ಅಯ್ಯಂಗೇರಿ: ಚಿನ್ನತಪ್ಪ ಅದ್ದೂರಿ ಉತ್ಸವ

7

ಅಯ್ಯಂಗೇರಿ: ಚಿನ್ನತಪ್ಪ ಅದ್ದೂರಿ ಉತ್ಸವ

Published:
Updated:

ನಾಪೋಕ್ಲು: ಇಲ್ಲಿಗೆ ಸಮೀಪದ ಅಯ್ಯಂಗೇರಿಯಲ್ಲಿ ಚಿನ್ನತಪ್ಪ ದೇವರ ಉತ್ಸವವನ್ನು ಶನಿವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಅಧಿಕ ಸಂಖ್ಯೆಯ ಭಕ್ತಾದಿಗಳು ಹಬ್ಬದ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ದೂರದ ಊರುಗಳಲ್ಲಿ ನೆಲೆಸಿರುವವರು ಅಧಿಕ ಸಂಖ್ಯೆಯಲ್ಲಿ ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗವಹಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾದರು. ಪಟ್ಟಣಿ ಹಬ್ಬದಂದು ಭಾಗಮಂಡಲ ಸಮೀಪದ ಅಯ್ಯಂಗೇರಿ, ಪುಲಿಕೋಟು ಮತ್ತು ಕೋರಂಗಾಲ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.ಇದಕ್ಕೂ ಮುನ್ನ ಚಿನ್ನತಪ್ಪ ದೇವರ ಮಹಿಮಾ ಪೂರ್ವಕ ಕೊಳಲನ್ನು ಬಿದ್ದಿಯಂಡ ಕುಟುಂಬದ ತಕ್ಕ ಮುಖ್ಯಸ್ಥರು ಎತ್ತಿಕೊಂಡು ಶ್ರೀಕೃಷ್ಣ ಪರಮಾತ್ಮ ಧರಿಸುವ ಆಭರಣಗಳನ್ನು ಧರಿಸಿ ಶೃಂಗಾರಗೊಂಡು ಭಂಡಾರದ ಮನೆಯಿಂದ ಚೆಂಡೆ ಜಾಗಟೆ ಮೊಳಗಿಸುತ್ತ ತಂತ್ರಿ ಸಹಿತ ಮೆರವಣಿಗೆಯಲ್ಲಿ ಮಂದ್‌ಗೆ ತೆರಳಿದರು. ಭಕ್ತಾದಿಗಳು ನೆರೆದಿದ್ದ ಈ ತಾಣದಲ್ಲಿ ವಿವಿಧ ಸಾಂಪ್ರದಾಯಿಕ ನಡೆಸಲಾಯಿತು. ಹನ್ನೆರಡು ಕುಟುಂಬಗಳ ಚೆಂಬು ಚೆರ್ಕ ಹೊತ್ತ ಮಹಿಳೆಯರು ಸಾಂಪ್ರದಾಯಿಕ ದಿರಿಸಿನೊಂದಿಗೆ ಸಾಗಿ ಬಂದು ಹಬ್ಬಕ್ಕೆ ಮೆರುಗು ನೀಡಿದರು. ಅನಂತರ ಎತ್ತುಪೋರಾಟ, ನೊಕ್ಕಿಯಾಟ್, ದೇವರ ಮೀನುಗಳಿಗೆ ನಿಯಮಾವಳಿ ಪ್ರಕಾರ ಅಕ್ಕಿ ಎರಚುವುದು ಮುಂತಾದ ಹಲವು ಸಾಂಪ್ರದಾಯಿಕ ಆಚರಣೆಗಳು ಹಂತಹಂತವಾಗಿ ಜರುಗಿದವು.ಭಕ್ತರು ತಂದ ಹರಕೆಗಳನ್ನು ಒಪ್ಪಿಸಲಾಯಿತು. ಪಟ್ಟಣಿ ಹಬ್ಬದಂದು ಊರ ಮಂದಿ ಉಪವಾಸವಿದ್ದು, ಆಗಮಿಸಿದ ಭಕ್ತಾದಿಗಳಿಗೆ ಅವಲಕ್ಕಿ, ಬಾಳೆಹಣ್ಣು ನೀಡಿ ಸತ್ಕರಿಸಿದರು. ಚಿನ್ನತಪ್ಪ ದೇವರು ಬಿದ್ದಿಯಂಡ ಕುಟುಂಬಸ್ಥರ ಮನೆಯಲ್ಲಿ ಕೊಳಲಿನ ರೂಪದಲ್ಲಿ ನೆಲೆಗೊಂಡ ಹಿನ್ನೆಲೆಯಲ್ಲಿ ಅಯ್ಯಂಗೇರಿಯ ಗೊಲ್ಲ ಜನಾಂಗದವರು ಪ್ರತಿವರ್ಷ ಶ್ರೀಕೃಷ್ಣನ ಮಹಿಮಾಪೂರ್ವಕ ಕೊಳಲನ್ನು ಹೊರತೆಗೆದು ಮೂರು ದಿನಗಳ ವೈಭವ ಪೂರ್ಣ ಉತ್ಸವ ಆಚರಿಸುತ್ತಾರೆ. ಶುಕ್ರವಾರ ರಾತ್ರಿ ವಿಶೇಷ ಧಾರೆ ಪೂಜೆಯನ್ನು ಕೈಗೊಳ್ಳಲಾಯಿತು. ಮೂರು ದಿನಗಳ ಚಿನ್ನತಪ್ಪ ಉತ್ಸವ ಇಂದು ಕೊನೆಗೊಳ್ಳಲಿದೆ.ಈ ಸಂದರ್ಭ ಉಪಸ್ಥಿತರಿದ್ದ ದೇವಾಲಯದ ಜೀರ್ಣೋದ್ಧಾರದ ಆರ್ಥಿಕ ಸಮಿತಿ ಅಧ್ಯಕ್ಷ ಕುಯ್ಯಮುಡಿ ಪೂರ್ಣಯ್ಯ ದೇವಾಲಯದ ಜೀರ್ಣೋದ್ಧಾರಕ್ಕೆ ಭಕ್ತಾದಿಗಳು ತನು,ಮನ,ಧನ ಸಹಾಯ ಮಾಡುವಂತೆ ಭಕ್ತಾದಿಗಳಲ್ಲಿ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry