ಮಂಗಳವಾರ, ಏಪ್ರಿಲ್ 13, 2021
23 °C

ಅರಣ್ಯ ಉತ್ಪನ್ನಗಳಿಗೆ ಶೀಘ್ರವೇ ಬೆಂಬಲ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಅರಣ್ಯದಲ್ಲಿ ಗಿರಿಜನರು ಹೆಕ್ಕಿತೆಗೆಯುವ ಕಿರು ಉತ್ಪನ್ನಗಳಿಗೂ ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಬೆಂಬಲ ಬೆಲೆ ಘೋಷಿಸುವ ನಿರೀಕ್ಷೆ ಇದೆ ಎಂದು ರಾಜ್ಯ ಸಹಕಾರ ಲ್ಯಾಂಪ್ಸ್ ಮಹಾ ಮಂಡಳದ ಅಧ್ಯಕ್ಷ ಎಂ.ಕೃಷ್ಣಯ್ಯ ಹೇಳಿದರು.ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯೂನಿಯನ್‌ನ ಆಶ್ರಯದಲ್ಲಿ ನಗರದ ಜಿಲ್ಲಾ ಸಹಕಾರ ಯೂನಿಯನ್‌ನ ಸಭಾಂಗಣದಲ್ಲಿ ಗುರುವಾರ ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರಿಗೆ ಹಕ್ಕು, ಜವಾಬ್ದಾರಿ  ಹಾಗೂ ಕರ್ತವ್ಯಗಳ ಕುರಿತು ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರೈತರು ಬೆಳೆಯುವ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಿಸಿರುವಂತೆ ಅರಣ್ಯದ ಕಿರು ಉತ್ಪನ್ನಗಳಿಗೂ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿ ಸಲಾಗಿತ್ತು. ಅದರನ್ವಯ ನಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರವು ಭರವಸೆ ನೀಡಿದೆ ಎಂದರು.ಈ ದಿಸೆಯಲ್ಲಿ ಆದಿವಾಸಿಗಳು ಅರಣ್ಯ ಉತ್ಪನ್ನಗಳನ್ನು ಹೆಚ್ಚಿಸಿಕೊಳ್ಳಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಗಿರಿಜನ ಹೆಣ್ಣುಮಕ್ಕಳು ಕಾಡಿನಲ್ಲಿ ದೊರೆಯುವ ಮೇಣವನ್ನು ಆಧರಿಸಿ ಮೊಂಬತ್ತಿ ತಯಾರಿಕೆ, ಮುತ್ತುಗದ ಎಲೆಗಳನ್ನು ಬಳಸಿ ಊಟದ ಎಲೆಗಳ ತಯಾರಿಕೆಯನ್ನು ರೂಢಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ಜೇನು ಸಂಸ್ಕರಣೆ, ನೆಲ್ಲಿಕಾಯಿ ಪುಡಿ, ಸೀಗೆಪುಡಿ ಹಾಗೂ ಅಂಟುವಾಳ ಪುಡಿಯ ಸಂಸ್ಕರಣಾ ಘಟಕವನ್ನು ಸದ್ಯದಲ್ಲಿಯೇ ಮೈಸೂರಿನಲ್ಲಿ ರಾಜ್ಯ ಸಹಕಾರ ಲ್ಯಾಂಪ್ಸ್ ಮಹಾಮಂಡಳದ ವತಿಯಿಂದ ಆರಂಭಿಸಲಾಗುವುದು. ಇದಕ್ಕೆ ಸುಮಾರು ರೂ 2.5 ಲಕ್ಷ ವೆಚ್ಚ ತಗುಲಲಿದೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಸಮಗ್ರ ಗಿರಿಜನ ಅಭಿವದ್ಧಿ ಯೋಜನಾಧಿಕಾರಿ ಲಕ್ಷ್ಮಣ ಜೆ.ಗಂಟಿ, ಸಹಕಾರ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲ ಗುರುಮಲ್ಲಪ್ಪ, ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯೋನೇಜ್‌ಮೆಂಟ್‌ನ ಪ್ರಾಂಶುಪಾಲ ಎನ್.ಎಂ.ಶಿವಕುಮಾರ್ ಅತಿಥಿ ಉಪನ್ಯಾಸ ನೀಡಿದರು.ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಂ.ಪಿ. ಮುತ್ತಪ್ಪ ಅಧ್ಯಕ್ಷತೆ ವಹಿಸ್ದ್ದಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಎಂ.ವೆಂಕಟಸ್ವಾಮಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಎಲ್.ಜ್ಯೋತೀಂದ್ರ ಭಾಗವಹಿಸಿದ್ದರು. ಯೂನಿಯನ್‌ನ ವ್ಯವಸ್ಥಾಪಕಿ ಆರ್.ಮಂಜುಳಾ ಸ್ವಾಗತವನ್ನು ನೆರವೇರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.