ಅಮ್ಮನಿಗೆ 'ರಾಮ್ ಲೀಲಾ'ರ್ಪಣೆ

7

ಅಮ್ಮನಿಗೆ 'ರಾಮ್ ಲೀಲಾ'ರ್ಪಣೆ

Published:
Updated:

ಸಂಜಯ್‌ಲೀಲಾ ಬನ್ಸಾಲಿ  ‘ರಾಮ್‌ ಲೀಲಾ’ ತಮ್ಮ ತಾಯಿ ಲೀಲಾ ಬನ್ಸಾಲಿಗೆ ಅರ್ಪಿಸಿದ್ದಾರೆ.‘ಇದು ನನ್ನ ಮಹತ್ವಾಕಾಂಕ್ಷೆಯ ಹಾಗೂ ವಿಶೇಷ ಚಿತ್ರವಾಗಿದೆ. ಲೀಲಾ ಪಾತ್ರಕ್ಕೆ ಬಣ್ಣ ಹಚ್ಚಿರುವ ದೀಪಿಕಾ ಪಡುಕೋಣೆಗೆ ಕೃತಜ್ಞತೆ ಸಲ್ಲಿಸಲೇಬೇಕು. ಆ ಪಾತ್ರವನ್ನು ಅವರು ಲೀಲಾಜಾಲವಾಗಿ ನಿಭಾಯಿಸಿದ್ದಾರೆ’ ಎಂದು ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅಮ್ಮನೊಂದಿಗೆ ದೀಪಿಕಾ ಅವರನ್ನೂ ಶ್ಲಾಘಿಸಿದ್ದಾರೆ.‘ದೀಪಿಕಾಗೆ ರಣವೀರ್‌ ಸಿಂಗ್‌ ಈ ಚಿತ್ರದಲ್ಲಿ ಜೊತೆಯಾಗಿದ್ದಾರೆ. ಅವರಿಬ್ಬರ ಜೋಡಿ ವೀಕ್ಷಕರನ್ನು ಮೋಡಿ ಮಾಡಲಿದೆ. ರಣವೀರ್‌ ಉತ್ತಮ ನಟ, ಲವಲವಿಕೆಯ ಹುಡುಗ. ಚಿತ್ರೀಕರಣದಲ್ಲಿ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ’ ಎಂದು ರಣವೀರ್‌ ಬಗೆಗೂ ಸಂಜಯ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.ಟ್ರೇಲರ್‌ ಬಿಡುಗಡೆಯ ನಂತರ ಚಿತ್ರತಂಡ ಮುಂಬೈನಲ್ಲಿ ಪರಸ್ಪರ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಇಡೀ ಚಿತ್ರ ವೈಭವ ಮತ್ತು ಸೌಂದರ್ಯದ ಪ್ರತೀಕವಾಗಿದೆ ಎಂದು ಹೇಳಿಕೊಂಡಿದೆ.ಸಂಜಯ್‌ಲೀಲಾ ಬನ್ಸಾಲಿ ಜೊತೆಗೆ ಮೊದಲ ಸಲ ಕೆಲಸ ಮಾಡಿರುವ ದೀಪಿಕಾ ಸಹ ತಮ್ಮ ನಿರ್ದೇಶಕರನ್ನು ಮಾಂತ್ರಿಕ ಎಂದು ಹೊಗಳಿದ್ದಾರೆ. ‘ಅವರೊಬ್ಬ ಕಲಾವಿದ. ಜೊತೆಗೆ ಮಾಂತ್ರಿಕ. ಚಿತ್ರದ ಪ್ರತಿಯೊಂದು ದೃಶ್ಯವೂ ವೈಭವೋಪೇತವಾಗಿ ಸುಂದರವಾಗಿ ಕಾಣಿಸುವಂತೆ ಮಾಡುತ್ತಾರೆ. ಭಾರತೀಯ ಹೆಣ್ಣುಮಕ್ಕಳ ವಸ್ತ್ರವೈವಿಧ್ಯ ಹಾಗೂ ವೈಭವವನ್ನು ಅರ್ಥ ಮಾಡಿಕೊಳ್ಳುವ ಏಕೈಕ ನಿದೇರ್ಶಕ ಅವರು’ ಎಂದೂ ಹಾಡಿಹೊಗಳಿದ್ದಾರೆ.ಈ ಚಿತ್ರದಲ್ಲಿ ರಣವೀರ್‌ ಜೊತೆಗಿನ ಚುಂಬನ ದೃಶ್ಯದ ಬಗ್ಗೆ ದೀಪಿಕಾ ‘ಚಿತ್ರಕ್ಕೆ ಅಗತ್ಯವಿರುವ ಎಲ್ಲ ದೃಶ್ಯಗಳನ್ನೂ ಸಮನಾಗಿ ಕಾಣುತ್ತೇನೆ. ಚುಂಬನದ ದೃಶ್ಯವೆಂದು ವಿಶೇಷವಾಗಿ ಏನೂ ಪರಿಗಣಿಸಲಿಲ್ಲ. ಆದರೆ ಸಂಜಯ್‌ ತಮ್ಮ ಚಿತ್ರದ ಪ್ರತಿಯೊಂದು ದೃಶ್ಯವನ್ನೂ ಸರಳಗೊಳಿಸುತ್ತಲೇ ಸೌಂದರ್ಯವನ್ನೂ ಹೆಚ್ಚಿಸುತ್ತಾರೆ’ ಎಂದು ಮಾತನ್ನು ತೇಲಿಸಿದರು.ರಣ್‌ವೀರ್‌ ತಮ್ಮ ಹಾಗೂ ದೀಪಿಕಾ ಕೆಮೆಸ್ಟ್ರಿ ಈ ಚಿತ್ರದಲ್ಲಿ ರೋಮಿಯೋ ಜೂಲಿಯೆಟ್‌ ಪ್ರೇಮಪ್ರಸಂಗವನ್ನು ನೆನಪಿಸುವಂತಿದೆ. ಆ ಉತ್ಕಟ ಪ್ರೀತಿಯನ್ನು ನೋಡುವುದು ಈ ಚಿತ್ರದಲ್ಲಿ ಮಾತ್ರ ಸಾಧ್ಯ ಎಂದಿದ್ದಾರೆ. ಅವರ ಮತ್ತು ದೀಪಿಕಾ ನಡುವಿನ ಪ್ರಣಯದ ಬಗ್ಗೆ ಕೇಳಿದರೆ, ತುಸು ಮೌನದ ಮೊರೆಹೋಗುವ ರಣ್‌ವೀರ್‌, ತಮ್ಮಿಬ್ಬರ ನಡುವಣ ಈ ಕೆಮೆಸ್ಟ್ರಿಯೇ ಚಿತ್ರದ ಕತೆಗೆ ಬಲ ನೀಡಲಿದೆ ಎಂದು ಯೋಚಿಸಿ ಪ್ರತಿಕ್ರಿಯಿಸುತ್ತಾರೆ.ಈ ಚಿತ್ರ ನ.29ರಂದು ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry