ಅಯ್ಯಯ್ಯೋ... ಅಯೋಡಿನ್ ಕೊರತೆಯೇ?

7

ಅಯ್ಯಯ್ಯೋ... ಅಯೋಡಿನ್ ಕೊರತೆಯೇ?

Published:
Updated:

ನಮ್ಮ ಆರೋಗ್ಯಪೂರ್ಣ ಬದುಕಿಗೆ `ಅಯೋಡಿನ್~ ಎಂಬ ಲವಣ ಅತ್ಯಗತ್ಯ. ಕುತ್ತಿಗೆಯ ಮುಂಭಾಗದಲ್ಲಿರುವ ಥೈರಾಯಿಡ್ ಎಂಬ ಗ್ರಂಥಿಯು ಅಯೋಡಿನ್ ಬಳಸಿಕೊಂಡು `ಥೈರಾಕ್ಸಿನ್~ ಎಂಬ ಹಾರ್ಮೋನ್‌ನ್ನು ಉತ್ಪತ್ತಿ ಮಾಡುತ್ತದೆ. ದೇಹದ ಅನೇಕ ದೈಹಿಕ- ರಾಸಾಯನಿಕ ಹಾಗೂ ಬೌದ್ಧಿಕ ಕ್ರಿಯೆಗಳು ಸಮರ್ಪಕವಾಗಿ ನಡೆಯುವುದಕ್ಕೆ ಥೈರಾಕ್ಸಿನ್ ಬೇಕು.ಚಿಕ್ಕ ಮಕ್ಕಳಲ್ಲಿ ದೈಹಿಕ ಬೆಳವಣಿಗೆ ಹಾಗೂ ಮೆದುಳಿನ ಬೆಳವಣಿಗೆಗೆ ಥೈರಾಕ್ಸಿನ್ ಬೇಕೇಬೇಕು. ಗರ್ಭಿಣಿಯರಲ್ಲಿ ಅಯೋಡಿನ್ ಅಭಾವ ಇದ್ದರೆ, ಮಗುವಿನ ಮೆದುಳು ಚೆನ್ನಾಗಿ ಬೆಳೆಯುವುದಿಲ್ಲ.ಮಗು ಬುದ್ಧಿಮಾಂದ್ಯವಾಗುತ್ತದೆ. ನಮ್ಮ ದೇಶದಲ್ಲಿನ ಬಹುತೇಕ ಮಕ್ಕಳ ಬುದ್ಧಿಮಾಂದ್ಯತೆಗೆ ಗರ್ಭಾವಸ್ಥೆಯಲ್ಲಿನ ಅಯೋಡಿನ್ ಅಭಾವವೇ ಪ್ರಮುಖ ಕಾರಣ. ಕೂದಲು, ಚರ್ಮ, ಉಗುರು ಹಾಗೂ ಹಲ್ಲುಗಳ ಆರೋಗ್ಯಕ್ಕೂ ಅಯೋಡಿನ್ ಬೇಕು.ವಿಶ್ವದಲ್ಲಿ ಶೇಕಡಾ 7ರಷ್ಟು ಜನರು ಅಯೋಡಿನ್ ಕೊರತೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಸುಮಾರು 80 ದಶಲಕ್ಷ ಜನರಿಗೆ ಈ ತೊಂದರೆ ಇದೆ. ಇನ್ನು 250 ದಶಲಕ್ಷ ಜನರಿಗೆ ಇದರ ಅಪಾಯ ತಗಲುವ ಸಂಭವ ಇದೆ.ಅಯೋಡಿನ್ ಕೊರತೆಯ ಹೆಚ್ಚಿನ ಪೆಟ್ಟು ಬೀಳುವುದು ಮಹಿಳೆಯರು, ಗರ್ಭಿಣಿಯರು ಹಾಗೂ ಮಕ್ಕಳ ಮೇಲೆ. ಅಯೋಡಿನ್ ಕೊರತೆಯಿಂದ ನಮ್ಮ ದುಡಿಮೆಯ ಶಕ್ತಿ ಕುಗ್ಗಿ ದೇಶದ ಆರ್ಥಿಕ ಅಭಿವೃದ್ಧಿಗೆ ಹಿನ್ನಡೆ ಆಗುತ್ತದೆ. ಅಯೋಡಿನ್ ಅಭಾವದಿಂದ ಪ್ರಾಣಿಗಳ ತುಪ್ಪಳ, ಉಣ್ಣೆ, ಮಾಂಸ, ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ.ಅವುಗಳ ವಂಶಾಭಿವೃದ್ಧಿಗೂ ಕಡಿವಾಣ ಬೀಳುತ್ತದೆ. ಈ ಎಲ್ಲ ಕಾರಣಗಳಿಂದ ಅಯೋಡಿನ್ ಅಭಾವವನ್ನು ದೇಶದ ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದು ಗುರುತಿಸಲಾಗಿದೆ. ಜನಸಾಮಾನ್ಯರಿಗೆ ಅಯೋಡಿನ್ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 21ರಂದು ವಿಶ್ವ ಅಯೋಡಿನ್ ದಿನ ಎಂದು ಘೋಷಿಸಲಾಗಿದೆ.ಅಯೋಡಿನ್ ನಾಶ

ಅಯೋಡಿನ್ ಭೂಮಿಯಲ್ಲಿ ಮಾತ್ರ ಇರುತ್ತದೆ. ಭೂಮಿಯಲ್ಲಿ ಬೆಳೆಯುವ ಫಸಲು ಅಯೋಡಿನ್‌ನ್ನು ಹೀರಿಕೊಳ್ಳುತ್ತದೆ. ಪದೇ ಪದೇ ಬಿದ್ದ ಭಾರಿ ಮಳೆ, ಹಿಮಪಾತ, ಪ್ರವಾಹದಿಂದ ಭೂಮಿಯ ಅಯೋಡಿನ್ ಕೊಚ್ಚಿಕೊಂಡು ಹೋಗುತ್ತದೆ. ಅಯೋಡಿನ್ ರಹಿತ ಭೂಮಿಯಲ್ಲಿ ಬೆಳೆದ ಆಹಾರ ಪದಾರ್ಥಗಳು ಅಯೋಡಿನ್ ರಹಿತವಾಗಿರುತ್ತವೆ. ಈ ಕಾರಣದಿಂದ ನಾವು ಅಯೋಡಿನ್ ಕೊರತೆ ತಂದೊಡ್ಡುವ ಅನಾರೋಗ್ಯವನ್ನು ಎದುರಿಸಲೇಬೇಕಾಗಿದೆ.ಗಳಗಂಡ ಎಂಬ ಕಾಯಿಲೆ

ಅಯೋಡಿನ್ ಅಭಾವ ಉಂಟಾದರೆ ನಮ್ಮ ಕುತ್ತಿಗೆಯ ಮುಂಭಾಗದಲ್ಲಿನ ಥೈರಾಯಿಡ್ ಗ್ರಂಥಿಗಳು ಉಬ್ಬಿಕೊಳ್ಳುತ್ತವೆ. ಅಂತಹವರಿಗೆ ಚಳಿಯನ್ನು ಸಹಿಸಲು ಆಗುವುದಿಲ್ಲ. ಉರಿ ಬಿಸಿಲಿನಲ್ಲೂ ಚಳಿಯ ಅನುಭವವೇ ಆಗುತ್ತದೆ. ಜೀರ್ಣಶಕ್ತಿ, ರಕ್ತಪರಿಚಲನೆ, ಲೈಂಗಿಕ ಚಟುವಟಿಕೆ ಮಂದಗೊಳ್ಳುತ್ತದೆ. ರಕ್ತ ಹೀನತೆ ಉಂಟಾಗುತ್ತದೆ. ಕೈಕಾಲುಗಳಲ್ಲಿ ಬಾವು ಕಾಣಿಸುತ್ತದೆ. ಮೈಮೇಲಿನ ಕೂದಲುಗಳು ಉದುರುತ್ತವೆ. ಈ ಲಕ್ಷಣಗಳ ಒಕ್ಕೂಟವನ್ನು `ಗಳಗಂಡ~ ಕಾಯಿಲೆ ಎನ್ನುತ್ತಾರೆ.ನಮಗೆಷ್ಟು ಅಯೋಡಿನ್ ಬೇಕು?

ನಮಗೆ ಬೇಕಾಗಿರುವ ಅಯೋಡಿನ್ ಪ್ರಮಾಣ ಅತ್ಯಲ್ಪ. ಅಂದರೆ ಪ್ರತಿದಿನ 150 ಮೈಕ್ರೊಗ್ರಾಂ ಮಾತ್ರ (ಸೂಜಿಮೊನೆಗೆ ಅಂಟಿದಷ್ಟು) ಮಕ್ಕಳಿಗೆ ಕೇವಲ 50 ಮೈಕ್ರೊಗ್ರಾಂ, ಗರ್ಭಿಣಿಯರಿಗೆ 200 ಮೈಕ್ರೊಗ್ರಾಂ ಅಯೋಡಿನ್ ಸಾಕು. ಒಟ್ಟಾರೆ ಒಬ್ಬ ವ್ಯಕ್ತಿಗೆ ಜೀವಮಾನವಿಡೀ ಬೇಕಾಗಿರುವುದು ಕೇವಲ ಅರ್ಧ ಚಮಚ ಅಯೋಡಿನ್ ಮಾತ್ರ. ನಮ್ಮ ದೇಹದಲ್ಲಿಯೇ 25 ಮಿಲಿಗ್ರಾಂ ಅಯೋಡಿನ್ ಅಡಕಗೊಂಡಿರುತ್ತದೆ.ಸಮುದ್ರದ ಮೀನು, ಉಪ್ಪು, ಕಾಡ್‌ಲಿವರ್ ಆಯಿಲ್ ಅಯೋಡಿನ್‌ನಿಂದ ಸಮೃದ್ಧವಾಗಿವೆ. ಹಾಲು, ಮಾಂಸ, ಮೊಟ್ಟೆ, ಧಾನ್ಯ-ಬೇಳೆಕಾಳು, ಸೊಪ್ಪು-ಪಾಲಾಕ್‌ನಲ್ಲಿಯೂ ಅಯೋಡಿನ್ ಉಂಟು.ನಾವು ಕುಡಿಯುವ ನೀರಿನಲ್ಲಿ ಅಯೋಡಿನ್ ಇದೆ. ರಾಗಿ, ಸಾಸಿವೆ, ಜೋಳ, ಶೇಂಗ ಹಾಗೂ ಉದ್ದಿನಲ್ಲಿ ಸ್ವಲ್ಪ ಹೆಚ್ಚು ಅಯೋಡಿನ್ ಇರುತ್ತದೆ. ಆದರೆ ಅಯೋಡಿನ್ ಅಂಶ ಇರದ ಭೂಮಿಯಲ್ಲಿ ಉತ್ಪತ್ತಿಯಾದ ಯಾವುದೇ ಪದಾರ್ಥದಲ್ಲಿ ಅಯೋಡಿನ್ ಇರುವುದು  ಅನುಮಾನ.ಹೂಕೋಸು, ಎಲೆಕೋಸು, ಮೂಲಂಗಿಗಳಲ್ಲಿ ಇರುವ ಥಯೋಸಯನೈಟ್ ಹಾಗೂ ಸೈಯನೋ ಗ್ಲೈಕೊಸೈಡ್ಸ್ ರಾಸಾಯನಿಕಗಳು ದೇಹದಲ್ಲಿನ ಅಯೋಡಿನ್ ಅನ್ನು ನಿಷ್ಕ್ರಿಯಗೊಳಿಸುತ್ತವೆ. ಬಹಳಷ್ಟು ಕೆಮ್ಮಿನ ಔಷಧಿಗಳಲ್ಲಿ ಇರುವ ಟಿಂಚರ್ ಅಯೋಡಿನ್ ಎಂಬ ಪದಾರ್ಥವೂ ಇದೇ ರೀತಿಯ ಕಾರ‌್ಯ ಎಸಗುತ್ತದೆ ಮತ್ತು ದೇಹದಲ್ಲಿ ಅಯೋಡಿನ್ ಕೊರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.ಹೀಗಾಗಿ ಅಯೋಡಿನ್ ಕೊರತೆ ತಲೆದೋರಿರುವ ಪ್ರದೇಶಗಳಲ್ಲಿ ವಾಸಿಸುವವರು ಈ ಬಗ್ಗೆ ಜಾಗೃತರಾಗ ಬೇಕಾಗುತ್ತದೆ. ಗರ್ಭಿಣಿಯರಂತೂ ಕೆಮ್ಮಿನ ಔಷಧಿಯನ್ನು ಬಳಸದೆ ಇರುವುದೇ ಕ್ಷೇಮ. ಏಕೆಂದರೆ ಬಹುತೇಕ ಎಲ್ಲ ಕೆಮ್ಮಿನ ಔಷಧಿಗಳಲ್ಲೂ ಟಿಂಚರ್ ಅಯೋಡಿನ್ ಇರುತ್ತದೆ.ಪರಿಹಾರ

ಅಯೋಡಿನ್ ಅಭಾವವನ್ನು ಪರಿಹರಿಸಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗವೆಂದರೆ, ಅಯೋಡಿನ್‌ಯುಕ್ತ ಉಪ್ಪನ್ನು ಬಳಸುವುದು. ಅನೇಕ ದೇಶಗಳಲ್ಲಿನ ಅಯೋಡಿನ್ ಕೊರತೆಯನ್ನು ಇಂತಹ ಉಪ್ಪು ಪರಿಣಾಮಕಾರಿಯಾಗಿ ನಿವಾರಿಸಿದೆ. ಹೀಗಾಗಿ ಅತಿ ಅಗ್ಗವಾಗಿ, ಪರಿಣಾಮಕಾರಿಯಾಗಿ ಅಯೋಡಿನ್‌ಯುಕ್ತ ಉಪ್ಪು ನಮ್ಮನ್ನು ಅಯೋಡಿನ್ ಕೊರತೆಯಿಂದ ಕಾಪಾಡುತ್ತದೆ. ಇದುವರೆಗೆ ನಡೆದಿರುವ ಸಂಶೋಧನೆಗಳು ಅಯೋಡಿನ್‌ಯುಕ್ತ ಉಪ್ಪಿನಿಂದ ದೇಹಕ್ಕೆ ಯಾವುದೇ ರೀತಿಯ ಅಪಾಯ ಉಂಟಾಗದು ಎಂಬುದನ್ನು ಸಾಬೀತುಪಡಿಸಿವೆ.ಅಯೋಡಿನ್‌ಯುಕ್ತ ಉಪ್ಪು ಉತ್ಪಾದನಾ ಮಟ್ಟದಲ್ಲಿ 30 ಪಿ.ಪಿ.ಎಂ ಅಯೋಡಿನ್ ಅನ್ನು ಹೊಂದಿರುತ್ತದೆ. ಬಳಕೆದಾರರಿಗೆ ತಲುಪುವಷ್ಟರಲ್ಲಿ ಅದರ  ಪ್ರಮಾಣ 15 ಪಿ.ಪಿ.ಎಂ.ಗೆ ಇಳಿದಿರುತ್ತದೆ. ಅಯೋಡಿನ್ ಸುಲಭವಾಗಿ ಗಾಳಿಯಲ್ಲಿ ಆವಿಯಾಗಿ ಹೋಗುವ ಗುಣ ಹೊಂದಿದೆ.ಹೀಗಾಗಿ ನಾವು ಅಯೋಡಿನ್‌ಯುಕ್ತ ಉಪ್ಪನ್ನು ಕೊಳ್ಳುವಾಗ ಹೊಸದಾಗಿ ಬಂದಿರುವಂತಹದ್ದನ್ನೇ ನೋಡಿ ತರಬೇಕು. ಗಾಳಿ, ಬೆಳಕಿಗೆ ತೆರೆದಿಡದೆ ಸುರಕ್ಷಿತವಾಗಿ ರಕ್ಷಿಸಿ ಇಡಬೇಕು. ಆರು ತಿಂಗಳ ಒಳಗೇ ಇದನ್ನು ಬಳಸಬೇಕು. ಕೇಂದ್ರ ಸರ್ಕಾರ 2006ರ ಮೇ 17ರಿಂದ ಅಯೋಡಿನ್ ರಹಿತ ಉಪ್ಪಿನ ಮಾರಾಟವನ್ನು ನಿಷೇಧಿಸಿದೆ.ಅಯೋಡಿನ್ ಕೊರತೆಯಿಂದ ಉಂಟಾಗುವ ಗಂಭೀರ ಪರಿಣಾಮಗಳು

ಗರ್ಭಿಣಿಯರಲ್ಲಿ: ಗರ್ಭಪಾತ, ಅಂಗವಿಕಲ ಶಿಶು, ನವಜಾತ ಶಿಶುವಿನಲ್ಲಿ ಗಳಗಂಡ

ಚಿಕ್ಕ ಮಕ್ಕಳಲ್ಲಿ: ಕುಬ್ಜತೆ, ಶತ ದಡ್ಡತನ, ಮೆಳ್ಳೆಗಣ್ಣು, ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ನಿಧಾನವಾಗುತ್ತದೆ. ಕಿವುಡುತನ, ಲೈಂಗಿಕ ಬೆಳವಣಿಗೆ ಆಗದಿರುವುದು, ತೊದಲುವಿಕೆ.ದೊಡ್ಡವರಲ್ಲಿ: ಗಳಗಂಡ, ಗೊಗ್ಗರು ಧ್ವನಿ, ದೇಹದಲ್ಲಿ ಬಾವು, ಕೊಲೆಸ್ಟ್ರಾಲ್ ಹೆಚ್ಚಳ, ಚುರುಕುತನ ನಾಶವಾಗಿ ಮಂದತೆ ಆವರಿಸುವುದು, ಸ್ಥೂಲಕಾಯ,  ಲೈಂಗಿಕ ನಿರಾಸಕ್ತಿ.ಪ್ರಾಣಿಗಳಲ್ಲಿ: ಹಾಲು, ಮೊಟ್ಟೆ, ಮಾಂಸ, ಉಣ್ಣೆ ಬಹಳ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ, ಸಂತಾನೋತ್ಪತ್ತಿ ಕುಂಠಿತ ಆಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry