ಅರಣ್ಯ ಇಲಾಖೆ ದುರಾಡಳಿತ: ರೈತರು ಕಂಗಾಲು

7

ಅರಣ್ಯ ಇಲಾಖೆ ದುರಾಡಳಿತ: ರೈತರು ಕಂಗಾಲು

Published:
Updated:

ಶಿವಮೊಗ್ಗ: ಜಮೀನು ರೈತರದ್ದು, ಅಕೇಶಿಯ ಬೆಳೆದಿದ್ದು ಅರಣ್ಯ ಇಲಾಖೆ. ಈಗ ನ್ಯಾಯಾಲಯ, ಅಕೇಶಿಯ ಗಿಡ ಕಡಿದುಕೊಳ್ಳಲು ಅನುಮತಿ ಕೊಟ್ಟರೂ ನಿರ್ಲಕ್ಷಿಸಿದ ಇಲಾಖೆ ಈಗ ‘ಜಮೀನು ನನ್ನದೇ; ಅಕೇಶಿಯಾ ಗಿಡಗಳೂ ನನ್ನವೇ’ ಎನ್ನುತ್ತಿದೆ! ಹೊಸನಗರ ತಾಲ್ಲೂಕು ಕೆರೆಹಳ್ಳಿ ಹೋಬಳಿಯ ಬೆನವಳ್ಳಿ ಗ್ರಾಮದಲ್ಲಿ ಈಗ ನಡೆಯುತ್ತಿರುವ ಪ್ರಸಂಗವಿದು.



1972ರಲ್ಲಿ ಬೆನವಳ್ಳಿ ಗ್ರಾಮದ ಸರ್ವೆ ನಂ. 54ರಲ್ಲಿ ಐದು ಜನ ಸಣ್ಣ ಹಿಡುವಳಿದಾರರಿಗೆ 10 ಎಕರೆ ಕಂದಾಯ ಜಮೀನನ್ನು ಸರ್ಕಾರವೇ ಮಂಜೂರು ಮಾಡಿದೆ. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳೂ ನಮ್ಮ ಬಳಿ ಇವೆ. ಬಹಳಷ್ಟು ವರ್ಷ ರೈತರು ಇಲ್ಲಿ ಬೆಳೆಯನ್ನೂ ಬೆಳೆದಿದ್ದೇವೆ ಎನ್ನುತ್ತಾರೆ ನೊಂದ ರೈತರು.



ಕೆಲ ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಅರಣ್ಯ ಇಲಾಖೆ ರೈತರ ಜಮೀನಿನಲ್ಲಿ ಅಕೇಶಿಯಾ ಗಿಡಗಳನ್ನು ನೆಟ್ಟಿದೆ. ಇದನ್ನು ಪ್ರಶ್ನಿಸಿ ಈ ರೈತರು ನ್ಯಾಯಾಲಯದ ಮೊರೆ ಹೋದರು.ನ್ಯಾಯಾಲಯ, ಜಮೀನು ರೈತರದ್ದೇ ಎಂದು ತೀರ್ಪು ನೀಡಿತು. ಆದರೆ, ಅಕೇಶಿಯಾ ಗಿಡ ಕಡಿದುಕೊಳ್ಳುವಂತೆ ಅರಣ್ಯ ಇಲಾಖೆಗೆ 90 ದಿವಸ ಗಡುವು ನೀಡಿತು. ಆದರೆ, ಅರಣ್ಯ ಇಲಾಖೆ ಇದನ್ನು ನಿರ್ಲಕ್ಷಿಸಿತು. ನಂತರ ಹಠಕ್ಕೆ ಬಿದ್ದ ಅರಣ್ಯ ಇಲಾಖೆ ಹೈಕೋರ್ಟ್‌ನಲ್ಲಿ ಈ ಜಮೀನು ತನ್ನದೆಂದು ವಾದಿಸಿತು. ಅಲ್ಲಿಯೂ ತೀರ್ಪು ರೈತರ ಪರವಾಗಿಯೇ ಬಂದಿತು. ಮುಂದೆ ಯಾವುದೇ ರೀತಿ ಮೇಲ್ಮನವಿ ಸಲ್ಲಿಸುವಂತಿಲ್ಲ ಎಂದು ಹೈಕೋರ್ಟ್ ಅರಣ್ಯ ಇಲಾಖೆಗೆ ತಾಕೀತು ಬೇರೆ ಮಾಡಿತು.



ಈ ತೀರ್ಪಿನ ಅನ್ವಯ ರೈತರು, ಜಮೀನಲ್ಲಿರುವ ಅಕೇಶಿಯಾ ಕಟಾವು ಮಾಡಿದ್ದಾರೆ. ಇದರ ಸಾಗಾಟಕ್ಕೆ ಅನುಮತಿ ಕೇಳಿ ನಾಲ್ಕು ತಿಂಗಳಾದರೂ ಅರಣ್ಯ ಇಲಾಖೆ ಇದುವರೆಗೂ ಸಮ್ಮತಿ ಸೂಚಿಸಿಲ್ಲ. ಕೊನೆಗೆ ರೈತರೇ ಸೇರಿ ಸಾಗಾಟಕ್ಕೆ ಮುಂದಾದಾಗ ಈಗ ಅಕೇಶಿಯಾ ತುಂಡುಗಳ ಸಮೇತ ಲಾರಿಯನ್ನು ಹಿಡಿದಿಟ್ಟುಕೊಂಡಿದ್ದಾರೆ. ಸಾಲದ್ದಕ್ಕೆ ಇಲಾಖೆ, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಹೋಗಲು ಸಿದ್ಧತೆ ನಡೆಸಿದೆ.



ಅರಣ್ಯ ಇಲಾಖೆಯ ಈ ದೌರ್ಜನ್ಯದ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಬಳಿ ದೂರು ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ. ಈ ಪ್ರಕರಣದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್‌ಕುಮಾರ್ ಅವರ ಕರ್ತವ್ಯ ನಿರ್ಲಕ್ಷ್ಯವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry