ಅರಣ್ಯ ನೀತಿ: ಗಣಿಗಾರಿಕೆಗೆ ಅಂಕುಶ

ಮಂಗಳವಾರ, ಜೂಲೈ 23, 2019
20 °C

ಅರಣ್ಯ ನೀತಿ: ಗಣಿಗಾರಿಕೆಗೆ ಅಂಕುಶ

Published:
Updated:

ಬೆಂಗಳೂರು: ಅಕ್ರಮ ಗಣಿಗಾರಿಕೆಯಿಂದ ಅರಣ್ಯ ಪ್ರದೇಶಕ್ಕೆ ರಕ್ಷಣೆ ನೀಡುವುದು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅರಣ್ಯ ಪ್ರದೇಶ ಬಳಕೆಯಾಗದಂತೆ ಕಾಪಾಡುವ ಬಗ್ಗೆ ರಾಜ್ಯದ ನೂತನ ಅರಣ್ಯ ನೀತಿ ಒತ್ತು ನೀಡಲಿದೆ. ಅರಣ್ಯ ನೀತಿಯ ಕರಡು ಇನ್ನಷ್ಟೇ ಬಿಡುಗಡೆ ಆಗಬೇಕಿದ್ದು, ಇದರ ಪ್ರತಿ `ಪ್ರಜಾವಾಣಿ~ಗೆ ಲಭ್ಯವಾಗಿದೆ.ಪರಿಸರ ಪ್ರವಾಸೋದ್ಯಮ ಕುರಿತು ಸ್ಪಷ್ಟ ನೀತಿಯೊಂದನ್ನು ಸಿದ್ಧಪಡಿಸುವ ಕುರಿತೂ ಅರಣ್ಯ ನೀತಿ ಗಮನ ಹರಿಸಿದೆ. ಆದರೆ, ಜೈವಿಕ ಸೂಕ್ಷ್ಮ ಪ್ರದೇಶಗಳಾದ ಪಶ್ಚಿಮ ಘಟ್ಟಗಳು ಮತ್ತು ಕರಾವಳಿ ಪ್ರದೇಶದಲ್ಲಿ ಗಣಿಗಾರಿಕೆಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಅರಣ್ಯ ನೀತಿ ಸ್ಪಷ್ಟವಾಗಿ ಏನನ್ನೂ ಹೇಳುವುದಿಲ್ಲ.ಈ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು `ಸಾಧ್ಯವಾದಷ್ಟು ಕಡಿಮೆ~ ಮಾಡಲಾಗುವುದು ಎಂದು ಹೇಳುತ್ತದೆ.

`ಗಣಿಗಾರಿಕೆ ಮತ್ತು ಕ್ವಾರಿ ಚಟುವಟಿಕೆ ನಡೆಸುವಾಗ ಆ ಪ್ರದೇಶದ ಜೈವಿಕ ಸೂಕ್ಷ್ಮತೆಯನ್ನು ಗಮನದಲ್ಲಿರಿಸಿಕೊಳ್ಳಬೇಕು~ ಎಂದು ಅರಣ್ಯ ನೀತಿಯಲ್ಲಿ ಹೇಳಲಾಗಿದೆಯಾದರೂ, ಜೈವಿಕ ಸೂಕ್ಷ್ಮ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಇಲ್ಲವಾಗಿದೆ.ಹೊಸ ಅರಣ್ಯ ಪ್ರದೇಶವನ್ನು ಗಣಿಗಾರಿಕೆಗೆ ಮುಕ್ತವಾಗಿಸುವ ಮೊದಲು ಅಲ್ಲಿಯವರಗೆ ಗಣಿಗಾರಿಕೆ ನಡೆದ ಪ್ರದೇಶಗಳನ್ನು ಸಂಪೂರ್ಣ ಅರಣ್ಯೀಕರಣಕ್ಕೆ ಒಳಪಡಿಸಲಾಗುವುದು. ಗಣಿಗಾರಿಕೆ ಅಥವಾ ಕ್ವಾರಿ ಚಟುವಟಿಕೆ ಅರಣ್ಯ, ಜಲಾನಯನ ಪ್ರದೇಶ ಮತ್ತು ಜನಜೀವನದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಾರದು. ಪ್ರಮಾದವಶಾತ್ ಕೆಟ್ಟ ಪರಿಣಾಮ ಉಂಟಾದಲ್ಲಿ ಗಣಿ ಗುತ್ತಿಗೆ ಪಡೆದವರೇ ಅದಕ್ಕೆ ಪರಿಹಾರ ನೀಡಬೇಕು ಎಂದು ಅರಣ್ಯ ನೀತಿಯಲ್ಲಿ ಹೇಳಲಾಗಿದೆ.ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಗೆ ರಾಜ್ಯದಲ್ಲಿ ವಿಶೇಷ ಯೋಜನೆ ಜಾರಿಯಾಗಬೇಕು, ಇದರ ಜೊತೆಗೇ ಜೈವಿಕ ಸೂಕ್ಷ್ಮ ಪ್ರದೇಶಗಳು ಮತ್ತು ಪ್ರವಾಸೋದ್ಯಮಕ್ಕೆ ಪೂರಕವಾದ ಪ್ರದೇಶಗಳನ್ನು ಸ್ಪಷ್ಟವಾಗಿ ಗುರುತಿಸಬೇಕು ಎಂದು ಕರಡಿನಲ್ಲಿ ಹೇಳಲಾಗಿದೆ. ಪುನರ್ವಸತಿ ಉದ್ದೇಶಕ್ಕಾಗಿ ಯಾವುದೇ ಅರಣ್ಯ ಪ್ರದೇಶವನ್ನೂ ಬಳಸುವಂತಿಲ್ಲ ಎನ್ನಲಾಗಿದೆ.ಅರಣ್ಯ ನೀತಿಯನ್ನು ಉಲ್ಲಂಘಿಸಿದಲ್ಲಿ ಉಗ್ರ ಕ್ರಮ ಕೈಗೊಳ್ಳುವ ಮಾತನಾಡುವ ಈ ನೀತಿ, ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ಆತ ಅತಿಕ್ರಮಿಸಿದ ಭೂಮಿಯ ಬೆಲೆಯನ್ನು ದಂಡದ ರೂಪದಲ್ಲಿ ಪಾವತಿಸುವ ಅವಕಾಶವನ್ನೂ ನೀಡುತ್ತದೆ.ಆದಿವಾಸಿಗಳು: ಅರಣ್ಯದಲ್ಲಿ ನೆಲೆ ಕಂಡುಕೊಂಡಿರುವ ಆದಿವಾಸಿಗಳಿಗೆ ಆಧುನಿಕ ಸೌಲಭ್ಯಗಳಾದ ಆಸ್ಪತ್ರೆ, ಶಿಕ್ಷಣ, ಉದ್ಯೋಗಗಳನ್ನು ಅವರ ಪರಂಪರೆ ಮತ್ತು ಸಂಸ್ಕೃತಿಗೆ ಧಕ್ಕೆಯಾಗದ ರೀತಿಯಲ್ಲಿ ಒದಗಿಸುವ ಭರವಸೆಯನ್ನು ಅರಣ್ಯ ನೀತಿಯಲ್ಲಿ ನೀಡಲಾಗಿದೆ. ಪ್ರತಿ ಆದಿವಾಸಿ ಕುಟುಂಬಗಳ ಕನಿಷ್ಠ ಒಬ್ಬ ವ್ಯಕ್ತಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯೂ ಇದೆ.ಅತಿಕ್ರಮಣ: ಕಾಲಕಾಲಕ್ಕೆ ಅರಣ್ಯ ಸಮೀಕ್ಷೆಗಳನ್ನು ನಡೆಸಿ ಅತಿಕ್ರಮಣ ಆಗದಂತೆ ಗಮನವಹಿಸುವುದು. ಆಧುನಿಕ ತಂತ್ರಜ್ಞಾನ ಬಳಸಿ ಅರಣ್ಯ ನಕ್ಷೆ ಸಿದ್ಧಪಡಿಸುವುದು, ಭದ್ರಾ ಮತ್ತು ಅಣಶಿ ಹುಲಿ ಅಭಯಾರಣ್ಯಗಳನ್ನು ಬಂಡೀಪುರ ಅಭಯಾರಣ್ಯದ ಮಾದರಿಯಲ್ಲೇ ಅಭಿವೃದ್ಧಿಪಡಿಸುವ ಗುರಿಯನ್ನೂ ಅರಣ್ಯ ನೀತಿ ಹೊಂದಿದೆ.ಹಸಿರು ಹೊದಿಕೆ: ರಾಜ್ಯದ ಎಲ್ಲ ನಗರ ಪಾಲಿಕೆಗಳು ನಗರದ ಹಸಿರು ಹೊದಿಕೆ ಹೆಚ್ಚಿಸಲು ತಮ್ಮ ವಾರ್ಷಿಕ ಬಜೆಟ್‌ನಲ್ಲಿ ನಿರ್ದಿಷ್ಟ ಮೊತ್ತವನ್ನು ಮೀಸಲಿಡಲೇಬೇಕು. ಗ್ರಾಮ ಅರಣ್ಯ ಸಮಿತಿಗಳನ್ನು ಬಲಪಡಿಸಿ ಅರಣ್ಯೀಕರಣ ಪ್ರಕ್ರಿಯೆಗೆ ಒತ್ತು ನೀಡಬೇಕು ಎಂದು ಅರಣ್ಯ ನೀತಿ ಹೇಳುತ್ತದೆ.ಅರಣ್ಯ ರಕ್ಷಣೆಯ ಜೊತೆಜೊತೆಗೇ ಗ್ರಾಮದ ಇಂಧನ ಅಗತ್ಯತೆ ಮತ್ತು ದೈನಿಕ ಚಟುವಟಿಕೆಗಳಿಗೆ ಬೇಕಾಗುವ ಅರಣ್ಯ ಉತ್ಪನ್ನಗಳ ಬಗ್ಗೆ ಗ್ರಾಮ ಪಂಚಾಯಿತಿಗಳ ಜೊತೆ ಚರ್ಚಿಸಿ ಪೂರೈಸುವುದು ಗ್ರಾಮ ಅರಣ್ಯ ಸಮಿತಿಗಳ ಜವಾಬ್ದಾರಿ. ಸೂಕ್ತ ಕಾನೂನು ತಂದು ಅಳಿವಿನಂಚಿನಲ್ಲಿರುವ ಶ್ರೀಗಂಧ, ಕೆಲವು ಔಷಧೀಯ ಸಸ್ಯಗಳನ್ನು ಕಾಪಾಡುವ ಅಂಶವನ್ನು ಪ್ರಸ್ತಾಪಿಸಲಾಗಿದೆ.ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅರಣ್ಯ ನೀತಿಯ ಕರಡು ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರವೇ ಇದಕ್ಕೆ ಕಾನೂನಿನ ರೂಪ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry