ಅರಣ್ಯಕ್ಕೆ ಬೆಂಕಿ: ಗ್ರಾಮಸ್ಥರ ಆಕ್ರೋಶ

ಮದ್ದೂರು: ತಾಲ್ಲೂಕಿನ ಗಡಿಭಾಗ ಮಾರದೇವನಹಳ್ಳಿ ಗ್ರಾಮಕ್ಕೆ ಸೇರಿದ ಅರಣ್ಯ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಸಾವಿರಾರು ಮರ- ಗಿಡಗಳು ಭಸ್ಮವಾಗಿರುವ ಘಟನೆ ನಡೆದಿದೆ.
ಗ್ರಾಮಸ್ಥರ ಮಾಹಿತಿಯಂತೆ ಕಳೆದ ಗುರುವಾರ ಕಾಣಿಸಿಕೊಂಡ ಬೆಂಕಿ 400ಕ್ಕೂ ಹೆಚ್ಚು ಎಕರೆಯ ವಿಸ್ತೀರ್ಣಕ್ಕೆ ಹಬ್ಬಿದ್ದು, ಬೆಂಕಿ ಕೆನ್ನಾಲಿಗೆಗೆ ಅರಣ್ಯ ಪ್ರದೇಶದಲ್ಲಿದ್ದ ಅಮೂಲ್ಯ ಹೊನ್ನೆ, ಸಿಲ್ವರ್, ನೀಲಗಿರಿ, ಬುಗರಿಮರ ಸೇರಿದಂತೆ ವಿವಿಧ ಬಗೆಯ ಮರ-ಗಳು ಆಹುತಿಯಾಗಿವೆ. ಇದಲ್ಲದೇ ಅರಣ್ಯ ಪ್ರದೇಶದಲ್ಲಿದ್ದ ವನ್ಯಜೀವಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿವೆ. ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ಆವರಿಸಿರುವುದರಿಂದ ನಷ್ಟದ ಪ್ರಮಾಣ ಏನು ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ.
ಇದಲ್ಲದೇ ನಿಡಘಟ್ಟ ಸಮೀಪದ ಮಾರದೇವನಹಳ್ಳಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಬೆಂಕಿ ತಗುಲಿದ್ದು, ಗ್ರಾಮಸ್ಥರನ್ನು ಇನ್ನಷ್ಟು ಭೀತಿಗೀಡುಮಾಡಿದೆ. ಕಾಳ್ಗಿಚ್ಚಿನ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿ ಶಾಮಕದ ಸಿಬ್ಬಂದಿ ಅರಣ್ಯ ಬೆಂಕಿಯನ್ನು ಹತೋಟಿಗೆ ತಂದು ನಂದಿಸುವಲ್ಲಿ ವಿಫಲವಾಯಿತು.
ಮಾರದೇವನಹಳ್ಳಿ ಅರಣ್ಯ ಪ್ರದೇಶ ಬೆಟ್ಟಗುಡ್ಡ ಹಾಗೂ ಹಳ್ಳಕೊಳ್ಳಗಳಿಂದ ಆವೃತವಾದ ಕಾರಣ ಅಗ್ನಿಶಾಮಕ ವಾಹನಗಳು ಅರಣ್ಯ ಪ್ರವೇಶಿಸಲು ಸಾಧ್ಯವಾಗಿಲ್ಲ.
ಆಕ್ರೋಶ: ಅರಣ್ಯಕ್ಕೆ ಬೆಂಕಿ ತಗುಲಿರುವ ವಿಷಯ ತಿಳಿದರೂ ಸ್ಥಳಕ್ಕೆ ಬರದ ಮದ್ದೂರು ಹಾಗೂ ಚನ್ನಪಟ್ಟಣ ಅರಣ್ಯ ಇಲಾಖೆಗಳ ಸಿಬ್ಬಂದಿ ವಿರುದ್ಧ ಮಾರದೇವನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ತಡವಾಗಿ ಬಂದ ಅರಣ್ಯ ರಕ್ಷಕ ರೆಹಮಾನ್ ಷರೀಫ್ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಬೆಂಕಿ ನಂದಿಸುವ ಸಂಬಂಧ ಇಲಾಖೆಯ ಅಧಿಕಾರಿಗಳು ಯಾವುದೇ ಶೀಘ್ರ ಕ್ರಮ ಕೈಗೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಅರಣ್ಯಕ್ಕೆ ತಗುಲಿರುವ ಬೆಂಕಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಹತೋಟಿಗೆ ತರದಿದ್ದರೆ ಗ್ರಾಮದ ಮನೆಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗುವ ಭೀತಿ ವ್ಯಕ್ತಪಡಿಸಿರುವ ಅವರು ಬೆಂಕಿ ನಂದಿಸುವ ಸಂಬಂಧ ಶೀಘ್ರ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಅರಣ್ಯ ರಕ್ಷಕ ರೆಹಮಾನ್ ಷರೀಫ್, ಈ ಪ್ರದೇಶವು ಸಾಮಾಜಿಕ ಅರಣ್ಯ ಪ್ರದೇಶವಾಗಿದ್ದು ಸಿಬ್ಬಂದಿಯ ಕೊರತೆ ಇರುವುದರಿಂದ ಗ್ರಾಮಸ್ಥರು ಬೆಂಕಿ ನಂದಿಸುವ ಕಾರ್ಯಕ್ಕೆ ಸಹಕರಿಸಬೇಕೆಂದು ವಿನಂತಿಸಿದರು. ಎರಡು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ನೆರವಿನೊಂದಿಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಶನಿವಾರ ಮಧ್ಯಾಹ್ನದ ವೇಳೆಗೆ ಸಂಪೂರ್ಣವಾಗಿ ಬೆಂಕಿ ನಂದಿಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.