ಅಮ್ಮನಿಗೆ ನ್ಯಾಯ ದೊರಕಿಸಿಕೊಡಿ

7

ಅಮ್ಮನಿಗೆ ನ್ಯಾಯ ದೊರಕಿಸಿಕೊಡಿ

Published:
Updated:
ಅಮ್ಮನಿಗೆ ನ್ಯಾಯ ದೊರಕಿಸಿಕೊಡಿ

ಕಾರವಾರ: `ಪೊಲೀಸ್ ಠಾಣೆಯಲ್ಲಿ ಗಂಟೆಗಟ್ಟಲೇ ಇದ್ದಿದ್ದರಿಂದಲೇ ತಂದೆಯವರ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿತು. ತಲೆನೋವು ಬರುತ್ತಿದೆ ಎಂದು ಅವರು ಹೇಳುತ್ತಿದ್ದರು. ನಾವು ಠಾಣೆಯಿಂದ ಬೇಗ ಹೊರಗೆ ಬಂದು, ಆಸ್ಪತ್ರೆಗೆ ಹೋಗಿದ್ದರೆ ಅವರು ಬದುಕುತ್ತಿದ್ದರೇನೋ.....~ಸೋಮವಾರ ದಾಂಡೇಲಿಯ ಹಾಲಮಡ್ಡಿ ಮೊಸಳೆ ಪಾರ್ಕ್ ಬಳಿ  ಪ್ರವಾಸಿಗರಿಂದ ಹಲ್ಲೆಗೊಳಗಾಗಿ ಮಂಗಳವಾರ ಸಾವಿಗೀಡಾದ ದಾಂಡೇಲಿ ವನ್ಯಜೀವಿ ವಿಭಾಗದ ಎಸಿಎಫ್ ಮದನ ನಾಯಕ ಅವರ ಪುತ್ರಿ ಮೇಘನಾ ಈ ರೀತಿ ನೋವು ತೋಡಿಕೊಂಡರು.ಅಂಕೋಲಾ ತಾಲ್ಲೂಕಿನ ಬೇಲೆಕೇರಿಯ ತಮ್ಮ ಮನೆಯಲ್ಲಿ `ಪ್ರಜಾವಾಣಿ~ ಯೊಂದಿಗೆ ಗುರುವಾರ ಮಾತನಾಡಿದ ಅವರು `ಪೊಲೀಸ್ ಠಾಣೆಗೆ ಯಾರ‌್ಯಾರೋ ಬರುತ್ತಿದ್ದರು. ನಮ್ಮ ದೂರು ಕೇಳುವವರೇ ಇರಲಿಲ್ಲ. ಪೊಲೀಸರು ಯಾವುದೋ ಒತ್ತಡಕ್ಕೆ ಒಳಗಾದಂತೆ ವರ್ತಿಸುತ್ತಿದ್ದರು. ಅವರು ದೂರು ದಾಖಲಿಸಿಕೊಂಡು, ನಾವು ಅಲ್ಲಿಂದ ಹೋಗಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ~ ಎಂದು ಕ್ಷಣಕಾಲ ಭಾವುಕರಾದರು. `ತಂದೆಯನ್ನು ಕಳೆದುಕೊಂಡಿರುವ ನಮಗೆ ದಿಕ್ಕೇ ತೋಚದಂತಾಗಿದೆ. ಅಮ್ಮನನ್ನು ಸಂತೈಸಲು ನಮ್ಮಿಂದ ಆಗುತ್ತಿಲ್ಲ.ನನ್ನ ಒಂದೇ ಒಂದು ಮನವಿ ಏನೆಂದರೆ ಅವಳಿಗೆ (ಅಮ್ಮ) ನ್ಯಾಯ ದೊರಕಿಸಿಕೊಡಿ~ ಎಂದು ಮೇಘನಾ ಸರ್ಕಾರಕ್ಕೆ ಮನವಿ ಮಾಡಿಕೊಂಡರು.`ನಾನು ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದೇನೆ. ತಮ್ಮ ಶಿಶಿರ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದಾನೆ, ಇನ್ನೊಬ್ಬ ಸಹೋದರಿ ಗ್ರೀಷ್ಮಾ ಆರ್ಕಿಟೆಕ್ಚರ್ ಓದುತ್ತಿದ್ದಾಳೆ. ತಂದೆಯವರಿಗೆ ಬರುತ್ತಿದ್ದ ಸಂಬಳವೇ ನಮ್ಮ ಕಲಿಕೆಗೆ ಆಧಾರವಾಗಿತ್ತು. ಈಗ ನಮ್ಮನ್ನು ನೋಡಿಕೊಳ್ಳುವವರು ಯಾರಿದ್ದಾರೆ~ ಎಂದು ಕಣ್ಣೀರು ಹಾಕಿದರು.ತಮ್ಮ ಕಣ್ಣಮುಂದೆಯೇ ತಂದೆಯ ಮೇಲೆ ಹಲ್ಲೆ ನಡೆದಿರುವುದನ್ನು ನೋಡಿ ಪುತ್ರ ಶಿಶಿರ್ ಆಘಾತಗೊಂಡಿದ್ದಾನೆ. ಪತ್ನಿ ಸುಮತಿ ಎರಡು ದಿನಗಳಿಂದ ಆಹಾರ ಸೇವಿಸದೇ, ಅತ್ತು ಅತ್ತು ಕಣ್ಣೀರೂ ಬತ್ತಿಹೋಗಿದೆ. ಬೇಲೆಕೇರಿ ಗ್ರಾಮದಲ್ಲಿ ಎಲ್ಲೆಡೆ ಸ್ಮಶಾನ ಮೌನ ಆವರಿಸಿದೆ.

 
ಎಸಿಎಫ್ ಹತ್ಯೆ:    ಇನ್ನಿಬ್ಬರಬಂಧನ

ಕಾರವಾರ:
ದಾಂಡೇಲಿ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮದನ ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆಯ ದಾನಾಬಾಯಿ ನಾಯಕ ಮತ್ತು ಹಳಿಯಾಳ ತಾಲ್ಲೂಕಿನ ಭಾಗವತಿ ಶಾಲೆಯ ಶಿಕ್ಷಕಿ ಶೈಲಜಾ ಚವಾಣ್ ಎಂಬುವರನ್ನು ದಾಂಡೇಲಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.ಐಜಿಪಿ ಭೇಟಿ:

ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ಪ್ರತಾಪ ರೆಡ್ಡಿ ಗುರುವಾರ ದಾಂಡೇಲಿಗೆ ಭೇಟಿ ನೀಡಿ ಘಟನಾ ಸ್ಥಳ  ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿಯವರು ಸಿಐಡಿಗೆ ಒಪ್ಪಿಸಿದ್ದಾರೆ. ನಮ್ಮ ತನಿಖೆಯನ್ನು ನಾವು ಮಾಡುತ್ತಿದ್ದೇವೆ ಎಂದರು.ಜಿಲ್ಲಾಧಿಕಾರಿ ಭೇಟಿ:

ಜಿಲ್ಲಾಧಿಕಾರಿ ಇಂಕಾಂಗ್ಲೊ ಜಮೀರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನರಸಿಂಹಮೂರ್ತಿ ಗುರುವಾರ ಅಂಕೋಲಾ ತಾಲ್ಲೂಕಿನ ಬೇಲೆಕೇರಿಯಲ್ಲಿರುವ ಮದನ ನಾಯಕ ಅವರ ಮನೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ನಾಯಕ ಅವರ ಪತ್ನಿ ಮತ್ತು ಮಕ್ಕಳೊಂದಿಗೆ ಮಾತನಾಡಿದ ಅವರು ಜಿಲ್ಲಾಡಳಿತದಿಂದ ಅಗತ್ಯ ನೆರವು ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry