ಅರಣ್ಯ ಇಲಾಖೆಯವರೊಂದಿಗೆ ಗ್ರಾಮಸ್ಥರ ಚಕಮಕಿ

7

ಅರಣ್ಯ ಇಲಾಖೆಯವರೊಂದಿಗೆ ಗ್ರಾಮಸ್ಥರ ಚಕಮಕಿ

Published:
Updated:

ಮುಂಡಗೋಡ: ಮನೆಯ ಹಿತ್ತಲಿನ ಬೇಲಿಯನ್ನು ಕಿತ್ತು ಹಾಕಿ ಅಗಳ ಹೊಡೆಯಲು ಮುಂದಾದ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿ ಅಗಳ ಹೊಡೆಯಲು ತಂದ ಜೆ.ಸಿ.ಬಿ.ಯಂತ್ರವನ್ನು ಮರಳಿ ಕಳಿಸಿದ ಘಟನೆ ತಾಲ್ಲೂಕಿನ ಮಳಗಿಯಲ್ಲಿ ಭಾನುವಾರ ನಡೆಯಿತು.ಇಲ್ಲಿನ ಪಶು ಆರೋಗ್ಯ ಕೇಂದ್ರದ ಹಿಂಬದಿಯಲ್ಲಿನ ಜಾಗದಲ್ಲಿ ಅರಣ್ಯ ಇಲಾಖೆಯವರು ಅಗಳ ಹೊಡೆಯಲು ಮುಂದಾದಾಗ ಗ್ರಾಮಸ್ಥರೊಂದಿಗೆ ಮಾತಿನ ಚಕಮಕಿ ನಡೆದಿದೆ. ಅಗಳವನ್ನು ನೇರವಾಗಿ ತೆಗೆಯಿರಿ ಎಂಬ ಗ್ರಾಮಸ್ಥರ ಮಾತನ್ನು ಲೆಕ್ಕಿಸದೇ ಅರಣ್ಯ ಇಲಾಖೆಯ ಸಿಬ್ಬಂದಿ ಮನೆಯ ಹಿಂಬದಿಯ ಬೇಲಿ ತೆಗೆದು ಅಗಳ ಹೊಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದರಿಂದ ಪರಸ್ಪರ ಮಾತಿನ ಚಕಮಕಿ ನಡೆದಿದೆ.`ನಿವೇಶನವಿಲ್ಲದೇ ಸಾಕಷ್ಟು ಬಡವರು ಗ್ರಾಮದಲ್ಲಿ ವಾಸಿಸುತ್ತಿದ್ದು ಮೊದಲು ಅರಣ್ಯ ಇಲಾಖೆಯವರು ಗಡಿ ಗುರುತು ಮಾಡಿ ನಕ್ಷೆಯೊಂದಿಗೆ ಅಗಳ ಹೊಡೆಯಲಿ~ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. `ಕಳೆದ 30-40 ವರ್ಷಗಳಿಂದ ಮನೆ ಕಟ್ಟಿಕೊಂಡು ಇಲ್ಲಿಯೇ ವಾಸವಾಗಿದ್ದು ಮನೆಯ ಹಿಂಬದಿಯ ಹಿತ್ತಲಿನಲ್ಲಿ ಬೇಲಿ ಹಾಕಿಕೊಂಡಿದ್ದೇವೆ. ಆದರೆ ಅರಣ್ಯ ಇಲಾಖೆಯವರು ಬೇಲಿ ಕಿತ್ತು ಅಗಳ ಹೊಡೆಯಲು ಮುಂದಾಗಿದ್ದಾರೆ. ಅವರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಿದಾಗಲೂ ಸಹ ತಮ್ಮ ಮನಸ್ಸಿಗೆ ತೋಚಿದ ಹಾಗೆ ನಡೆದುಕೊಳ್ಳುತ್ತಿದ್ದಾರೆ~ ಎಂದು ಗ್ರಾಮಸ್ಥರು ದೂರಿದರು.ಆದರೆ ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮಸ್ಥರ ವಾದವನ್ನು ಅಲ್ಲಗಳೆದಿದ್ದು `ಕೆಲವರು ಮನೆಯ ಹಿತ್ತಲಿನ ಅರಣ್ಯ ಜಾಗದಲ್ಲಿ ಸ್ವಚ್ಛಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ಅರಣ್ಯ ಜಾಗದಲ್ಲಿ ಯಾವುದೇ ಕಾರ್ಯ ಮಾಡಬೇಡಿ. ಇಲಾಖೆಯ ಹಿರಿಯ ಅಧಿಕಾರಿಗಳು ಬರುವರೆಗೂ ಅರಣ್ಯ ಜಾಗದಲ್ಲಿ ಕೆಲಸ ಮಾಡಬೇಡಿ ಎಂದು ಹೇಳಿದ್ದರಿಂದ ಮಾತಿನ ಚಕಮಕಿ ನಡೆಯಿತು. ನಂತರ ನಾವು ಮರಳಿ ಬಂದಿದ್ದೇವೆ~ ಎಂದು ತಿಳಿಸಿದರು.`ಗಡಿ ಗುರುತು ಮಾಡದೇ ಸಮರ್ಪಕ ದಾಖಲಾತಿಗಳು ಇಲ್ಲದೇ ಅರಣ್ಯ ಇಲಾಖೆಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಕೇವಲ ಸಿಬ್ಬಂದಿ ಒತ್ತುವರಿ ಖುಲ್ಲಾ ಪಡಿಸಲು ಮುಂದಾಗಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಸೋಮವಾರ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಲಾಗುವುದು~ ಎಂದು ಅರಣ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry