ಮಂಗಳವಾರ, ಮೇ 18, 2021
28 °C

ಅರಕ್ಕೋಣಂ ಜಂಕ್ಷನ್- ರೈಲು ಅಪಘಾತ : ಮೃತರ ಸಂಖ್ಯೆ 10

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿತೇರಿ, ತಮಿಳುನಾಡು (ಪಿಟಿಐ): ಮಂಗಳವಾರ ರಾತ್ರಿ ಅರಕ್ಕೋಣಂ ಜಂಕ್ಷನ್ ಬಳಿ ಸಂಭವಿಸಿದ ರೈಲು ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.ಅಪಘಾತದಲ್ಲಿ ಒಟ್ಟು 10 ಜನ ಮ್ಥತಪಟ್ಟಿದ್ದು, ಕನಿಷ್ಠ ನೂರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.ಚೆನ್ನೈ ಬೀಚ್ ಮತ್ತು ವೆಲ್ಲೂರು ನಡುವಿನ ವಿದ್ಯುತ್ ಚಾಲಿತ ರೈಲಿನ ಚಾಲಕ ಹಲವು ಸಿಗ್ನಲ್‌ಗಳನ್ನು ಲೆಕ್ಕಿಸದೆ ಮುನ್ನುಗ್ಗ್ದ್ದಿದು, ಜತೆಗೆ ವೇಗದ ಮಿತಿಯನ್ನು ನಿರ್ಲಕ್ಷಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿಯೂ ತಿಳಿಸಿದ್ದಾರೆ.ರಾತ್ರಿ 9.40ರ ಸುಮಾರಿಗೆ ಅರಕ್ಕೋಣಂ-ಕಾಟ್ಪಾಡಿ ರೈಲು ಸಿಗ್ನಲ್‌ಗಾಗಿ ಕಾಯುತ್ತಿದ್ದ ವೇಳೆ ವಿದ್ಯುತ್ ಚಾಲಿತ ಚೆನ್ನೈ ಬೀಚ್- ವೆಲ್ಲೂರು ರೈಲು ಡಿಕ್ಕಿ ಹೊಡೆದಿದ್ದು, ಅಪಘಾತ ಸಂಭವಿಸಿದ ತಕ್ಷಣ 20ಕ್ಕೂ ಹೆಚ್ಚು ಜನರು ಸತ್ತಿರಬಹುದು ಎಂದು ಅಂದಾಜು ಮಾಡಲಾಗಿತ್ತು. ರೈಲು ಡಿಕ್ಕಿ ಹೊಡೆಯುತ್ತಿದೆ ಎನ್ನುವುದನ್ನು ಅರಿತ ಚಾಲಕ ರೈಲಿನಿಂದ ಕೆಳಗೆ ಜಿಗಿದು ತಪ್ಪಿಸಿಕೊಂಡಿದ್ದ.ಚೆನ್ನೈನಿಂದ ಸುಮಾರು 90 ಕಿ.ಮೀ ದೂರದ ಸಿತೇರಿಯಲ್ಲಿ ಈ ಘಟನೆ ನಡೆದಿದ್ದು, ಐದು ಬೋಗಿಗಳು ಹಳಿ ತಪ್ಪಿವೆ. ಈ ಪೈಕಿ ಕಾಟ್ಪಾಡಿ ರೈಲಿನ ಮೂರು ಬೋಗಿಗಳು ಸೇರಿವೆ. ಗ್ಯಾಸ್ ಕಟ್ಟರ್‌ಗಳನ್ನು ಬಳಸಿದ ರಕ್ಷಣಾ ಕಾರ್ಯಕರ್ತರು ಬೋಗಿಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಿದರು. ಜತೆಗೆ ಎರಡು ಕ್ರೇನ್‌ಗಳನ್ನು ಬಳಸಿ ಹಳಿ ತಪ್ಪಿದ ಬೋಗಿಗಳನ್ನು ಬೇರೆಡೆಗೆ ಸಾಗಿಸಿ ಮಾರ್ಗವನ್ನು ಮುಕ್ತಗೊಳಿಸಿದರು.ಮಾನವ ದೋಷವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ರೈಲ್ವೆ ಮಂಡಳಿ ಅಧ್ಯಕ್ಷ ವಿನಯ್ ಮಿಟ್ಟಲ್ ತಿಳಿಸಿದ್ದಾರೆ. ಚಾಲಕ ಸುಮಾರು 90 ಕಿ.ಮೀ. ವೇಗದಲ್ಲಿ ಚಾಲನೆ ಮಾಡುತ್ತಿದ್ದು, ಹಲವು ಸಿಗ್ನಲ್‌ಗಳನ್ನು ನಿರ್ಲಕ್ಷಿಸಿ ಮುನ್ನುಗ್ಗಿದ್ದ ಎಂದು ದಕ್ಷಿಣ ರೈಲ್ವೆ ಪ್ರಧಾನ ವ್ಯವಸ್ಥಾಪಕ ದೀಪಕ್ ಕಿಶನ್ ತಿಳಿಸಿದ್ದಾರೆ.ರೈಲಿನಿಂದ ಕೆಳಕ್ಕೆ ಜಿಗಿದಿರುವ ಚಾಲಕ ಎ.ರಾಜ್‌ಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾನೆ. ಆತ ಈ ಸಂದರ್ಭದಲ್ಲಿ ಮದ್ಯಪಾನ ಮಾಡಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ತನಿಖೆಗೆ ಆದೇಶ: ಅಪಘಾತದ ಬಗ್ಗೆ ತನಿಖೆಗೆ ಆದೇಶ ಮಾಡಿದ್ದು, ದಕ್ಷಿಣ ರೈಲ್ವೆ ಸುರಕ್ಷಾ ಆಯುಕ್ತ ಎಸ್.ಕೆ.ಮಿಟ್ಟಲ್ ಅವರು ತನಿಖೆ ನಡೆಸುವರು ಎಂದು ರೈಲ್ವೆ ಸಚಿವಾಲಯದ ವಕ್ತಾರ ಅನಿಲ್ ಕುಮಾರ್ ಸಕ್ಸೇನಾ ನವದೆಹಲಿಯಲ್ಲಿ ತಿಳಿಸಿದ್ದಾರೆ.ಸಚಿವರ ಭೇಟಿ: ಗಾಯಾಳುಗಳನ್ನು ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ರೈಲ್ವೆ ಸಚಿವ ದಿನೇಶ್ ತ್ರಿವೇದಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.ಸಂತಾಪ: ತಮಿಳುನಾಡು ವಿಧಾನ ಸಭೆಯಲ್ಲಿ ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿ, ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳುವ ನಿರ್ಣಯ ಕೈಗೊಳ್ಳಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.