ಮಂಗಳವಾರ, ಅಕ್ಟೋಬರ್ 22, 2019
26 °C

ಅರಣ್ಯದಲ್ಲಿ ಕಾನೂನು ಉಲ್ಲಂಘನೆ

Published:
Updated:

ಹಾಸನ: `ಪಶ್ಚಿಮ ಘಟ್ಟದ ಸಕಲೇಶಪುರ ವ್ಯಾಪ್ತಿಯ ಯಡಕುಮರಿ ಹಾಗೂ ಹೊಂಗಡಹಳ್ಳದಲ್ಲಿ ಮಾರುತಿ ಪವರ್ ಝೆನ್ ಸಂಸ್ಥೆಯವರು ಕೈಗೆತ್ತಿಕೊಂಡಿರುವ ಎರಡು ಕಿರು ಜಲ ವಿದ್ಯುತ್ ಘಟಕಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾನೂನು ಹಾಗೂ ಅರಣ್ಯ ಕಾಯ್ದೆಗಳ ಉಲ್ಲಂಘನೆಯಾಗಿದೆ ಮತ್ತು ಇದರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳೂ ಹಲವು ಲೋಪಗಳನ್ನು ಮಾಡಿದ್ದಾರೆ~ ಎಂದು ಪರಿಸರ ವಾದಿಗಳು ಆರೋಪಿಸಿದ್ದಾರೆ.ಈ ಘಟಕಗಳಿಗೆ ಸಂಬಂಧಿಸಿದಂತೆ ಹಿಂದಿನಿಂದಲೂ ವಿವಾದಗಳು ನಡೆಯುತ್ತಲೇ ಇವೆ. ಸಂಸ್ಥೆಯವರು ಸರ್ಕಾರದ ಜತೆ ಮಾಡಿರುವ ಒಪ್ಪಂದವನ್ನು ಗಾಳಿಗೆತೂರಿ ತಮಗೆ ಬೇಕಾದಂತೆ ರಸ್ತೆ, ನಿರ್ಮಿಸಿದೆ. ಕಾಮಗಾರಿ ಸ್ಥಳದ ತ್ಯಾಜ್ಯಗಳನ್ನು ನದಿಗೆ ಸುರಿದಿದೆ. ಸಂರಕ್ಷಿತ ದಟ್ಟ ಅರಣ್ಯದಲ್ಲಿ ಸುರಂಗ ನಿರ್ಮಾಣಕ್ಕೆ ಸ್ಫೋಟಗಳನ್ನು ಮಾಡಿದೆ. ಸ್ಫೋಟ ಮಾಡುವುದು ಒಂದು ತಪ್ಪಾದರೆ ಯೋಜನೆಯ್ಲ್ಲಲಿ ಎಲ್ಲೂ ಸುರಂಗ ನಿರ್ಮಾಣದ ಪ್ರಸ್ತಾಪವೇ ಇಲ್ಲ ಎಂಬುದು ಪರಿಸರವಾದಿಗಳ ವಾದ.ಅರಣ್ಯ ಸಂರಕ್ಷಣಾ ಕಾಯ್ದೆ ಹಾಗೂ ಕರ್ನಾಟಕ ಅರಣ್ಯ ಕಾಯ್ದೆಗಳನ್ನು ಉಲ್ಲಂಘಿ ಸಿದ್ದಕ್ಕಾಗಿ ಸಂಸ್ಥೆಯ ಕೆ. ಶ್ಯಾಮರಾಜ್ ಎಂಬುವವರ ವಿರುದ್ಧ 2011ರ ಅಕ್ಟೋಬರ್  21ರಂದು ಎಫ್‌ಐಆರ್ ದಾಖಲಾಗಿದೆ. ರಾತ್ರಿ ವೇಳೆಯಲ್ಲಿ ಪ್ರಬಲವಾದ ಲೈಟ್ ಬಳಸಿ ಕಾಮಗಾರಿ ಮಾಡಿ ಕಾಡು ಪ್ರಾಣಿಗಳಿಗೆ ತೊಂದರೆ ಉಂಟುಮಾಡಿದ್ದಕ್ಕಾಗಿ ಕಳೆದ ಫೆಬ್ರುವರಿ 18ರಂದು ಅರಣ್ಯ ಇಲಾಖೆಯವರು ಇವರಿಗೆ ನೋಟಿಸ್ ನೀಡಿದ್ದರು.