ಅರಣ್ಯ ಒತ್ತುವರಿ ಜಾಗ ತೆರವು: ಪ್ರತಿಭಟನೆ

7

ಅರಣ್ಯ ಒತ್ತುವರಿ ಜಾಗ ತೆರವು: ಪ್ರತಿಭಟನೆ

Published:
Updated:

ಕುಶಾಲನಗರ: ಉತ್ತರ ಕೊಡಗಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸರಹದ್ದಿಗೆ ಸೇರಿದ ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ಸೇರಿದ ಊರುಡುವೆ ಎಂಬ ಜಾಗದಲ್ಲಿ ಕಳೆದ ಕೆಲವು ದಿನಗಳಿಂದ ಜೋಪಡಿ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದ ಬುಡಕಟ್ಟು ಕೃಷಿಕರ ಸಮುದಾಯಕ್ಕೆ ಸೇರಿದ 12 ಕುಟುಂಬಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ತೆರವು ಮಾಡುತ್ತಿದ್ದ ಸಂದರ್ಭ ಗಿರಿಜನರು ವಿರೋಧ ಸೂಚಿಸಿ ಪ್ರತಿಭಟಿಸಿದರು. ಅರಣ್ಯ ಇಲಾಖೆ ವತಿಯಿಂದ ಪೊಲೀಸರ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆದಾಗ ಗಿರಿಜನರು ತಮ್ಮ ಕುಟುಂಬಗಳನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದೆಂದು ಪಟ್ಟುಹಿಡಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಬುಡಕಟ್ಟು ಕೃಷಿಕರ ಸಂಘ ಅಧ್ಯಕ್ಷ ಜೆ.ಪಿ.ರಾಜು, ಜಿ.ಪಂ. ಮಾಜಿ ಸದಸ್ಯ ಆರ್.ಕೆ.ಚಂದ್ರು, ಗಿರಿಜನರ ಸಮಸ್ಯೆಗಳನ್ನು ಆಲಿಸಿ ಅರಣ್ಯ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ ಗಿರಿಜನರ ಕುಟುಂಬಗಳಿಗೆ ಯಾವುದೇ ಕಾರಣಕ್ಕೂ ಕಿರುಕುಳ ನೀಡಬಾರದು ಎಂದು ಮನವಿ ಮಾಡಿದರು. ಗಿರಿಜನರ ಪ್ರತಿಭಟನೆ ತೀವ್ರಗೊಂಡಾಗ ಸ್ಥಳಕ್ಕಾಗಮಿಸಿದ ಕುಶಾಲನಗರ ಆರ್‌ಎಫ್‌ಓ ಎಂ.ಎಸ್.ಚಿಣ್ಣಪ್ಪ, ‘ಅರಣ್ಯ ಹಕ್ಕುಗಳ ಕಾಯ್ದೆಯಂತೆ 2005ರಿಂದೀಚೆಗೆ ಅರಣ್ಯಕ್ಕೆ ಸೇರಿದ ಜಾಗದಲ್ಲಿ ಯಾರೂ ಕೂಡ ಹೊಸದಾಗಿ ಜೋಪಡಿ ನಿರ್ಮಿಸಿ ನೆಲೆಸುವಂತಿಲ್ಲ’ ಎಂದರು. 12 ಕುಟುಂಬಗಳನ್ನು ತೆರವುಗೊಳಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಅರಣ್ಯ ಇಲಾಖೆಯು ಅರಣ್ಯ ಹಕ್ಕುಗಳನ್ನು ಉಲ್ಲಂಘಿ ಸದೆ ಗಿರಿಜನರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ರಾಜು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry