ಮಂಗಳವಾರ, ನವೆಂಬರ್ 12, 2019
28 °C

ಅರಣ್ಯ ಇಲಾಖೆ ಕಿರುಕುಳ ತಪ್ಪಿಸಲು ಮನವಿ

Published:
Updated:

ಜೋಯಿಡಾ: ಅರಣ್ಯ ಇಲಾಖೆ ನೀಡುತ್ತಿರುವ ಕಿರುಕುಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕುಣಬಿ ಹೋರಾಟ ಸಮಿತಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.ಹುಲಿಯೋಜನೆ ಜಾರಿಯಾಗುವ ಪೂರ್ವದಲ್ಲಿ ಕೇಂದ್ರ ಸರ್ಕಾರ ಯೋಜನಾ ವ್ಯಾಪ್ತಿಯ ಪ್ರದೇಶದಲ್ಲಿರುವ ಸ್ಥಳೀಯ ಆದಿವಾಸಿ ಬುಡಕಟ್ಟು ಅರಣ್ಯವಾಸಿಗಳಿಗೆ ತೊಂದರೆಯಾಗದಂತೆ  ಜನಪರ ಯೋಜನೆ  ಜಾರಿ ಮಾಡಬೇಕು ಎನ್ನುವ ನಿಬಂಧನೆಯನ್ನು ಹೇರಿತ್ತು. ಆದರೆ ಇಲಾಖೆ ಅಧಿಕಾರಿಗಳು ಬುಡಕಟ್ಟು ಸಮುದಾಯದ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ.ಅರಣ್ಯ ಅಧಿಕಾರಿಗಳು ನೀಡುತ್ತಿರುವ ಕಿರುಕುಳದಿಂದಾಗಿ `ಜನರ ಸಹಬಾಗಿತ್ವದಲ್ಲಿ ಹುಲಿ ಯೋಜನೆ' ಎಂಬ ಆದರ್ಶ ಕಲ್ಪನೆಯಿಂದ ನಾವು ದೂರ ಉಳಿಯಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸಮಿತಿ ನಮ್ಮ ಪರಂಪರಾಗತ ನೆಲೆಯಲ್ಲಿ ನಮ್ಮ ಹಕ್ಕನ್ನು ಅನುಭವಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದೆ.ಬೆಳೆಗಳಿಗೆ ಭದ್ರತೆ ಇಲ್ಲ, ಕಾಡು ಪ್ರಾಣಿಯಿಂದ ಹಾನಿಗೊಳಗಾದ ಬೆಳೆಗೆ ಯೋಗ್ಯ ಪರಿಹಾರ ನೀಡುತ್ತಿಲ್ಲ. ಕಾಡು ಪ್ರಾಣಿಯಿಂದ ಪ್ರಾಣ ಹಾನಿ ಸಂಭವಿಸಿದ್ದರೂ ಸರ್ಕಾರ ಸರಿಯಾದ ಪರಿಹಾರ ನೀಡುತ್ತಿಲ್ಲ ಎಂದು ಸಮಿತಿ ದೂರಿದೆ.ಜೀವನೊಪಾಯಕ್ಕೆ ಕಿರು ಉತ್ಪನ್ನಗಳ ಬಳಕೆ, ಸಂಗ್ರಹಣೆಗೆ ಇಲಾಖೆ ನಿರ್ಬಂಧ ವಿಧಿಸುತ್ತಿದೆ. ಇದರಿಂದಾಗಿ ಅರಣ್ಯವಾಸಿಗಳು ಜೀವನ ನಡೆಸುವುದು ದುಸ್ತರವಾಗಿದೆ ಎಂದು ಸಮಿತಿ ಹೇಳಿದೆ.ಹುಲಿ ಯೋಜನೆಯ ಐದು ವಲಯಗಳಲ್ಲಿ ಮುಖ್ಯಅರಣ್ಯ ಸಂರಕ್ಷಣಾಧಿಕಾರಿಗಳಿಂದ ಹಿಡಿದು ಕೂಪಮಾಲಿ ವರೆಗೆ ಒಟ್ಟು 110 ಹುದ್ದೆಗಳು ಮಂಜೂರಿಯಾಗಿವೆ. ಈ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕು ಎನ್ನುವ ನಿಯಮ ಇದೆ. ಆದರೆ, ಒಬ್ಬರಿಗೂ ಉದ್ಯೋಗ ನೀಡದೆ ವಂಚಿಸಲಾಗಿದೆ ಎಂದು ಸಮಿತಿ ಮನವಿಯಲ್ಲಿ ತಿಳಿಸಿದೆ.ಕಳೆದ ಎರಡು ವರ್ಷಗಳಲ್ಲಿ ನಡೆದ ಗಾರ್ಡ್, ವಾಚಮನ್ ಹುದ್ದೆಗಳ ನೇಮಕಾತಿಯಲ್ಲೂ ಸ್ಥಳೀಯರಿಗೆ ಅನ್ಯಾಯ ಮಾಡಲಾಗಿದೆ. ಬುಡಕಟ್ಟು ನಿವಾಸಿಗಳಲ್ಲಿ ಅರ್ಹತೆ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವರು ನಿರುದ್ಯೋಗಿಗಳಾಗಬೇಕಾಗಿದೆ ಎಂದು ಸಮಿತಿ ವಿಷಾದಿಸಿದೆ.ಅರಣ್ಯ ಇಲಾಖೆಯಲ್ಲಿ ದಿನಗೂಲಿಗಳಿಗೆ  ರೂ. 188.26 ವೇನತ ಇದೆ. ಆದರೆ ನರ್ಸರಿಗಳಲ್ಲಿ ದುಡಿಯುವ ಕೆಲಸಗಾರರಿಗೆ ಕೇವಲ ರೂ. 80 ರಿಂದ 90 ವೇತನ ನೀಡಲಾಗುತ್ತಿದೆ. ಉಳಿದ ಹಣವನ್ನು ಗುತ್ತಿಗೆದಾರರೇ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಸಮಿತಿ ದೂರಿದೆ.ಅರಣ್ಯ ಇಲಾಖೆಯಲ್ಲಿ ದಿನಗೂಲಿಗಳಾಗಿರುವ ವಾಚಮನ್‌ಗಳು ಅಧಿಕಾರಿಗಳ ಮನೆಯಲ್ಲಿ ಬಟ್ಟೆ ತೊಳೆಯುವ, ಅಡುಗೆ ಮಾಡಿ ಪಾತ್ರೆ ತೊಳೆಯುವ, ಮನೆಕಾಯುವ  ಕೆಲಸ ಮಾಬೇಕಾಗಿದೆ. ಅರಣ್ಯ ರಕ್ಷಣೆಗೆ ನೇಮಿಸಿಕೊಂಡವರನ್ನು ಅರಣ್ಯ ಅಧಿಕಾರಿಗಳು ತಮ್ಮ ಮನೆಗೆಲಸಕ್ಕೆ ಬಳಸಿಕೊಳ್ಳುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸಮಿತಿ ಹೇಳಿದೆ.ಜನವಿರೋಧಿ ಹುಲಿ ಯೋಜನೆ ಬಿಟ್ಟು ಜನರ ಸಹಭಾಗಿತ್ವದ ಯೋಜನೆ ಜಾರಿಗೊಳಿಸಬೇಕು. ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಕ್ರಮಕೈಗೊಳ್ಳಬೇಕು ಎಂದು  ಮನವಿ ಮಾಡಿದೆ.

 

ಪ್ರತಿಕ್ರಿಯಿಸಿ (+)