ಅಮ್ಮ-ಮಕ್ಕಳು ಆಡುತ್ತಿದ್ದಾರೆ...

7

ಅಮ್ಮ-ಮಕ್ಕಳು ಆಡುತ್ತಿದ್ದಾರೆ...

Published:
Updated:

ತಂಗಿ ಕರೀನಾ ಹಳ್ಳಿ ಹುಡುಗಿಯ ವೇಷದಲ್ಲಿ ಸಜ್ಜಾಗಿದ್ದದ್ದು ನೃತ್ಯ ಸನ್ನಿವೇಶದ ಚಿತ್ರೀರಣಕ್ಕೆ. ಪುಟ್ಟ ಹುಡುಗಿ ಸಮೈರಾ `ಆಂಟಿ~ ಎನ್ನುತ್ತಾ ಓಡಿಹೋಗಿ ಆತುಕೊಂಡಳು. ಚಿಕ್ಕಮ್ಮನ ಕೆಂಪು ಮುಖ ಇಷ್ಟಗಲ ಅರಳಿತು. ದೂರದಿಂದಲೇ ಅಕ್ಕ ಕರಿಷ್ಮಾ ಬರುತ್ತಿರುವುದು ಕರೀನಾಗೆ ಕಾಣಿಸಿತು.ಕೂಲಿಂಗ್ ಗ್ಲಾಸ್ ತೊಟ್ಟಿದ್ದ ಅಕ್ಕನ ದೇಹಾಕಾರ ಈಗಲೂ ಸಪೂರ ಇರುವುದನ್ನು ಕಂಡು ಕರೀನಾ ಬೆರಗುಗಣ್ಣು ಮಾಡಿಕೊಂಡು, `ವರ್ಕ್‌ಔಟ್ ಮಾಡುತ್ತಿದ್ದೀಯಾ~ ಪ್ರಶ್ನೆ ಹಾಕಿದರು. ಮಡಿಲಲ್ಲಿದ್ದ ಪುಟ್ಟ ಹುಡುಗಿ ಕಿಯಾನ್ ತನ್ನ ಪಾಡಿಗೆ ತಾನು ನಗುತ್ತಿತ್ತು. `ನನ್ನನ್ನು ಎತ್ತಿಕೊಳ್ಳಿ ಆಂಟಿ~ ಸಮೈರಾ ಕೇಳಿದ್ದೇ ಕರೀನಾ ಎತ್ತಿಕೊಂಡರು.

 

ಸಮೈರಾ ಕೈಗೆ ಪುಟ್ಟ ಕಿಯಾನ್‌ಳನ್ನು ಕೊಟ್ಟಿದ್ದೂ ಆಯಿತು. ಅದೆಲ್ಲಿದ್ದರೋ ಫೋಟೋಗ್ರಾಫರ್ ಬಂದವರೇ ಒಂದು ಚಿತ್ರ ಕ್ಲಿಕ್ಕಿಸಿದರು. ಕಿಯಾನ್ ಫ್ಲ್ಯಾಷ್ ಬೆಳಕಿನಿಂದ ತಪ್ಪಿಸಿಕೊಳ್ಳುವಂತೆ ಮುಖ ಮರೆ ಮಾಡಿಕೊಂಡಳು. ಅಮ್ಮ, ಚಿಕ್ಕಮ್ಮ, ಮಕ್ಕಳೆಲ್ಲಾ ಒಂದಿಷ್ಟು ತಾಸು ಸಂಭ್ರಮದಿಂದ ಕಳೆದು ಪುಳಕಿತರಾದರು.

 

`ಅಕ್ಕ ಗ್ಲಾಸ್ ತೆಗೆದು ನಿನ್ನ ಕಣ್ಣು ತೋರಿಸು~ ಎನ್ನುತ್ತಾ ಕರೀನಾ ತಾವೇ ಅಕ್ಕನ ಗ್ಲಾಸ್ ತೆಗೆಯಲು ಮುಂದಾದರು. ಕರಿಷ್ಮಾ ಕೂಲಿಂಗ್‌ಗ್ಲಾಸ್ ತೆಗೆದು ತಮ್ಮ ನೀಲಿಕಣ್ಣನ್ನು ಅನಾವರಣಗೊಳಿಸಿದರು. ರಾಜ್‌ಕಪೂರ್‌ಗೆ ಇದ್ದಂಥ ನೀಲಿ ಕಣ್ಣುಗಳು ಅವರ ಕುಟುಂಬದಲ್ಲಿ ಇರುವುದು ಕರಿಷ್ಮಾಗೆ ಮಾತ್ರ.ಆ ಹೆಮ್ಮೆಯಿಂದಲೇ ಅಕ್ಕ ಬೀಗುವುದಕ್ಕೆ ತಂಗಿಯ ಕುಮ್ಮಕ್ಕೂ ಇತ್ತೆನ್ನಿ. ಮದುವೆ, ಸಂಸಾರ, ಗಂಡನ ಪ್ರೀತಿ- ಜಗಳ, ಮಕ್ಕಳ ಲಾಲನೆ ಪಾಲನೆಯಲ್ಲಿ ಕಳೆದ ಅನೇಕ ವರ್ಷಗಳನ್ನು ಕಳೆದ ಕರಿಷ್ಮಾ ಈಗ ಮಿನಿ ತೊಡುವುದೇ ಇಲ್ಲ. ತೊಟ್ಟರೆ ಮಕ್ಕಳು ಆಕ್ಷೇಪಿಸುತ್ತವಂತೆ. ಇಂಥ ಸಣ್ಣ ವಿಷಯಗಳನ್ನೆಲ್ಲಾ ಗಂಭೀರವಾಗಿಯೇ ಅಕ್ಕ- ತಂಗಿ ಚರ್ಚಿಸಿದರು. ಮಕ್ಕಳು ತಮ್ಮ ಪಾಡಿಗೆ ತಾವು ಆಡಿಕೊಳ್ಳತೊಡಗಿದವು.*

ನೈಸಾ ಈಗ ತನ್ನ ಬಟ್ಟೆಯನ್ನು ತಾನೇ ಹಾಕಿಕೊಳ್ಳುವಷ್ಟು ಬೆಳೆದಿದ್ದಾಳೆಂಬ ನಿರಾಳತೆ ಒಂದು ಕಡೆ. ಇನ್ನೊಂದು ಕಡೆ ಪುಟ್ಟ ಪೋರ ಯುಗ್ ಕೊಡುವ ಮುದ್ದುಕಾಟ. ನಟಿ ಕಾಜೋಲ್ ಈಗ ಎರಡು ಮಕ್ಕಳ ತಾಯ್ತನದ ಸುಖದಲ್ಲಿ ಮುಳುಗಿದ್ದಾರೆ. ಶೂಟಿಂಗ್‌ನಿಂದ ಪುರುಸೊತ್ತು ಮಾಡಿಕೊಂಡು ಅಜಯ್ ದೇವಗನ್ ಬಂದಾಗ ಮಕ್ಕಳು ಅಪ್ಪನ ಸಾನಿಧ್ಯದಲ್ಲೇ ಹೊತ್ತು ಕಳೆಯುತ್ತವೆ.

 

ಪಾರ್ಲರ್, ಶಾಪಿಂಗ್ ಇತ್ಯಾದಿಗೆಂದು ಕಾಜೋಲ್ ಆಚೆ ಹೋಗಲು ಸಾಧ್ಯವಾಗುವುದೇ ಆಗ. ಎರಡು ಮಕ್ಕಳ ತಾಯಿಯಾದರೂ ಬದುಕು ಬದಲಾಗಿಲ್ಲ ಎನ್ನುವ ಕಾಜೋಲ್ ಅಪರೂಪಕ್ಕೊಮ್ಮೆ ಮಕ್ಕಳ ಜೊತೆ ಸಿನಿಮಾ ನೋಡುವುದೂ ಇದೆ.ತನ್ನ ಅಜ್ಜಿ ತನಗೆ ಹೇಳಿದ ಕಥೆಗಳನ್ನು ಈಗ ಮಕ್ಕಳಿಗೆ ಹೇಳುವುದು ತುಂಬಾ ಇಷ್ಟದ ಕೆಲಸ. ಅಜಯ್ ದೇವಗನ್ ಮೈ ಹುರಿ ಮಾಡಿಕೊಂಡಾಗ ಅವರಿಗೆ ಅಗತ್ಯವಿದ್ದ ತಿನಿಸನ್ನೆಲ್ಲಾ ಕಾಲಕಾಲಕ್ಕೆ ಒದಗಿಸಿದ್ದೂ ಒಂದು ಕಾಲದ ಇದೇ ನಟಿ.*

ಅಕ್ಕ ರಾಶಾ, ತಮ್ಮ ರಣಬೀರ್ ಇಬ್ಬರದ್ದೂ ಮುದ್ದು ಮುಖ. ರಾಶಾ ತುಸು ಒರಟು ಹುಡುಗಿ. ರಣ್‌ಬೀರ್ ತುಂಬಾ ಸೂಕ್ಷ್ಮ. ಅಕ್ಕ-ತಮ್ಮನ ನಡುವೆ ಹೊಂದಾಣಿಕೆ ಚೆನ್ನಾಗಿದೆ. ಇಬ್ಬರೂ ತಮ್ಮ ಪಾಡಿಗೆ ತಾವು ಆಟವಾಡಿಕೊಳ್ಳುವುದರಿಂದ ರವೀನಾ ಟಂಡನ್ ಈಗೀಗ ಜಿಮ್‌ನಲ್ಲಿ ಬೆವರಿಳಿಸುವುದು ಸಾಧ್ಯವಾಗುತ್ತಿದೆ.

 

ಊದಿಕೊಂಡಿದ್ದ ಶರೀರವನ್ನು ತುಸು ಇಳಿಸಿಕೊಂಡ ಸಾರ್ಥಕ್ಯ ಅವರದ್ದು. ಮೊನ್ನೆಮೊನ್ನೆ ಮಂಡಿ ಕಾಣುವ ಉಡುಗೆ ತೊಟ್ಟು ನಿಂತಾಗ ಮಕ್ಕಳೇ, `ಮಮ್ಮಾ... ಯೂ ಆಟ್ ಲುಕಿಂಗ್ ಕ್ಯೂಟ್~ (ಅಮ್ಮಾ... ನೀನೆಷ್ಟು ಚೆಂದ ಕಾಣ್ತಿದೀಯಾ) ಎಂದವಂತೆ.

 

ಅಂದಿನಿಂದ ರವೀನಾ ಆಗೀಗ ಲಾಂಗ್ ಸ್ಕರ್ಟ್ ತೊಡಲಾರಂಭಿಸಿದ್ದಾರೆ. ಕೆಲವು ಜಾಹೀರಾತಿನ ಅವಕಾಶಗಳು ಬರುತ್ತಿದ್ದರೂ ಮಕ್ಕಳೇ ಸರ್ವಸ್ವ ಎಂದು ಅವರು ಅವನ್ನೆಲ್ಲಾ ನಿರಾಕರಿಸುತ್ತಿದ್ದಾರೆ. ರಾಶಾ ಒರಟಾದರೂ ತಮ್ಮನ ತಂಟೆಗೆ ಯಾರಾದರೂ ಬಂದರೆ ಸಹಿಸುವುದಿಲ್ಲ. ಅಮ್ಮ ರವೀನಾಗೆ ಅದೇ ಹೆಮ್ಮೆ.

*ಅಮ್ಮನಂತೆಯೇ ಸುಂದರವದನವಿರುವ ರೆನೀಗೆ ಈಗ ಆಡಲು ಅಲಿಶಾ ಎಂಬ ತಂಗಿಯೂ ಸಿಕ್ಕಿದ್ದಾಳೆ. ಅಪ್ಪ ಮಾತ್ರ ಇಲ್ಲ. ಆ ಕೊರಗೂ ಮಕ್ಕಳಿಗಿಲ್ಲ. ಯಾಕೆಂದರೆ, ಅಮ್ಮ ಸುಶ್ಮಿತಾ ಸೇನ್ ದತ್ತು ಪಡೆದ ಮಕ್ಕಳಿವರು. ರೆನೀಗೆ ಅದರ ಅರಿವಿದೆ. ಹಾಲುಗಲ್ಲದ ಅಲಿಶಾ ಕೂಡ ತಾನಾಗಿಯೇ ಸಿಕ್ಕಿದ ಅಮ್ಮನ ತೋಳತೆಕ್ಕೆಯ ಸುಖದಲ್ಲಿ ನಗು ಅರಳಿಸುತ್ತಿದ್ದಾಳೆ.ಇಬ್ಬರೂ ಮಕ್ಕಳ ಲಾಲನೆ ಪಾಲನೆಯಲ್ಲಿ ದಿನದ ಹಲವಾರು ಗಂಟೆ ಕಳೆಯುವ ಸುಶ್ಮಿತಾ ಪಾರ್ಟಿಗಳಿಗೆ ಹೋಗುವಾಗ ಎಂಥ ದಿರಿಸು ತೊಟ್ಟರೂ ಈಗಲೂ ಒಪ್ಪುತ್ತದೆ. ಮಕ್ಕಳ ಪ್ರೀತಿಯ ಜೊತೆಗೆ ದೇಹಾರೈಕೆಯ ಕಡೆಗೂ ಅವರು ಗಮನ ಹರಿಸುತ್ತಾರೆ. `ಈ ಭೂಮಿಯ ಮೇಲೆ ನನ್ನ ಅಮ್ಮನಷ್ಟು ಸುಂದರಿ ಯಾರೂ ಇಲ್ಲ~ ಎಂದು ರೆನಿ ಹೇಳಿದಾಗಲೆಲ್ಲಾ ಸುಷ್ಮಿತಾ ಅಮ್ಮನ ಸಾರ್ಥಕ ನಗೆ ನಗುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry