ಗುರುವಾರ , ಜೂನ್ 24, 2021
23 °C

ಅಮ್ಮನ ಮಡಿಲೇ ಬೆಚ್ಚಗೆ

ನಿರೂಪಣೆ: ಪವಿತ್ರಾ ಶೆಟ್ಟಿ Updated:

ಅಕ್ಷರ ಗಾತ್ರ : | |

ಮಾತು ಇನ್ನೊಬ್ಬರ ನೋವಿಗೆ ಸ್ಪಂದಿಸುವಂತಿರಬೇಕು. ನಾವಾಡುವ ಮಾತು ಖುಷಿ ಕೊಡದಿದ್ದರೂ ಪರವಾಗಿಲ್ಲ; ನೋವು ಕೊಡಬಾರದು. ಸವಿಯಾದ ಮಾತು ಕಿವಿಗಳಿಗೂ ಇಂಪು. 

ನಾನು ಕಾಫಿ ನಾಡಿನಿಂದ ಬಂದ ಹುಡುಗಿ. ಬೆಂಗಳೂರು ಅಂದರೆ ಇಷ್ಟ. ಇಲ್ಲಿರುವ ಟ್ರಾಫಿಕ್ ಸ್ವಲ್ಪ ಕಷ್ಟಾನೇ! ಆದರೂ ಬದುಕು ಕಟ್ಟಿಕೊಂಡಿದ್ದು, ಕನಸು ಹರವಿಕೊಂಡಿದ್ದು ಈ ಮಹಾನಗರಿಯಲ್ಲಿಯೇ.

 ನಾನು ಮಾತನಾಡುವುದು ತುಂಬಾನೇ ಕಡಿಮೆ. ಆದರೆ ವೃತ್ತಿ ನನಗೆ ಮಾತು ಕಲಿಸಿತು. ಮಾತೇ ನನ್ನ ಬಂಡವಾಳವಾಗಿದೆ ಈಗ. ಕೂರ್ಗಿಸ್ ಆಗಿ ಹೇಗಿಷ್ಟು ಚೆಂದ ಕನ್ನಡ ಮಾತನಾಡುತ್ತಿಯಾ ಎಂದು ಕೆಲವರು ಆಶ್ಚರ್ಯ ಪಡುತ್ತಾರೆ. ಆದರೆ ನಾನು ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು.

ಕನ್ನಡ ಜೀವಜಲದಂತೆ. ಸುಲಭವಾಗಿ ಇದರಲ್ಲಿ ವ್ಯವಹರಿಸಬಹುದು. ತುಂಬಾ ಚೆನ್ನಾಗಿ ಇದರಲ್ಲಿ ಭಾವನೆಗಳನ್ನು ವ್ಯಕ್ತಪಡಿಸಬಹುದು. ನಮ್ಮ ಭಾಷೆಯನ್ನು ಎಂದಿಗೂ ಮರೆಯಬಾರದು. ಇದೇ ನಾನು ಎಲ್ಲರಲ್ಲಿ ವಿನಂತಿಸಿಕೊಳ್ಳುವುದು.

ಕಾಲೇಜಿನಲ್ಲಿರುವಾಗಲೇ `ಸುಮತಿ~ ಧಾರಾವಾಹಿಗೆ ಆಯ್ಕೆಯಾದೆ. ಇದು ಒಂದು ರೀತಿಯಲ್ಲಿ ಆಕಸ್ಮಿಕ. ನನಗೆ ಸಿಕ್ಕಿದ ಅವಕಾಶಗಳು ಒಂದಕ್ಕಿಂತ ಒಂದು ಉತ್ತಮವಾದದ್ದು. ಎಲ್ಲವೂ ಮುಖ್ಯ ಪಾತ್ರಗಳೇ. `ಸುಮತಿ~, `ಕಾದಂಬರಿ~, `ಸುಕನ್ಯ~, `ಸೌಂದರ್ಯ~, `ಅರುಂಧತಿ~ ಧಾರಾವಾಹಿಗಳು ನನಗೆ ತುಂಬಾನೇ ಖುಷಿ ನೀಡಿದವು. ಈ ರಂಗಕ್ಕೆ ಬಂದು ಏಳೆಂಟು ವರ್ಷವಾಯಿತು. ಕಲಿಯೋದಕ್ಕೆ ಬೇಕಾದಷ್ಟು ಇದೆ. ಸದಾ ಏನಾದರೂ ಹೊಸತೊಂದನ್ನು ಮಾಡಬೇಕು ಎಂಬ ತುಡಿತ ನನ್ನದು.

`ಕಾದಂಬರಿ~ ಧಾರಾವಾಹಿಯ ನನ್ನ ಪಾತ್ರವನ್ನು ಈಗಲೂ ಜನ ನೆನೆಪು ಮಾಡಿಕೊಳ್ಳುತ್ತಾರೆ. ಒಳ್ಳೆಯ ಹುಡುಗನಿಗೆ ಕೊಟ್ಟು ನಿಮ್ಮ ಮಗಳನ್ನು ಮದುವೆ ಮಾಡಿ ಎಂದು ಅಮ್ಮನ ಬಳಿ ಎಷ್ಟೋ ಜನ ಅತ್ತಿದ್ದು ಇದೆ. ಇದನ್ನೆಲ್ಲ ನೋಡಿದಾಗ ಒಂದು ಪಾತ್ರವನ್ನು ಜನ ಹೇಗೆಲ್ಲಾ ತೆಗೆದುಕೊಳ್ಳುತ್ತಾರೆ ಎಂದು ಆಶ್ಚರ್ಯವಾಗುತ್ತಿತ್ತು. ಒಂದು ಪಾತ್ರಕ್ಕೆ ಜೀವ ತುಂಬುವ ಕೆಲಸ ತುಸು ಕಷ್ಟ. ಆ ಪಾತ್ರದಲ್ಲಿ ತಲ್ಲೆನರಾಗಬೇಕಾಗುತ್ತದೆ. ಆಗ ಮಾತ್ರ ಜನ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

ಸಿನಿಮಾದಲ್ಲೂ ಬೇಕಾದಷ್ಟೂ ಅವಕಾಶಗಳು ಬಂದಿವೆ. ಕೆಲವು ಪಾತ್ರಗಳು ಹಿಡಿಸದ ಕಾರಣ ಒಪ್ಪಿಕೊಂಡಿಲ್ಲ. ಸಮಯದ ಅಭಾವವೂ ಕಾರಣ. ನಿರ್ದೇಶನ ಮಾಡುವ ಯೋಚನೆ ಇದೆ. ಆದರೆ ಇನ್ನೂ ಈ ರಂಗದಲ್ಲಿ ಪೂರ್ತಿಯಾಗಿ ಪಳಗಿಲ್ಲ. ಯಾವುದೇ ಕೆಲಸ ಮಾಡಿದರೂ ಸೈ ಅನಿಸಿಕೊಂಡರೆ ಬದುಕು ಸಾರ್ಥಕ.

ವಿಷ್ಣುವರ್ಧನ್ ಹಾಗೂ ದರ್ಶನ್ ಜೊತೆ ಎರಡು ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಆ ನೆನಪು ಮನದಲ್ಲಿ ಇನ್ನೂ ಹಸಿರಾಗಿದೆ. ಅಂತಹ ಅನುಭವಿಗಳ ಜತೆ ಕೆಲಸ ಮಾಡಲು ಸಿಕ್ಕ ಅವಕಾಶ, ಅವರಿಂದ ಕಲಿತ ಪಾಠ ತುಂಬಾನೇ ಖುಷಿ ನೀಡಿದೆ. ಇಂದು ಕಿರುತೆರೆಯಲ್ಲೂ ಸ್ಪರ್ಧೆಯಿದೆ. ನೂರೆಂಟು ಚಾನೆಲ್‌ಗಳಿವೆ. ಇಲ್ಲಿ ಪ್ರತಿಭೆ ಇದ್ದವರಿಗೆ ಅವಕಾಶಗಳಿವೆ. ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವುದು ನಮ್ಮ ಕರ್ತವ್ಯ.

ಜೀ ಕನ್ನಡದ `ಯಾರಿಗುಂಟು ಯಾರಿಗಿಲ್ಲ~ ಕಾರ್ಯಕ್ರಮದಿಂದ ಮಾತಿನ ಜತೆಜತೆಗೆ ನಗಿಸುವುದನ್ನೂ ಕಲಿತೆ. ಇದಕ್ಕಾಗಿ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳಲಿಲ್ಲ. ಯಾಕೆಂದರೆ ನಾನು ವೇದಿಕೆಯ ಮೇಲೆ ನಿಂತು ಜನರ ಜತೆ ಮಾತನಾಡಬೇಕಿತ್ತು. ಅವರೊಂದಿಗೆ ಬೆರೆಯಬೇಕಿತ್ತು. ಆಗ ಸಿಗುತ್ತಿದ್ದ ಖುಷಿ ಮಾತ್ರ ಮರೆಯಲು ಅಸಾಧ್ಯ.

ಜನ ನಾನು ಮಾತನಾಡುವ ಶೈಲಿ, ಧರಿಸುವ ಉಡುಪುಗಳ ಬಗ್ಗೆ ಹೆಚ್ಚು ಪ್ರಶ್ನೆ ಕೇಳುತ್ತಾರೆ. ನನ್ನ ಅಮ್ಮನೇ ನನ್ನ ವಸ್ತ್ರ ವಿನ್ಯಾಸಕಿ. ಪ್ರತಿಯೊಂದು ಕ್ಷಣದಲ್ಲೂ ಅಮ್ಮ ನನ್ನ ಜತೆ ಇರುತ್ತಾರೆ.  ತಾಯಿಯ ಮಡಿಲಲ್ಲಿ ಸಿಗುವ ಖುಷಿ ಬೇರೆಲ್ಲಿಯೂ ಸಿಗದು.

ಮದುವೆ ಅಂದರೆ ಸುಲಭದ ಮಾತಲ್ಲ. ಅರ್ಥ ಮಾಡಿಕೊಳ್ಳುವ ಹುಡುಗ ಸಿಕ್ಕಿದರೆ ಬಾಳು ಸುಂದರವಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.