ಅಯ್ಯೋ...ಬೆಂಕಿ...

7

ಅಯ್ಯೋ...ಬೆಂಕಿ...

Published:
Updated:
ಅಯ್ಯೋ...ಬೆಂಕಿ...

ಬೆಂಗಳೂರಿನ ಕಾರ್ಲ್‌ಟನ್ ಟವರ್ಸ್‌ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿ ಒಂಬತ್ತು ಮಂದಿ ಮೃತಪಟ್ಟ ಘಟನೆ ನಡೆಯುವವರೆಗೂ ಅಗ್ನಿ ದುರಂತವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಸುಧಾರಣೆ ಆಗಬೇಕೆಂದು ಯಾರಿಗೂ ಅನಿಸಿರಲಿಲ್ಲ. ಈ ದುರಂತ ನಡೆದು ಒಂದು ವರ್ಷ ನಾಲ್ಕು ತಿಂಗಳು ಕಳೆದು ಹೋಗಿದೆ. ಆದರೆ ಇಂತಹ ದುರಂತಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆಯೇ ಎಂದು ನೋಡಿದರೆ ಫಲಿತಾಂಶ ಮಾತ್ರ ಶೂನ್ಯ!ದುರಂತ ನಡೆದಾಗ ಪ್ರಾಣ ಒತ್ತೆ ಇಟ್ಟು ರಕ್ಷಣಾ ಕಾರ್ಯ ಮಾಡುವ ಅಗ್ನಿಶಾಮಕ ಸಿಬ್ಬಂದಿಯನ್ನು  ದೂಷಿಸುವಂತಿಲ್ಲ. ಅಗತ್ಯ ಸೌಲಭ್ಯಗಳ ಕೊರತೆ ಮತ್ತು ಕಠಿಣ ನಿಯಮ ಜಾರಿಯಲ್ಲಿನ ವೈಫಲ್ಯ ಇದಕ್ಕೆ ಕಾರಣ.1942ರಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯನ್ನು ಆರಂಭಿಸಲಾಯಿತು. ಬೆಂಗಳೂರು ದಕ್ಷಿಣ ಮತ್ತು ಉತ್ತರ ಭಾಗಕ್ಕೆ ಮಾತ್ರ ಇದು ಸೀಮಿತವಾಗಿತ್ತು. ಇದು ಪೊಲೀಸ್ ಇಲಾಖೆಯ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. 1965ರಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪ್ರತ್ಯೇಕ ನಿರ್ದೇಶನಾಲಯವನ್ನು ಆರಂಭಿಸಲಾಯಿತು.ಅಗ್ನಿಶಾಮಕ ಇಲಾಖೆ ಅಸ್ತಿತ್ವಕ್ಕೆ ಬಂದು 69 ವರ್ಷಗಳು ಕಳೆದಿವೆ. ಅಗ್ನಿ ಅನಾಹುತ ನಡೆದಾಗ ಪ್ರಾಣ- ಆಸ್ತಿ ರಕ್ಷಣೆ ಮಾಡುವ ಕೆಲಸವನ್ನಷ್ಟೇ ಇಲಾಖೆಗೆ ನೀಡಲಾಗಿದೆ. ಆದರೆ ಅಗ್ನಿ ಅನಾಹುತ ಸಂಭವಿಸದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಚನೆ ನೀಡುವ ಯಾವುದೇ ಅಧಿಕಾರ ಇಲಾಖೆಗೆ ಇಲ್ಲ ಎಂಬ ಸಂಗತಿ ಅಘಾತಕಾರಿಯಾಗಿದೆ.ಕಟ್ಟಡ ಬೈಲಾ ಪ್ರಕಾರ ಹದಿನೈದು ಮೀಟರ್‌ಗಿಂತ ಹೆಚ್ಚಿನ ಎತ್ತರವಿರುವುದು `ಎತ್ತರದ ಕಟ್ಟಡ~ (ಹೈರೈಸ್ ಬಿಲ್ಡಿಂಗ್) ಎಂದು ಪರಿಗಣಿಸಲಾಗುತ್ತದೆ. ಸುಮಾರು 20 ಸಾವಿರ ಇಂಥ ಬಹುಮಹಡಿ ಕಟ್ಟಡಗಳು ಬೆಂಗಳೂರಿನಲ್ಲಿವೆ.ರಾಜ್ಯದ ಇತರ ನಗರಗಳಲ್ಲಿ ಇಂಥ ಐದು ಸಾವಿರ ಬಹುಮಹಡಿ ಕಟ್ಟಡಗಳಿವೆ. ಕಟ್ಟಡ ಬೈಲಾ ಅನ್ವಯ ಅಥವಾ ವಲಯ ನಿಯಂತ್ರಣ ನಿಯಮದ ಪ್ರಕಾರ ಬಹುಮಹಡಿ ಕಟ್ಟಡಕ್ಕೆ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (ಎನ್‌ಓಸಿ) ಪಡೆದುಕೊಳ್ಳಬೇಕು. ಕಟ್ಟಡವನ್ನು ಬಳಕೆಗೆ ತೆಗೆದುಕೊಳ್ಳುವ ಮುನ್ನ ಎನ್‌ಓಸಿ ಕಡ್ಡಾಯ. ಅಗ್ನಿಶಾಮಕ ಅಧಿಕಾರಿಗಳು ಕಟ್ಟಡವನ್ನು ಪರಿಶೀಲಿಸಿ ಅಲ್ಲಿ ಅಗ್ನಿ ಸುರಕ್ಷತೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಸುರಕ್ಷತೆ ಇದೆ ಎಂದು ಖಚಿತವಾದ ನಂತರ ಎನ್‌ಓಸಿ ನೀಡುತ್ತಾರೆ.ಆದರೆ ಒಮ್ಮೆ ಎನ್‌ಓಸಿ ನೀಡಿದ ನಂತರ ಮರು ಪರಿಶೀಲನೆ ನಡೆಸುವ ಯಾವುದೇ ನಿಯಮ ಇಲ್ಲ. ಕಾರ್ಲ್‌ಟನ್ ಟವರ್ಸ್‌ ಕಟ್ಟಡದ ಮಾಲೀಕರು ಸಹ ನಿರಾಕ್ಷೇಪಣಾ ಪತ್ರ ಪಡೆದಿದ್ದರು. ಆದರೆ ಆ ನಂತರ ಕಟ್ಟಡದಲ್ಲಿ ಸಾಕಷ್ಟು ಮಾರ್ಪಾಡು ಮಾಡಿದ್ದರು. ಇದನ್ನು ಅಗ್ನಿಶಾಮಕ ಇಲಾಖೆಯವರು ಪರಿಶೀಲನೆ ಮಾಡಿರಲಿಲ್ಲ. ಅಗ್ನಿ ಅನಾಹುತದ ಸುರಕ್ಷತೆ ಈ ಕಟ್ಟಡದಲ್ಲಿ ಇರಲಿಲ್ಲ ಎಂದು ದುರಂತ ನಡೆದ ನಂತರವೇ ಗೊತ್ತಾಗಿದ್ದು.

 

ಎನ್‌ಓಸಿ ನೀಡಿದ ನಂತರ ಯಾವುದೇ ಕಟ್ಟಡವನ್ನು ಸಿಬ್ಬಂದಿ ಈವರೆಗೆ ಮರುಪರಿಶೀಲನೆ ನಡೆಸಿಲ್ಲ. ಕಟ್ಟಡದಲ್ಲಿರುವ ಅಗ್ನಿನಂದಕ ಸಲಕರಣೆಗಳು ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿವೆಯೋ ಅಥವಾ ಇಲ್ಲವೋ ಎಂಬುದೂ ಗೊತ್ತಿಲ್ಲ.ಆದ್ದರಿಂದ ಕಟ್ಟಡ ಮಾರ್ಪಾಡು ಮತ್ತು ಅದರಿಂದ ಆಗುವ ಅನಾಹುತದ ಬಗ್ಗೆ ಅರಿವೇ ಇರುವುದಿಲ್ಲ. ದುರಂತ ನಡೆದಾಗ ಮಾತ್ರ ಅಲ್ಲಿನ ಅವ್ಯವಸ್ಥೆ ಗೊತ್ತಾಗುತ್ತಿದೆ. ಮರು ಪರಿಶೀಲನೆ ನಿಯಮ ಇಲ್ಲದಿರುವುದು ಮತ್ತು ಮರು ಪರಿಶೀಲನೆ ಮಾಡಲು ಸಿಬ್ಬಂದಿ ಕೊರತೆ ಇರುವುದರಿಂದ 25 ಸಾವಿರ ಕಟ್ಟಡಗಳಲ್ಲಿ ಎಲ್ಲಿಯಾದರೂ ಅಗ್ನಿ ಅನಾಹುತ ನಡೆದರೆ ಒಳಗಿರುವವರು ಸುರಕ್ಷಿತವಾಗಿ ಪಾರಾಗುತ್ತಾರೆ ಎಂಬುದಕ್ಕೆ ಖಾತರಿ ಈಗಲೂ ಇಲ್ಲ.ಕಾರ್ಲ್‌ಟನ್ ಟವರ್ಸ್‌ನಲ್ಲಿ ನಡೆದ ಬೆಂಕಿ ಅನಾಹುತದ ಬಳಿಕವೂ, ಬಹು ಮಹಡಿ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿ `ಬಿಯಾಂಡ್ ಕಾರ್ಲ್‌ಟನ್~ ಸಂಸ್ಥೆಯು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.ಈ ಬಗ್ಗೆ ಹೈಕೋರ್ಟ್ ಅಗ್ನಿಶಾಮಕ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರಪಾಲಿಕೆಗೆ (ಬಿಬಿಎಂಪಿ) ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅಗ್ನಿಶಾಮಕ ಇಲಾಖೆ ಮತ್ತು ಬಿಬಿಎಂಪಿ, `ಕಟ್ಟಡಗಳ ಮಾಲೀಕರು ಅಗ್ನಿ ಸುರಕ್ಷತೆಗೆ ಸಂಬಂಧಿಸಿದಂತೆ ಅಗ್ನಿಶಾಮಕದಳದ ಅಧಿಕಾರಿಗಳ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು.ವರ್ಷಕ್ಕೆ ಎರಡು ಬಾರಿ ಇದನ್ನು ನವೀಕರಿಸಿಕೊಂಡು ಬಿಬಿಎಂಪಿಗೆ ತೋರಿಸಿ ಕಟ್ಟಡದ ಪರವಾನಗಿಯನ್ನು ನವೀಕರಿಸಿಕೊಳ್ಳಬೇಕು. ಇದರ ಜೊತೆಗೆ ಅಗ್ನಿಶಾಮಕ ದಳದಿಂದ ನಿಯೋಜನೆಗೊಂಡ ಸಿಬ್ಬಂದಿ ಕಟ್ಟಡಗಳನ್ನು ಪರಿಶೀಲಿಸಿ ಅಗ್ನಿಶಾಮಕ ಉಪಕರಣಗಳು ಸುಸ್ಥಿತಿಯಲ್ಲಿ ಇವೆಯೇ ಎಂಬ ಬಗ್ಗೆ ಪಾಲಿಕೆಗೆ ಪ್ರತಿ ವರ್ಷ ಪ್ರಮಾಣ ಪತ್ರ ಸಲ್ಲಿಸಬೇಕು~ ಎಂದು ತಿಳಿಸಿತ್ತು.ಇದರಂತೆ ಅಗ್ನಿಶಾಮಕ ಇಲಾಖೆ ಕಳೆದ ಜುಲೈ ಏಳರಂದು ಕರ್ನಾಟಕ ಅಗ್ನಿಶಾಮಕ ಸೇವೆಗಳ ಕಾಯ್ದೆಯ ಸೆಕ್ಷನ್ 13ರ ಅಡಿಯಲ್ಲಿ ಅಧಿಸೂಚನೆ ಹೊರಡಿಸಿದೆ. `ಈಗಿರುವ ಎಲ್ಲ ಬಹುಮಹಡಿ ಕಟ್ಟಡಗಳ ಮರು ಪರಿಶೀಲನೆ ನಡೆಸಿ ಅಲ್ಲಿ ಅಗ್ನಿ ಅನಾಹುತ ಸುರಕ್ಷತೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಸುರಕ್ಷತೆ ಇಲ್ಲ ಎಂದು ಕಂಡುಬಂದರೆ ಆ ಕಟ್ಟಡಕ್ಕೆ ವಿದ್ಯುತ್ ಪೂರೈಸದಂತೆ ಬೆಸ್ಕಾಂಗೆ ಸೂಚನೆ ನೀಡಬೇಕು~ ಎನ್ನುತ್ತದೆ ಈ ಅಧಿಸೂಚನೆ.ಆದರೆ `25 ಸಾವಿರ ಬಹುಮಹಡಿ ಕಟ್ಟಡಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಷ್ಟು ಸಿಬ್ಬಂದಿ ಇಲಾಖೆಯಲ್ಲಿ ಇದ್ದಾರೆಯೇ~ ಎಂದು ಪ್ರಶ್ನಿಸಿದರೆ ಇಲ್ಲ ಎನ್ನುತ್ತಾರೆ ಅಧಿಕಾರಿಗಳು. ಪ್ರತಿಯೊಂದು ಕಟ್ಟಡವನ್ನು ಕೂಲಂಕಷವಾಗಿ ಪರಿಶೀಲಿಸಿ ಅಗ್ನಿ ಸುರಕ್ಷತೆ ಬಗ್ಗೆ ಮಾಹಿತಿ ಕಲೆ ಹಾಕಿ ಕ್ರಮ ಕೈಗೊಳ್ಳುವುದು ಇಲಾಖೆಗೆ ಸವಾಲಿನ ಕೆಲಸವಾಗಿದೆ. ಅದೂ ಒಂಬತ್ತು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸುವುದು ಅಸಾಧ್ಯ ಎನಿಸಿದೆ.ಒಂದು ವೇಳೆ ಪರಿಶೀಲನೆ ನಡೆಸಿ ಕಟ್ಟಡದಲ್ಲಿ ಸುರಕ್ಷತೆ ಇಲ್ಲ ಎಂದು ಬೆಸ್ಕಾಂಗೆ ವಿದ್ಯುತ್ ಪೂರೈಕೆ ನಿಲ್ಲಿಸುವಂತೆ ಪತ್ರ ಬರೆಯುತ್ತಾರೆ ಎಂದುಕೊಳ್ಳಿ, ಬೆಸ್ಕಾಂ ಸಿಬ್ಬಂದಿ ಕ್ರಮ ಕೈಗೊಳ್ಳದಿದ್ದರೆ ಮುಂದೇನು?. ಈ ಕಾರ್ಯಕ್ಕೆ ಸಿಬ್ಬಂದಿ ನಿಯೋಜಿಸುವ ಕೆಲಸ ಈಗಷ್ಟೇ ಪ್ರಾರಂಭವಾಗಿದೆ. ಹೈಕೋರ್ಟ್‌ಗೆ ಮಾಹಿತಿ ನೀಡಿರುವಂತೆ ಒಂಬತ್ತು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.ಪೊಲೀಸ್ ಇಲಾಖೆಯಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಜನರ ಆಸ್ತಿ- ಪ್ರಾಣ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ. 6,448 ಮಂಜೂರಾದ ಸಿಬ್ಬಂದಿಯಾದರೆ ಈಗಿರುವುದು 3,945 ಸಿಬ್ಬಂದಿ ಮಾತ್ರ. ಇನ್ನೂ 2,503 ಸಿಬ್ಬಂದಿ ಹುದ್ದೆಗಳು ಖಾಲಿ ಇವೆ (ಆರಂಭವಾಗಬೇಕಿರುವ 37 ಅಗ್ನಿಶಾಮಕ ಠಾಣೆಗೆ ಮಂಜೂರಾದ ಸಿಬ್ಬಂದಿಯೂ ಸೇರಿದಂತೆ).ಅನಾಹುತ ನಡೆದಾಗ ಕಾರ್ಯಾಚರಣೆ ನಡೆಸುವ ಸಿಬ್ಬಂದಿಗೆ ಫೈರ್ ಸೇಫ್ಟಿ ಜಾಕೆಟ್ ಅಗತ್ಯವಿದೆ. ಆದರೆ ದುಬಾರಿ ಬೆಲೆಯ ಜಾಕೆಟ್‌ಗಳನ್ನು ಇಲಾಖೆ ಇನ್ನೂ ಖರೀದಿಸಿಲ್ಲ. ಪ್ರಾಣ ಪಣಕ್ಕಿಟ್ಟು ರಕ್ಷಣೆ ಮಾಡುವ ಸಿಬ್ಬಂದಿಗೆ ಅಗತ್ಯ ಸೌಲಭ್ಯ- ಸಲಕರಣೆಗಳನ್ನು ನೀಡಲು ಇಲಾಖೆ ಮುಂದಾಗಬೇಕಿದೆ.ದುರಂತದ ಸ್ಥಳಕ್ಕೆ ತೆರಳುವ ಅಗ್ನಿಶಾಮಕ ವಾಹನಗಳ ಟ್ಯಾಂಕ್‌ನಲ್ಲಿರುವ ನೀರನ್ನು ಸಂಪೂರ್ಣವಾಗಿ ಬಳಸಿದ ನಂತರ ಮತ್ತೆ ನೀರು ತುಂಬಿಸಿಕೊಳ್ಳಬೇಕಾಗುತ್ತದೆ. ಮತ್ತೆ ಅಗ್ನಿಶಾಮಕ ಠಾಣೆಗೆ ಹೋಗಿ ಅಲ್ಲಿಂದ ನೀರು ತುಂಬಿಸಿಕೊಂಡು ಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದಲೇ ಮಹಾನಗರಗಳ ನೀರು ಪೂರೈಕೆ ಪೈಪ್‌ಗಳಲ್ಲಿ ಅಗ್ನಿಶಾಮಕ ವಾಹನಗಳಿಗೆ ನೀರು ತುಂಬಿಸಲು ಅನುಕೂಲವಾಗುವಂತೆ ಪಾಯಿಂಟ್‌ಗಳನ್ನು ನಿರ್ಮಿಸಲಾಗಿತ್ತು. ಇದಕ್ಕೆ `ಹೈಡ್ರೆಂಟ್~ ಎಂದು ಕರೆಯುತ್ತಾರೆ.ಬೆಂಗಳೂರಿನಲ್ಲೇ ಏಳು ನೂರಕ್ಕೂ ಅಧಿಕ `ಹೈಡ್ರೆಂಟ್~ಗಳಿದ್ದವು. ಆದರೆ ಅದನ್ನು ಸರಿಯಾಗಿ ನಿರ್ವಹಿಸದ ಕಾರಣ ಅವು ಕೆಟ್ಟು ಹೋಗಿವೆ. ಆದ್ದರಿಂದ ನೀರು ತುಂಬಿಸಿಕೊಳ್ಳಲು ಠಾಣೆಗೆ ಬರಬೇಕಾದ ಅನಿವಾರ್ಯತೆ ಇದೆ. `ಹೈಡ್ರೆಂಟ್~ಗಳು ಇದ್ದರೆ ಬಹಳ ಅನುಕೂಲವಾಗುತ್ತದೆ. ಆದರೆ ಈಗ ಅವು ಇಲ್ಲ. ಇದನ್ನು ಪುನಃ ಸ್ಥಾಪಿಸಬೇಕಾಗಿದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.ದುರಂತವನ್ನು ತಡೆಯುವಲ್ಲಿ ಕಟ್ಟಡಗಳ ಮಾಲೀಕರ ಪಾತ್ರ ದೊಡ್ಡದು. ಜನರ ಪ್ರಾಣರಕ್ಷಣೆ ಬಗ್ಗೆ ಅವರಿಗೂ ಕಾಳಜಿ ಇರಬೇಕು.ಇದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಬೆಂಕಿ ಹೊತ್ತಿಕೊಂಡರೆ ಅದನ್ನು ನಂದಿಸುವ ಸಲಕರಣೆ ಮತ್ತು ವ್ಯವಸ್ಥೆಯನ್ನು ಅವರು ಮಾಡಿಕೊಳ್ಳಬೇಕು. ಈ ರೀತಿಯ ಸಹಕಾರ ಸಿಕ್ಕರೆ ಅಗ್ನಿಶಾಮಕದಳ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry