ಗುರುವಾರ , ನವೆಂಬರ್ 21, 2019
26 °C

`ಅಮ್ಮ'ನಿಗೆ ಗುಮ್ಮನಾಗಿ...

Published:
Updated:

ಚೈತ್ರದ ಉಲ್ಲಾಸ, ವಸಂತದ ಬೆರಗು ಮತ್ತು ನಾದ ಆಮೋದದಲ್ಲಿ ತೇಲಾಡುತ್ತಿರುವ ಸಿಲಿಕಾನ್ ಸಿಟಿಯನ್ನು ಬೇಸಿಗೆಯಲ್ಲೇ ಸೇರಿಕೊಂಡಿರುವ ಚುನಾವಣೆಯ ಬಿಸಿ ಇನ್ನಷ್ಟು ಬೆವರು ಒಸರುವಂತೆ ಮಾಡಿದೆ. ಇಂತಿರುವಾಗಲೇ ನೆಲದ ದುಗುಡ ಧುತ್ತನೆ ಕಾಣಿಸಿಕೊಂಡಿದೆ. ಭೂಮಿ ತಾಯಿಯ ಸ್ವಗತ ಗಟ್ಟಿಯಾಗಿ ಕೇಳಿಸುತ್ತಿದೆ. ಕಿವಿಯಾನಿಸಿದರೆ ನಿಮಗೂ ಕೇಳಿಸೀತು...`ಇಲ್ಲ... ನನ್ನನ್ನು ಹೀಗೇ ಕಿತ್ತುತಿನ್ನುತ್ತಿದ್ದರೆ ನಿಮ್ಮ ನಾಶವನ್ನು ನೀವೇ ಎಳೆದುಕೊಂಡಂತೆ. ಬುದ್ಧಿಮಾತು ಹೇಳಿದೆ, ಗುಡುಗಿದೆ, ನಡುಗಿದೆ, ಬಾಯ್ಬಿರಿದು ಬೆದರಿಸಿದೆ. ಇನ್ನೂ ನಿಮಗೆ ಬುದ್ಧಿ ಬಂದಿಲ್ಲವೆಂದರೆ?ತಾಯಿ ಎಂದರೆ ಎದೆಹಾಲು ಅಷ್ಟೇನಾ? ತಾಯಿ ಅಂದರೆ ನೀವೇ ಕಣಪ್ಪಾ. ಅವಳ ಕಣಕಣವನ್ನೂ ಕಿಂಚಿತ್ತು ಕಿಂಚಿತ್ತಾಗಿ ಹಂಚಿಕೊಂಡು ರೂಪುತಳೆದ ನೀವು ಗರ್ಭದಿಂದೀಚೆ ಬಂದ ತಕ್ಷಣ ಒಂದು ಶಕ್ತಿಯಾಗಿ ಬಿಡುತ್ತೀರಾ? ನಿಮ್ಮ ಉಸಿರು ಇರುವವರೆಗೂ ನೀವು ತಾಯಿಯ ಅಣುರೂಪವೇ. ಬೇಂದ್ರೆ ಅಂದಿರೋದು ಇದನ್ನೇ ಕಣ್ರೋ..“ಇಳೆ ಎಂದರೆ ಬರಿ ಮಣ್ಣಲ್ಲ/ ನಮಗೋ ನೋಡುವ ಕಣ್ಣಿಲ್ಲ

ಏನು ತಿಂದರೂ ತೀರದಿದೆ/ ಏನು ತುಂಬಿಯೂ ಮೀರದಿದೆ”ಅಡಿಗರ ಭೂಮಿಗೀತದ ಹೂರಣವೂ ಇದೇ ತಾನೇ? ಬರಿಮಣ್ಣು ಅಂದುಕೊಂಡಿರುವ ನೀವು, ಈ `ಬರಿಯ ಮಣ್ಣಿನಲ್ಲಿ' ಸತ್ವವನ್ನಾದರೂ ಉಳಿಸಿದ್ದೀರಾ? ನಿಮ್ಮ ಚರ್ಮ ಬಿಸಿಲಿಗೆ ಬಾಡಿದರೆ, ಕಳೆಗುಂದಿದರೆ ಫೇಶಿಯಲ್, ಸ್ಪಾ ಚಿಕಿತ್ಸೆ ಹಾಗೆಹೀಗೆ ಅಂತ ಖರ್ಚು ಮಾಡುತ್ತೀರಲ್ಲ? ನನ್ನ ಒಡಲಿಗೆ ಒಡಲೇ ಒಣಗಿ ಬಿರುಕು ಬಿಟ್ಟಿರುವಾಗ ಅದಕ್ಕೇನಾದರೂ ಮಾಡಬೇಕೆಂದು ನಿಮಗೆ ಅನಿಸೋದೇ ಇಲ್ವೇ?ಪುಟ್ಟ ಕಂದಮ್ಮಗಳ ಮೇಲೆ ನಿತ್ಯ ನಡೆವ ಅತ್ಯಾಚಾರ, ಕೊಲೆಯಂತಹ ಪಾತಕದಷ್ಟೇ ದುರ್ನಡತೆಯನ್ನು ನನ್ನ ಮೇಲೆ ತೋರುತ್ತಿದ್ದೀರಿ ಕಣ್ರೋ ನೀವು. ನಿಮಗೆ, ನಿಮ್ಮ ನಂತರದ ತಲೆಮಾರಿಗೆ ಇರಲೆಂದು ಒಂದಷ್ಟು ಹಸಿರುಹಾಸುಗೆಯನ್ನು ನನ್ನ ಮೇಲೆ ಬೆಳೆಸಿಕೊಂಡೆ.

ಅದನ್ನು ನೀವು `ಗ್ರೀನ್‌ಬೆಲ್ಟ್' ಎಂದು ದೊಡ್ಡದಾಗಿ ಕರೆದಿರಿ. ಕೆರೆ, ಕೆರೆದಂಡೆ, ಸಾಲುಮರ, ಗೋಮಾಳ ಹೀಗೆ ತರಾವರಿ ಜೀವಪರ ಚಿರಾಸ್ತಿಗಳನ್ನು ಒಳಗೊಂಡ ಹಸಿರುಹಾಸು ಅದು. ಈಗ ಅದರ ಕುರುಹೇ ಸಿಗದಂತೆ ನುಂಗಿಬಿಟ್ಟಿದ್ದೀರಲ್ಲ? ಅದೆಂತಹಾ ಹೊಟ್ಟೆಬಾಕರಪ್ಪಾ ನೀವು!`ಗ್ರೀನ್‌ಪೀಸ್' ಅನ್ನೋ ಸ್ವಯಂಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುವ ನನ್ನ ಮಗಳು ಶಿವಾ ಶರ್ಮ ಹೇಳೋದೇನು ಗೊತ್ತಾ? `ಪರಿಸರ ಸಂರಕ್ಷಣೆ ಒಂದು ದಿನದ ಮಾತು ಅಲ್ಲ. ಘೋಷಣೆಯ ಪ್ರಭಾವಳಿಯಲ್ಲಿ ನಡೆಯುವ ಸಮಾರಂಭವಲ್ಲ. ಪ್ರತಿನಿತ್ಯ ನಮ್ಮಳಗಿನಿಂದ ಹುಟ್ಟಿಕೊಂಡು ಅಭಿಮಾನಪೂರ್ವಕ ಒಬ್ಬೊಬ್ಬರೂ ಮಾಡಬೇಕಾದ ಕರ್ತವ್ಯವದು. ಭೂ ಅಕ್ರಮಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬರಿಗಿದೆ.ಇದಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ತಮ್ಮ ಪ್ರದೇಶದಲ್ಲಿ ನಡೆದಿರುವ ಅಕ್ರಮವನ್ನಾದರೂ ಕಂಡುಕೊಳ್ಳುವ ಪ್ರಯತ್ನವನ್ನು ಪ್ರಜ್ಞಾವಂತರು ಮಾಡಬೇಕಿದೆ. ಮಾತ್ರವಲ್ಲ ಕೆರೆ ಸಂರಕ್ಷಣೆಯ ಮೊದಲ ಹೆಜ್ಜೆ ಕೆರೆಯನ್ನು ಮೋರಿಯಾಗಿ ಪರಿವರ್ತಿಸುವ ಗೀಳು ನಿಲ್ಲಿಸುವುದು' ಎಂದು. ಇದಕ್ಕಾಗಿ `ಗ್ರೀನ್‌ಪೀಸ್' ಮೂಲಕ ಜನಜಾಗೃತಿ ಕಾರ್ಯಕ್ರಮಗಳನ್ನು ಅವರು ಹಮ್ಮಿಕೊಂಡಿದ್ದಾರಂತೆ. ಇವರಂತಹ ಹತ್ತಾರು ಮಂದಿ ಹೀಗೇ ಕಳಕಳಿ ವ್ಯಕ್ತಪಡಿಸುತ್ತಿದ್ದಾರೆನ್ನಿ.ಕೆರೆಗೆ ಗೃಹಗುಚ್ಛದ ಹಾರ

ಕೆರೆಯ ಕುರಿತ ಈ ಮಾತು ನಿಜ. ಕೆರೆ ಅಭಿವೃದ್ಧಿ ಮಾಡುತ್ತೇವೆ, ಸಂರಕ್ಷಣೆ ಮಾಡುತ್ತೇವೆ ಎಂದು ಕೆಲವರ್ಷದಿಂದೀಚೆ ಲ್ಯಾಂಡ್ ಡೆವಲಪರ್ ಕಂಪೆನಿಗಳು ಸಿಲಿಕಾನ್ ಸಿಟಿಯ ಕೆರೆ ಪ್ರದೇಶಗಳನ್ನು ನಾಜೂಕಾಗಿ ಒತ್ತುವರಿ ಮಾಡುತ್ತಿರುವುದು ನಿಮಗೆ ಕಾಣಿಸಿಲ್ಲವೇ? ನಾನು ನೂರಾರು ವರ್ಷಗಳಿಂದ ಸಲಹಿಕೊಂಡು ಬಂದ ಕೆರೆ ಮತ್ತು ಅದರ ದಂಡೆ ಕೆಲವೇ ವರ್ಷಗಳಲ್ಲಿ ಇಲ್ಲದಾಗುತ್ತದೆ.ಒಂದೇ ಸಲಕ್ಕೆ ಕೆರೆಯನ್ನು ಒತ್ತುವರಿ ಮಾಡಿಕೊಂಡರೆ ಗೊತ್ತಾಗುತ್ತದೆ ಎಂದು ವರ್ಷಗಳ ಕಾಲ ಕೆರೆಯ ಹೊಟ್ಟೆಗೆ, ಆಸುಪಾಸಿಗೆ ಎಲ್ಲೆಲ್ಲಿಂದಲೋ ಕಲ್ಲುಮಣ್ಣು ಕಸ ತಂದು ಸುರಿಯಲು ಶುರುಮಾಡುತ್ತಾರೆ. ಹೀಗೆ ಸುರಿಯುತ್ತಾ ಹೋದಂತೆ ಅದೊಂದು ಡಂಪಿಂಗ್ ಯಾರ್ಡ್ ಆಗಿ ಮಾರ್ಪಾಡಾಗಿ ಕೆರೆ ಕ್ಷೀಣವಾಗುತ್ತಾ ಹೋಗುತ್ತದೆ. ಮುಂದೊಂದು ದಿನ ಕೆರೆದಂಡೆಯಲ್ಲೊಂದು ಆಕರ್ಷಕವಾದ ಗೃಹಗುಚ್ಛ (ಅಪಾರ್ಟ್‌ಮೆಂಟ್) ತಲೆಯೆತ್ತುತ್ತದೆ. `ನಿಮ್ಮ ಮನೆಯ ಕಿಟಕಿಯಾಚೆ ದೃಷ್ಟಿ ಹಾಯಿಸಿದರೆ ಕಾಣಿಸುವುದು ಸುಂದರವಾದ ಕೆರೆ' ಎಂಬ ಒಕ್ಕಣೆಯೊಂದಿಗೆ ಗ್ರಾಹಕರನ್ನು ಸುಲಭವಾಗಿ ಸೆಳೆಯುತ್ತದೆ ಆ ಗೃಹಗುಚ್ಛ.ಇರುವ ಮಂದಿಗೆ ವಾಸಕ್ಕೇ ಜಾಗವಿಲ್ಲ. ಇನ್ನು ಕೆರೆ, ಉದ್ಯಾನ ಅಂತ ಎಕರೆಗಟ್ಟಲೆ ಭೂಮಿ ವ್ಯರ್ಥವಾಗಬೇಕೇ ಎಂದು ಕೇಳುತ್ತಾರೆ ನನ್ನ ಕೆಲವು ಮಕ್ಕಳು. ಆದರೆ, ಎಳೆಗಂದನ ಮುದ್ದುಮುಖದ ಒಂದೊಂದು ಸುಕ್ಕೂ ಇಂತಹುದೇ ಅರ್ಥವನ್ನು ಹೊತ್ತಿದೆ ಎಂದು ಊಹಿಸಿ ಸ್ಪಂದಿಸುವ ಶಕ್ತಿಯಿರುವುದು ತಾಯಿಗೆ ಮಾತ್ರವಷ್ಟೇ? ನಿಮ್ಮ ನಾಳೆಗಳಿಗೆ ಇರಲೆಂದು ಮರಗಳನ್ನು ಹೊತ್ತಿದ್ದೆ ನೋಡಿ. ಅದರಲ್ಲಿ ರೋಗನಿರೋಧಕ ಗಾಳಿ ಸೂಸುವ ಬೇವು, ಶ್ವಾಸಕೋಶದ ಸಮಸ್ಯೆ ನಿವಾರಿಸುವ ಅಶ್ವತ್ಥ ಮರ, ದಾರಿಬದಿಯಲ್ಲೂ ಹಣ್ಣುಹೂವಿನ ಮರ ಇತ್ಯಾದಿ...ಆದರೆ ನೀವು ಪರಮ ಜಾಣರಪ್ಪಾ..  ಒಂದು ಕಡೆ ರಸ್ತೆ ಅಭಿವೃದ್ಧಿ ನೆಪದಲ್ಲಿ ಸುಮ್ಮನೆ ಮರಗಳನ್ನು ಕಡಿದುಹಾಕುತ್ತೀರಿ. ಇಲ್ಲವೆಂದರೆ ಅದರ ಬೇರಿಗೆ ಸಾಂಬಾರಿನ ಇಂಗು ಇಟ್ಟು ಭಾರೀ ಮರವನ್ನೇ ಸಾಯಿಸ್ತೀರಿ. ಆಮೇಲೆ `ದೊಡ್ಡ ಮರವೊಂದು ಸತ್ತಿದೆ ಮರ ಕಡಿಯಲು ಪರವಾನಗಿ ಕೊಡಿ' ಎಂದು `ಅಧಿಕೃತ'ವಾಗಿ ನಾಟಾ ಮಾಡೋದು! ನಿಮ್ಮನ್ನು ಬೆಳೆಸಿದ್ದು ಸಾರ್ಥಕವಾಯಿತು ಕಣ್ರೋ.ಥೂ... ಮೈ ತುಂಬಾ ತೂತು

ಈ ಬೆಂಗಳೂರು ಅದೆಷ್ಟು ಸಮೃದ್ಧವಾಗಿತ್ತು ಗೊತ್ತಾ? ಥೇಟ್ ಹಳ್ಳಿಯಂತೆಯೇ ಇತ್ತು. ಅಂತಹ ಬೆಂಗಳೂರನ್ನು ಇವತ್ತು ಕೊಳವೆಬಾವಿ ನಗರವನ್ನಾಗಿಸಿದ್ದೀರಿ.ಒಂದು ಬೋರ್‌ವೆಲ್‌ನಿಂದ ಇನ್ನೊಂದಕ್ಕೆ ಕನಿಷ್ಠ 400 ಮೀಟರ್ ಅಂತರವಿರಬೇಕು ಎಂದು ಯಾರೋ ಮಹಾನುಭಾವರು ಕಾನೂನು ಮಾಡಿದ್ರು. ಆದರೆ ಪ್ರಸ್ತುತ 400 ಮೀಟರ್ ವ್ಯಾಪ್ತಿಯಲ್ಲಿ ಎಷ್ಟು ಬೋರ್‌ವೆಲ್‌ಗಳಿರಬಹುದು ಎಂದು ಲೆಕ್ಕ ಸಿಕ್ಕೀತೇ? ನನ್ನ ಮೈತುಂಬಾ ತೂತು ಕೊರೆಯುವವರಿಗೆ ಅಂತರ್ಜಲ ಹೆಚ್ಚಿಸುವ ಅವಶ್ಯಕತೆ ಕಾಣಲೇ ಇಲ್ಲವೇ?ಇಷ್ಟೆಲ್ಲ ಮಾಡಿದವರೂ ವರ್ಷಕ್ಕೊಂದು ಬಾರಿ ಏಪ್ರಿಲ್ 22ರಂದು `ಭೂಮಿತಾಯಿ ನಮ್ಮಮ್ಮ' ಎಂದು ಫಲಕಗಳನ್ನು ಹಿಡಿದುಕೊಂಡು ಸುದ್ದಿಯಾಗುತ್ತೀರಿ, ಟಿವಿ ಚಾನೆಲ್‌ಗಳಲ್ಲಿ ನಿಸ್ವಾರ್ಥಿಗಳಂತೆ ಪೋಸು ಕೊಡುತ್ತೀರಿ. ವಿದೇಶದ ಅನುದಾನ ಬಾಚಿಕೊಳ್ಳುತ್ತೀರಿ. ನೆಂಟರು ಬಂದಾಗ ಪ್ರೀತಿಯ ನೇವರಿಕೆ ಮಾಡಿ ಅವರು ಗೇಟು ದಾಟುತ್ತಲೇ ಮತ್ತೆ ಮೂಲೆಗೆ ತಳ್ಳುವ ಮಕ್ಕಳು ನೀವಾಗಬಾರದು. ನಿಮ್ಮ ಸುರಕ್ಷಿತ ನಾಳೆಗಾಗಿ ಈ ನಿಮ್ಮ ತಾಯಿಯನ್ನು ಉಳಿಸಿಕೊಳ್ಳಿ... ಆಗಲೇ ವಸಂತದ ನವೋಲ್ಲಾಸ ಮರಳೋದು...

 

ಪ್ರತಿಕ್ರಿಯಿಸಿ (+)