ಅರಣ್ಯ ಒತ್ತುವರಿ ತೆರವಿಗೆ ವಿರೋಧ

7

ಅರಣ್ಯ ಒತ್ತುವರಿ ತೆರವಿಗೆ ವಿರೋಧ

Published:
Updated:

ತೀರ್ಥಹಳ್ಳಿ: ಅರಣ್ಯ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಗಡಿ ಪ್ರದೇಶದ ನಿಷ್ಕರ್ಷೆ ಆಗದೇ ಒಕ್ಕಲೆಬ್ಬಿಸುವುದು ಮೂರ್ಖತನ ಎಂದು  ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕಡ್ಡಾಯ ತೆರವು ಕಾರ್ಯವನ್ನು ಕೈಬಿಡಬೇಕು. ಸರ್ಕಾರಕ್ಕೆ ಅರಣ್ಯ ಮತ್ತು ಕಂದಾಯ ಪ್ರದೇಶದ ಗಡಿಗಳ ಬಗ್ಗೆ ಮಾಹಿತಿಯೇ ಇಲ್ಲ. ಮೊದಲು ಅದನ್ನು  ಸರಿಪಡಿಸುವ ಕೆಲಸ ಆಗಬೇಕು ಎಂದರು.ಬಗರ್‌ಹುಕುಂ ಸಾಗುವಳಿ ಹಾಗೂ ಅರಣ್ಯ ಒತ್ತುವರಿ ತೆರವು ವಿರುದ್ಧ ನಗರ ವಲಯ ಸರ್ವೆ ನಂ.: 75ರಲ್ಲಿ ಅನಾದಿ ಕಾಲದಿಂದ ವಾಸವಿರುವ ಸುಳಗೋಡು ಸರೋಜಮ್ಮ ಅವರ ಮನೆಯನ್ನು ಬಲಾತ್ಕಾರವಾಗಿ ತೆರವುಗೊಳಿಸಲಾಗಿದೆ. ಅಲ್ಲಿಂದಲೇ ಅ. 21ರಂದು ಪಾದಯಾತ್ರೆ ಆರಂಭಸಿ ಅ. 22ರಂದು ತೀರ್ಥಹಳ್ಳಿಯಲ್ಲಿ ಬೃಹತ್ ಸಮಾವೇಶವನ್ನು ನಡೆಸುವುದಾಗಿ ಅವರು ತಿಳಿಸಿದರು.ಆಡಳಿತದಲ್ಲಿ ಗೊಂದಲ ಸೃಷ್ಟಿ ಆಗಿದೆ. ಶೇ 90ರಷ್ಟು ಜನಕ್ಕೆ ಅರಣ್ಯ ಹಕ್ಕು ಕಾಯ್ದೆ ಕುರಿತು ಸರಿಯಾದ ಮಾಹಿತಿಯೇ ಇಲ್ಲ. 1913 ನಂತರ ರಾಜ್ಯದಲ್ಲಿ ಗಡಿ ಗುರುತು ಆಗಿಲ್ಲ. ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೇ ಆಗಬೇಕು ಎಂದು ಹೇಳಿದರು.ಮಲೆನಾಡಿನ 8 ಜಿಲ್ಲೆಗಳಲ್ಲಿ ಸುಪ್ರೀಂ ಕೋರ್ಟಿನ ಆದೇಶದಂತೆ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯದಿಂದ ಜನರಿಗೆ ತೊಂದರೆ ಆಗಿದೆ. ಹಿಂದಿನ ಸರ್ಕಾರಗಳು ತಪ್ಪು ಮಾಡಿವೆ. ಈಗಿನ ಸರ್ಕಾರ ತಪ್ಪು ಮಾಡುತ್ತಲೇ ಇದೆ ಎಂದರು.ಪಾದಯಾತ್ರೆಯನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸುವರು. ಸುಮಾರು 20 ಕಿ.ಮೀ. ಪಾದಯಾತ್ರೆ ರಂಜದಕಟ್ಟೆ ಮೂಲಕ ತೀರ್ಥಹಳ್ಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ತಾಲ್ಲೂಕು ಕಚೇರಿ ಮುಂಭಾಗ ಸಮಾವೇಶಗೊಳ್ಳಲಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ತೀರ್ಥಹಳ್ಳಿ ಹಾಗೂ ಕೋಣಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟಮಕ್ಕಿ ಮಹಾಬಲೇಶ್, ಟಿ.ಎಲ್. ಸುಂದರೇಶ್, ಕೆಪಿಸಿಸಿ ಸದಸ್ಯ ಜಿ.ಎಸ್. ನಾರಾಯಣರಾವ್, ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥ ಜಫ್ರುಲ್ಲಾ ಖಾನ್ ಹಾಜರಿದ್ದರು.ವೈದ್ಯಕೀಯ ಶಿಬಿರ

ತಾಲ್ಲೂಕಿನ ದೂರ ಮತ್ತು ಅತೀ ಹಿಂದುಳಿದ ಪ್ರದೇಶ ವ್ಯಾಪ್ತಿಯ ಗ್ರಾಮಗಳಲ್ಲಿ ಮಾಹಿತಿ, ಶಿಕ್ಷಣ, ಸಂಪರ್ಕ ಹಾಗೂ ವೈದ್ಯಕೀಯ ಶಿಬಿರವನ್ನು ಅ. 19ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.ಬಿದರಗೋಡು, ಹೊನ್ನೇತಾಳು, ನಾಲೂರು, ಆಗುಂಬೆಯಲ್ಲಿ ನಡೆಯಲಿರುವ ಶಿಬಿರದಲ್ಲಿ ತಜ್ಞ ವೈದ್ಯರು ಕಿವಿ, ಮೂಗು, ಗಂಟಲು ವಿಭಾಗ, ಕಣ್ಣಿನ ವಿಭಾಗ, ಚರ್ಮ ಮತ್ತು ಲೈಂಗಿಕ ವಿಭಾಗ, ಸ್ತ್ರೀ ಮತ್ತು ಪ್ರಸೂತಿ ವಿಭಾಗ, ಫಿಜಿಷಿಯನ್ ವಿಭಾಗಗಳಲ್ಲಿ ಆರೋಗ್ಯ ಸಮಸ್ಯೆಗಳಿಗೆ ಸಲಹೆ ಮತ್ತು ಸಾಮಾನ್ಯ ಚಿಕಿತ್ಸೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಆಯುರ್ವೆದ ವಿಭಾಗದಲ್ಲಿ ಕೊಪ್ಪ ಎ.ಎಲ್.ಎನ್. ರಾವ್ ಮೆಮೋರಿಯಲ್ ಆಯುರ್ವೇದಿಕ್ ಕಾಲೇಜು ಆಸ್ಪತ್ರೆಯ ತಂಡ ಆರೋಗ್ಯ ಸಮಸ್ಯೆಗಳಿಗೆ ಸಲಹೆ ಚಿಕಿತ್ಸೆ ನೀಡಲಿದ್ದಾರೆ. ಎಲ್ಲಾ ವಿಭಾಗಗಳ ರೋಗಿಗಳಿಗೆ ಔಷಧಿಗಳ ವಿತರಣೆ ಮಾಡಲಾಗುವುದು.ಶಿಬಿರದಲ್ಲಿ ಗುರುತಿಸಲ್ಪಟ್ಟ ಫಲಾನುಭವಿಗಳಿಗೆ ನಂತರದ ದಿನಗಳಲ್ಲಿ ಉಚಿತವಾಗಿ ಶ್ರವಣ ಸಾಧನಗಳು ಹಾಗೂ ಕನ್ನಡಕಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.ಈ ಪ್ರದೇಶದ ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದು ಕೊಳ್ಳುವಂತೆ ಆರೋಗ್ಯಾಧಿಕಾರಿ ಹಾಗೂ  ಪೊಲೀಸ್ ವೃತ್ತನಿರೀಕ್ಷಕರು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry