ಅರಣ್ಯ ನಿರ್ವಹಣೆಗೆ ಹೊಸ ದೃಷ್ಟಿ

7

ಅರಣ್ಯ ನಿರ್ವಹಣೆಗೆ ಹೊಸ ದೃಷ್ಟಿ

Published:
Updated:

ಹವಾಮಾನ ಬದಲಾವಣೆಯು ಅರಣ್ಯಗಳ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ದೇಶದ ಅರಣ್ಯಗಳನ್ನು ಕುರಿತು ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ಐಸಿಎಫ್‌ಆರ್‌ಇ)  ಕೈಗೊಂಡಿರುವ ಅಧ್ಯಯನದಿಂದ ವ್ಯಕ್ತವಾಗಿರುವ ಅಂಶ ಇದು. ಅರಣ್ಯ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಾಗಿದೆ.ಏರಿಕೆಯಾದ ತಾಪಮಾನದಿಂದ ಪಶ್ಚಿಮ ಘಟ್ಟಗಳ್ಲ್ಲಲಿನ ಕುಬ್ಜ ಪ್ರಭೇದದ ಪ್ರಾಣಿಗಳು ತಮ್ಮ ನೆಲೆಯಿಂದ ಸುರಕ್ಷಿತ ಪ್ರದೇಶ ಅರಸಿ ಬೇರೆ ಕಡೆಗೆ ಹೋಗಿವೆ ಎಂಬುದನ್ನೂ ಈ ಅಧ್ಯಯನ ಹೊರಗೆಡಹಿದೆ. ಅರಣ್ಯಗಳಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಬೀಳುವ ಪ್ರಮಾಣ ಕಡಿಮೆಯಾಗುತ್ತಿದೆ. ಅಲ್ಲದೆ ಮಳೆ ಬೀಳುವ ರೀತಿಯಲ್ಲೂ ಬದಲಾವಣೆಗಳು ಕಂಡು ಬಂದಿವೆ. ಜೂನ್, ಜುಲೈ ತಿಂಗಳುಗಳಲ್ಲಿ ಮಳೆ ಪ್ರಮಾಣದಲ್ಲಿ ಕುಸಿತ ಹಾಗೂ ಆಗಸ್ಟ್, ಸೆಪ್ಟೆಂಬರ್ ತಿಂಗಳುಗಳಲ್ಲಿ ಮಳೆ ಪ್ರಮಾಣದಲ್ಲಿ ಹೆಚ್ಚಳವಾಗಿರುವುದನ್ನು ಈ ಅಧ್ಯಯನ ದಾಖಲಿಸಿದೆ. ಫೆಬ್ರುವರಿ ತಿಂಗಳಲ್ಲಿ ಆರಂಭವಾಗಿರುವ ಈ ಅಧ್ಯಯನ 2014ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ.ಅರಣ್ಯ ನಿರ್ವಹಣೆಯ ವ್ಯಾಖ್ಯಾನ ಬದಲಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ.  ಮರಗಳ ರಕ್ಷಣೆಯಷ್ಟೇ ಈಗ ಅರಣ್ಯ ನಿರ್ವಹಣೆಯ ಮುಖ್ಯ ಗುರಿಯಲ್ಲ. ಪರಿಸರ ಸುಧಾರಣೆ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆ ಮಾಡುವಲ್ಲಿ ಅರಣ್ಯಗಳ ಪಾತ್ರದ ಮಹತ್ವವನ್ನು ಈಗ ಹೆಚ್ಚಾಗಿ ನಾವು ಅರಿತುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರದ ಅರಣ್ಯಗಳ ಕುರಿತಾದ ಈ ಅಧ್ಯಯನ ಮಹತ್ವದ್ದು. ರಾಷ್ಟ್ರದ ಶೇಕಡ 20ರಷ್ಟು ಭೂಭಾಗವನ್ನು ಆವರಿಸಿಕೊಂಡಿವೆ ಭಾರತದ ಅರಣ್ಯಗಳು. ಜೈವಿಕ ವೈವಿಧ್ಯಗಳ ಬೀಡು ಇವು.ಅರಣ್ಯ ಅವಲಂಬಿತ ಸಮುದಾಯಗಳ ಜೀವನೋಪಾಯಕ್ಕೂ ಇವು ನೆಲೆಯಾಗಿವೆ. ಹೀಗಾಗಿ ಅರಣ್ಯ ವಲಯದ ಮೇಲೆ ಹವಾಮಾನ ಬದಲಾವಣೆಯ ಪರಿಸರ ಪರಿಣಾಮಗಳನ್ನು ವಿಶ್ಲೇಷಿಸುವುದು ಅತ್ಯಂತ ಅಗತ್ಯ. ಜೊತೆಗೆ  ಸಮುದಾಯಗಳ ಮೇಲೆ ಇವು ಬೀರಬಹುದಾದ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ವಿಶ್ಲೇಷಣೆಗಳೂ ಮುಖ್ಯವಾಗುತ್ತವೆ. ಮಾನವ - ವನ್ಯಮೃಗ ಸಂಘರ್ಷ ಹಾಗೂ ಜೈವಿಕ ದರೋಡೆ (ಬಯೊ ಪೈರಸಿ)ಯಂತಹ ಸಮಸ್ಯೆಗಳ ನಿರ್ವಹಣೆಯೂ ಇಂದು ಆದ್ಯತೆ ಪಡೆಯಬೇಕಾಗಿದೆ. ಇದಕ್ಕಾಗಿ ಪರಿಣಾಮಕಾರಿಯಾದ ಅರಣ್ಯ ನಿರ್ವಹಣಾ ನೀತಿಗಳು ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕಾದ ತುರ್ತು ಇದೆ. ಈ ನಿಟ್ಟಿನ್ಲ್ಲಲ್ಲಿ ಅರಣ್ಯಗಳ ಅಧ್ಯಯನ ಮೊದಲ ಹೆಜ್ಜೆ.   ಭಾರತದಲ್ಲಿರುವ ಅರಣ್ಯಗಳ ಬಗೆಗಳು ಯಾವುವು ಎಂಬುದನ್ನು 1936ರಷ್ಟು ಹಿಂದೆ ವರ್ಗೀಕರಣ ಮಾಡಲಾಗಿತ್ತು. ನಂತರ 1968ರಲ್ಲಿ ಇದನ್ನು ಪರಿಷ್ಕರಿಸಲಾಗಿತ್ತು. ಆದರೆ ಈಗ ಮಾನವಜನ್ಯ ಅಥವಾ ನೈಸರ್ಗಿಕ ಕಾರಣಗಳಿಂದಾಗಿಯೂ ಅನೇಕ ಅರಣ್ಯಗಳ ರೂಪುರೇಷೆಗಳಲ್ಲಿ ವ್ಯಾಪಕ ಬದಲಾವಣೆಗಳಾಗಿವೆ. ಇದು ಅರಣ್ಯಗಳ ದಕ್ಷ ನಿರ್ವಹಣೆಗೆ ಧಕ್ಕೆಯುಂಟುಮಾಡುತ್ತಿದೆ. ಈಗ  ಅರಣ್ಯಗಳ ಕುರಿತಾದ ಈ ಅಧ್ಯಯನ, ಅರಣ್ಯ ನಿರ್ವಹಣೆಯಲ್ಲಿ ಆಗಬೇಕಾದ ಬದಲಾವಣೆಗಳಿಗೆ  ದಿಕ್ಸೂಚಿಯಾಗಬೇಕಾದುದು ಅಗತ್ಯ. ಅರಣ್ಯ ಸಂರಕ್ಷಣೆಗೆ  ರಾಜಕೀಯ ನಾಯಕರ ಬದ್ಧತೆಯೂ ಮುಖ್ಯ. ಅರಣ್ಯ ಪ್ರದೇಶ, ಒಟ್ಟು ಭೂ ಪ್ರದೇಶದ ಸುಮಾರು ಶೇಕಡ 30ರಷ್ಟು ಇರಬೇಕು ಎಂಬಂತಹ ಆದರ್ಶದ ಗುರಿ ತಲುಪಲು ಎಲ್ಲಾ  ನೆಲೆಗಳಲ್ಲೂ ಶ್ರಮಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry