ಮಂಗಳವಾರ, ನವೆಂಬರ್ 19, 2019
29 °C

ಅರಣ್ಯ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ

Published:
Updated:

ಚಾಮರಾಜನಗರ: ಜಿಲ್ಲೆಯ ಅರಣ್ಯ ಪ್ರದೇಶ ವ್ಯಾಪ್ತಿಯ ಚೆಕ್‌ಪೋಸ್ಟ್‌ಗಳಲ್ಲಿ ವಿಶೇಷ ತಂಡ ರಚನೆ ಮಾಡುವ ಮೂಲಕ ಚುನಾವಣೆ ನೀತಿಸಂಹಿತೆ ಉಲ್ಲಂಘನೆಯಾಗದಂತೆ ಅರಣ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣೆ ನೀತಿಸಂಹಿತೆ ಪಾಲನೆ ಸಂಬಂಧ ಸೋಮವಾರ ನಡೆದ ಅರಣ್ಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಅಂತರಜಿಲ್ಲೆ ಹಾಗೂ ಅಂತರರಾಜ್ಯವನ್ನು ಸಂಪರ್ಕಿಸುವ ಅರಣ್ಯ ಗಡಿ ಪ್ರದೇಶಗಳಿವೆ. ಇಲ್ಲಿ ಆಮಿಷ ವಸ್ತುಗಳ ಸಾಗಣೆ ಕಂಡುಬಂದರೆ ತಕ್ಷಣ ವಶಪಡಿಸಿಕೊಂಡು ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಬೇಕು ಎಂದು ನಿರ್ದೇಶನ ನೀಡಿದರು.ನೀತಿಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದಕ್ಕಾಗಿ ದಿನದ 24ಗಂಟೆಯೂ ಕಾರ್ಯನಿರತ ಸಿಬ್ಬಂದಿಯನ್ನು ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜಿಸಬೇಕು. ಲಾರಿ, ದ್ವಿಚಕ್ರ ವಾಹನ ಸೇರಿದಂತೆ ಎಲ್ಲ ಬಗೆಯ ವಾಹನಗಳನ್ನು ತಪಾಸಣೆ ಮಾಡಬೇಕು. ಅನುಮಾನಾಸ್ಪದ ಸಾಮಗ್ರಿ ಕೊಂಡೊಯ್ಯುತ್ತಿರುವುದು ಗಮನಕ್ಕೆ ಬಂದರೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಚೆಕ್‌ಪೋಸ್ಟ್‌ಗಳಲ್ಲಿ ನಿರ್ವಹಿಸಲಾಗುತ್ತಿರುವ ಪ್ರತಿದಿನದ ಕಾರ್ಯನಿರ್ವಹಣೆ ಪ್ರಗತಿಯನ್ನು ತಪ್ಪದೆ ತಮಗೆ ವರದಿ ಮಾಡಬೇಕು ಎಂದು ಸೂಚಿಸಿದರು.ಅತಿ ಸೂಕ್ಷ್ಮ ಚೆಕ್‌ಪೋಸ್ಟ್‌ಗಳಲ್ಲಿ ಅರಣ್ಯ ಅಧಿಕಾರಿಗಳು ವಿಶೇಷ ನಿಗಾ ವಹಿಸಬೇಕು. ಮೈಕ್ರೋ ಅಬ್ಸರ್‌ವರ್‌ಗಳನ್ನು ಸಹ ಸೂಕ್ಷ್ಮ ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜಿಸಲಾಗುತ್ತದೆ. ಅಲ್ಲದೆ ಇಲ್ಲಿನ ಚಲನವಲನಗಳ ವೀಡಿಯೋ ಚಿತ್ರೀಕರಣ ಸಹ ಮಾಡಲಾಗುತ್ತದೆ. ಹಿರಿಯ ಅರಣ್ಯಾಧಿಕಾರಿಗಳು ಇಂತಹ ಚೆಕ್‌ಪೋಸ್ಟ್ ಗಳಲ್ಲಿ ಖುದ್ದು ಕಾರ್ಯ ನಿರ್ವಹಿಸಬೇಕು. ಯಾವುದೇ ಲೋಪವಾದರೆ ಚುನಾವಣಾ ಆಯೋಗಕ್ಕೆ ವರದಿ ಮಾಡಲಾಗುವುದು ಎಂದು ಎಚ್ಚರಿಸಿದರು.ಅರಣ್ಯ ವ್ಯಾಪ್ತಿಯ ಗಿರಿಜನರು, ಬುಡಕಟ್ಟು ಇತರೆ ನಿವಾಸಿಗಳಿಗೆ ಮತದಾನದ ಮಹತ್ವ ತಿಳಿಸಿಕೊಡುವ ಕೆಲಸವನ್ನು ಸಹ ಅರಣ್ಯ ಇಲಾಖೆ ಸಿಬ್ಬಂದಿ ಮಾಡಬೇಕು. ಮತದಾನದ ದಿನ ದುರ್ಗಮ ಅರಣ್ಯ ಪ್ರದೇಶಗಳಲ್ಲಿರುವ ಜನತೆ ಮತಗಟ್ಟೆಗಳಿಗೆ ಬರಲು ಅನುಕೂಲವಾಗುವಂತೆ ವಾಹನ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಯಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಅಂಚೆ ಮೂಲಕ ಮತದಾನ ಅವಶ್ಯವಿದ್ದರೆ ಕೂಡಲೇ ಮಾಹಿತಿ ನೀಡಬೇಕು ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್, ಉಪವಿಭಾಗಾಧಿಕಾರಿ ಸತೀಶ್ ಬಾಬು, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಂಕರರಾಜು ಹಾಜರಿದ್ದರು.ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ

ಚಾಮರಾಜನಗರ: `ಪ್ರಜಾಪ್ರಭುತ್ವವನ್ನು ಬಲಗೊಳಿಸುವ ಮತದಾನದ ಪ್ರಮಾಣ ಹೆಚ್ಚಳಕ್ಕೆ ಜಿಲ್ಲೆಯಲ್ಲಿ ಪರಿಣಾಮಕಾರಿ ವಿಧಾನಗಳ ಮೂಲಕ ಸಾರ್ವಜನಿಕರನ್ನು ಜಾಗೃತಿಗೊಳಿಸಬೇಕಿದೆ' ಎಂದು ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಜಾಗೃತಿ ಅಭಿಯಾನ (ಸ್ವೀಪ್) ಕಾರ್ಯಕ್ರಮ ಸಂಬಂಧ ಸೊಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಮತದಾನದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸಕ್ಕೆ ವೇಗ ನೀಡಬೇಕು. ಯುವಜನರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ವಿಶೇಷ ಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿರುವುದು ಇನ್ನಿತರ ಬದಲಾವಣೆ ಗೊಂದಲಗಳನ್ನು ಪರಿಹರಿಸುವ ಕಾರ್ಯವನ್ನು ಅಲ್ಪ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಹಿಳಾ ಸ್ವಸಹಾಯ ಗುಂಪುಗಳನ್ನು ಮತದಾರರ ಜಾಗೃತಿ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಕಾಲೇಜು, ಎನ್‌ಎಸ್‌ಎಸ್ ಘಟಕದ ಸಹಕಾರ ಪಡೆಯಬೇಕು. ವಯಸ್ಕರ ಶಿಕ್ಷಣ ಇಲಾಖೆಯಡಿ ಕಾರ್ಯನಿತರವಾಗಿರುವ ಪ್ರೇರಕರು, ಸ್ವಯಂಸೇವಾ ಸಂಘಸಂಸ್ಥೆಗಳು, ನೆಹರು ಯುವ ಕೇಂದ್ರ, ಯುವಜನ ಸಂಘಟನೆಗಳ ಮನವೊಲಿಸಿ ಮತದಾನದ ಮಹತ್ವವನ್ನು ತಿಳಿಸಿಕೊಡುವ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಈ ಮೂಲಕ ಜಿಲ್ಲೆಯಲ್ಲಿ ಗರಿಷ್ಠ ಮತದಾನವಾಗುವಂತೆ ಉತ್ತೇಜಿಸಬೇಕು ಎಂದು ಸೂಚಿಸಿದರು.ಸೈಕಲ್ ಜಾಥಾ, ಮೇಣದ ಬತ್ತಿ ಮೆರವಣಿಗೆ, ಕಾಲ್ನಡಿಗೆ ಇನ್ನಿತರ ವಿಭಿನ್ನ ಕಾರ್ಯಕ್ರಮಗಳ ಮೂಲಕ  ಮತದಾನ ಜಾಗೃತಿಗೆ ಮುಂದಾಗಬೇಕು. ಪ್ರವಾಸೋದ್ಯಮ ಇಲಾಖೆಯು ತನ್ನ ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿ ಕರಪತ್ರ, ಭಿತ್ತಿಪತ್ರಗಳ ಮೂಲಕ ಅರಿವು ಮೂಡಿಸಬೇಕು. 18 ವರ್ಷ ಮೇಲ್ಪಟ್ಟವರೆಲ್ಲ  ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.ಕಾಲೇಜು ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಉಪನ್ಯಾಸಕರು, ಪ್ರಾಂಶುಪಾಲರು ತಿಳಿವಳಿಕೆ ನೀಡಬೇಕು. ಪ್ರಬಂಧ, ಭಾಷಣ ಸ್ಪರ್ಧೆ ಮೂಲಕ ಮತದಾನದ ಮಹತ್ವವನ್ನು ಸಾರುವ ಕೆಲಸ ಮಾಡಬೇಕು. ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಪ್ರತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸ್ವೀಕರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಸತೀಶ್ ಬಾಬು, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎ.ಪಿ. ಶಂಕರರಾಜು ಹಾಜರಿದ್ದರು.ಚುನಾವಣೆಯಲ್ಲಿ ರೈತ ಸಂಘ ಸ್ಪರ್ಧೆ

ಚಾಮರಾಜನಗರ: ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ಸರ್ವೋದಯ ಕರ್ನಾಟಕ ಪಕ್ಷದ ಹೆಸರಿನಡಿ ಸ್ಪರ್ಧಿಸಲಿದೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದರು.ನಗರದ ಜನನ ಮಂಟಪದ ಕಟ್ಟಡದಲ್ಲಿರುವ ಜಿಲ್ಲಾ ರೈತ ಸಂಘದ ಕಚೇರಿಯಲ್ಲಿ ವಿಧಾನಸಭಾ ಚುನಾವಣೆ ಸಂಬಂಧ ಈಚೆಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ಈ ಬಾರಿ ರಾಜ್ಯ ರೈತ ಸಂಘ ಚುನಾವಣೆಗೆ ಸ್ಪರ್ಧಿಸಲಿದ್ದು, ಸಿಪಿಎಂ, ಬಿಎಸ್‌ಪಿ, ಸಂಯುಕ್ತ ದಳದ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಈಗಾಗಲೇ ಮೇಲುಕೋಟೆ, ಕೋಲಾರ, ಶ್ರೀರಂಗಪಟ್ಟಣದಲ್ಲಿ ಸಂಘದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ಪ್ರಚಾರ ಆರಂಭಿಸಲಾಗಿದೆ ಎಂದು ಹೇಳಿದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ರಾಜ್ಯ ರಾಜಕಾರಣ ಕುಲಗೆಟ್ಟಿದೆ. ಪ್ರಸ್ತುತ ರಾಜಕೀಯ ಕ್ಷೇತ್ರ ಬಂಡವಾಳಶಾಹಿಗಳ ಹಿಡಿತದಲ್ಲಿದೆ. ಇದರಿಂದ ನೈತಿಕ ರಾಜಕಾರಣ ನೆಲೆಕಚ್ಚಿದೆ ಎಂದು ಆರೋಪಿಸಿದರು.ಸಾಮಾಜಿಕ ಬದ್ಧತೆಯೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ರಾಜ್ಯ ರೈತ ಸಂಘವು ಸರ್ವೋದಯ ಕರ್ನಾಟಕ ಪಕ್ಷದಡಿ ಸಾಮಾಜಿಕ ಸೇವಾ ಮನೋಭಾವನೆಯುಳ್ಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದರು.ರಾಜ್ಯ ರೈತ ಸಂಘದ ವರಿಷ್ಠರಾದ ಕೆ.ಎಂ.ಪುಟ್ಟಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಎ.ಎಂ. ಮಹೇಶ್‌ಪ್ರಭು,  ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹೆಗ್ಗವಾಡಿ ಮಹೇಶ್‌ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಜ್ಯೋತಿಗೌಡನಪುರ ಸಿದ್ದರಾಜು, ಜಯಶ್ರೀ, ನಟರಾಜು, ರಾಜಶೇಖರ್, ಸುಂದರ್‌ರಾಜು ಹಾಜರಿದ್ದರು.`ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ'

ಕೊಳ್ಳೇಗಾಲ: ತಾಲ್ಲೂಕಿನ ಹನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಮುಖಂಡ ನಾಗರಾಜು ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನೂರು ಕ್ಷೇತ್ರದಲ್ಲಿ 20 ವರ್ಷಗಳಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸ್ಪಂದಿಸಿದ್ದೇನೆ. ಕ್ಷೇತ್ರದ ಜನತೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಕಣಕ್ಕಿಳಿಯುತ್ತಿದ್ದೇನೆ ಎಂದು ತಿಳಿಸಿದರು.

ಮುಖಂಡ ಉದಯಕುಮಾರ್, ಬಂಗಾರು ಇತರರು ಹಾಜರಿದ್ದರು.`ಪಂಚಾಕ್ಷರಿ ಸ್ಪರ್ಧೆಗೆ ಅವಕಾಶ ಕಲ್ಪಿಸಿ'

ಕೊಳ್ಳೇಗಾಲ: ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಪಂಚಾಕ್ಷರಿ ಅವರಿಗೆ ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು ಎಂದು ಬಾಳಗುಣಸೆ ಮಂಜುನಾಥ್ ಹಾಗೂ ಇತರೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.ಪಂಚಾಕ್ಷರಿ ಅವರು ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದಾರೆ. ವಲಸರಿಗೆ ಆದ್ಯತೆ ನೀಡದೆ ಪಕ್ಷದ ಸಂಘಟನೆಗೆ ಶ್ರಮಿಸುತ್ತಿರುವ ಪಂಚಾಕ್ಷರಿ ಅವರನ್ನೇ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಲಿಖಿತ ಹೇಳಿಕೆಯಲ್ಲಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.ಇಂದಿನಿಂದ ಮತದಾರರ ಜಾಗೃತಿ ಜಾಥಾ

ಚಾಮರಾಜನಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಏ.2 ಮತ್ತು 3ರಂದು ನಗರದಲ್ಲಿ ಮತದಾರರ ಜಾಗೃತಿ ಜಾಥಾ ಹಮ್ಮಿಕೊಂಡಿದ್ದಾರೆ.ಬೆಳಿಗ್ಗೆ 10ಗಂಟೆಗೆ ಕಾಲೇಜಿನಿಂದ ಹೊರಟು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕೆಪಿ ಮೊಹಲ್ಲಾ, ಅಂಬೇಡ್ಕರ್ ಬಡಾವಣೆ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಮಾವೇಶಗೊಳ್ಳಲಿದ್ದಾರೆ. ಬಳಿಕ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮತದಾನ ಪ್ರತಿಜ್ಞಾವಿಧಿ ಸ್ವೀಕಾರ ಇಂದು

ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಏ. 2ರಂದು ಬೆಳಿಗ್ಗೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ, ವರ್ತಕರ ಸಂಘ, ಹೊಟೆಲ್ ಮಾಲೀಕರ ಸಂಘ, ಆಟೊ ಮಾಲೀಕರು ಹಾಗೂ ಚಾಲಕರು ಸಂಘ, ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘ, ಪತಂಜಲಿ ಯೋಗ ಸಂಘ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಘ, ಕಾರ್ಮಿಕರು, ಇತರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದು, ಮತದಾನದ ಪ್ರತಿಜ್ಞಾ ವಿಧಿ ಸ್ವೀಕರಿಸುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)