ಅಮ್ಮನಾಗುವ ಮುನ್ನ...

7

ಅಮ್ಮನಾಗುವ ಮುನ್ನ...

Published:
Updated:

ಗರ್ಭಾವಸ್ಥೆ ಪ್ರತಿ ಹೆಣ್ಣಿನ ಜೀವನದಲ್ಲೂ ಪ್ರಮುಖ ಘಟ್ಟ. ತಮ್ಮದೇ ಪ್ರತಿರೂಪ ತಮ್ಮಳಗೆ ಕುಡಿಯೊಡೆದು, ಹೊರ ಜಗತ್ತಿಗೆ ಬಂದು ಒಂದು ಪ್ರತ್ಯೇಕ ಅಸ್ತಿತ್ವವಾಗಿ ಬೆಳೆಯುವ ಪ್ರಕ್ರಿಯೆಯಲ್ಲಿ ಗರ್ಭಾವಸ್ಥೆಯ ಹಂತ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಆಹಾರ, ವಿಹಾರ, ವ್ಯಾಯಾಮವನ್ನು ಒಳಗೊಂಡಂತೆ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಂಡಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು.ಈ ಅವಧಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆಗಳೇನು? ಅದನ್ನು ನಿಭಾಯಿಸುವುದು ಹೇಗೆ? ಪರಿಹಾರವೇನು ಎಂಬ ಬಗ್ಗೆ ತಜ್ಞರು ಕೆಲವು ಮಾರ್ಗಸೂಚಿಗಳನ್ನು ನೀಡಿದ್ದಾರೆ-- ಮೂರು ತಿಂಗಳ ನಂತರವಷ್ಟೇ ಗರ್ಭಿಣಿಯರು ಯಾವುದೇ ರೀತಿಯ ಲಘು ವ್ಯಾಯಾಮ ಮಾಡಲು ಆರಂಭಿಸಬೇಕು. ಅದರಲ್ಲಿ ಬೆಳಗಿನ ಜಾವ ನಡೆಯುವುದು ಉತ್ತಮ. ವಾಂತಿ, ತಲೆಸುತ್ತುವುದು, ಸೊಂಟ ನೋವು, ಹಿಮ್ಮಡಿ ನೋವಿನಂತಹ ತೊಂದರೆಗಳಿಗೆ ಮುಂಜಾನೆಯ ವಾಕ್ ಉತ್ತಮ ಪರಿಹಾರ.- ಸಂಜೆಯ ವೇಳೆಯೂ ಒಂದು ಚಿಕ್ಕ ವಾಕ್ ಇರಲಿ. 

- ನಿಮ್ಮ ಅನುಕೂಲದ ಸಮಯದಲ್ಲಿ ಯೋಗ ಧ್ಯಾನ ಮಾಡಿ.

- ಬಿಡುವಿನ ಸಂದರ್ಭದಲ್ಲಿ ನಿಮಗೆ ಖುಷಿ ಎನಿಸುವ ಅಂದರೆ ಸಂಗೀತ ಕೇಳುವುದು, ಪುಸ್ತಕ ಓದುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎನ್ನುವುದು ಹಲವು ಸ್ತ್ರೀಆರೋಗ್ಯ ತಜ್ಞರ ಅಭಿಪ್ರಾಯ.- ನಿಮ್ಮ ಸುತ್ತ ಸ್ವಚ್ಛ, ಸುಂದರ ಪರಿಸರ ನಿರ್ಮಿಸಿಕೊಳ್ಳಿ. ನಿಮ್ಮ ಆಲೋಚನೆ, ಉತ್ತಮ ಮಾತು-ನೋಟ ಎಲ್ಲವೂ ಮಗುವಿನ ಭಾವನಾತ್ಮಕ ಬೆಳವಣಿಗೆಯನ್ನು ಪ್ರಚೋದಿಸುತ್ತವೆ. - 5ನೇ ತಿಂಗಳಲ್ಲಿ ಹಾರ್ಮೋನುಗಳು ತೀವ್ರಗತಿಯಲ್ಲಿ ಬದಲಾವಣೆ ಆಗುವುದರಿಂದ ಮತ್ತಷ್ಟು ವ್ಯತ್ಯಾಸಗಳು ಉಂಟಾಗುತ್ತವೆ. 6ನೇ ತಿಂಗಳಿನಲ್ಲಿ ಮಗುವಿನ ಚಟುವಟಿಕೆ ಹೆಚ್ಚುವುದರಿಂದ ಹೊಟ್ಟೆ ತೀರಾ ಭಾರವಾಗಿ ಸೊಂಟ ನೋವು ಹೆಚ್ಚಬಹುದು. ಸರಿಯಾದ ವಿಶ್ರಾಂತಿ, ಉತ್ತಮ ಊಟ, ವ್ಯಾಯಾಮ ಅಗತ್ಯ.-7ನೇ ತಿಂಗಳು ದಾಟಿ 8ನೇ ತಿಂಗಳು ತಲುಪಿದಾಗ ಹೆಚ್ಚು ಜಾಗರೂಕರಾಗಿರುವುದು ಒಳ್ಳೆಯದು.ಊಟ-ಉಪಚಾರ

ಗರ್ಭಾವಸ್ಥೆಯ ಮೊದಲ ಹಂತದಲ್ಲಿಯೇ ಹೆಚ್ಚಿನ ಮಹಿಳೆಯರು ಊಟ-ತಿಂಡಿಯ ಬಗ್ಗೆ ಗೊಂದಲಕ್ಕೆ ಬೀಳುವುದುಂಟು. ಯಾವುದನ್ನು ತಿನ್ನಬೇಕು, ಯಾವುದು ಬೇಡ? ಯಾವ ಆಹಾರ ತಮಗೂ ತಮ್ಮ ಮಗುವಿಗೆ ಉಪಯುಕ್ತ? ಯಾವುದಲ್ಲ?`ನೀವು ತಾಯಿಯಾಗಬೇಕು ಎಂಬುದನ್ನು ನಿರ್ಧರಿಸಿದ ದಿನದಿಂದಲೇ ನಿಮ್ಮ ಆಹಾರ-ಪಥ್ಯ, ವ್ಯಾಯಾಮಗಳು ಆರಂಭವಾಗಬೇಕು  ಈಗ ಕೇವಲ ನಿಮಗಾಗಿ ನೀವು ಅಲ್ಲ, ನಿಮ್ಮ ಕಂದನಿಗಾಗಿಯೂ ನೀವು ತಿನ್ನುವುದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ~ ಎನ್ನುತ್ತಾರೆ ನೇಶನ್‌ವೈಡ್ ಕ್ಲಿನಿಕ್‌ನ ಡಾ.ಶ್ರೀವಿದ್ಯಾ.ಹೀಗಿರಲಿ ಆಹಾರ ಪ್ರಮಾಣ

`ಸರಿಯಾದ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ಕೊಬ್ಬು ಹಾಗೂ ಇತರ ಅಂಶಗಳಿರುವ ಆಹಾರ ಸೇವಿಸಬೇಕು. ಅತಿಯಾದರೆ ಅಮೃತವೂ ವಿಷ. ಆಹಾರ ಮಿತವಾಗಿರಲಿ. ಹಾಗೆಯೇ ಆಹಾರ ಸೇವಿಸುವ ಅವಧಿಯೂ ಅಷ್ಟೇ ಮುಖ್ಯ~ ಎನ್ನುತ್ತಾರೆ ಡಾ. ಕಾಮಿನಿ ರಾವ್.`ಸಾಮಾನ್ಯವಾಗಿ ಎರಡು ಪಟ್ಟು ಕಾರ್ಬೋಹೈಡ್ರೇಟ್(ಗೋಧಿ ಹಾಗೂ ರಾಗಿ ಆಹಾರ, ಇಡ್ಲಿ), ಎರಡು ಪಟ್ಟು ಪ್ರೋಟೀನ್ (ಮೊಳಕೆ ಬಂದ ಕಾಳು)ಹಾಗೂ ಉಪಯುಕ್ತ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚಿಸುವ ಕೊಬ್ಬಿನ ಅಂಶವಿರುವ ಆಹಾರವನ್ನು ಒಂದು ಪಟ್ಟು ಸೇವಿಸಿ. ಒಂದೇ ಬಾರಿ ಹೆಚ್ಚು ಆಹಾರ ಸೇವಿಸುವುದು ಹಾಗೂ ದೀರ್ಘಕಾಲ ಉಪವಾಸ ಒಳ್ಳೆಯದಲ್ಲ. ಪ್ರತಿ ಮೂರು ಗಂಟೆಗೊಮ್ಮೆ, ದಿನದಲ್ಲಿ ಕನಿಷ್ಠ ನಾಲ್ಕು ಬಾರಿ ಆಹಾರ ಸೇವಿಸಿ~ ಎನ್ನುವುದು ಅವರ ಸಲಹೆ.ಮಾಂಸಾಹಾರಿಗಳಾಗಿದ್ದಲ್ಲಿ...

ನೀವು ಮಾಂಸಾಹಾರ ಪ್ರಿಯರಾಗಿದ್ದಲ್ಲಿ ಹೋಟೆಲ್‌ಗಳಲ್ಲಿ ಮಾಂಸದೂಟ ಮಾಡುವುದನ್ನು ಸಾಧ್ಯವಾದಷ್ಟು ತಡೆಯಿರಿ. ಅದರಿಂದ ಸೋಂಕು ಹೆಚ್ಚುವ ಸಾಧ್ಯತೆ ಇರುತ್ತದೆ. ಸ್ವಚ್ಛವಾಗಿ ತೊಳೆದು ಮನೆಯಲ್ಲಿಯೇ ತಯಾರಿಸಿದ ತಾಜಾ ಮಾಂಸದ ಅಡುಗೆಯನ್ನು ಸೇವಿಸಿ. ಅದರಲ್ಲೂ ಫ್ರೈ ಮಾಡಿದ ಮಾಂಸ ಅಥವಾ ಮೀನಿನ ಅಡುಗೆ ಬೇಡ. ಬದಲಾಗಿ ಬೇಯಿಸಿದ ಆಹಾರ ಸೇವಿಸಿ. ಚಿಕನ್ ತಿನ್ನುವಾಗ ತೊಗಲು ಸೇವನೆ ಬೇಡ. ಮೊಟ್ಟೆಯ ಹಳದಿ ಭಾಗವನ್ನು ತೆಗೆದು ಸೇವಿಸಿ. ಇನ್ನು ಕಾಫಿ, ಟೀ ವಿಷಯಕ್ಕೆ ಬಂದಾಗ ದಿನಕ್ಕೆ ಎರಡು ಸಣ್ಣ ಕಪ್ ಕಾಫಿ, ಟೀ ಕುಡಿಯಬಹುದು.

 

ಗರ್ಭಾವಸ್ಥೆಯ ತೊಂದರೆಗಳು

ಗರ್ಭಾವಸ್ಥೆಯಲ್ಲಿ ಕಂಡುಬರುವ ಕೆಲವು ಸಾಮಾನ್ಯ ತೊಂದರೆಗಳು ಇಲ್ಲಿವೆ. ಅಂತೆಯೇ ಅನುಸರಿಸಬಹುದಾದ ಪರಿಹಾರಗಳನ್ನೂ ಕೂಡ ವೈದ್ಯರು ಇಲ್ಲಿ ಸೂಚಿಸಿದ್ದಾರೆ.ಬೆಳಗಿನ ಅಸ್ವಸ್ಥತೆ: ಗರ್ಭಾವಸ್ಥೆಯ ಸಾಮಾನ್ಯ ತೊಂದರೆಗಳಲ್ಲಿ ಬೆಳಗಿನ ಅಸ್ವಸ್ಥತೆಯೂ ಒಂದು. ಇದು 4ರಿಂದ 6 ವಾರಗಳ ನಡುವೆ ಆರಂಭಗೊಂಡು 14ರಿಂದ 16ನೇ ವಾರದವರೆಗೂ ಮುಂದುವರೆಯುತ್ತದೆ. ಕೆಲವರಿಗೆ ಪೂರ್ತಿ 41 ವಾರಗಳಲ್ಲಿಯೂ ಈ ತೊಂದರೆ ಕಾಣಿಸಿಕೊಳ್ಳಬಹುದು. ದೇಹದಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆ ಇದಕ್ಕೆ ಕಾರಣ.ಪರಿಹಾರ: ಬೆಳಗಿನ ಜಾವ ಹಸಿದ ಹೊಟ್ಟೆಯಲ್ಲಿ ಇರಬೇಡಿ. ಎದ್ದ ಕೂಡಲೇ ಬಿಸ್ಕಿಟ್, ಟೋಸ್ಟ್ ಸೇವಿಸಿ.ಕಾರ್ಬೋಹೈಡ್ರೇಟ್‌ನಿಂದ ಸಮೃದ್ಧವಾದ ಹಾಗೂ ನೀರಿನಾಂಶ ಹೆಚ್ಚಿರುವ ಹಣ್ಣು, ಹಸಿ ತರಕಾರಿ, ಆಹಾರ ಪಾನೀಯಗಳನ್ನು ಸೇವಿಸಿ. ಶುಂಠಿ ಚಹಾ ಕುಡಿಯಿರಿ. ಪಿತ್ತೋದ್ರೇಕವನ್ನು ಉಂಟುಮಾಡುವ ಪ್ರಚೋದಕಗಳನ್ನು ಗುರುತಿಸಿ ಅವುಗಳನ್ನು ನಿಯಂತ್ರಿಸಿ.ಅಜೀರ್ಣ: ಒಂದೇ ಬಾರಿ ಹೆಚ್ಚು ಆಹಾರ ಸೇವಿಸುವ ಬದಲು, ಕಡಿಮೆ ಪ್ರಮಾಣದ ಆಹಾರವನ್ನು ಮತ್ತೆ ಮತ್ತೆ ಸೇವಿಸುವುದರಿಂದ ಅಜೀರ್ಣ ತೊಂದರೆಯನ್ನು ತಡೆಯಬಹುದು. ಊಟವಾದ ಕೂಡಲೇ ಹಾಸಿಗೆ ಸೇರುವ ಬದಲು, ಮಲಗುವ ಎರಡು ಗಂಟೆ ಮುಂಚೆ ಆಹಾರ ಸೇವಿಸಿ ಒಂದೆರಡು ಹೆಜ್ಜೆ ನಡೆಯಿರಿ.ಮಲಬದ್ಧತೆ:  ಹೆಚ್ಚು ನಾರಿನಾಂಶವಿರುವ ಆಹಾರವನ್ನು ಸೇವಿಸಿ. ಸಾಕಷ್ಟು ನೀರು ಕುಡಿಯಿರಿ.

ಸ್ನಾಯು ಸೆಳೆತ: ಗರ್ಭಿಣಿಯರಿಗೆಂದೇ ಕೆಲವು ಪ್ರಕಾರದ ವ್ಯಾಯಾಮಗಳಿವೆ. ಅವುಗಳನ್ನು ತಿಳಿದುಕೊಂಡು ನಿರ್ವಹಿಸಿ.ಬೆನ್ನು ನೋವು: ಕಾಲಿಗೆ ಮೆದುವಾದ ಸಮತಟ್ಟಾದ ಚಪ್ಪಲಿ ಅಥವಾ ಬೂಟುಗಳನ್ನು ಹಾಕಿ. ಭಾರವಾದ ವಸ್ತುಗಳನ್ನು ಎತ್ತಬೇಡಿ. ಹೆಚ್ಚು ಸಮಯ ನಿಂತು ಕೆಲಸ ಮಾಡಬೇಡಿ.ಅಲ್ಲದೇ, ಪದೇಪದೇ ಮೂತ್ರವಿಸರ್ಜನೆ , ಸುಸ್ತು ಊದಿಕೊಂಡ ಕೈ ಕಾಲು, ಹಾಗೂ ಪಾದಗಳು ಮುಂತಾದ ತೊಂದರೆಗಳೂ ಕಾಣಿಸಿಕೊಳ್ಳಬಹುದು. ಗರ್ಭಾವಸ್ಥೆಯ ಅನೇಕ ಸಾಮಾನ್ಯ ತೊಂದರೆಗಳು ತಾನಾಗಿಯೇ ಕಡಿಮೆ ಆಗುತ್ತವೆ. ಹಾಗೆ ಆಗದಿದ್ದಲ್ಲಿ ವೈದ್ಯರನ್ನು ಭೇಟಿಯಾಗಿ. ಆದರೆ ವೈದ್ಯರ ಸಲಹೆ ಇಲ್ಲದೇ ನೀವೇ ಮಾತ್ರೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ.

 

ಭಾವಿ ಅಮ್ಮಂದಿರಿಗೆ ಟ್ರೆಂಡಿ ಉಡುಪು

 

ನೀವು ಗರ್ಭಿಣಿ ಎಂದು ತಿಳಿದ ತಕ್ಷಣ ನಿಮ್ಮ ಫ್ಯಾಶನಬಲ್ ಲುಕ್‌ಗೆ ಬ್ರೆಕ್ ಬಿದ್ದು ಬಿಡುತ್ತದೆಯೇ? ಮೂರು ತಿಂಗಳು ತುಂಬುತ್ತಿದ್ದಂತೆ ಜೀನ್ಸ್ ಧರಿಸುವುದನ್ನು ಬಿಡಬೇಕು. ಟೈಟ್ ಟಾಪ್, ಟೀ-ಶರ್ಟ್ಸ್, ಮಿಡಿ, ಸ್ಕಲ್ಟ್ಸ್ ಕೂಡ ಸರಿ ಕಾಣದು. ಇನ್ನೇನು ದೊಗಲೆ ಚೂಡಿ, ಸೆಲ್ವಾರ್‌ಗಳೇ ಅನಿವಾರ್ಯ ಎಂದುಕೊಳ್ಳುವ ಕಾಲ ಇದಲ್ಲ. ಈಗ ಗರ್ಭಿಣಿಯರಿಗಾಗಿಯೇ ಅನೇಕ  ಟ್ರೆಂಡಿ ಉಡುಪುಗಳು ಮಾರುಕಟ್ಟೆಗೆ ಬಂದಿವೆ. ನೋಡಲು ಫ್ಯಾಶನಬಲ್ ಆಗಿ ಕಾಣುವ ಹಾಗೂ ಹೊಟ್ಟೆಗೆ ಆರಾಮದಾಯಕ ಫೀಲ್ ನೀಡುವ ರೀತಿಯಲ್ಲಿ ಈ ಬಟ್ಟೆಗಳನ್ನು ವಿಶೇಷವಾಗಿ ಸಿದ್ಧಪಡಿಸಲಾಗಿರುತ್ತದೆ.ಈ ಅವಧಿಯಲ್ಲಿಯೂ ನೀವು ಟ್ರೆಂಡಿಯಾಗಿ ಕಾಣಿಸಿಕೊಳ್ಳಬೇಕು ಎಂದಿದ್ದರೆ ನಿಮ್ಮ ಆಯ್ಕೆ ಹೇಗಿರಬೇಕು ಎಂಬ ಬಗ್ಗೆ `ಮೋರ್ಫ್~ ನ ನಿರ್ದೇಶಕಿ ಹಾಗೂ ವಸ್ತ್ರ ವಿನ್ಯಾಸಕಿ ದೀಪಾ ಕುಮಾರ್ ಕೆಲವು ಮಾತುಗಳನ್ನು ಹೇಳುತ್ತಾರೆ-- ಲೆಗ್ಗಿನ್ಸ್ ಮತ್ತು ಮೊಳಕಾಲ ಕೆಳಗೆ ಬರುವ ಆರಾಮದಾಯಕವಾದ ಟಾಪ್ಸ್ ಧರಿಸಿ. 

- ಇಲಾಸ್ಟಿಕ್ ಹೊಂದಿರುವ ಆದರೆ ಅಷ್ಟೊಂದು ಬಿಗಿಯಾದ ಫೀಲ್ ನೀಡದ ಟ್ರ್ಯಾಕ್ ಪ್ಯಾಂಟ್      ಹಾಗೂ ಸಡಿಲವಾದ ಆದರೆ ಫ್ಯಾಶನ್ ಲುಕ್ ಇರುವ ಟೀ ಶರ್ಟ್. - ಹಾಗೆಯೇ ಕುರ್ತಾ ಜೊತೆ ಹರೇಮ್ ಪ್ಯಾಂಟ್, ಧೋತಿ ಪ್ಯಾಂಟ್ ಹಾಕಿದರೆ ಆರಾಮದ ಜೊತೆ ಟ್ರೆಂಡಿ ಆಗಿಯೂ ಕಾಣಿಸಿಕೊಳ್ಳಬಹುದು.- ನರ್ಸಿಂಗ್ ಟಾಪ್‌ಗಳ ಜೊತೆ ಈ ಮೇಲಿನ ಯಾವುದೇ ಪ್ಯಾಂಟ್‌ಗಳನ್ನೂ ಧರಿಸಬಹುದು.

ಮಾಹಿತಿಗೆ- ಮೊಬೈಲ್ - 9845448348 ಅಥವಾ morphmaternity.com 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry