ಬುಧವಾರ, ಅಕ್ಟೋಬರ್ 16, 2019
28 °C

ಅಮೆರಿಕ ಹಡಗಿನಿಂದ ಇರಾನ್ ಬೆಸ್ತರ ರಕ್ಷಣೆ

Published:
Updated:

ವಾಷಿಂಗ್ಟನ್ (ಪಿಟಿಐ): ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್ ಮತ್ತು ಅಮೆರಿದ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಇದ್ದರೂ ಅರಬ್ಬಿ ಸಮುದ್ರದಲ್ಲಿ ಸೊಮಾಲಿಯಾ ಕಡಲ್ಗಳ್ಳರು ಅಪಹರಿಸಿದ್ದ ಇರಾನಿನ ಮೀನುಗಾರಿಕೆ ದೋಣಿ ಹಾಗೂ ಅದರಲ್ಲಿದ್ದ ಆ ರಾಷ್ಟ್ರದ 13 ಮೀನುಗಾರರನ್ನು ಗುರುವಾರ ರಕ್ಷಿಸಿದೆ.ಅರಬ್ಬಿ ಸಮುದ್ರದ ಉತ್ತರ ಭಾಗದಲ್ಲಿ 40 ದಿನಗಳ ಹಿಂದೆ ಸೊಮಾಲಿಯಾ ಕಡಲ್ಗಳ್ಳರು ಇರಾನಿನ ಮೀನುಗಾರಿಕೆ ದೋಣಿ ಅಪಹರಿಸಿ ಮೀನುಗಾರರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ವಿಷಯ ತಿಳಿದ ಅಮೆರಿಕ ನೌಕಾಪಡೆಯ ಹಡಗು ರಕ್ಷಣಾ ಕಾರ್ಯಾಚರಣೆ ನಡೆಸಿತು.ಅಮೆರಿಕದ ಯುದ್ಧ ನೌಕೆ ಪರ್ಷಿಯನ್ ಕೊಲ್ಲಿಯನ್ನು ಪ್ರವೇಶಿಸಬಾರದೆಂದು ಇರಾನ್ ಸೇನಾ ಮುಖ್ಯಸ್ಥರು ಅಮೆರಿಕಕ್ಕೆ ತೀಕ್ಷ್ಣ ಎಚ್ಚರಿಕೆ ನೀಡಿದ ಮರುದಿನವೇ ತಮ್ಮ  ನೌಕಾಪಡೆಯು ಇರಾನ್ ಮೀನುಗಾರರನ್ನು ರಕ್ಷಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ ಎಂದು ಅಮೆರಿಕದ ವಿದೇಶಾಂಗ ಖಾತೆಯ ವಕ್ತಾರೆ ವಿಕ್ಟೋರಿಯಾ ನುಲ್ಯಾಂಡ್ ತಿಳಿಸಿದ್ದಾರೆ.ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಿಯೊನ್ ಪನೆಟ್ಟಾ ದೂರವಾಣಿ ಕರೆ ಮಾಡಿ ಯುದ್ಧನೌಕೆಯ ಎಲ್ಲಾ ಯೋಧರನ್ನೂ ಅಭಿನಂದಿಸಿದ್ದಾರೆ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾರ್ಜ್ ಲಿಟ್ಲ್ ತಿಳಿಸಿದ್ದಾರೆ.ಕಳೆದ 5ರಂದು ಇರಾನ್ ಮೀನುಗಾರಿಕೆ ದೋಣಿಯಿಂದ ಆತಂಕದ ಕರೆ ಬಂತು. ತಮ್ಮನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ ಎಂಬ ಮಾಹಿತಿಯನ್ನು ಅಮೆರಿಕ ನೌಕಾಪಡೆಯ ಹಡಗಿಗೆ ರವಾನಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಯೋಧರು ದೋಣಿಯನ್ನು ಸುತ್ತುವರಿದು ಕಡಲ್ಗಳ್ಳರನ್ನು ಬಂಧಿಸಿದರು.ದೋಣಿಯಲ್ಲಿ ಇದ್ದ ಮೀನುಗಾರರಿಗೆ ನೀರು, ಆಹಾರ ಒದಗಿಸಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದು ಅಮೆರಿಕದ ನೌಕಾಪಡೆಯ ಮೂಲಗಳು ತಿಳಿಸಿವೆ.

Post Comments (+)