ಎಲ್ಲಕ್ಕಿಂತ ಮುಖ್ಯವಾಗಿ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ ಅವರು ಕಳೆದ ಡಿ. 18ರಂದು ಈ ಯೋಜನೆಗಳಲ್ಲಿ ಕಾಯ್ದೆಗಳ ವ್ಯಾಪಕ ಉಲ್ಲಂಘನೆಯಾಗಿದೆ ಮತ್ತು ಅರಣ್ಯಕ್ಕೆ ಇದರಿಂದ ತುಂಬಲಾರದ ನಷ್ಟ ಉಂಟಾಗುತ್ತಿರುವುದರಿಂದ ಎರಡೂ ಯೋಜನೆಗಳನ್ನು ರದ್ದು ಮಾಡಬೇಕು~ ಎಂಬ ವರದಿಯನ್ನೂ ಸರ್ಕಾರಕ್ಕೆ ನೀಡಿದ್ದರು.ಇದಿಷ್ಟು ಒಂದೆಡೆಯಾದರೆ ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳೇ ಸಂಸ್ಥೆಗೆ ಪೂರಕವಾಗುವಂಥ ವರದಿಗಳನ್ನು ನೀಡುವ ಮೂಲಕ ಅಕ್ರಮಗಳಿಗೆ ನೆರವು ನೀಡಿದ್ದಾರೆ ಎಂದೂ ಪರಿಸರಾಸಕ್ತರು ದೂರಿದ್ದಾರೆ.ಹಿಂದೆ ಈ ಭಾಗದ ಅಧಿಕಾರಿಯೊಬ್ಬರು ಸರ್ಕಾರಕ್ಕೆ ವರದಿ ನೀಡುವಾಗ `ಹೊಂಗಡಹಳ್ಳ, ಯಡಕುಮರಿಗಳು ಆನೆ ಓಡಾಡುವ ಜಾಗವಲ್ಲ, ಇಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳೇ ಇಲ್ಲ~ ಎಂಬ ವರದಿ ನೀಡಿದ್ದರು. ಪರಿಸರ ವಾದಿಗಳು ಶುಕ್ರವಾರ ಇದರ ಪ್ರತಿಯನ್ನು ಪತ್ರಕರ್ತರಿಗೆ ತೋರಿಸಿದರು. ವಿಚಿತ್ರ ಎಂದರೆ ರಾಷ್ಟ್ರೀಯ ಹೆದ್ದಾರಿ 48ರ ಹಲವು ಕಡೆ `ಈ ಪ್ರದೇಶದಲ್ಲಿ  ಕಾಡು ಪ್ರಾಣಿಗಳಿವೆ~ ಎಂಬ ಫಲಕಗಳನ್ನು ಹಾಕಲಾಗಿದೆ. ಫಲಕಗಳಲ್ಲಿ ಆನೆ, ಹುಲಿಗಳ ಚಿತ್ರಗಳೂ ಇವೆ. ಶುಕ್ರವಾರ ಕೇಂದ್ರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಲ್ಲಿ ಆನೆ ಲದ್ದಿ ಮಾತ್ರವಲ್ಲದೆ ಹುಲಿಯ ಹಿಕ್ಕೆಗಳನ್ನೂ ನೋಡಿ ದೃಢಪಡಿಸಿದ್ದಾರೆ.ಎರಡರ ಹೆಸರಲ್ಲಿ ಒಂದೇ ಯೋಜನೆ: ಸಂಸ್ಥೆಯವರು ಯಡಕುಮರಿ ಹಾಗೂ ಹೊಂಗಡಹಳ್ಳ ಎಂಬ ಎರಡು ಕಿರು ಜಲವಿದ್ಯುತ್ ಯೋಜನೆಗೆ ಅನುಮತಿ ಪಡೆದಿದ್ದರೂ ವಾಸ್ತವವಾಗಿ ನಡೆಸುತ್ತಿರುವುದು ಒಂದೇ ಯೋಜನೆ ಎಂಬುದು ಮಲೆನಾಡು ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್ ಅವರ ವಾದ. ವನ್ಯ ಜೀವಿ ಸಂರಕ್ಷಣಾ ಮಂಡಳಿಯ ಸಂಜಯ ಗುಬ್ಬಿ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ರಕ್ಷಿತ ಅರಣ್ಯದಲ್ಲಿ 5 ಹೆಕ್ಟೇರ್‌ಗಿಂತ ಹೆಚ್ಚು ಜಾಗ ಕೊಡಬೇಕಾದರೆ ಕೇಂದ್ರದ ಅನುಮತಿ ಬೇಕಾಗುತ್ತದೆ. ಅದನ್ನು ತಪ್ಪಿಸಲು ಯೋಜನೆಯನ್ನು ವಿಭಜಿಸಿ 4.20  ಹೆಕ್ಟೇರ್‌ನಲ್ಲಿ ಯಡಕುಮರಿ ಹಾಗೂ 4.18 ಹೆಕ್ಟೇರ್‌ನಲ್ಲಿ ಹೊಂಗಡಹಳ್ಳ ಯೋಜನೆ ಮಾಡಿದ್ದಾರೆ. ಈ ಯೋಜನೆಗಳಿಂದ ಕ್ರಮವಾಗಿ 18.9 ಹಾಗೂ 19 ಮೆ.ವ್ಯಾ. ವಿದ್ಯುತ್  ಉತ್ಪಾದನೆಯಾಗಲಿದೆ ಎಂದಿದ್ದಾರೆ. 25 ಮೆ.ವ್ಯಾ. ಕ್ಕಿಂತ ಹೆಚ್ಚಿನ ವಿದ್ಯುತ್‌ಯೋಜನೆ ಕಿರು ಜಲವಿದ್ಯುತ್ ಯೋಜನೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇಂಥ ಯೋಜನೆ ಕೈಗೆತ್ತಿಕೊಳ್ಳಬೇಕಾದರೆ ಸಾರ್ವಜನಿಕರ ಆಕ್ಷೇಪಣೆ ಆಹ್ವಾನ ಮತ್ತಿತರ ಹತ್ತು ಹಲವು ನಿಯಮಗಳನ್ನು ಅನುಸರಿಸಬೇಕು. ಇದರಿಂದ ಜಾರಿಕೊಳ್ಳಲು ಒಟ್ಟಾರೆ ಉತ್ಪಾದನೆಯನ್ನು ಎರಡು ಘಟಕಗಳಲ್ಲಿ ವಿಭಜಿಸಿ ತೋರಿಸಲಾಗಿದೆ ಎಂದು ಅವರು ವಾದಿಸಿದ್ದಾರೆ.ಇದಕ್ಕೆ ಪೂರಕವಾಗುವಂತೆ ಸಂಸ್ಥೆಯವರು ಇಲಾಖೆಗೆ ಸಲ್ಲಿಸಿದ ಬೇರೆ ಬೇರೆ ಮ್ಯಾಪ್‌ಗಳನ್ನೂ ಮುಂದಿಟ್ಟರು.

`ವಿದ್ಯುತ್ ತಯಾರಿಕೆಗೆ ಆಕ್ಷೇಪವಿಲ್ಲ. ಆದರೆ ಅದಕ್ಕೆ ತೆರುವ ಬೆಲೆ ಎಷ್ಟು ಎಂಬುದನ್ನೂ ಮನಗಾಣಬೇಕು.ಹತ್ತಿಪ್ಪತ್ತು ಮೆ.ವ್ಯಾ. ವಿದ್ಯುತ್  ಉತ್ಪಾದಿಸಲು ಪರಿಸರಕ್ಕೆ ಇಷ್ಟೊಂದು ಹಾನಿ ಉಂಟುಮಾಡಬೇಕೇ ? ಇಂಥ ಯೋಜನೆಗಳು ಖಂಡಿತವಾಗಿ ನಮಗೆ ಬೇಕಾಗಿಲ್ಲ. ಜನರೇ ಮುಂದೆ ಬಂದು ಇದಕ್ಕೆ ವಿರೋಧ ವ್ಯಕ್ತಪಡಿಸದಿದ್ದರೆ ಎಲ್ಲರಿಗೂ ಹಾನಿಯಾಗುವುದು ಖಚಿತ~ ಎಂದು ಸಂಜಯ್ ಗುಬ್ಬಿ ವಾದಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)