`ಅರಣ್ಯಗಳ ಮೇಲೆ ಹೆಚ್ಚಿದ ಒತ್ತಡ'

7

`ಅರಣ್ಯಗಳ ಮೇಲೆ ಹೆಚ್ಚಿದ ಒತ್ತಡ'

Published:
Updated:

ಬೆಂಗಳೂರು: ಪಶ್ಚಿಮಘಟ್ಟ ಸೇರಿದಂತೆ ದೇಶದ ಅರಣ್ಯಗಳ ಮೇಲೆ ಒತ್ತಡ ಹೆಚ್ಚಾಗಿರುವುದು, ದೇಶದ ಅರಣ್ಯಗಳ ಕುರಿತ ಅಧ್ಯಯನದ ಆರಂಭಿಕ ಹಂತದಲ್ಲಿ ಬೆಳಕಿಗೆ ಬಂದಿದೆ.ದೇಶದ ಅರಣ್ಯ ವ್ಯವಸ್ಥೆಯಲ್ಲಿನ ಬದಲಾವಣೆ ಕುರಿತು ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಪರಿಷತ್ತಿನ (ಐಸಿಎಫ್‌ಆರ್‌ಇ) ನೇತೃತ್ವದಲ್ಲಿ ದೇಶದ 2 ಸಾವಿರ ಅರಣ್ಯ ಪ್ರದೇಶಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಲಾಗಿದ್ದು, ವಿಜ್ಞಾನಿಗಳು, ತಾಂತ್ರಿಕ ಸಹಾಯಕರು ಸೇರಿದಂತೆ 3,900 ಭಾಗಿಯಾಗಿದ್ದಾರೆ. ಫೆಬ್ರುವರಿ ತಿಂಗಳಲ್ಲಿ ಇದು ಆರಂಭಗೊಂಡಿದ್ದು ಕರ್ನಾಟಕ, ಆಂಧ್ರ ಹಾಗೂ ಗೋವಾದಲ್ಲಿ ಪೂರ್ಣಗೊಂಡಿದೆ. ಉಳಿದ ಭಾಗಗಳಲ್ಲೂ ಪೂರ್ಣಗೊಂಡ ಬಳಿಕ ಸಮಗ್ರ ವರದಿಯನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ ಎಂದು ಪರಿಷತ್ತಿನ ಮಹಾನಿರ್ದೇಶಕ ಡಾ.ವಿ.ಕೆ.ಬಹುಗುಣ ಇಲ್ಲಿ ಬಹಿರಂಗಪಡಿಸಿದರು.ವಾತಾವರಣದ ಬದಲಾವಣೆಯು ದೇಶದ ಅರಣ್ಯಗಳ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ. ಅರಣ್ಯ ಪ್ರದೇಶದಲ್ಲಿ ಮಳೆ ಏರಿಳಿತ, ತಾಪಮಾನದಲ್ಲಿ ಬದಲಾವಣೆ, ಅರಣ್ಯ ಪ್ರದೇಶದಲ್ಲಿನ ಕುಬ್ಜ ಪ್ರಭೇದದ ಪ್ರಾಣಿಗಳ ಜೀವನಶೈಲಿಯಲ್ಲಿ ಬದಲಾವಣೆಯಾಗಿರುವುದು ಕಂಡುಬಂದಿದೆ.ಅಧ್ಯಯನ ತಂಡದ ಪ್ರಮುಖ ಸದಸ್ಯ ಎಂ.ಎಸ್.ಸ್ವಾಮಿನಾಥನ್ ಮಾತನಾಡಿ, `ಅರಣ್ಯ ಪ್ರದೇಶದಲ್ಲಿ ತಾಪಮಾನ ಹೆಚ್ಚಾಗಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ. ಕರ್ನಾಟಕದ ಪಶ್ಚಿಮ ಘಟ್ಟದ ವಿಚಾರಕ್ಕೆ ಬಂದಾಗ ತಾಪಮಾನದ ಏರಿಕೆಯಿಂದಾಗಿ ಕುಬ್ಜ ಪ್ರಭೇದದ ಪ್ರಾಣಿಗಳು ತಮ್ಮ ನೆಲೆಯಿಂದ ಸುರಕ್ಷಿತ ಪ್ರದೇಶ ಅರಸಿ ಬೇರೆ ಕಡೆಗೆ ಹೋಗಿವೆ. ಅರಣ್ಯಗಳಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗಿ ಒಣ ವಾತಾವರಣ ಹೆಚ್ಚಾಗುತ್ತಿದೆ. ದೇಶದಲ್ಲಿ ಜೂನ್ ಹಾಗೂ ಜುಲೈಯಲ್ಲಿ ಮಳೆ ಪ್ರಮಾಣದಲ್ಲಿ ಕುಸಿತ, ಆಗಸ್ಟ್ ಹಾಗೂ ಸೆಪ್ಟೆಂಬರ್ ಅಂತ್ಯದಲ್ಲಿ ಮಳೆ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಕಂಡು ಬಂದಿದೆ' ಎಂದರು.ಎಚ್.ಜಿ.ಚಾಂಪಿಯನ್ ನೇತೃತ್ವದಲ್ಲಿ 1936ರಲ್ಲಿ ದೇಶದ ಅರಣ್ಯಗಳ ಬಗೆಯನ್ನು ವರ್ಗೀಕರಣ ಮಾಡಲಾಗಿತ್ತು. ಬಳಿಕ 1968ರಲ್ಲಿ ಇದರ ಪರಿಷ್ಕರಣೆ ಮಾಡಲಾಗಿತ್ತು. ಆ ಬಳಿಕ ಅರಣ್ಯಗಳ ಬಗೆಗಳ ಕುರಿತು ಅಧ್ಯಯನ ನಡೆದಿರಲಿಲ್ಲ. ಭಾರತೀಯ ಅರಣ್ಯಗಳನ್ನು ಐದು ಪ್ರಮುಖ ಗುಂಪು, 16 ಮಾದರಿ ಗುಂಪು ಹಾಗೂ 200 ಸಹ ಗುಂಪುಗಳಾಗಿ ವಿಂಗಡಿಸಲಾಗಿತ್ತು.ನೈಸರ್ಗಿಕ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ 50 ವರ್ಷಗಳ ಅವಧಿಯಲ್ಲಿ ಅರಣ್ಯಗಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈ ಸಹಗುಂಪಿನ ಕಾಡುಗಳು ಅರಣ್ಯ ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಕಠಿಣವನ್ನಾಗಿ ಮಾಡಿದ್ದವು ಹಾಗೂ ಅಪ್ರಾಯೋಗಿಕ ಎನಿಸಿದ್ದವು. ಈ ಹಿಂದಿನ ವರ್ಗೀಕರಣ ಈಗಿನ ಕಾಲಮಾನಕ್ಕೆ ಒಗ್ಗುವಂತಹುದು ಆಗಿರಲಿಲ್ಲ. ಜೀವನಾಧಾರ, ಜಲಶಾಸ್ತ್ರ ಹಾಗೂ ವಾತಾವರಣ ಬದಲಾವಣೆಗಳನ್ನು ಅರಣ್ಯ ನಿರ್ವಹಣಾ ವ್ಯವಸ್ಥೆಯಲ್ಲಿ ಸೇರಿಸುವ ಅಗತ್ಯ ಇತ್ತು. ಈ ಹಿನ್ನೆಲೆಯಲ್ಲಿ ಅಧ್ಯಯನ ಕೈಗೆತ್ತಿಕೊಳ್ಳಲಾಗಿತ್ತು.ಅರಣ್ಯದ ಅಂಚಿನ ಗ್ರಾಮಗಳ ಅಧ್ಯಯನ: ಕೇಂದ್ರ ಸರ್ಕಾರ, ಯೋಜನಾ ಆಯೋಗ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ `ಅರಣ್ಯದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಅರಣ್ಯ ಪ್ರದೇಶಗಳ ವಿಸ್ತಾರ ಗುರುತಿಸುವಿಕೆ' ಕುರಿತ ಅಧ್ಯಯನವನ್ನು ಐಸಿಎಫ್‌ಆರ್‌ಇ ನಡೆಸುತ್ತಿದೆ.

ಈ ಮೂಲಕ ದೇಶದ 275 ಜಿಲ್ಲೆಗಳ ಅರಣ್ಯದಂಚಿನ ಗ್ರಾಮಗಳ ಸ್ಥಿತಿಗತಿ ಬಗ್ಗೆ ಬೆಳಕು ಚೆಲ್ಲಲಾಗುವುದು. ರಾಜ್ಯದ 16 ಜಿಲ್ಲೆಗಳು, ಗೋವಾದ ಎರಡು ಜಿಲ್ಲೆಗಳು ಹಾಗೂ ಆಂಧ್ರದ 19 ಜಿಲ್ಲೆಗಳಲ್ಲಿ ಅಧ್ಯಯನ ನಡೆಯುತ್ತಿದೆ. ಈ ಅಧ್ಯಯನ 2014ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry