ಶನಿವಾರ, ಮೇ 15, 2021
23 °C
ಒತ್ತುವರಿ ತೆರವಿಗಾಗಿ ಕಾಫಿ ತೋಟ ನಾಶ

ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೆಜಿಎಫ್ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನ ಧಿಕ್ಕರಿಸಿ ಏಕಾಏಕಿ ಕಾಫಿ ತೋಟಗಳನ್ನು ತೆರವುಗೊಳಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಜಿಎಫ್ ಅಧ್ಯಕ್ಷ ಡಾ.ಎನ್.ಪ್ರದೀಪ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿರುವ ತಾಲ್ಲೂಕಿನ ಚಿಕ್ಕೊಳಲೆ ಗ್ರಾಮದ ಕಾಫಿ ತೋಟಕ್ಕೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.1978ಕ್ಕಿಂತ ಹಿಂದೆ ಅರಣ್ಯ ಒತ್ತುವರಿ ಮಾಡಿರುವವರಿಗೆ ಪುನರ್ವಸತಿ ಕಲ್ಪಿಸಿ, ನಂತರ ತೆರವುಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಒತ್ತುವರಿ ತೆರವುಗೊಳಿಸುವಾಗ ಜಾಗಕ್ಕೆ ಗಡಿ ಗುರುತಿಸುವ ಕಂದಕ ನಿರ್ಮಿಸಲು ಮಾತ್ರ ಅವಕಾಶ ಇದೆ. ತೋಟ ನಾಶಪಡಿಸುವಂತಿಲ್ಲ.ಅರಣ್ಯ ಇಲಾಖೆ ಅಧಿಕಾರಿಗಳುಚಿಕ್ಕೊಳಲೆಯ ಕೆ.ಸಿ.ನಾರಾಯಣಗೌಡರ ಒತ್ತುವರಿ ತೆರವುಗೊಳಿಸುವ ನೆಪದಲ್ಲಿ ಅವರ 27 ಎಕರೆ ತೋಟದಲ್ಲಿ ಬೆಳೆದು ನಿಂತಿದ್ದ ಕಾಫಿ ಗಿಡ ಕಡಿದು ಸಂಪೂರ್ಣ ನಾಶಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಲೆನಾಡಿನಲ್ಲಿ ತಲಾತಲಾಂತರದಿಂದ ಕೃಷಿಕರು ಅರಣ್ಯ ಭೂಮಿಯಲ್ಲಿ ವಾಸಿಸುತ್ತಿದ್ದಾರೆ. ಅರಣ್ಯ ಮತ್ತು ಕಂದಾಯ ಭೂಮಿ ಗುರುತಿಸಲು ಅಧಿಕಾರಿಗಳು ತಪ್ಪೆಸಗಿದ್ದಾರೆ. ಸರ್ಕಾರಗಳೂ ಸಹ ಇದುವರೆಗೂ ಕಂದಾಯ ಮತ್ತು ಅರಣ್ಯ ಭೂಮಿ ಸರಿಯಾಗಿ ಗುರುತಿಸಿಲ್ಲ. ಅರಣ್ಯ ಮತ್ತು ಕಂದಾಯ ಭೂಮಿ ಗುರುತಿಸುವ ಮೊದಲೇ ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಮುಂದಾಗಿ ಕಾಫಿ ತೋಟ ನಾಶಪಡಿಸುತ್ತಿರುವುದು ಅಮಾನವೀಯ ಕೃತ್ಯ ಎಂದು ಕಿಡಿಕಾರಿದರು.ಒತ್ತುವರಿ ತೆರವುಗೊಳಿಸುವ ಪ್ರಕ್ರಿಯೆ ಇದೇ ರೀತಿ ಮುಂದುವರಿದರೆ ಮಲೆನಾಡಿನಲ್ಲಿ ಕೃಷಿ ಉಳಿಯುವುದಿಲ್ಲ. ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ. ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸುವ ಆದೇಶ ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಬೇಕು. ಪುನರ್ವಸತಿ ಕಲ್ಪಿಸದೇ ಕಾಫಿ ತೋಟಗಳನ್ನು ನಾಶ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತೋಟ ಕಳೆದುಕೊಂಡಿರುವ ಬೆಳೆಗಾರರಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಕೆಜಿಎಫ್ ಪದಾಧಿಕಾರಿಗಳಿಗೆ ತಮಗೆ ನಷ್ಟವಾಗಿರುವ ಬಗ್ಗೆ ವಿವರಿಸಿದ ಬೆಳೆಗಾರ ಕೆ.ಸಿ.ನಾರಾಯಣಗೌಡ, ಕೇವಲ ಒಂದು ವಾರದ ಮುಂಚೆ ನೋಟೀಸ್ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಯಾವುದಕ್ಕೂ ಅವಕಾಶ ನೀಡದೇ 43 ವರ್ಷಗಳಿಂದ ತಾವು ಕೃಷಿ ಮಾಡಿ, ಬೆಳೆಸಿದ್ದ ಕಾಫಿ ಗಿಡಗಳನ್ನು ಏಕಾಏಕಿ ಕಡಿದು ನಾಶಗೊಳಿಸಿದ್ದಾರೆ. 27 ಎಕರೆ ತೋಟ ನಾಶವಾಗಿದ್ದು, ಬದುಕಿಗೆ ಕೇವಲ 2 ಎಕರೆ ಉಳಿದಿದೆ ಎಂದು ಅಳಲು ತೋಡಿಕೊಂಡರು.ಕೆಜಿಎಫ್ ಸಂಘಟನಾ ಕಾರ್ಯದರ್ಶಿ ಡಿ.ಎಂ.ವಿಜಯ್, ಅರಣ್ಯ ಇಲಾಖೆ ಅಧಿಕಾರಿಗಳು ನೋಟೀಸ್ ನೀಡಿದರೆ ಅದನ್ನು ತಕ್ಷಣ ಕಾಫಿ ಬೆಳೆಗಾರರ ಒಕ್ಕೂಟದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.ಕೆಜಿಎಫ್ ಕಾರ್ಯದರ್ಶಿ ಮೋಹನ್‌ಕುಮಾರ್, ಖಜಾಂಚಿ ತೀರ್ಥ ಮಲ್ಲೇಶ್, ಮೂಡಿಗೆರೆ ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಬಾಲಕೃಷ್ಣ, ವಿಶ್ವನಾಥ್ ನಾಯಕ್, ರೇವಣ್ಣಗೌಡ ತಂಡದಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.