ಅಮ್ಮಾ ನಿನ್ನ ಎದೆಯಾಳದಲ್ಲಿ...

7

ಅಮ್ಮಾ ನಿನ್ನ ಎದೆಯಾಳದಲ್ಲಿ...

Published:
Updated:

ಭಾನುವಿನ ಮೊದಲ ಕಿರಣವನ್ನು ಬುವಿ ಆನಂದದಿಂದ ಆಸ್ವಾದಿಸುತ್ತ ಆಕಳಿಸುತ್ತ ಬೆಳಗಿನ ಕರೆಗೆ ರಂಗುತುಂಬುತ್ತಿದ್ದರೆ ಮರಗಳಲ್ಲಿ ಚಿಲಿಪಿಲಿ ನಾದ. ಆ ಅಮ್ಮನಿಗೆ ಬೆಳಗಾದರೆ, ತನ್ನ ನಿತ್ಯದ ತುತ್ತಿನ ಚೀಲ ತುಂಬಿಸಿಕೊಳ್ಳುವ ಧಾವಂತ. ಹಾಲು ಕುಡಿಯುವ ಕಂದಮ್ಮನನ್ನು ಬಗಲಲ್ಲಿ ಎತ್ತಿಕೊಂಡು, ಇನ್ನೊಂದು ಕಂದಮ್ಮನನ್ನು ಕೈಯ್ಯಲ್ಲಿ ಹಿಡಿದು ಇವತ್ತಿನ ಊಟಕ್ಕೆ ಏನು ಮಾಡುವುದು, ಕಂದಮ್ಮಗಳ ಹೊಟ್ಟೆಯನ್ನು ಹೇಗೆ ತುಂಬಿಸುವುದು ಎಂಬ ಯೋಚನೆ. ಆ ಚಿಂತೆಯ ನೊಗ ಹೊತ್ತ ಅವಳ ದಾಪುಗಾಲು ಚಲನಶೀಲವಾಗುತ್ತದೆ.

ಕಂದಮ್ಮಗಳ ಉಸಾಬರಿ ಹೊತ್ತ ಆ ಅಮ್ಮ ಒಂಟಿಯಾ? ಮಕ್ಕಳ ಕೊಟ್ಟ ಗಂಡನೆಲ್ಲಿ? ಜೊತೆಗಿದ್ದಾನೋ, ಇಲ್ಲವೋ? ಸಂಪಾದನೆಗೇ ಇವರನ್ನೆಲ್ಲಾ ಬೀದಿಗಿಳಿಸಿರಬಹುದೇ?- ಪುಂಖಾನುಪುಂಖ ಪ್ರಶ್ನೆಗಳ ಹುಟ್ಟುಹಾಕುವ ದಾಪುಗಾಲು ಅವಳದ್ದು.

ಹೋಗಿ-ಬರುವವರ ಮುಂದೆ ಕೈ ಚಾಚಿ, `ಅಮ್ಮ ಏನಾದರೂ ನೀಡಿ, ಎರಡು ಮಕ್ಕಳಿವೆ~ ಅಂತ ಕೇಳಿದವಳ ಕಣ್ಣಲ್ಲಿ ದೈನ್ಯ ಭಾವ... ಉರುಳದೆ ನಿಂತ ಕಣ್ಣ ಬಿಂದುವಲ್ಲಿ ಹೇಳದೆ ಉಳಿದದ್ದೇ ಹೆಚ್ಚು.

ದಯೆ ತೋರಿಸಿ ನೀಡುವವರು ಒಬ್ಬರಾದರೆ, `ಗಟ್ಟಿ ಮುಟ್ಟಾಗಿದ್ದೀಯಾ; ದುಡಿಯೋಕೇನು ರೋಗ~ ಎಂದು ಬೈಯ್ಯುತ್ತ ದಾಟಿ ಹೋಗುವವರು ಹಲವರು. ಅಲ್ಲಲ್ಲಿ ಚಿಂದಿಯಾಗಿ ಹರಿದ ಬಟ್ಟೆಯಿಂದ ಇಣುಕುವ ಮೈಯ್ಯನ್ನು ನೋಡಿ ಆನಂದಿಸುವವರೂ ಇದ್ದಾರೆ. ಭಿಕ್ಷೆ ನೀಡುವ ನೆಪದಲ್ಲಿ ಕೈ ಮುಟ್ಟಿಯೋ, ಕಾಲು ಸವರಿಯೋ, ಮೈ ಸವರಿಯೋ ಚಪಲ ತೀರಿಸಿಕೊಳ್ಳುವವರೂ ಇಲ್ಲದೇ ಇಲ್ಲ.

ಅವಳು ಎಲ್ಲವನ್ನೂ ಸಹಿಸಿಕೊಂಡಿದ್ದಾಳೆ. ಏಕೆಂದರೆ, ಅವಳೀಗ ಅಮ್ಮ. ಕೊಸರಿಕೊಂಡರೆ ಮಕ್ಕಳ ತುತ್ತಿನ ಚೀಲ ತುಂಬುವುದಿಲ್ಲ.

