ಅರಂತೋಡು: ‘ನಮ್ಮ ರಸ್ತೆ’ಯಲ್ಲಿ ಬಿರುಕು

ಸುಳ್ಯ: ಅರಂತೋಡಿನಿಂದ ಬಿಳಿಯಾರಿಗಾಗಿ ಮರ್ಕಂಜದ ರೆಂಜಾಳಕ್ಕೆ ಸಂಪರ್ಕ ಕಲ್ಪಿಸುವ ‘ನಮ್ಮ ಗ್ರಾಮ- ನಮ್ಮ ರಸ್ತೆ ಕಳು ಬೈಲು ಎಂಬಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಲ್ಲಿ ವಾಹನ ಸಂಚಾರ ಸ್ಥಗಿತವಾಗುವ ಸಾಧ್ಯತೆ ಎದುರಾಗಿದೆ.
ಕಳುಬೈಲು ಶಾಲೆಯ ಬಳಿ ರಸ್ತೆಗೆ ಮೋರಿ ರಚಿಸಿ, ಅದರ ಮೇಲೆ ಸುಮಾರು 20 ಅಡಿ ಮಣ್ಣು ತುಂಬಿದ್ದು, ವಾರದ ಹಿಂದೆ ಬಂದ ಮಳೆಗೆ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಷ್ಟು ಪ್ರಮಾಣದಲ್ಲಿ ಮಣ್ಣು ತುಂಬಿಸಿದ್ದರು. ಬದಿಗೆ ಕಲ್ಲು ಕಟ್ಟದೇ ಹಾಗೇ ಬಿಟ್ಟಿರುವುದು ಅಲ್ಲದೆ, ಹಾಕಿದ ಮಣ್ಣು ಗಟ್ಟಿಯಾಗದೇ ಡಾಮರು ಹಾಕಿದ್ದು ಇದಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಹಲವು ಗ್ರಾಮೀಣ ಸಂಪರ್ಕ ರಸ್ತೆಗಳು ಅಭಿವೃದ್ಧಿಗೊಂಡಿವೆ. ಆದರೆ 2 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿದಾಗ ಈ ಯೋಜನೆಯಡಿ ಅಭಿವೃದ್ಧಿಗೆ ಶಿಫಾರಸು ಮಾಡಿದ ರಸ್ತೆಗಳು ಅತಂತ್ರವಾದವು. ಈ ಸಂದರ್ಭ ಆಗಿನ ಬಿಜೆಪಿ ಸರ್ಕಾರ ಮುಖ್ಯಮಂತ್ರಿ ಸಡಕ್ ಯೋಜನೆ ಹೆಸರಿನಲ್ಲಿ ‘ನಮ್ಮ ಗ್ರಾಮ ನಮ್ಮ ರಸ್ತೆ’ ಎಂಬ ಹೊಸ ಯೋಜನೆಯನ್ನು ಆರಂಭಿಸಿತು.
ಅರಂತೋಡು ಗ್ರಾಮದ ಬಿಳಿಯೂರಿನಿಂದ ದೇರಾಜೆ ಮೂಲಕ ಕಳುಬೈಲು-ಅಡ್ಕಬಳೆಗಾಗಿ ಮರ್ಕಂಜ ಗ್ರಾಮದ ರೆಂಜಾಳಕ್ಕೆ ಸಂಪರ್ಕಿಸುವ ಹತ್ತೂವರೆ ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಿ ಡಾಮರೀಕರಣ ಮಾಡಲು ₨ 3.65 ಕೋಟಿ ವೆಚ್ಚದಲ್ಲಿ ಯೋಜನಾ ವರದಿ ತಯಾರಿಸಿ ಟೆಂಡರ್ ಆಗಿ 2012ರಲ್ಲಿ ಕಾಮಗಾರಿ ಆರಂಭವಾಗಿತ್ತು. ಅದರಂತೆ ಬಿಳಿಯಾರಿನಿಂದ ದೇರಾಜೆವರೆಗೆ ಹಾಗೂ ಕಳುಬೈಲಿನಿಂದ ಅಡ್ಕಬಳೆ ಮೂಲಕ ರೆಂಜಾಳದವರೆಗೆ ಡಾಮರೀಕರಣ ಪೂರ್ಣಗೊಂಡಿದೆ.
ಬಿಳಿಯಾರು, ದೇರಾಜೆ, ಕಳುಬೈಲು, ಅಡ್ಕಬಳೆ, ರೆಂಜಳ ರಸ್ತೆಯನ್ನು ಮುಖ್ಯಮಂತ್ರಿಗಳ ಸಡಕ್ ಯೋಜನೆಯಡಿ 2012ರಲ್ಲಿ ₨ 5.5 ಕೋಟಿ ಅಂದಾಜು ಪಟ್ಟಿ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಈ ಯೋಜನೆಯಡಿ ₨ 3.5 ಕೋಟಿಗಿಂತ ಹೆಚ್ಚು ಮೊತ್ತವನ್ನು ನೀಡಲು ಅವಕಾಶವಿಲ್ಲ ಎಂದು ಅದನ್ನು ಕಡಿಮೆ ಅನುದಾನ ಮಂಜೂರಾಗಿತ್ತು.
ಅಲ್ಲದೆ, ಬಂದ ಅನುದಾನ ಪೂರ್ತಿ ಖರ್ಚು ಮಾಡಲಾಗಿದೆ. 2.5 ಕಿ.ಮೀ. ಕಾಮಗಾರಿ ಬಾಕಿಯಾಗಿದೆ. ಇದು ಅರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಮತ್ತು ಅಗಲ ಮಾಡಲು ಆಗದೇ ಇರುವುದರಿಂದ ಏರು ತಗ್ಗು ರಸ್ತೆಯಾಗಿರುವುದರಿಂದ ಅದನ್ನು ಕೈಬಿಡಲಾಗಿದೆ.
ಈ ವಿಷಯವನ್ನು ಶಾಸಕರ ಗಮನಕ್ಕೆ ತರಲಾಗಿದೆ ಮತ್ತು ಸರ್ಕಾರಕ್ಕೆ ತಿಳಿಸಲಾಗಿದೆ. ಉಳಿದಂತೆ ಬಿಳಿಯಾರಿನ ಬಳಿ ಹೆದ್ದಾರಿ ಕಾಮಗಾರಿ ಮುಗಿದ ಬಳಿಕ ಅದಕ್ಕೆ ಹೊಂದಿಕೊಂಡು 800 ಮೀಟರ್ ಡಾಮರೀಕರಣ ಮಾಡಲಾಗುತ್ತದೆ.ಪೈಪ್ಲೈನ್ ಕಾಮಗಾರಿಯನ್ನೂ ಅದೇ ಸಮಯ ಪೂರ್ಣಗೊಳಿಸುವುದಾಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ್ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.