ಬುಧವಾರ, ಮೇ 12, 2021
18 °C

ಅರಣ್ಯ ಇಲಾಖೆ ವಿರುದ್ಧ ಖಂಡನಾ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಬಗರ್‌ಹುಕುಂ ಭೂಮಿ ಒತ್ತುವರಿ ತೆರವುಗೊಳಿಸುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ನಡೆದುಕೊಳ್ಳುವ ರೀತಿ ಬಗ್ಗೆ ಬುಧವಾರ ಜಿಲ್ಲಾ ಪಂಚಾಯ್ತಿ ಸಾಮಾನ್ಯಸಭೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಖಂಡನಾ ನಿರ್ಣಯವನ್ನೂ ತೆಗೆದುಕೊಂಡಿತು.ಜೆಡಿಎಸ್ ಸದಸ್ಯ ಎಸ್.ಕುಮಾರ್, ಸಭೆ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿ, ಭದ್ರಾವತಿ ಬದನೆಹಾಳ್‌ನಲ್ಲಿ ರೈತರ ಬಗರ್‌ಹುಕುಂ ಭೂಮಿ ಒತ್ತುವರಿ ತೆರವು ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ವಿರುದ್ಧ ದೂರು ದಾಖಲಿಸಿದ್ದಾರೆ. ಅಂದು ಸ್ಥಳದಲ್ಲೇ ಇರದ ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಿದ ಅಧಿಕಾರಿಗಳನ್ನು ಸಭೆಗೆ ಕರೆಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ, ಜನರ ರಕ್ಷಣೆಗೆ ತೆರಳಿದ ಜನಪ್ರತಿನಿಧಿಗಳ ವಿರುದ್ಧವೇ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿರುವುದು ಖಂಡನಾರ್ಹ. ಹಣ ಮಾಡುವುದಕ್ಕಾಗಿ ಅರಣ್ಯ ಇಲಾಖೆ ತೆರವು ಕಾರ್ಯಾಚರಣೆ ಕೈಗೊಳ್ಳುತ್ತಿದೆ. ಅರಣ್ಯ ಇಲಾಖೆ ಎಷ್ಟು ಗಿಡಗಳನ್ನು ನೆಟ್ಟಿದೆ, ಅವುಗಳ ವರದಿ ನೀಡಬೇಕು ಎಂದು ಆಗ್ರಹಿಸಿದರು.ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ, ಈ ವಿಷಯ ವಿರುದ್ಧ ಒಗ್ಗಟ್ಟಾಗಿ ನಿರ್ಣಯ ಕೈಗೊಳ್ಳಬೇಕು ಎಂದರು. ಹಾರೋಗುಳಿಗೆ ಪದ್ಮನಾಭ, ಅರಣ್ಯ ಇಲಾಖೆ ಸಿಬ್ಬಂದಿ ಸಾಗುವಳಿ ಜಮೀನಿನಲ್ಲಿ ಗಿಡ ನೆಡುತ್ತಿದ್ದು, ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿಧಾನ ಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಬಗರ್‌ಹುಕುಂ ಸಾಗುವಳಿ ಒತ್ತುವರಿ ಸಮಸ್ಯೆ ಜಿಲ್ಲೆಯಲ್ಲಿ ಗಂಭೀರವಾಗಿದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ರೈತರಿಗೂ- ಅರಣ್ಯ ಇಲಾಖೆಗೂ ಸಂಘರ್ಷ ನಡೆಯುತ್ತದೆ. ಸಮಸ್ಯೆ ಬಗೆಹರಿಸಲು ತೆರಳುವ ಜನಪ್ರತಿನಿಧಿಗಳ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸುವುದು ಸರಿ ಅಲ್ಲ. ಹೊಸ ಒತ್ತುವರಿಗೆ ಅವಕಾಶ ನೀಡುವುದಿಲ್ಲ. ಜಿಲ್ಲೆಯಲ್ಲಿ ಸುಮಾರು 83 ಅರ್ಜಿಗಳು ಬಗರ್‌ಹುಕುಂ ಸಕ್ರಮಕ್ಕೆ ಬಂದಿವೆ. ಈ ಅರ್ಜಿಗಳು ಇತ್ಯರ್ಥವಾಗುವವರೆಗೂ ಒಕ್ಕಲೆಬ್ಬಿಸದಿರಲು ಈಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿ ಒಪ್ಪಿಗೆ ಸೂಚಿಸಿದ್ದಾರೆ ಎಂದರು.ಚರ್ಚೆಯ ನಂತರ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಅಧಿಕಾರ ಕ್ರಮಕ್ಕೆ ಖಂಡನಾ ನಿರ್ಣಯ ಕೈಗೊಂಡರು. ಮುಂದಿನ ಸಭೆಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿದರು.ಕಳಪೆ ಮೆಕ್ಕೆಜೋಳ

ಕೃಷಿ ಇಲಾಖೆ ಶಿಕಾರಿಪುರದಲ್ಲಿ ಕಳಪೆ ಸಿ.ಪಿ. ಮೆಕ್ಕೆಜೋಳ ಬಿತ್ತನೆ ಬೀಜ ನೀಡಿದ್ದು, ಸರಿಯಾಗಿ ಬೆಳೆದಿಲ್ಲ. ಎಕರೆಗೆ ಸುಮಾರು ರೂ 10 ಸಾವಿರದಷ್ಟು ರೈತರು ಖರ್ಚು ಮಾಡಿದ್ದು, ನಷ್ಟ ಅನುಭವಿಸಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಕಳಪೆ ಬೀಜ ಕಂಪೆನಿಗಳೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಶಿವಮೂರ್ತಪ್ಪ ಮಾತನಾಡಿ, ರೈತರಿಂದ ಇದುವರೆಗೂ ಯಾವುದೇ ದೂರು ಬಂದಿಲ್ಲ. ಅಷ್ಟಕ್ಕೂ ಸಿ.ಪಿ.ಮೆಕ್ಕೆಜೋಳ ಮಾರುಕಟ್ಟೆಯಲ್ಲೂ ಸಿಗುತ್ತದೆ. ಸದಸ್ಯರು ಗಮನಕ್ಕೆ ತಂದಿರುವುದರಿಂದ ಶೀಘ್ರವೇ ಅಲ್ಲಿಗೆ ಭೇಟಿ ನೀಡಿ, ಪರಿಶೀಲಿಸುವುದಾಗಿ ತಿಳಿಸಿದರು.ಪಂಚಾಯ್ತಿಗಳಿಗೆ ಪ್ರಶಸ್ತಿ

ಸಭೆಯ ಆರಂಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್, ಹೊಸನಗರ ತಾಲ್ಲೂಕು ಮೇಲಿನಬೆಸಗೆ ಗ್ರಾಮ ಪಂಚಾಯ್ತಿ ಹಾಗೂ ಶಿಕಾರಿಪುರ ತಾಲ್ಲೂಕು ಪಂಚಾಯ್ತಿಗಳಿಗೆ ಕೇಂದ್ರ ಸರ್ಕಾರ ನೀಡುವ ಪಂಚಾಯ್ತಿಗಳ ಸಬಲೀಕರಣ ಪ್ರಶಸ್ತಿ ಲಭಿಸಿದೆ. ಗ್ರಾ.ಪಂ.ಗೆ ರೂ 15 ಲಕ್ಷ, ತಾ.ಪಂ.ಗೆ ರೂ 20 ಲಕ್ಷ ಅನುದಾನ ಕೂಡ ಬಂದಿದೆ ಎಂದು ಹೇಳಿ ಶ್ಲಾಘಿಸಿದರು.ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಮಾತನಾಡಿ, ಮುಂದಿನ ಸಭೆಯಲ್ಲಿ ಪಂಚಾಯ್ತಿ ಅಧ್ಯಕ್ಷರನ್ನು ಕರೆಸಿ ಅಭಿನಂದಿಸ ಲಾಗುವುದು ಎಂದು ಪ್ರಕಟಿಸಿದರು. ಶುಭಾ ಕೃಷ್ಣಮೂರ್ತಿ, ಅಭಿನಂದನೆ ವಿಷಯ ಪ್ರಸ್ತಾಪಿಸಿದರು.ವಿಧಾನ ಪರಿಷತ್ ಸದಸ್ಯರಾದ ಪ್ರೊ.ಪಿ.ವಿ.ಕೃಷ್ಣಭಟ್, ಎಂ.ಬಿ.ಭಾನುಪ್ರಕಾಶ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಉಪಾಧ್ಯಕ್ಷೆ ಹೇಮಾ ಪಾವನಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.