ಶನಿವಾರ, ಅಕ್ಟೋಬರ್ 19, 2019
27 °C

ಅಮ್ಮಣಗಿ: ಇಂದಿನಿಂದ ಮಲ್ಲಿಕಾರ್ಜುನ ಉತ್ಸವ

Published:
Updated:

ಸಂಕೇಶ್ವರ: ಮುಂಬೈ- ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಆರಾಧ್ಯ ದೈವ ಸಂಕೇಶ್ವರ ಸಮೀಪದ ಅಮ್ಮಣಗಿಯ ಮಲ್ಲಿಕಾರ್ಜುನ ದೇವರ ವಿವಾಹ ಉತ್ಸವವು ಸಂಕ್ರಮಣ ಸಂದರ್ಭದಲ್ಲಿ ಇದೇ 14 ರಿಂದ ಪ್ರಾರಂಭವಾಗಿ 4 ದಿನಗಳ ಕಾಲ ನಡೆಯಲಿದೆ.ಚಾಲುಕ್ಯ ವಂಶದ ಕೊನೆಯ ರಾಜನಾದ ಅಮ್ಮಣದೇವನು ಅಮ್ಮಣಗಿ ಗ್ರಾಮವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನೆಂದೂ, ಆ ಮೂಲಕ ಅವನ ಹೆಸರೇ ಊರಿಗೆ ಬಂದಿತೆಂದು ಪ್ರತೀತಿ ಇದೆ.ಆಂಧ್ರ ಶೈಲಿಯ ದೇವಾಲಯ- ಆಂಧ್ರ ಪ್ರದೇಶದಲ್ಲಿನ ಶ್ರೆಶೈಲದ ಮಲ್ಲಿಕಾರ್ಜುನ ದೇವಾಲಯಕ್ಕೂ ಹಾಗೂ ಅಮ್ಮಣಗಿ ದೇವಾಲಯಕ್ಕೂ ಬಹಳಷ್ಟು ಹೋಲಿಕೆಗಳಿವೆ. ದೇವಾಲಯದ ಮುಖ ಪೂರ್ವ ದಿಕ್ಕಿಗಿದೆ. ಅಲ್ಲಿ ಎತ್ತರವಾದ ದೀಪ ಸ್ತಂಭ ಇದೆ. ಉತ್ತರಕ್ಕೆ ವಿಶಾಲವಾದ ಕೆರೆ ಇದೆ. ದೇವಾಲಯದ ಒಳ ಆವರಣದಲ್ಲಿ ಜಲಕುಂಡವಿದೆ. ಹಿಂದೆ ಭ್ರಮರಾಂಬಿಕೆ ಗುಡಿ ಇದೆ. ಹೀಗಾಗಿ ದೂರದ ಶ್ರೆಶೈಲ ಮಲ್ಲಿಕಾರ್ಜುನ ದೇವಾಲಯಕ್ಕೆ ಹೋಗದವರು  ಇಲ್ಲಿಗೆ ಬಂದು ದೇವರ ದರ್ಶನ ಪಡೆದು ಹೋಗುತ್ತಾರೆ.ದೇವಾಲಯದ ಗರ್ಭ ಗುಡಿಯ ಒಳಗೆ ಶಾಂತ ಚಿತ್ತವಾದ ಮಲ್ಲಿಕಾರ್ಜುನ ದೇವರ ಮೂರ್ತಿ ಇದೆ. ಪ್ರತಿ ವರ್ಷ ಸಂಕ್ರಮಣದ ಸಂದರ್ಭದಲ್ಲಿ ಈ ದೇವರಿಗೆ ವಿವಾಹ ಜರುಗುವುದು. 14 ರಂದು ಮಲ್ಲಿಕಾರ್ಜುನ ದೇವರಿಗೆ ವಿವಾಹ, 15 ರಂದು ಕರಿ ಉತ್ಸವ, 16 ರಂದು ಕುಸ್ತಿ ಹಾಗೂ 17 ರಂದು ಪಲಕ್ಕಿ ಮೆರವಣಿಗೆಯೊಂದಿಗೆ  ಉತ್ಸವವು ಕೊನೆಗೊಳ್ಳುವುದು.

Post Comments (+)