ಅಲ್ಲಿಯೇ ಹೋಟೆಲ್ ಮುಂದೆ, ಭಾರೀ ಕಾರು ಬಂತು. ಅದರೊಳಗೂ ಎರಡು ಕಂದಮ್ಮಗಳು. ಮುಖದ ತುಂಬ ಹೂನಗೆ. ಅಪ್ಪ-ಅಮ್ಮನ ತುಂಬಿದ ಸಂಸಾರ. ಏನೋ ಆರ್ಡರ್ ಮಾಡಿ ಕಾಯುವಂತಿತ್ತು. ಇವರನ್ನು ನೋಡಿ, `ವೆರಿ ಡರ್ಟಿ ಪೀಪಲ್~ ಎಂದು ಮುಖ ಸಿಂಡರಿಸಿಕೊಂಡರು. ಆರ್ಡರ್ ಮಾಡಿದ ತಿನಿಸೇನೋ ಬಂತು. ಆದರೆ, ತಿನ್ನಲು ಮನಸ್ಸಾಗದೆಯೋ ರುಚಿ ಇಲ್ಲವೆಂದೋ ರಸ್ತೆಬದಿಯಲ್ಲಿ ಚೆಲ್ಲಿ ಮಾಯವಾದರು.

ಅಲ್ಲಿಯೇ ಇದ್ದ ಈ ಅಮ್ಮನ ಮಕ್ಕಳು ಆರಿಸಿಕೊಂಡು ತಿನ್ನತೊಡಗಿದರು. ಊಟ ಕೆಲವರಿಗೆ ಪ್ರತಿಷ್ಠೆಯ ವಿಷಯ, ಇನ್ನು ಹಲವರಿಗೆ ಅದು ತುತ್ತಿನ ಬಾಬತ್ತು.

ಎಲ್ಲರ ಮುಂದೆ ಕೈ ಚಾಚಿ ಬೇಡಿದ್ದರಿಂದ ಹುಟ್ಟಿದ್ದು ಹತ್ತು ರೂಪಾಯಿ ಹಣ. ಸೂರ್ಯ ನೆತ್ತಿ ಸುಡುತ್ತಿದ್ದ. ಬಿಸಿಲ ಬೇಗೆ ತಟ್ಟಿ ಕೊನೆಗೆ ಆ ಅಮ್ಮ ಒಂದು ಮೂಲೆಯಲ್ಲಿ ಚಿಂತಾಮಗ್ನಳಾಗಿ ಕೂತಳು. ಕಣ್ಣಿನಲ್ಲಿ ಅವ್ಯಕ್ತ ನೋವು. ಮನದೊಳಗಿನ ತಾಕಲಾಟಗಳು ಎಣಿಕೆಗೆ ಸಲೀಸಾಗಿ ಸಿಗದಷ್ಟು ಸಂಕೀರ್ಣ.

ಮೇಲೆ ಉರಿಯುತ್ತಿರುವ ಸೂರ್ಯನನ್ನು ದಿಟ್ಟಿಸಿ ನೋಡಿದ ಅವಳು ತನಗೆ ಸೋಲು ಖಚಿತ ಎಂಬಂತೆ ಮುಖವನ್ನು ಕೆಳಗೆ ಹಾಕಿದಳು. ಬಂದ ಹತ್ತು ರೂಪಾಯಿಯಲ್ಲಿ ಏನೇನು ಮಾಡಬಹುದೆಂದು ಮನಸ್ಸಿನೊಳಗೆ ಲೆಕ್ಕಾಚಾರ ನಡೆಯುತ್ತಿದ್ದದ್ದು ಸ್ಪಷ್ಟ. ಎರಡು ವರ್ಷದ ಕಂದಮ್ಮ `ಹಸಿವು~ ಎಂದು ಕೂಗಿದಾಗಲೇ ಅವಳು ಚಿಂತೆ ಮುರಿದ ಭಾವಕ್ಕೆ ಮರಳಿದ್ದು. ಮಗುವಿನ ಕೈಗೆ ಐದು ರೂಪಾಯಿ ಹಾಕಿ `ಬ್ರೆಡ್ ಬನ್ನು ತಗಂಡು ತಿನ್ನು~ ಎಂದು ತನ್ನದೇ ಭಾಷೆಯಲ್ಲಿ ಹೇಳಿದಳು.

ಸಂತಸದಿಂದ ಹೋದ ಮಗುವನ್ನು ದಿಟ್ಟಿಸಿ ನೋಡಿದಳು. ಬಗಲಲ್ಲಿ ಇದ್ದ ಮಗು ತನ್ನಮ್ಮ ತನ್ನನ್ನು ಮರೆತಳೆ ಎಂಬಂತೆ ಗಟ್ಟಿ ದನಿಯಲ್ಲಿ ಅಳಲು ಶುರುಮಾಡಿತು. ಅದಕ್ಕೆ ಸಮಾಧಾನಿಸುವಂತೆ ತನ್ನ ಮೊಲೆಯನ್ನು ಅದರ ಬಾಯಿಗೆ ನೀಡಿದಳು. ಆ ಮೂಳೆ ಬೆರೆತ ದೇಹವ ಬಿಡದೆ ಹೀರುತ್ತೇನೆ ಎಂಬ ಉತ್ಸಾಹ ಆ ಮುಗ್ಧ ಕಂದಮ್ಮನಂತೂ ಕಂಡಾಗ ಅಚ್ಚರಿ.

ಮಗು ತಂದ ಬ್ರೆಡ್ ಬನ್ನಲ್ಲಿ ಚೂರು ತಿಂದ ತಾಯಿ ಮತ್ತದೇ ಕಾಯಕಕ್ಕೆ ಸಜ್ಜು. ಅವಳನ್ನೇ ನೋಡುತ್ತಿದ್ದ ಎರಡು ವರ್ಷದ ಕಂದಮ್ಮನೂ ಕೈ ಚಾಚುತ್ತಿತ್ತು. ಅಮ್ಮ- ಮಕ್ಕಳು ಹೊಮ್ಮಿಸಿದ ದೀರ್ಘ ನಿಟ್ಟುಸಿರು ಯಾರಿಗೂ ತಾಕಲೇ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry