ಅಮ್ಜದ್ ಅಲಿ ಅಂತರಾಳ

7

ಅಮ್ಜದ್ ಅಲಿ ಅಂತರಾಳ

Published:
Updated:
ಅಮ್ಜದ್ ಅಲಿ ಅಂತರಾಳ

ಬೆಳ್ಳಗಿನ ಪೈಜಾಮ, ಚಿನ್ನದ ಬಣ್ಣದ ಕೈಗಡಿಯಾರ, ಕಪ್ಪು ಚಪ್ಪಲಿ ತೊಟ್ಟು ಅಷ್ಟೇ ಸರಳತೆಯಿಂದ ಉಸ್ತಾದ್ ಅಮ್ಜದ್ ಅಲಿ ಖಾನ್ ವೇದಿಕೆಯತ್ತ ನಡೆದು ಬಂದರು. ಶನಿವಾರ ನಡೆದ `ಮೈಸ್ಟ್ರೊ~ ಕಾರ್ಯಕ್ರಮದ ಬಗ್ಗೆ ವಿವರ ನೀಡಲು ಅವರು ಬಂದಿದ್ದರು. ಯುಬಿ ಸಿಟಿಯ ಎಸಿ ಕೊಠಡಿಯಲ್ಲಿನ ಮೆತ್ತನೆಯ ಸೋಫಾದಲ್ಲಿ ಕುಳಿತು `ಮೆಟ್ರೊ~ದೊಂದಿಗೆ ಮಾತಿಗೆ ಕುಳಿತರು.ಸಂಗೀತ ಜಗತ್ತಿಗೆ ಸರೋದ್ ವಾದನ ಪರಿಚಯಿಸಿದ ಕುಟುಂಬವಿದು. ಇದೀಗ ಏಳನೇ ತಲೆಮಾರಿನ ಮಕ್ಕಳೂ ಅದೇ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ, ಅದರಲ್ಲೇ ಸಾಧನೆ ಮಾಡುತ್ತಿದ್ದಾರೆ. ಸರೋದ್ ವಾದಕರಾಗಿ ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ಅಮ್ಜದ್ ಅಲಿ ಖಾನ್ ಹೇಳಿದ್ದಿಷ್ಟು:“ಸರೋದ್‌ನಿಂದ ನಾವು ಏನು ನುಡಿಸುತ್ತೇವೆ ಎನ್ನುವುದಕ್ಕಿಂತ ಅದು ಏನನ್ನು ಹೇಳಲು ಬಯಸುತ್ತಿದೆ ಎಂಬುದು ಮುಖ್ಯವಾಗಬೇಕು. ನನ್ನ ತಂದೆ ಶಾಸ್ತ್ರೀಯ ಸಂಗೀತ ರೆಕಾರ್ಡ್ ಮಾಡುವ ಪದ್ಧತಿಯನ್ನು ವಿರೋಧಿಸುತ್ತಿದ್ದರು. ಹೀಗಾಗಿ ಅವರ ಸಂಗೀತ ಕಾರ್ಯಕ್ರಮಗಳ ಯಾವುದೇ ಪ್ರತಿ ನಮ್ಮಲ್ಲಿ ಉಳಿದಿಲ್ಲ. ಕೊನೆಗಾಲದಲ್ಲಿ ರೇಡಿಯೊದಲ್ಲಿ ನೀಡಿದ ಕೆಲವು ಕಾರ್ಯಕ್ರಮಗಳ ಪ್ರತಿ ಇದೆ, ಅಷ್ಟೆ.ನಾನು ಸಂಗೀತ ಕಲಿತಿದ್ದು ತಂದೆಯಿಂದ. ಅವರಂತೆ ನಾನೂ ಆಗಬೇಕು ಎಂದುಕೊಂಡಿದ್ದೆ. ನನ್ನ ಕಾರ್ಯಕ್ರಮ ನೋಡಿದ ಮಂದಿ `ನೀನು ತಂದೆಗಿಂತ ಭಿನ್ನ~ ಎಂದರು. ಈಗ ನನ್ನ ಮಕ್ಕಳೂ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಹೀಗೇ ಇರಿ ಎಂದು ಯಾವತ್ತೂ ಒತ್ತಾಯಿಸಿಲ್ಲ.

 

ಇಬ್ಬರೂ (ಅಮಾನ್ ಹಾಗೂ ಅಯಾನ್ ಅಲಿ ಖಾನ್) ಅವರವರ ದಾರಿಯಲ್ಲಿ ನಡೆಯುತ್ತಿದ್ದಾರೆ. ತಮ್ಮದೇ ಅಸ್ತಿತ್ವ ಕಂಡುಕೊಂಡಿದ್ದಾರೆ. ಈ ಬಗ್ಗೆ ನನಗೂ ಹೆಮ್ಮೆ ಇದೆ (ಮಾತಿನ ನಡುವೆ ತಣ್ಣನೆಯ ನೀರನ್ನು ಗುಟುಕರಿಸಿದರು. ಪಕ್ಕದಲ್ಲೇ ಕುಳಿತಿದ್ದ ಮಗ ಅಯಾನ್ ಮತ್ತೆ ಲೋಟಕ್ಕೆ ನೀರು ತುಂಬಿದರು).ಎಲ್ಲವೂ ಭಾರತೀಯ ಸಂಗೀತ. ಬೇಕಿದ್ದರೆ ಉತ್ತರ ಭಾರತದ ಸಂಗೀತ ಹಾಗೂ ದಕ್ಷಿಣ ಭಾರತದ ಸಂಗೀತ ಎಂದು ವಿಂಗಡಿಸಬಹುದು. ಕೇಳುಗರಿಗೆ ಭಾವ ಇಷ್ಟವಾಗುತ್ತದೆಯೇ ಹೊರತು ಪ್ರಕಾರ ಯಾವುದು ಎಂಬುದಲ್ಲ. ಇತ್ತೀಚಿನ ದಿನಗಳಲ್ಲಿ ಸಂಗೀತ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ.ಅದನ್ನೆಲ್ಲಾ ಒಪ್ಪಿಕೊಂಡು, ಹೊಸತನ ಸ್ವೀಕರಿಸುವ ಮನೋಭಾವ ಶಾಸ್ತ್ರೀಯ ಗಾಯಕರಲ್ಲಿರಬೇಕು ಅಷ್ಟೆ (ಕರ್ನಾಟಕಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಎಂದು ವಿಂಗಡಿಸುವ ಬೇಸರ ಅವರ ಮಾತಿನಲ್ಲೇ ವ್ಯಕ್ತವಾಗುತ್ತಿತ್ತು).ಆರನೇ ವಯಸ್ಸಿನಲ್ಲಿ ಮೊದಲ ಕಛೇರಿ ನಡೆಸಿದ್ದೆ. ಸುಮಾರು 60 ವರ್ಷ ಸರೋದ್ ಜೊತೆಯಲ್ಲೇ ಬದುಕಿದ್ದೇನೆ. ಪ್ರತಿ ಸಂಗೀತ ಕಾರ್ಯಕ್ರಮವೂ ಹೊಸತು ಎನ್ನುವಷ್ಟು ಪ್ರಿಯವಾಗುತ್ತದೆ, ಮುಗಿಯುತ್ತಲೇ ಅತೃಪ್ತಿ ಕಾಡುತ್ತದೆ. ಇನ್ನೂ ಹೊಸದನ್ನು ನೀಡಬಹುದಿತ್ತು, ಬದಲಾವಣೆ ಮಾಡಿಕೊಳ್ಳಬಹುದಿತ್ತು ಎಂದುಕೊಳ್ಳುತ್ತೇನೆ.ಫ್ಯೂಶನ್ ನನಗೂ ಇಷ್ಟ. ಅದೇ ಅತಿಯಾಗಿ ಸಂಗೀತದ ಮೂಲ ಸ್ವರೂಪ ಕೆಡಬಾರದು ಅಷ್ಟೆ. ನನಗೆ ಹನ್ನೆರಡು ವಯಸ್ಸಾಗುವಾಗಲೇ ಕಛೇರಿ ನೀಡಲು ಕರೆಯುತ್ತಿದ್ದರು. ಕಾರ್ಯಕ್ರಮ ಕೊಡುವಾಗಲೂ ಅಷ್ಟೇ, ಯಾವ ರಾಗ ಆಯ್ಕೆ ಮಾಡುತ್ತೇವೆ, ಅದನ್ನು ಎಷ್ಟು ಹೊತ್ತು ಹಾಡುತ್ತೇವೆ ಎಂಬುದು ಮುಖ್ಯ.

 

ಒಂದೇ ರಾಗವನ್ನು ಎರಡು ಗಂಟೆ ಹಾಡಿ ಕೇಳುಗರನ್ನು ಸುಸ್ತು ಹೊಡೆಸುವವರನ್ನು ಕಂಡಾಗ ಬೇಸರವಾಗುತ್ತದೆ. ರಾಕ್ ಸಂಗೀತದ ಖುಷಿ ಕೆಲವು ಗಂಟೆಗಳಿಗಷ್ಟೇ ಸೀಮಿತ. ಬಳಿಕ ಅದು ಹಳೆಯದಾಗುತ್ತದೆ. ಶಾಸ್ತ್ರೀಯ ಪ್ರಕಾರ ಹಾಗಲ್ಲ. ಎಲ್ಲಾ ಕಾಲಕ್ಕೂ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ.”ಮಾತಿಗೆ ಕುಳಿತರೆ ಇಹವನ್ನೇ ಮರೆಯುವ ಸಂಗೀತ ಮಾಂತ್ರಿಕ ಅಮ್ಜದ್ ಅಲಿ ಖಾನ್ ಅವರನ್ನು ಎಚ್ಚರಿಸಲು ಕೊನೆಗೂ ಮಕ್ಕಳೇ ಬರಬೇಕಾಯಿತು. `ನಾನು ಯಾವತ್ತೂ ಹೀಗೆ, ಸಂಗೀತದ ಬಗ್ಗೆ- ಸರೋದ್ ಬಗ್ಗೆ ಮಾತಿಗೆ ಕುಳಿತರೆ ಸಮಯ ಹೋಗಿದ್ದೇ ತಿಳಿಯುವುದಿಲ್ಲ~ ಎನ್ನುತ್ತಾ ಕಾಫಿ ಕಪ್ ಕೆಳಗಿಟ್ಟು ಮಾತು ಮುಗಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry