ಅಮ್ಮನಿಗೇಕೆ ನನ್ನ ಮೇಲೆ ತಾತ್ಸಾರ?

7

ಅಮ್ಮನಿಗೇಕೆ ನನ್ನ ಮೇಲೆ ತಾತ್ಸಾರ?

Published:
Updated:
ಅಮ್ಮನಿಗೇಕೆ ನನ್ನ ಮೇಲೆ ತಾತ್ಸಾರ?ಎಷ್ಟೋ ತಾಯಂದಿರು ತಮ್ಮ ಎಳೆಯರ ಭಾವನೆಗಳತ್ತ ಹೆಚ್ಚು ಗಮನ ಕೊಡದಿರುವುದು ಸಾಮಾನ್ಯ. ಮಕ್ಕಳ ಮನಸ್ಸು ವಿಕಾಸಗೊಳ್ಳುವ ದಿನಗಳಲ್ಲಿ ತಾಯಿಯೊಂದಿಗೆ ಉತ್ತಮ ಸಂಬಂಧವಿರುವುದು ಬಹಳ ಮುಖ್ಯ.ಅದು ಗಾಢವಾಗಿರುವಂತೆ ಮಾಡುವ ಪ್ರಯತ್ನವನ್ನು ಪೋಷಕರು ಮಾಡಬೇಕಾಗುತ್ತದೆ. ಮಕ್ಕಳು ಬೆಳೆದು ದೊಡ್ಡವರಾಗುವ ಸನ್ನಿವೇಶಗಳಲ್ಲಿ ಇತರರೊಂದಿಗೆ ಉತ್ತಮ ಬಾಂಧವ್ಯ ಉಂಟಾಗದಿರುವುದಕ್ಕೆ ತಾಯಿಯ ಉದಾಸೀನದ ವರ್ತನೆಗಳು ಕಾರಣವಾಗಬಲ್ಲದು. ಉದಾಸೀನಕ್ಕೆ ಸಹಜವೆನ್ನುವಂತಹ ಕಾರಣಗಳು ಇರಬಹುದಾದರೂ ಮಕ್ಕಳ ಅನಿಸಿಕೆಗಳನ್ನು ಎಳಸೆಂದು ತಾತ್ಸಾರ ಮಾಡುವುದು ಮಾಮೂಲು. ಆದರೆ ಇದರ ಪರಿಣಾಮ ತಕ್ಷಣ ಗೊತ್ತಾಗುವುದಿಲ್ಲ. ತಮ್ಮ ಮಕ್ಕಳಿಗೆ ಊಟ, ತಿಂಡಿ, ಬೇಕಾದುದೆಲ್ಲವನ್ನು ಕೊಡಿಸುವುದಕ್ಕಿಂತಲೂ ಇನ್ನೇನು ಮಾಡಲು ಸಾಧ್ಯವೆನ್ನುವ ಭಾವನೆ ಎಷ್ಟೋ ತಾಯಂದಿರಲ್ಲಿ ಇರುತ್ತದೆ.ತಾಯಿಯ ಕರ್ತವ್ಯವನ್ನು ಇದಕ್ಕಿಂತಲೂ ಹೆಚ್ಚಾಗಿ ಮಾಡಲು ಸಾಧ್ಯವೇ ಎನ್ನುವುದು ಅವರ ಪ್ರಶ್ನೆ. ಆದರೆ, ಇಲ್ಲಿ ಗಮನಿಸಬೇಕಾಗಿರುವ ಅಂಶವೆಂದರೆ ಊಟ, ತಿಂಡಿ ಮತ್ತಿತರ ಬೇಕುಗಳನ್ನು ನೀಗಿಸುವುದರೊಂದಿಗೆ ಮಕ್ಕಳ ಮನಸ್ಸಿಗೆ ಹಿತಕೊಡುವಂತಹ ಆದರ ಮತ್ತು ವಾತ್ಸಲ್ಯದ ಭಾವಗಳು ಸಹಜವಾಗಿ ವ್ಯಕ್ತಗೊಳ್ಳಬೇಕು.ಕೆಲವು ಪೋಷಕರಲ್ಲಿ, ಅದರಲ್ಲಿಯೂ ಕೆಲವು ದುಡಿಯುವ ಮಹಿಳೆಯರಲ್ಲಿ, ಇದು ಸಮಯೋಚಿತವಾಗಿ ವ್ಯಕ್ತವಾಗುವುದಿಲ್ಲ. ಮಗುವಿನ ಸಾಧನೆ, ಸೋಲುಗಳೊಂದಿಗೆ ಹಿರಿಯರ ಮನಸ್ಸು ಹರಿಯಬೇಕು. ಇದು ಮಾತಿನ ಮೂಲಕವೋ, ಹಾವಭಾವದ ಮೂಲಕವೋ ವ್ಯಕ್ತಗೊಂಡರೂ ಪರಿಣಾಮಕಾರಿಯಾಗಿಯೇ ಇರುತ್ತದೆ. ಮಕ್ಕಳ ಮನಸ್ಸನ್ನು ಅವರು ವ್ಯಕ್ತಪಡಿಸುವ ಹಾವಭಾವಗಳ ಮೂಲಕವಾದರೂ ಅರ್ಥಮಾಡಿಕೊಳ್ಳುವುದನ್ನು ತಿಳಿದಿರುವ ಪೋಷಕರು ತಮ್ಮ ಮಕ್ಕಳ ಹೊಂದಾಣಿಕೆಯ ಸಾಮರ್ಥ್ಯವನ್ನು ಖಂಡಿತವಾಗಿಯೂ ಹೆಚ್ಚಿಸಬಲ್ಲರು.ಹೀಗೊಂದು ಪ್ರಕರಣ...

ಮೂವತ್ತರ ಹರೆಯದಲ್ಲಿರುವ ಸುಧಾ, ವಿದ್ಯಾವಂತೆ. ಹೆಸರಾಂತ ಉದ್ದಿಮೆಯೊಂದರಲ್ಲಿ ಮಾನವಸಂಪನ್ಮೂಲ ಇಲಾಖೆಯಲ್ಲಿ ಮೇಲ್ದರ್ಜೆಯ ಹುದ್ದೆ. ಹಣಕ್ಕೆ ತೊಂದರೆ ಇಲ್ಲ. ಆದರೆ ಆಕೆಯನ್ನು ಕಾಡುತ್ತಿರುವ ಸಮಸ್ಯೆಯೆಂದರೆ ಆತ್ಮೀಯ ಸಂಬಂಧಗಳನ್ನು ಬೆಳೆಸಿ ಉಳಿಸಿಕೊಳ್ಳಲಾಗದಿರುವುದು.ಹದಿಹರೆಯದಲ್ಲಿ ಕಾಣಿಸಿಕೊಂಡ ಇದು ಅವಳ ಭಾವನಾತ್ಮಕ ಬದುಕನ್ನೇ ಏರುಪೇರು ಮಾಡಿದೆ. ತನ್ನೊಂದಿಗೆ ಯಾರೂ ಇಲ್ಲವೆನ್ನುವ ಭಾವನೆಯು ಸಹಿಸಲಾಗದ ಬೇಸರವನ್ನು ಉಂಟುಮಾಡಿರುವುದುಂಟು. ಮೊದಲನೆಯ ಮದುವೆ ಮುರಿದು ಬಿದ್ದು ನಾಲ್ಕು ವರ್ಷಗಳಾಗಿವೆ.

 

ಇದೀಗ ಎರಡನೆಯ ಸಂಬಂಧದಲ್ಲಿಯೂ ಎಡುವುತ್ತಿರುವುದು ಗೊತ್ತಾಗಿದೆ. ಇದರಿಂದಾಗಿಯೇ ತಲೆ ಕೆಡಿಸಿಕೊಳ್ಳದ ಕ್ಷಣವೇ ಇಲ್ಲ. ಹಿಡಿದ ಕೆಲಸ ಸುಗಮವಾಗಿ ಮಾಡಲಾಗುತ್ತಿಲ್ಲ, ಕಾರ್ಯಪ್ರಗತಿ ಇಲ್ಲದೆ ಮೇಲಧಿಕಾರಿಗಳಿಂದ ತಡೆಯಲಾಗದಷ್ಟು ಒತ್ತಡ. ಅದೆಷ್ಟೋ ಸಲ ಏನೇನೋ ಕೆಟ್ಟ ಆಲೋಚನೆಗಳು. ಇವಕ್ಕೆಲ್ಲಾ ಕಾರಣವಿರಲು ಸಾಧ್ಯವೆ? ಆತ್ಮೀಯ ಸಂಬಂಧಗಳನ್ನು ಉಳಿಸಿಕೊಳ್ಳುವುದು ತನಗೇಕೆ ಅಷ್ಟೊಂದು ಕಷ್ಟ ಎನ್ನುವ ಸಮಸ್ಯೆಯೊಂದಿಗೆ ಆಕೆ ನನ್ನನ್ನು ಭೇಟಿಯಾಗಿದ್ದಳು.ಇಂತಹದೊಂದು `ಸ್ವಭಾವ~ ಇತ್ತೀಚೆಗೆ ಅನೇಕ ವಯಸ್ಕರಲ್ಲಿ ಕಂಡುಬರುತ್ತಿದೆ. ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುವ ಹಂತದಲ್ಲಿ ಆತ್ಮೀಯ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ದಾಂಪತ್ಯದಲ್ಲಿ ವಿರಸ, ಗೆಳೆತನ ಹದಗೆಡುವ ಸಾಧ್ಯತೆಗಳು ಉಂಟು. ಹೀಗಾದಾಗ ತೊಡರು, ತೊಂದರೆಗಳನ್ನು ಅಸಹಾಯಕರಾಗಿಯೋ, ಅಸ್ವಸ್ಥತೆಯ ಸೋಗಿನ ಮೂಲಕವೋ ಎದುರಿಸುವುದು ಸಾಮಾನ್ಯ.ಹೆಚ್ಚಿನ ಸಮಯದಲ್ಲಿ ಈ ತರಹದ ಸ್ವಭಾವಕ್ಕೂ ಬಾಲ್ಯದ ಬೇಗುದಿಗಳಿಗೂ ಹತ್ತಿರದ ನೆಂಟು. ಬಾಲ್ಯದಲ್ಲಿ ಕಂಡು ಬರುವ ಬೇಗುದಿಯ ಭಾವನೆಗಳಲ್ಲಿ ಅನೇಕವು ಹುಸಿಕಲ್ಪನೆಗಳಿಂದಲೋ, ತೀರದ ಬಯಕೆಗಳಿಂದಲೋ ಹುಟ್ಟಿಕೊಂಡಿರುವ ಸಾಧ್ಯತೆಗಳೂ ಇರುತ್ತವೆ.ವಿಶೇಷವಾಗಿ ಪ್ರೀತಿ, ಆದರಗಳು ತೃಪ್ತಿಕರವಾದ ರೀತಿಯಲ್ಲಿ ದೊರಕಿಲ್ಲವೆಂಬ ಭಾವನೆಯೇ ಇಂತಹ ಸ್ವಭಾವಗಳ ಅಡಿಪಾಯವಾಗಿರುತ್ತದೆ. ಬಾಲ್ಯದಲ್ಲಿ ಅಪ್ಪನೋ, ಅಮ್ಮನೋ ಪ್ರೀತಿ ತೋರಿಸಲಿಲ್ಲವೆನ್ನುವ ಸಂಕಟವು ಮಾನಸಿಕ ಗೊಂದಲಗಳನ್ನು ಹುಟ್ಟಿಸಬಲ್ಲದು.ಪೋಷಕರಿಂದ ಸಿಗದ ಪ್ರೀತಿಗಾಗಿ ಸ್ಪಷ್ಟ ಕಾರಣಗಳೇನೆಂಬುದು ತಿಳಿಯದಿದ್ದಾಗ ಪ್ರೀತಿ, ಆದರಗಳ ಬಗ್ಗೆಯೇ ಅಪನಂಬಿಕೆ ಬಲಗೊಳ್ಳುತ್ತದೆ. ಹಟಮಾರಿತನ, ಎಲ್ಲರೊಂದಿಗೂ ಮನಸ್ತಾಪ, ಅಥವಾ ಉದಾಸೀನದ ವರ್ತನೆಗಳು ಕ್ರಮೇಣ ಗಟ್ಟಿಯಾಗುತ್ತದೆ. ಗೆಳೆತನ ಬಗ್ಗೆ ಸಂಶಯ, ಗೆಳೆಯರ ಬಗ್ಗೆ ಒಂದಲ್ಲೊಂದು ವಿಧದ ಅನುಮಾನದ ವರ್ತನೆಗಳನ್ನು ಸಹ ಇದು ಮೂಡಿಸಬಲ್ಲದು.ನನ್ನನ್ನು ಭೇಟಿಮಾಡಿದ ವಿದ್ಯಾವಂತ ಯುವತಿಯಲ್ಲೂ ಈ ತರಹದ ಸಮಸ್ಯೆ ಇತ್ತು. ಆಕೆ ಕೂಡು ಕುಟುಂಬದಲ್ಲಿ ಬಾಲ್ಯವನ್ನು ಕಳೆದಿದ್ದಳು. ಅಜ್ಜಿ,ತಾತ, ಚಿಕ್ಕಪ್ಪ, ಇಬ್ಬರು ತಂಗಿಯರು ಮತ್ತು ಒಬ್ಬ ತಮ್ಮ. ಅಪ್ಪ, ಅಮ್ಮ ನೌಕರಿಯಲ್ಲಿದ್ದವರು. ಮನೆಯ ಹಿರಿಯರಲ್ಲಿದ್ದ ಭಾವನೆಯೆಂದರೆ, ಚೊಚ್ಚಲ ಮಗು ಗಂಡಿರಬೇಕು ಎನ್ನುವಂತಹದ್ದು.ಹೀಗಾಗಿ ಮೊದಲ ಮಗುವು ಹೆಣ್ಣಾಯಿತು ಎನ್ನುವುದು ಒಂದು ಕಳಂಕವೆನ್ನುವಷ್ಟು ಗಾಢವಾದ ಭಾವನೆಯನ್ನು ಅವರಲ್ಲಿ ಹುಟ್ಟಿಸಿತ್ತು. ನಂತರದ ಸಂತಾನವು ಹೆಣ್ಣೇ ಆಗಿದ್ದರಿಂದ ಅವುಗಳ ಬಗ್ಗೆ ಉತ್ಸಾಹ, ಉತ್ತೇಜಕ ನಡೆನುಡಿಗಳು ಹೆಚ್ಚಾಗಿ ಇರಲಿಲ್ಲ. ಹೆಚ್ಚಿನ ಕಾಳಜಿಯೂ ಇದ್ದಿರಲಿಲ್ಲ.ಎಷ್ಟೋ ಸಲ ತಾಯಿಯ ಪ್ರೀತಿ, ವಾತ್ಸಲ್ಯಗಳನ್ನು ಕಾಡಿ, ಬೇಡಿ ಪಡೆಯುವ ಪ್ರಯತ್ನ ಮಾಡಿದ್ದುಂಟು. ಆದರೆ, ಆಕೆಯ ಗಮನವೆಲ್ಲ ಗಂಡು ಮಗುವಿನತ್ತವೇ ಹೆಚ್ಚಾಗಿರುತ್ತಿತ್ತು. ಜೊತೆಗೆ ತಾಯಿಯ ಪ್ರೀತಿ, ವಾತ್ಸಲ್ಯಕ್ಕಾಗಿ ಕಿರಿಯ ಸಹೋದರಿಯರ ಪೈಪೋಟಿ.ಪ್ರಾಥಮಿಕ ಶಾಲೆಯ ದಿನಗಳಲ್ಲಿ ಸಹಪಾಠಿಗಳೊಂದಿಗೆ ಆಡಿ ನಲಿಯುವ ಹಂಬಲವಿದ್ದರೂ ಯಾರೊಂದಿಗೂ ಅನ್ಯೋನ್ಯತೆ, ವಿಶ್ವಾಸದಿಂದಿರುವುದು ಕಷ್ಟವಾಗುತ್ತಿತ್ತು. ಏನಾದರೊಂದು ಕಾರಣದಿಂದ ಮನಸ್ತಾಪ, ದೂರಸರಿಯುವ ಬಯಕೆ. ಹೀಗಿದ್ದರೂ ಗೆಳೆಯರ ಸಹವಾಸದ ಬಯಕೆ ಮಾತ್ರ ಕಡಿಮೆಯಾಗಲೇ ಇಲ್ಲ. ಕಾಲೇಜಿನಲ್ಲಿಯೂ ಸಹ ಹೀಗೆಯೇ.ಗೆಳೆಯರೊಂದಿಗೆ ಗಾಢವಾದ ಸ್ನೇಹ ಉಂಟಾಗಿದೆ ಎನ್ನುವಷ್ಟರಲ್ಲಿಯೇ ಏನಾದರೊಂದು ಕಾರಣದಿಂದ ವೈಮನಸ್ಯ, ಅಥವಾ ಜಗಳವಾಗಿ ದೂರವಾಗುವುದು ಸಾಮಾನ್ಯವಾಗಿತ್ತು.ಮಕ್ಕಳ ಮನಸ್ಸು ಸೂಕ್ಷ್ಮ

 ಪೋಷಕರ ಉದಾಸೀನದ ಭಾವನೆಯನ್ನು ಮಕ್ಕಳು ನೋಡುವ ರೀತಿಯೇ ಬೇರೆಯಾಗಿರುತ್ತದೆ. ಮಕ್ಕಳ ಮನಸ್ಸು ಅತಿ ಸೂಕ್ಷ್ಮ. ಮಕ್ಕಳ ಮನಸ್ಸಿನಲ್ಲಿ ಪೋಷಕರು ಬಹುದೊಡ್ಡ ವ್ಯಕ್ತಿಗಳಾಗಿಯೇ ಬಿಂಬಿತಗೊಂಡಿರುತ್ತಾರೆ. ಸರ್ವಶಕ್ತರು ಏನನ್ನು ಬೇಕಾದರೂ ಮಾಡಬಲ್ಲರು ಎನ್ನುವಂತಹ ವಿಶ್ವಾಸ ಮತ್ತು ಅವಲಂಬನೆ ಅಪಾರವಾಗಿರುತ್ತದೆ.ಮಕ್ಕಳನ್ನು ಉದಾಸೀನ ಮಾಡಿದಾಗ ತಮ್ಮಲ್ಲಿ ಏನೋ ಕೊರತೆ ಇದೆ ಅಥವಾ ತಪ್ಪಾಗಿದೆ ಎನ್ನುವ ಕಳಂಕದ ಭಾವನೆ ಅಥವಾ ಪಾಪಪ್ರಜ್ಞೆ ಕಾಣಿಸಿಕೊಳ್ಳುತ್ತದೆ. ಎಷ್ಟೋ ಮಕ್ಕಳು ತಮ್ಮ ನಡೆನುಡಿಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನಗಳನ್ನು ಸಹ ಮಾಡುತ್ತಾರೆ.ಆದರೆ, ತಪ್ಪೇ ಮಾಡಿರದ ಮುಗ್ಧ ಮಕ್ಕಳಲ್ಲಿ ಸರಿಪಡಿಸಿಕೊಳ್ಳುವಂತಹದ್ದು ಏನಿರಲು ಸಾಧ್ಯ? ಹೀಗಾಗಿ ಭಯ, ಆತಂಕ, ಮೂಢನಂಬಿಕೆಗಳು ಹುಟ್ಟಿಕೊಳ್ಳುವುದಕ್ಕೆ ಇದು ಪ್ರೇರಣೆಯೂ ಆಗಬಲ್ಲದು. ಹಾಗೆಯೇ ತಾನು ನಿಷ್ಪ್ರಯೋಜಕ, ತನ್ನಲ್ಲೇನು ಒಳ್ಳೆಯ ಗುಣಗಳಿಲ್ಲವೆನ್ನುವಂತಹ ನಕಾರಾತ್ಮಕ ನಂಬಿಕೆಗಳು ಗಟ್ಟಿಯಾಗುತ್ತವೆ.ಈ ಗುಣಗಳೇ ಪರಸ್ಪರ ಸಂಬಂಧಗಳಲ್ಲಿ ಅಪನಂಬಿಕೆ, ಸ್ವಾಭಿಮಾನದ ಕೊರತೆಯನ್ನು ಪೋಷಿಸುವುದು. ಅಷ್ಟೇ ಅಲ್ಲದೆ ಭವಿಷ್ಯದ ಹೊಂದಾಣಿಕೆಯ ಸಮಸ್ಯೆಗಳನ್ನು ಪ್ರೇರೇಪಿಸುವಂತಹದ್ದು.ಪೋಷಕರ ಪ್ರೀತ್ಯಾದರಗಳು ಸಿಗದ ಕಾರಣದಿಂದ ಉಂಟಾಗುವ ಮಾನಸಿಕತೆಯು ಕೀಳರಿಮೆಯನ್ನು ಮೂಡಿಸಬಲ್ಲದು. ಪ್ರೀತಿಗೆ ಲಾಯಕ್ಕಿಲ್ಲವೆನ್ನುವಂತಹ ಭಾವನೆಗಳು ಮನಸ್ಸನ್ನು ಆವರಿಸಿ ವ್ಯಕ್ತಿತ್ವದ ಸಹಜ ಬೆಳವಣಿಗೆಗೆ ಅಡ್ಡಿಯಾಗಬಲ್ಲದು.

 

ಅದರಲ್ಲಿಯೂ ಹೆಣ್ಣು ಮಕ್ಕಳ ಮಾನಸಿಕತೆಯ ವಿಕಾಸದ ಮೇಲೆ ತಾಯಿಯ ನಡೆನುಡಿಗಳು ನೇರವಾಗಿಯೇ ಪ್ರಭಾವ ಬೀರುತ್ತವೆ. ಇಂತಹದೊಂದು ವರ್ತನೆಯು ಎಲ್ಲ ಸಂಸ್ಕೃತಿಗಳಲ್ಲಿಯೂ ಇರುವಂತಹದ್ದೇ.

 

ವ್ಯಕ್ತಿತ್ವದ ಬಗ್ಗೆ ತಪ್ಪುಕಲ್ಪನೆಗಳು, ಅಪನಂಬಿಕೆ ಹೆಚ್ಚಾಗುವುದಕ್ಕೂ ಪೋಷಕರ ನಿರ್ಲಿಪ್ತ ಭಾವಗಳು ಕಾರಣವೆನ್ನಬಹುದು. ಬಾಲ್ಯದ ಬೇಗುದಿಗಳಿಂದಾದ ಸ್ವಭಾವನ್ನು ಬದಲಾಯಿಸಿಕೊಳ್ಳಲು ಸಾಧ್ಯ ಎಂಬುದನ್ನ ನೆನಪಿಡಿ.

(ಲೇಖಕರು ಮನೋವಿಜ್ಞಾನಿ, ಮೊ: 8095609725)

 

ವಯಸ್ಕತನದಲ್ಲಿ ಕಂಡುಬರುವಂತಹ  ಸಂಬಂಧಗಳ ಸಮಸ್ಯೆ, ಪ್ರೀತಿ ವಾತ್ಸಲ್ಯಗಳನ್ನು ಉಳಿಸಿಕೊಳ್ಳಲಾಗದಿರುವಂತಹ ಸ್ವಭಾವವನ್ನು ಬದಲಾಯಿಸಿಕೊಳ್ಳಲು ಸಾಧ್ಯವಿದೆ.-ನಿಮ್ಮ ಬಗ್ಗೆ ಇರುವಂತಹ ಕಲ್ಪನೆ, ಅಂದಾಜುಗಳನ್ನು ವಿಮರ್ಶಿಸಿ ನೋಡಿ.-ಇತರರನ್ನು ದೂಷಿಸುವುದು ಬೇಡ. ಸಿಟ್ಟು ಆವೇಶದ ವರ್ತನೆಗಳು ಆತ್ಮೀಯರನ್ನು ಕಳೆದುಕೊಳ್ಳುವಂತೆ ಮಾಡಬಲ್ಲದು.-ಸಹಜ ಸೌಜನ್ಯತೆಯ ಭಾವನೆಗಳ ಮೂಲಕ ಕಳಚಿದ ಸಂಬಂಧಗಳನ್ನು ಸರಿಪಡಿಸಲು ಸಾಧ್ಯ.-ಪ್ರೀತಿ, ವಿಶ್ವಾಸಗಳ ಮಟ್ಟವನ್ನು ಹೋಲಿಕೆ ಮಾಡಿಕೊಳ್ಳುವಾಗ ಎಚ್ಚರವಿರಲಿ.-ಇತರರನ್ನು ಮೆಚ್ಚಿಸುವುದಕ್ಕಾಗಿ ನಿಮ್ಮ ನಡೆನುಡಿಗಳಲ್ಲಿ ಮಾರ್ಪಾಡು ಮಾಡಿಕೊಳ್ಳುವುದು ಬೇಡ.-ಸರಳ ಮತ್ತು ಸರಾಗವಾದ ಮಾತುಗಳ ಮೂಲಕವೂ ವಿಶ್ವಾಸವನ್ನು ಗಳಿಸಿಕೊಳ್ಳಬಹುದು.-ಪ್ರೀತಿ, ಆದರಗಳು ಮಾರಾಟದ ಸರಕುಗಳಲ್ಲವಾದರೂ ಅವುಗಳಿಗೆ `ಬೆಲೆ~ ಇದ್ದೇ ಇರುವುದು. ಅಭಿಮಾನ, ಅನುಕಂಪಗಳ ಮೂಲಕ ಆತ್ಮೀಯತೆಯನ್ನು ಗಳಿಸಿಕೊಳ್ಳಲು ಸಾಧ್ಯ.-ಮುರಿದು ಬಿದ್ದ ಸಂಬಂಧಗಳ ಬಗ್ಗೆ ಸರಿಯಾದ ರೀತಿಯಲ್ಲಿ ಆಲೋಚಿಸುವುದು ಮುಖ್ಯ. ನಿಮ್ಮಿಂದಲೇ ಅದು ಕಡಿದುಬಿದ್ದಿದ್ದರೇ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು ಅಥವಾ ಅಪ್ತಸಮಾಲೋಚನೆಯು ಸಹ ನಿಮ್ಮತನವೇನೆಂಬುದನ್ನು ತೋರಿಸಿಕೊಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry