ಶನಿವಾರ, ಜೂಲೈ 11, 2020
28 °C

ಅಯ್ಯಪ್ಪ ಭಕ್ತ ಕಾಣೆ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಅಯ್ಯಪ್ಪಸ್ವಾಮಿ ದರ್ಶನಕ್ಕಾಗಿ ಶಬರಿಮಲೆಗೆ ತೆರಳಿದ್ದ ಭಕ್ತನೊಬ್ಬ ಕಾಣೆಯಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದ್ದು, ಕುಟುಂಬವರ್ಗದಲ್ಲಿ ಆತಂಕವನ್ನುಂಟು ಮಾಡಿದೆ.ಹಿರೇಕೆರೂರ ತಾಲ್ಲೂಕಿನ ಹಂಸಬಾವಿ ಹಾಲಿ ವಸ್ತಿ ಬ್ಯಾಡಗಿ ತಾಲ್ಲೂಕಿನ ಹೆಡಿಗ್ಗೊಂಡ ಗ್ರಾಮದ ಗಂಗಪ್ಪ ಭೀಮಪ್ಪ ಕೊಪ್ಪದ ಎಂಬುವವನೇ ಕಾಣೆಯಾದ ಭಕ್ತ.ಆರೋಗ್ಯ ಇಲಾಖೆಯಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿದ್ದ ಭೀಮಪ್ಪ ಕಳೆದ 17 ವರ್ಷದಿಂದ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಗುರುಸ್ವಾಮಿಯಾಗಿದ್ದರು. ಕಳೆದ ಆರು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿದ್ದ ಭೀಮಪ್ಪ ಇತ್ತೀಚೆಗೆ ಸುಧಾರಿಸಿದ್ದರು. ಆದರೆ, ಈ ಬಾರಿ ಮಾಲೆ ಧರಿಸಿರಲಿಲ್ಲ. 18ನೇ ಬಾರಿ ದರ್ಶನ ಮಾಡುವುದಕ್ಕಾಗಿ ಗ್ರಾಮದ ಆರು ಭಕ್ತರ ಜತೆ ಸೇರಿ ಜ.11ರಂದು ರೈಲು ಮೂಲಕ ಶಬರಿಮಲೆಗೆ ತೆರಳಿದ್ದರು.ದರ್ಶನ ಮಾಡಲಿಲ್ಲ: ಶಬರಿಮಲೆಯಲ್ಲಿ ಎಲ್ಲರೂ ಸೇರಿ ಅಯ್ಯಪ್ಪಸ್ವಾಮಿ ದರ್ಶನಕ್ಕಾಗಿ ತೆರಳಲು ಮುಂದಾದಾಗ ಭೀಮಪ್ಪ, ‘ನನಗೆ ನಡೆದುಕೊಂಡು ಬರಲು ಆಗುವುದಿಲ್ಲ. ನೀವು ಹೋಗಿ ಬನ್ನಿ ನಾನು ಇಲ್ಲಿಯೇ ಕೆಳಗೆ ಕುಳಿತುಕೊಳ್ಳುವುದಾಗಿ’ ಹೇಳಿದ್ದಾರೆ. ಅದಕ್ಕೆ ಸಮ್ಮತಿಸಿದ ಇತರ ಭಕ್ತರು ಅಯ್ಯಪ್ಪಸ್ವಾಮಿ ದರ್ಶನ ಪಡೆದು ವಾಪಸ್ಸಾಗಿದ್ದಾರೆ. ಆದರೆ, ಭೀಮಪ್ಪ ಕುಳಿತ ಜಾಗದಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ.ಆತ ವಾಪಸ್ಸು ಊರಿಗೆ ಹೋಗಿರಬಹುದು ಎಂದು ಶಂಕಿಸಿ ಉಳಿದ ಭಕ್ತರಾದ ಮಹಾಂತೇಶ ಹಾವೇರಿ, ಲಕ್ಷ್ಮಣ ಅಂಗರಗಟ್ಟಿ, ಕಲ್ಲಪ್ಪ ಗೌಡಪ್ಪನವರ, ರಾಜು ಇಬ್ಬಕ್ಕನವರ, ಶಿವಪ್ಪ ನಾಯ್ಕರ ಹಾಗೂ ಮಲ್ಲೇಶ ಪೂಜಾರ ಸೋಮವಾರ ಊರಿಗೆ ವಾಪಸ್ಸಾಗಿದ್ದಾರೆ. ಆಗ ಭೀಮಪ್ಪ  ಗ್ರಾಮಕ್ಕೂ ವಾಪಸ್ಸಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಅಲ್ಲದೇ ಭೀಮಪ್ಪ ತಮ್ಮಿಂದ 13ರಂದೇ ಬೇರ್ಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.ಭೀಮಪ್ಪ ಜ.13ರಿಂದ ಮನೆಯವರನ್ನಾಗಲಿ, ಇತರರನ್ನಾಗಿ  ಸಂಪರ್ಕಿಸಿಲ್ಲ. ಇದರಿಂದ ಗಾಬರಿಗೊಂಡ ಆತನ ಪತ್ನಿ ಗಂಗಾಮಾಳವ್ವ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಆದರೆ, ಆತ ಶಬರಿಮಲೆಯಲ್ಲಿ ಕಾಣೆಯಾಗಿರುವುದರಿಂದ ಅಲ್ಲಿಯೇ ದೂರು ದಾಖಲಿಸಬೇಕು. ಅಲ್ಲಿಗೆ ಸಂಪರ್ಕಿಸಿ ದೂರು ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ಗಂಗಾಮಾಳವ್ವ ತಿಳಿಸಿದ್ದಾಳೆ.ಶಬರಿಮಲೆ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟ ಭಕ್ತರಲ್ಲಿ ಇನ್ನೂ 10 ಮೃತ ದೇಹಗಳ ಗುರುತು ಪತ್ತೆಯಾಗದೇ ಪುದುವಲಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಅಲ್ಲಿಗೆ ತನ್ನ ಪತಿಯ ಭಾವಚಿತ್ರ ಕಳುಹಿಸಿ ವಿಚಾರಣೆ ಮಾಡುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ ಎಂದು ಅವಳು ತಿಳಿಸಿದ್ದಾಳೆ.ಭೀಮಪ್ಪ ಈವರೆಗೆ ಮನೆಗೆ ಬಾರದಿರುವುದರಿಂದ ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬದವರು ಆತಂಕದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.