ಬುಧವಾರ, ನವೆಂಬರ್ 20, 2019
26 °C

ಅರಣ್ಯವಾಸಿಗಳ ಭೂಮಿ ಹಕ್ಕು ಎತ್ತಿ ಹಿಡಿದ ಸುಪ್ರೀಂಕೋರ್ಟ್

Published:
Updated:

ನವದೆಹಲಿ (ಪಿಟಿಐ): ಬುಡಕಟ್ಟು ಸಮುದಾಯದ ಜನರು ತಾವು ಹುಟ್ಟಿ ಬೆಳೆದ ಪ್ರದೇಶಗಳ ಭೂಮಿಯೊಂದಿಗೆ ಶಾಶ್ವತ ಸಂಬಂಧ ಹೊಂದುವ ಹಕ್ಕು ಹೊಂದಿದ್ದು, ಭೂಮಿ ಅವರ ಪ್ರಮುಖ ಆಸ್ತಿಯಾಗಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.ಸ್ಥಳೀಯ ಜನರ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ರಕ್ಷಿಸುವುದು ಬಹಳ ಮುಖ್ಯ. ಆದ್ದರಿಂದ ಯಾವುದೇ ಕೈಗಾರಿಕೆಯನ್ನು ಸ್ಥಾಪಿಸುವ ಮೊದಲು ಆಯಾ ಸ್ಥಳಗಳ ಗ್ರಾಮಸಭೆಯ ಅನುಮತಿ ಪಡೆಯುವುದು ಕಡ್ಡಾಯವಾಗಬೇಕು ಎಂದು ನ್ಯಾಯಮೂರ್ತಿ ಅಫ್ತಾಬ್ ಆಲಂ ನೇತೃತ್ವದ ನ್ಯಾಯ ಪೀಠವು ಒಡಿಶಾದ ನಿಯಮಗಿರಿ ಪರ್ವತ ಪ್ರದೇಶದಲ್ಲಿಯ ಗಣಿಗಾರಿಕೆಗೆ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.ಬುಡಕಟ್ಟು ಜನರಿಗೆ ಭೂಮಿ ನೈಸರ್ಗಿಕವಾಗಿ ಬಂದ ಅತ್ತಮೂಲ್ಯ ಆಸ್ತಿಯಾಗಿದ್ದು, ಆ ಭೂಮಿಯಿಂದ ಬರುವ ಆದಾಯದ ಮೂಲಕ ಅವರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬದುಕು ನಿರ್ಣಯವಾಗುತ್ತದೆ. ಆದ್ದರಿಂದ ಭೂಮಿಯ ಜತೆಗಿನ ಬುಡಕಟ್ಟು ಜನರ ಭಾವನಾತ್ಮಕ ಸಂಬಂಧಕ್ಕೆ ಯಾವುದೆ ಕಾರಣಕ್ಕೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.ಅನುಸೂಚಿತ ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿ ವಾಸಿಸುತ್ತ ಬಂದ ಪರಿಶಿಷ್ಟ ಪಂಗಡ ಮತ್ತು ಅರಣ್ಯ ವಾಸಿಗಳು ತಮ್ಮ ನೆಲದ ಜತೆ ಭಾವನಾತ್ಮಕ ಸಂಬಂಧವನ್ನು ಮುಂದುವರಿಸಿಕೊಂಡುವ ಹೋಗುವ ಎಲ್ಲಾ ಹಕ್ಕನ್ನೂ ಪಡೆದಿದ್ದಾರೆ. ಕೃಷಿಯ ಜತೆಗೆ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಿಕೊಂಡು ಜೀವನ ನಿರ್ವಹಣೆ ಮಾಡುವ ಹಕ್ಕನ್ನೂ ಹೊಂದಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.ಅರಣ್ಯ ಉತ್ಪನ್ನಗಳ ಬಳಕೆ ಮತ್ತು ಅರಣ್ಯ ಭೂಮಿಯಲ್ಲಿ ಬೇಸಾಯ ಮಾಡುವ ಅರಣ್ಯವಾಸಿಗಳ ಸಾಂಪ್ರದಾಯಿಕ ಹಕ್ಕನ್ನು ರಕ್ಷಿಸುವ ಉದ್ದೇಶದ ಅರಣ್ಯ ಹಕ್ಕು ಕಾಯ್ದೆಯನ್ನು ಪ್ರಸ್ತಾಪಿಸಿದ ನ್ಯಾಯಪೀಠವು, ಈ ಕಾಯ್ದೆಯ ಉದ್ದೇಶವು ಸೂಕ್ತವಾಗಿದೆ ಎಂದು ತಿಳಿಸಿದೆ.`ಅರಣ್ಯವಾಸಿಗಳಿಂದಲೇ ಅರಣ್ಯ ಸಂಸರಕ್ಷಣೆಯಾಗುತ್ತದೆ ಮತ್ತು ಅಭಿವೃದ್ಧಿ ಹೊಂದುತ್ತದೆ ಎಂಬುದನ್ನು ನಾವು ತಡವಾಗಿಯಾದರೂ ಅರ್ಥ ಮಾಡಿಕೊಂಡಿದ್ದೇವೆ. ಅರಣ್ಯ ಹಕ್ಕು ಕಾಯ್ದೆ ಸಹ ಬುಡಕಟ್ಟು ಜನರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುವುದರಲ್ಲಿ ಸಫಲವಾಗಿದೆ' ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.ಗ್ರಾಮಸಭೆಯ ಮುಂದಿಡಿ: ಒಡಿಶಾದ ನಿಯಮಗಿರಿ ಪರ್ವತ ಪ್ರದೇಶದಲ್ಲಿಯ ಗಣಿಗಾರಿಕೆಗೆ ಅನುಮತಿ ನೀಡುವ  ವಿಚಾರವನ್ನು ಅಲ್ಲಿಯ ಗ್ರಾಮಸಭೆಯ ಮುಂದಿಡುವಂತೆ ಒಡಿಶಾ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ.

ಪ್ರತಿಕ್ರಿಯಿಸಿ (+)