿಯಾಂಕ ನೈಟ್ ಮತ್ತು ಕಾರ್ಮೆಲಿಟಾ ಜಿಟೆರ್ ಅವರನ್ನೊಳಗೊಂಡ ಅಮೆರಿಕ ತಂಡ ಅತ್ಯುತ್ತಮ ಪ್ರದರ್ಶನದ ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿತು.ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದ ಜಮೈಕಕ್ಕೆ ಎರಡನೇ ಸ್ಥಾನ ಲಭಿಸಿತು. ಇಲ್ಲಿ ಮಹಿಳೆಯರ 100 ಮೀ. ಓಟದಲ್ಲಿ ಚಾಂಪಿಯನ್ ಆಗಿರುವ ಶೆಲ್ಲಿ ಆ್ಯನ್ ಫ್ರೇಸರ್ ಪ್ರೈಸ್, ಶೆರೋನ್ ಸಿಂಪ್ಸನ್, ವೆರೋನಿಕಾ ಕ್ಯಾಂಪ್‌ಬೆಲ್ ಬ್ರೌನ್ ಮತ್ತು ಕೆರೊನ್ ಸ್ಟೀವರ್ಟ್ ಅವರು ಜಮೈಕ ತಂಡವನ್ನು ಪ್ರತಿನಿಧಿಸಿದ್ದರು. ಕಂಚಿನ ಪದಕವನ್ನು ಉಕ್ರೇನ್ (42.04) ಗೆದ್ದುಕೊಂಡಿತು.ಅಮೆರಿಕ ಮತ್ತು ಜಮೈಕ ಪರ ಕ್ರಮವಾಗಿ ಮ್ಯಾಡಿಸನ್ ಮತ್ತು ಆ್ಯನ್ ಫ್ರೇಸರ್ ಓಟ ಆರಂಭಿಸಿದ್ದರು. ಮೊದಲ ಲೆಗ್‌ನಲ್ಲೇ ಮ್ಯಾಡಿಸನ್ ಅಮೆರಿಕಕ್ಕೆ ಮೇಲುಗೈ ತಂದುಕೊಟ್ಟರು.ಎರಡನೇ ಲೆಗ್‌ನಲ್ಲಿ ಓಡಿದ ಆ್ಯಲಿಸನ್ ಮುನ್ನಡೆಯ ಅಂತರವನ್ನು ಇನ್ನಷ್ಟು ಹೆಚ್ಚಿಸಿದರು. ಇದರಿಂದ ಮೂರು ಹಾಗೂ ನಾಲ್ಕನೆಯವರಾಗಿ ಓಡಿದ ನೈಟ್ ಮತ್ತು ಜಿಟೆರ್ ಹೆಚ್ಚಿನ ಒತ್ತಡ ಅನುಭವಿಸದೆಯೇ ಮುನ್ನಡೆ ಕಾಯ್ದುಕೊಂಡು ತಂಡಕ್ಕೆ ಚಿನ್ನ ತಂದಿತ್ತರು.ದಿಬಾಬಗೆ ನಿರಾಸೆ: ಇಥಿಯೋಪಿಯದ ತಿರುನೇಶ್ ದಿಬಾಬ ಅವರ ಸ್ವರ್ಣ `ಡಬಲ್~ ಕನಸು ಭಗ್ನಗೊಂಡಿತು.

ಶುಕ್ರವಾರ ನಡೆದ ಮಹಿಳೆಯರ 5,000 ಮೀ. ಓಟದಲ್ಲಿ ಇಥಿಯೋಪಿಯದವರೇ ಆದ ಮೆಸೆರೆಟ್ ಡೆಫರ್ ಚಿನ್ನ ಗೆದ್ದರು. ದಿಬಾಬ ಕಂಚಿನ ಪದಕ ಪಡೆಯಲಷ್ಟೇ ಯಶಸ್ವಿಯಾದರು.ಡೆಫರ್ 15 ನಿಮಿಷ 04.25 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. 15.04.73 ಸೆ.ಗಳಲ್ಲಿ ಓಟ ಪೂರೈಸಿದ ಕೀನ್ಯಾದ ವಿವಿಯಾನ್ ಚೆರುಯೊಟ್ ಬೆಳ್ಳಿ ಗೆದ್ದರೆ, ದಿಬಾಬ ನಿಗದಿತ ದೂರ ಕ್ರಮಿಸಲು 15:05.15 ಸೆಕೆಂಡ್‌ಗಳನ್ನು ತೆಗೆದುಕೊಂಡರು. ಲಂಡನ್ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನ ಮೊದಲ ದಿನ ನಡೆದಿದ್ದ ಮಹಿಳೆಯರ 10 ಸಾವಿರ ಮೀ. ಓಟದಲ್ಲಿ ದಿಬಾಬ ಬಂಗಾರ ಜಯಿಸಿದ್ದರು. ಆದರೆ ಸ್ವರ್ಣ `ಡಬಲ್~ ಸಾಧನೆಯ ಅವಕಾಶ ಕಳೆದುಕೊಂಡರು.ದಿಬಾಬ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಈ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಡೆಫರ್ 2004ರ ಅಥೆನ್ಸ್ ಕೂಟದಲ್ಲಿ 5,000 ಮೀ. ಓಟದಲ್ಲಿ ಬಂಗಾರ ತಮ್ಮದಾಗಿಸಿಕೊಂಡಿದ್ದರು. ಇದೀಗ ಎಂಟು ವರ್ಷಗಳ ಬಿಡುವಿನ ಬಳಿಕ ಅಂತಹದೇ ಸಾಧನೆ ಪುನರಾವರ್ತಿಸಿದ್ದಾರೆ.ಬಹಾಮಸ್ ತಂಡಕ್ಕೆ ರಿಲೇ ಚಿನ್ನ: ಅಮೆರಿಕದ ಪ್ರಭುತ್ವಕ್ಕೆ ತೆರೆ ಎಳೆದ ಬಹಾಮಸ್ ತಂಡ ಪುರುಷರ 4್ಡ400 ಮೀ. ರಿಲೇನಲ್ಲಿ ಚಿನ್ನ ಗೆದ್ದುಕೊಂಡಿತು. ಕ್ರಿಸ್ ಬ್ರೌನ್, ದಿಮಿತ್ರಿಯಸ್ ಪಿಂಡೆರ್, ಮೈಕಲ್ ಮ್ಯಾಥ್ಯೂ ಮತ್ತು ರೇಮನ್ ಮಿಲ್ಲೆರ್ ಅವರನ್ನೊಳಗೊಂಡ ತಂಡ ಎರಡು ನಿಮಿಷ 56.72 ಸೆಕೆಂಡ್‌ಗಳಲ್ಲಿ ಗುರಿ ತಲುಪಿತು.ಎರಡು ನಿಮಿಷ 57.05 ಸೆ.ಗಳಲ್ಲಿ ಓಟ ಪೂರೈಸಿದ ಅಮೆರಿಕ ತಂಡ ಬೆಳ್ಳಿ ಜಯಿಸಿದರೆ, ಕಂಚಿನ ಪದಕ ಟ್ರಿನಿಡ್ಯಾಡ್ ಅಂಡ್ ಟೊಬ್ಯಾಗೊ ತಂಡದ ಪಾಲಾಯಿತು.ಬ್ರೈಶನ್ ನೆಲ್ಲಮ್, ಜೋಶುವಾ ಮಾನ್ಸ್, ಟೋನಿ ಮೆಕ್ವರಿ ಮತ್ತು ಏಂಜೆಲೊ ಟೇಲರ್ ಅವರು ಅಮೆರಿಕ ತಂಡವನ್ನು ಪ್ರತಿನಿಧಿಸಿದ್ದರು.ಮೊದಲ ಮೂವರು ಓಟ ಪೂರೈಸಿದ ಬಳಿಕ ಅಮೆರಿಕ ಅಲ್ಪ ಮುನ್ನಡೆಯಲ್ಲಿತ್ತು. ಅಂತಿಮ ಲ್ಯಾಪ್‌ನಲ್ಲಿ ಬಹಾಮಸ್ ಪರ ಮಿಲ್ಲೆರ್ ಹಾಗೂ ಅಮೆರಿಕದ ಪರ ಟೇಲರ್ ಓಡಿದ್ದರು. ಕೊನೆಯ 50 ಮೀ.ಗಳಿರುವಾಗ ಮಿಲ್ಲೆರ್ ಅವರು ಟೇಲರ್‌ನ್ನು ಹಿಂದಿಕ್ಕಿದರಲ್ಲದೆ, ಮೊದಲಿಗರಾಗಿ ಗುರಿ ತಲುಪಿದರು.ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಈ ವಿಭಾಗದ ಚಿನ್ನ ಕಳೆದ 28 ವರ್ಷಗಳಿಂದ ಅಮೆರಿಕ ತಂಡದ ಕೈಯಲ್ಲೇ ಇತ್ತು. ಇದೀಗ ಬಹಾಮಸ್ ಅಮೆರಿಕದ ಪ್ರಭುತ್ವಕ್ಕೆ ತೆರೆ ಎಳೆದು ಕ್ರೀಡಾ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.