ಅಯ್ಯಯ್ಯೋ... ಟ್ರಾಫಿಕ್ ಜಾಮ್!

7

ಅಯ್ಯಯ್ಯೋ... ಟ್ರಾಫಿಕ್ ಜಾಮ್!

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶದ ಕೇಂದ್ರ ಸ್ಥಾನವಾದ ಗುಲ್ಬರ್ಗ ನಗರವು ಸ್ಥಳೀಯರಿಗಿಂತಲೂ ವಲಸಿರಿಂದ ಭರ್ತಿಯಾಗುತ್ತಿದೆ. ಅನೇಕ ಕಂಪೆನಿಗಳು ಗುಲ್ಬರ್ಗದಲ್ಲಿ ನೂತನ ಶಾಖೆ ಆರಂಭಿಸುವುದರೊಂದಿಗೆ ಉದ್ಯೋಗಿಗಳ ಆಗಮನ ಒಂದುಕಡೆಯಾಗುತ್ತಿದ್ದರೆ, ಮೂರು ವಿಶ್ವವಿದ್ಯಾಲಯಗಳೊಂದಿಗೆ ಸೇರಿ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಇರುವುದರಿಂದ ಗುಲ್ಬರ್ಗದಲ್ಲಿ ಜನದಟ್ಟಣೆ ಹೆಚ್ಚಾಗುವುದರ ಜತೆಯಲ್ಲೆ ವಾಹನ ದಟ್ಟಣೆಯೂ ಈಚೆಗೆ ವಿಪರೀತವಾಗಿದೆ. ಅರ್ಧಮರ್ಧ ನಿರ್ಮಾಣಗೊಂಡ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್ ಕಿರಿಕಿರಿ ಅನುಭವಿಸುವಂತಾಗಿದೆ.ಗುಲ್ಬರ್ಗ ವಾಪ್ತಿಯನ್ನು ಪರಿಗಣಿಸಿದರೆ ವಾಹನ ಸಂಚಾರದಟ್ಟಣೆಯನ್ನು ಸಮರ್ಪಕವಾಗಿ ನಿರ್ವಹಿಸಬಹುದು. ಆದರೆ ಇಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಕುಂಠಿತಗೊಂಡಿರುವುದು ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣ. ಜನಸಂಖ್ಯೆ ಅನುಗುಣವಾಗಿ ರಸ್ತೆ ವಿಸ್ತರಣೆ ಆಗದೆ ಇರುವುದನ್ನು ಪ್ರಮುಖವಾಗಿ ಗುರುತಿಸಬಹುದು. ಕೋರ್ಟ್ ರಸ್ತೆ, ಸಿಟಿ ಬಸ್ ಸ್ಟ್ಯಾಂಡ್, ಲಾಲ್‌ಗೇರಿ ಕ್ರಾಸ್, ಜಗತ್ ಸರ್ಕಲ್‌ನಿಂದ ದರ್ಗಾಕ್ಕೆ ಹೋಗುವ ರಸ್ತೆ, ಇನ್ನೂ ಕೆಲವು ಆಯಕಟ್ಟಿನ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿ ತೆವಳುತ್ತಾ ಸಾಗಿದೆ.ರಾಮ ಮಂದಿರ ವೃತ್ತ, ರಾಷ್ಟ್ರಪತಿ ಚೌಕ್, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಮಿನಿ ವಿಧಾನ ಸೌಧ, ಅನ್ನಪೂರ್ಣ ಕ್ರಾಸ್, ಜಗತ್ ಸರ್ಕಲ್, ಹುಮನಾಬಾದ್ ರಿಂಗ್ ರಸ್ತೆಗಳಲ್ಲಿ ವಾಹನ ಸಂಚಾರ ನಿಯಂತ್ರಿಸುವ ದೀಪ (ಟ್ರಾಫಿಕ್ ಸಿಗ್ನಲ್)ಗಳನ್ನು ಅಳವಡಿಸಲಾಗಿದೆ.ಆದರೆ ಸೂಪರ್ ಮಾರ್ಕೆಟ್, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಹಳೆ ಜೇವರ್ಗಿ ರಸ್ತೆಯಲ್ಲಿ ಅಧಿಕ ಸಂಚಾರ ಸ್ಥಗಿತ (ಟ್ರಾಫಿಕ್ ಜಾಮ್)ವಾಗುತ್ತಿದೆ. ಇಲ್ಲಿನ ಇಕ್ಕಟ್ಟಾದ ಪ್ರದೇಶ ಇರುವುದರಿಂದ ಸಂಚಾರ ನಿಯಂತ್ರಣ ಕಷ್ಟಕರವಾಗಿದೆ. ಜನರಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಅರಿವಿನ ಕೊರತೆ ಇರುವದರಿಂದ, ಇದ್ದ ಸ್ವಲ್ಪ ಜಾಗದಲ್ಲಿಯೇ ತೂರಿಕೊಂಡು ಹೋಗುವ ಸಾಹಸ ಮಾಡುವುದರಿಂದ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.ಗುಲ್ಬರ್ಗ ನಗರ ಬಿ-ಸ್ಮಾರ್ಟ್ ಸಿಟಿ ಆಗುವಂತಹ ಸಂದರ್ಭದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಿರುವುದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಇನ್ನೂ ಆಯಕಟ್ಟಿನ ಪ್ರದೇಶಗಳಲ್ಲಿ ಸಂಚಾರ ನಿಯಂತ್ರಣ ದೀಪ (ಸಿಗ್ನಲ್)ಗಳನ್ನು ಅಳವಡಿಸಬೇಕಾಗಿದೆ.`ಟ್ರಾಫಿಕ್ ಜಾಮ್' ಈಚೆಗೆ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ ಎನ್ನುವಂತಾಗಿದೆ. ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದು, ವಯೋವೃದ್ಧರು ತಿರುಗಾಡುವುದು, ಉದ್ಯೋಗಸ್ಥರು ಕಚೇರಿಗೆ ತೆರಳುವುದು ನಿತ್ಯ ಕ್ರಿಯೆ. ನಿಗದಿತ ಸ್ಥಳಕ್ಕೆ ತಲುಪಬೇಕೆಂಬ ಹಂಬಲ ಎಲ್ಲರಲ್ಲೂ ಇರುತ್ತದೆ. ರಸ್ತೆ ವಿಸ್ತರಣೆ ಆಮೆ ಗತಿಯಲ್ಲಿ ಸಾಗುತ್ತಿರುವುದು, ಜನರ ವೇಗದ ಜೀವನ, ಇಕ್ಕಟ್ಟಿನ ಜಾಗದಲ್ಲಿ ಸಂಚಾರ, ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲವಾದ್ದರಿಂದ ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿದೆ. ಸಂಚಾರ ನಿಯಮಗಳ ಜನಜಾಗೃತಿ ಅಗತ್ಯವಾಗಿದೆ.“ಟ್ರಾಫಿಕ್ ಸಿಗ್ನಲ್ ಇಲ್ಲದಿದ್ದರೆ ಅಪಘಾತಗಳು ಸಂಭವಿಸುತ್ತವೆ, ಜನರು ತಮ್ಮ ಇಚ್ಛೆ ಬಂದಂತೆ ವಾಹನ ಚಲಾಯಿಸುತ್ತಾರೆ. ಸಂಚಾರ ನಿಯಂತ್ರಿಸುವ ದೀಪದಿಂದ ನಿಯಮ ಪಾಲಿಸಿ ಒಂದೇ ದಾರಿಯಲ್ಲಿ ಚಲಿಸಿದರೆ ಅಪಘಾತ ತಪ್ಪಿಸಬಹುದು' ಎನ್ನುತ್ತಾರೆ  ರಾಘವೇಂದ್ರ ಬಿಲ್ಲಾರ.`ವಿದ್ಯಾರ್ಥಿಗಳು ಕಾಲೇಜಿಗೆ, ರೋಗಿಗಳು ಆಸ್ಪತ್ರೆಗಳಿಗೆ, ಉದ್ಯೋಗ ಆಕಾಂಕ್ಷಿಗಳು ಸಂದರ್ಶನಕ್ಕೆ ತೆರಳುವ ಸಂದರ್ಭದಲ್ಲಿ ಸಂಚಾರ ಸ್ಥಗಿತ (ಟ್ರಾಫಿಕ್ ಜಾಮ್)ದಿಂದ ವಿಚಲಿತರಾಗಿ ಪರೀಕ್ಷೆ ತಪ್ಪಿಸಿಕೊಳ್ಳುವ ಸಂಭವ, ರೋಗಿಗಳು ಸಾವು-ಬದುಕಿನ ನಡುವೆ ಹೋರಾಡುವ ಗಂಭೀರ ಪರಿಸ್ಥಿತಿ ಉಂಟಾಗುತ್ತದೆ.ಸಾರಿಗೆ ಇಲಾಖೆ ಟ್ರಾಫಿಕ್ ಜಾಮ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯನ್ನು ಈಗಿನಿಂದಲೆ ಅಳವಡಿಸಬೇಕು. ಜನರಿಗೆ ರೂಢಿಗೊಳಿಸಬೇಕು' ಎನ್ನುತ್ತಾರೆ ದಯಾನಂದ ಎಂ.ಪಂಚಾಳ.ವಾಹನದಟ್ಟಣೆಯಿಂದ ಮುಂದಾಗುವ ಸಮಸ್ಯೆಗೆ ಈಗಿನಂದಲೆ ಪರಿಹಾರಗಳನ್ನು ಜರುಗಿಸುವ ಜರೂರು ಇದೆ. ಸಂಬಂಧಿಸಿದ ಇಲಾಖೆಗಳು ಈ ಬಗ್ಗೆ ಸ್ಪಂದಿಸುವ ಅಗತ್ಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry