ಗುರುವಾರ , ಜೂನ್ 24, 2021
28 °C

ಅಮ್ಯೂಜ್‌ಮೆಂಟ್ ಪಾರ್ಕ್ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಧರಿಯಾಪುರ-ಕೋಟನೂರ ಯೋಜನೆ ವ್ಯಾಪ್ತಿಯಲ್ಲಿ `ರಾಜೀವಗಾಂಧಿ ಉದ್ಯಾನ~ಕ್ಕೆ ಮೀಸಲಾದ 18 ಎಕರೆ ಜಮೀನಿನಲ್ಲಿ `ಖಾಸಗಿ-ಸರ್ಕಾರಿ ಸಹಭಾಗಿತ್ವ~ದಲ್ಲಿ ಅಮ್ಯೂಜ್‌ಮೆಂಟ್ ಪಾರ್ಕ್ ನಿರ್ಮಾಣ ಸೇರಿದಂತೆ ವಿವಿಧ ಮಾದರಿಗಳನ್ನು ಅಳವಡಿಸಿ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದು ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿದ್ಯಾಸಾಗರ ಡಿ. ಕುಲಕರ್ಣಿ ಗುರುವಾರ ಇಲ್ಲಿ ಘೋಷಿಸಿದರು.2012-13ನೇ ಸಾಲಿನಲ್ಲಿ ಪ್ರಾಧಿಕಾರದಿಂದ ಆದಾಯದ ನಿರೀಕ್ಷೆಗಳು ಹಾಗೂ ಕೈಗೊಳ್ಳಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ಒಳಗೊಂಡ ಮುಂಗಡಪತ್ರದ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಸದ್ಯ ಆರಂಭದ ಶಿಲ್ಕು ಮತ್ತು ಮುದ್ದತ್ತು ಠೇವಣಿ ಒಟ್ಟು ರೂ. 39.12 ಕೋಟಿಯಿದ್ದು, 2012-13ನೇ ಸಾಲಿನಲ್ಲಿ ಒಟ್ಟು ರೂ. 94 ಕೋಟಿ ಆದಾಯ ಸಂಗ್ರಹಿಸುವ ಗುರಿ ಹೊಂದಿದೆ. ಇದೇ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ಒಟ್ಟು ರೂ. 131 ಕೋಟಿ ವಿನಿಯೋಗಿಸಲು ಯೋಜನೆ ಸಿದ್ಧಪಡಿಸಿದೆ.ಅಭಿವೃದ್ಧಿ ಯೋಜನೆಗಳು: ಎಂಎಸ್‌ಕೆ ಮಿಲ್ ವಾಣಿಜ್ಯ ಯೋಜನೆಯಲ್ಲಿ 2.4 ಎಕರೆ ನಿವೇಶನದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ `ಸುವರ್ಣ ಕರ್ನಾಟಕ ವಾಣಿಜ್ಯ ಸಂಕೀರ್ಣ~ ನಿರ್ಮಿಸಲು ಉದ್ದೇಶಿಸಲಾಗಿದ್ದು, ಮೊದಲ ಹಂತದ ಕಾಮಗಾರಿಗೆ ಒಟ್ಟು ರೂ. 13.55 ಕೋಟಿ ವ್ಯಯಿಸಲು ಸರ್ಕಾರಕ್ಕೆ ಮಂಜೂರಾತಿ ಸಲ್ಲಿಸಲಾಗಿದೆ.ಎಂಎಸ್‌ಕೆ ಮಿಲ್, ಧರಿಯಾಪುರ-ಕೋಟನೂರ ಯೋಜನೆಯಲ್ಲಿ ನೂತನ ಕಲ್ಯಾಣ ಮಂಟಪಗಳನ್ನು ನಿರ್ಮಿಸಲು ಒಟ್ಟು ರೂ. 6 ಕೋಟಿ, ವೀರೇಂದ್ರ ಪಾಟೀಲ ಬಡಾವಣೆಯಲ್ಲಿ ರಿಕ್ರಿಯೇಷನ್ ಪಾರ್ಕ್‌ಗಾಗಿ ರೂ. 25 ಲಕ್ಷ, ಹೀರಾಪುರ ಕ್ರಾಸ್‌ನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ರೂ. 3 ಕೋಟಿ, ಹೊಸ ಯೋಜನೆಗಳ ಅನುಷ್ಠಾನಕ್ಕಾಗಿ ಭೂ ಸ್ವಾಧೀನ ಮಾಡಿಕೊಳ್ಳಲು ಒಟ್ಟು ರೂ.22 ಕೋಟಿ ಕಾಯ್ದಿರಿಸಲಾಗಿದೆ.ನಗರದ ವಿವಿಧ ಭಾಗಗಳಲ್ಲಿ ಒಟ್ಟು 50 ಉದ್ಯಾನಗಳಿಗೆ ಆವರಣ ಗೋಡೆ ನಿರ್ಮಿಸಲು ರೂ. 4 ಕೋಟಿ, ಪ್ರಾಧಿಕಾರದ ವಿವಿಧ ಬಡಾವಣೆಗಳಲ್ಲಿ ಸಸಿಗಳನ್ನು ನೆಡಲು ರೂ. 10 ಲಕ್ಷ, ತರಕಾರಿ ಮಾರುಕಟ್ಟೆ ನಿರ್ಮಾಣದ ಯೋಜನೆ ತಯಾರಿಸಲು ರೂ. 50 ಸಾವಿರ, ನಗರ ಪ್ರವೇಶ ಮಾರ್ಗಗಳಲ್ಲಿ ಪ್ರವೇಶದ್ವಾರ ನಿರ್ಮಾಣಕ್ಕಾಗಿ ರೂ. 1 ಕೋಟಿ, ಕೋಟನೂರ (ಡಿ) ಬಡಾವಣೆಯಲ್ಲಿ 8 ಎಕರೆ ಉದ್ಯಾನವನ ಅಭಿವೃದ್ಧಿಗೆ ರೂ. 1ಕೋಟಿ, ನಗರದ ವೃತ್ತಗಳ ಅಭಿವೃಧ್ಧಿಗೆ ರೂ. 25 ಲಕ್ಷ, ಶವಸಂಸ್ಕಾರ ಸ್ಥಳಗಳ ಅಭಿವೃದ್ಧಿಗೆ ರೂ. 1.5 ಕೋಟಿ, ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ರೂ. 53 ಲಕ್ಷ, ಅನಧಿಕೃತ ಬಡಾವಣೆ ನಿರ್ಮಾಣ ತಡೆಯಲು ಜನಜಾಗೃತಿ ಕಾರ್ಯಕ್ರಮಗಳಿಗಾಗಿ ರೂ. 10 ಲಕ್ಷ, ಗುಲ್ಬರ್ಗ ಮಹಾನಗರಕ್ಕೆ ಹೊರವರ್ತುಲ ರಸ್ತೆ ನಿರ್ಮಾಣದ ಸಮೀಕ್ಷೆಗಾಗಿ ರೂ. 25 ಲಕ್ಷ ತೆಗೆದಿರಿಸಲಾಗಿದೆ ಎಂದು ತಿಳಿಸಿದರು.ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅದರ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸುತ್ತದೆ. ಆದ್ದರಿಂದ ನಿರ್ಮಾಣದ ನಂತರ ಕಾಮಗಾರಿಗಳು ಅವಶೇಷಗಳಾಗಿ ಮಾರ್ಪಟ್ಟರೆ, ಅದಕ್ಕೆ ಪ್ರಾಧಿಕಾರವು ಜವಾಬ್ದಾರವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಪ್ರಾಧಿಕಾರವು ನಿರ್ಮಿಸಿಕೊಟ್ಟಿರುವ ಅನೇಕ ಕಾಮಗಾರಿಗಳು ಹಾಳಾಗಿರುವುದು ಇದೇ ಕಾರಣಕ್ಕಾಗಿ. ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ನಿರ್ವಹಿಸಿಕೊಂಡು ಹೋದರೆ ಮಾತ್ರ ಜನರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.ಪ್ರಾಧಿಕಾರದ ವಿವಿಧ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.