ಗುರುವಾರ , ನವೆಂಬರ್ 21, 2019
22 °C

ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪ್ರತಿಭಟನೆ

Published:
Updated:

ಬೆಳಗಾವಿ: ಅರಣ್ಯ ಇಲಾಖೆ ಸಿಬ್ಬಂದಿ ಮಂತುರ್ಗಾ ಅವರ ಅಮಾನತ್ತು ಮಾಡಿದ್ದನ್ನು ಖಂಡಿಸಿ ಹಾಗೂ ಅವರನ್ನು ಮರಳಿ ಸೇವೆಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಹಾಗೂ ವೀಕ್ಷಕರ ಸಂಘದ ಸದಸ್ಯರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.ಖಾನಾಪುರ ವಲಯದ ಅಸೋಗಾ ಗ್ರಾಮದ ಸಿಟಿ ಸರ್ವೇ ಸಂಖ್ಯೆ 81ರಲ್ಲಿ ಅನಧಿಕೃತವಾಗಿ ಬಿದಿರುಗಳನ್ನು ಕಡಿದು ಹಾಕಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮಾ. 26ರಂದು ಬೆಳಗಾವಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅರಣ್ಯ ರಕ್ಷಕ ಮಂತುರ್ಗಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಅಸೋಗಾದ ರಾಮಲಿಂಗೇಶ್ವರ ಟ್ರಸ್ಟಿಗೆ ಸೇರಿದೆಯೆನ್ನಲಾದ ಜಮೀನಿನಲ್ಲಿ ಬಿದಿರು ಕಟಾವಿಗೆ ಪರವಾನಿಗೆ ನೀಡಿದ 75,000 ರೂಪಾಯಿ ಮೌಲ್ಯದ ಬಿದಿರುಗಳು ಇರದೇ, ಕೇವಲ 15,000 ರೂಪಾಯಿ ಮೌಲ್ಯದ ಬಿದಿರುಗಳು ಮಾತ್ರ ಇರುತ್ತವೆ.

ಖಾನಾಪುರದ ಅರಣ್ಯ ಅಧಿಕಾರಿಗಳು, ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಕ್ಷೆ, ಸರ್ವೇ ಸಂಖ್ಯೆ ಸರಿಯಾಗಿ ಪರಿಶೀಲಿಸದೆ ಪರವಾನಿಗೆ ನೀಡಿದ್ದಾರೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಿ ರುವ ಮನವಿಯಲ್ಲಿ ತಿಳಿಸಲಾಗಿದೆ.ಮಾ. 20 ರಂದು ಮಂತುರ್ಗಾ ಅವರು ಬಿದಿರುಗಳನ್ನು ಕಡಿದು ಹಾಕುವುದನ್ನು ತಡೆದು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ, ಮಾ. 23 ರಂದು ಅರಣ್ಯ ಸಂಚಾರಿ ದಳದವರು ಮಂತುರ್ಗಾ ವಿರುದ್ಧವೇ ಅರಣ್ಯ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ಮರ್ತುಂಗಾ ಅವರು ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದ ಅಮಾನತು ಆದೇಶವನ್ನು ಕೂಡಲೇ ರದ್ದು ಪಡಿಸಬೇಕು ಎಂದು ಸಂಘದ ಸದಸ್ಯರು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)