ಬುಧವಾರ, ಅಕ್ಟೋಬರ್ 16, 2019
28 °C

ಅರಣ್ಯರೋದನವಾದ ಮಾಜಿ ಸೈನಿಕನ ಹೋರಾಟ...!

Published:
Updated:

ಶಹಾಪುರ: ತಾಲ್ಲೂಕಿನ ಗೋಗಿ ಗ್ರಾಮದ ಭೂದಳದ ಮಾಜಿ ಸೈನಿಕ ಮಲ್ಲಣ್ಣ ಶಿರಡ್ಡಿಯವರು ಕಳೆದ 8ವರ್ಷಗಳಿಂದ ಮಾಜಿ ಸೈನಿಕರ ಕೋಟಾದ ಅಡಿಯಲ್ಲಿ ಜಮೀನು ನೀಡುವಂತೆ ನಡೆಸುತ್ತಿರುವ ಹೋರಾಟಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ತಣ್ಣಿರು ಎರಚಿದ್ದಾರೆ. 17 ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿರುವ ಮಲ್ಲಣ್ಣ ಶಿರಡ್ಡಿಯವರು ಛಲ ಬಿಡದೆ ತ್ರಿವಿಕ್ರಮನಂತೆ ನ್ಯಾಯಬದ್ದವಾಗಿ ಜಮೀನು ನೀಡುವಂತೆ ಎರಡು ಬಾರಿ ಹೈಕೋರ್ಟ್‌ನ ಮೊರೆ ಹೋದಾಗ ಮೂರು ತಿಂಗಳ ಒಳಗೆ ಜಮೀನು ಮಂಜೂರು ಮಾಡಲು ಆದೇಶ ನೀಡಿತ್ತು. ಜಿಲ್ಲಾಧಿಕಾರಿಯವರು ಕಳೆದ ವರ್ಷ ಸರ್ಕಾರದ ಗೋಮಾಳದಲ್ಲಿ 2ಎಕರೆ 19ಗುಂಟೆ ಜಮೀನು ಮಂಜೂರಾತಿ ನೀಡಿದ್ದರು.ತುಸು ನೆಮ್ಮದಿಯಿಂದ ಮಂಜೂರಾದ ಭೂಮಿ ಸರ್ವೇ ಮಾಡಲು ಹೋದಾಗ  ಅದು ಗುಡ್ಡ ಪ್ರದೇಶವಿದೆ ಏನು ಬೆಳೆ ಬೆಳೆಯಲು ಸಾಧ್ಯವಿಲ್ಲ. ಮಾಜಿ ಸೈನಿಕರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭಿಕ್ಷೆ ನೀಡುತ್ತಿದ್ದಿರಾ ಎಂದು ಖಾರವಾಗಿ ಪ್ರಶ್ನಿಸಿ ಅದನ್ನು ಮಲ್ಲಣ್ಣ ಶಿರಡ್ಡಿ ನಿರಾಕರಿಸಿದರು.ವಿಚಿತ್ರವೆಂದರೆ ತಾಲ್ಲೂಕು ದಂಡಾಧಿಕಾರಿಯವರು ಉಳುಮೆ ಮಾಡಲು ಯೋಗ್ಯವಾದ ಜಮೀನು ಎಂದು ಜಿಲ್ಲಾಧಿಕಾರಿಗೆ ವರದಿ ನೀಡಿದ್ದು ಅವರ ಹೊಣೆಗೇಡಿತನ ಪ್ರದರ್ಶಿದಂತೆ ಆಗಿದೆ ಎಂದು ಮಲ್ಲಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಳೆದ ಡಿಸೆಂಬರ 12ರಂದು ತಮ್ಮ ಹೋರಾಟವನ್ನು ಮುಂದುರೆಸಿ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ಕೈಗೊಂಡರು. ಆಗ ಹೆಚ್ಚುವರಿ ಜಿಲ್ಲಾಧಿಕಾರಿ ಮನವೊಲಿಸಿ ಸ್ವಲ್ಪ ಕಾಲಾವಕಾಶ ಬೇಡಿದ್ದರು. ಹಿರಿಯ ಅಧಿಕಾರಿಗಳ ಮಾತಿಗೆ ಮನ್ನಣೆ ಕೊಟ್ಟು ಧರಣಿ ಸತ್ಯಾಗ್ರಹವನ್ನು ಮಲ್ಲಣ್ಣ ಶಿರಡ್ಡಿ ಹಿಂಪಡೆದುಕೊಂಡರು. ಈಗ ಮತ್ತೆ ಹೋರಾಟ ಮಾಡುವ ದುಸ್ಥಿತಿ ಬಂದಿದೆ.ಗ್ರಾಮದ ಗೋಗಿ(ಕೆ) ವ್ಯಾಪ್ತಿಯಲ್ಲಿ  ಸರ್ಕಾರಿ ಗೋಮಾಳದ ಸರ್ವೇ ನಂಬರ್ 558ರಲ್ಲಿ  16 ಜಮೀನಿನಲ್ಲಿ ತಲಾ ನಾಲ್ಕು ಎಕರೆಯಂತೆ ಒಂದೇ ಕುಟುಂಬದ ಸದಸ್ಯರಿಗೆ ಮಂಜೂರು ಮಾಡಲಾಗಿದೆ. ಅಲ್ಲದೆ ಗೋಮಾಳ 553ರಲ್ಲಿ  9ಎಕರೆ 24ಗಂಟೆ ಜಮೀನಿನಲ್ಲಿ ಇದೇ ಕುಟುಂಬದ ಸದಸ್ಯರು ಅನಧಿಕೃತವಾಗಿ ಸಾಗುವಳಿ ಮಾಡುತ್ತಾ ಬರುತ್ತಿದ್ದಾರೆ. ಒತ್ತುವರಿದಾರರನ್ನು ತೆರವುಗೊಳಿಸಿ ಕ್ರಮ ತೆಗೆದುಕೊಳ್ಳಲು ಹೆಚ್ಚುವರಿ ಜಿಲ್ಲಾಧಿಕಾರಿಯವರು ತಾಲ್ಲೂಕು ದಂಡಾಧಿಕಾರಿಗೆ ಆದೇಶ ನೀಡಿದ್ದರು ಕೂಡಾ ಯಾವುದೇ ಕ್ರಮ ತೆಗೆದುಕೊಳ್ಳದೆ ಸಾಗುವಳಿದಾರರ ಪರ ತಾಲ್ಲೂಕು ದಂಡಾಧಿಕಾರಿಯವರು ವಕಾಲತ್ತು ವಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ತಾಲ್ಲೂಕು ಕಂದಾಯ ಇಲಾಖೆಯ ಸಿಬ್ಬಂದಿ ಜಿಲ್ಲಾಧಿಕಾರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಹಿಡಿ ಜಾಗಕ್ಕೆ ಎಷ್ಟು ವರ್ಷಗಳ ಕಾಲ ಹೋರಾಟ ನಡೆಸಬೇಕು. ಅನ್ಯಾಯವಾಗಿ ಸರ್ಕಾರಿ ಜಮೀನು ಕಬಳಿಸದ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಹಾಗೂ ಮಾಜಿ ಸೈನಿಕನಿಗೆ ಜಮೀನು ಮಂಜೂರು ಮಾಡದೆ ಕಿರುಕುಳ ನೀಡುತ್ತಿರುವ ತಾಲ್ಲೂಕು ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತದ ವೈಫಲ್ಯವನ್ನು ಖಂಡಿಸಿ ಮತ್ತೆ ಮಂಗಳವಾರ (ಜ.3)ರಂದು ಜಿಲ್ಲಾಧಿಕಾರಿಯವರ ಕಾರ್ಯಾಲಯದ ಮುಂದೆ ಬೇಡಿಕೆ ಈಡೇರುವವರೆಗೂ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಇದಕ್ಕೂ ಸ್ಪಂದಿಸದಿದ್ದರೆ ಜ.10ರಂದು ರಾಜಭವನದ ಮುಂದೆ ಧರಣಿ ನಡೆಸಲಾಗುವುದೆಂದು ಮಲ್ಲಣ್ಣ ಶಿರಡ್ಡಿ ಸ್ಪಷ್ಟಪಡಿಸಿದ್ದಾರೆ.

Post Comments (+)