ಅರಣ್ಯ ಪ್ರದೇಶ ದುರುಪಯೋಗಕ್ಕೆ ಬಿಡಲಾರೆ

7

ಅರಣ್ಯ ಪ್ರದೇಶ ದುರುಪಯೋಗಕ್ಕೆ ಬಿಡಲಾರೆ

Published:
Updated:
ಅರಣ್ಯ ಪ್ರದೇಶ ದುರುಪಯೋಗಕ್ಕೆ ಬಿಡಲಾರೆ

ಕಾವೇರಿ ಜಲ ವಿವಾದಕ್ಕೆ ಕಾಡಿನ ನಾಶವೇ ಕಾರಣ: ಭಾರದ್ವಾಜ್

ಬೆಂಗಳೂರು: `ರಾಜ್ಯದ ಅರಣ್ಯ ಪ್ರದೇಶ ದುರುಪಯೋಗ ಮಾಡಿಕೊಳ್ಳಲು ಯಾರಾದರೂ ಮುಂದಾದರೆ ಯಾವುದೇ ಕಾರಣಕ್ಕೂ ನಾನು ಅದಕ್ಕೆ ಅವಕಾಶ ನೀಡುವುದಿಲ್ಲ~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಗುಡುಗಿದರು.ಅರಣ್ಯ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಜಂಟಿಯಾಗಿ ನಗರದಲ್ಲಿ ಗುರುವಾರ ಏರ್ಪಡಿಸಿದ್ದ 58ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.`ಅರಣ್ಯದ ನಾಶದಿಂದಲೇ ಬಹಳಷ್ಟು ಸಮಸ್ಯೆಗಳು ಉದ್ಭವವಾಗಿದ್ದು, ಕಾವೇರಿ ವಿವಾದಕ್ಕೂ ಮರಗಳ ಸಂಖ್ಯೆ ಕ್ಷೀಣಗೊಂಡಿದ್ದೇ ಕಾರಣವಾಗಿದೆ. ಮರಗಳು ಕಡಿಮೆ ಆಗಿದ್ದರಿಂದ ಕಾವೇರಿ ಪ್ರದೇಶದಲ್ಲಿ ಮಳೆ ಅಭಾವ ಉಂಟಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಜಲ ವಿವಾದ ದೊಡ್ಡದಾಗಿ ಬೆಳೆದಿದೆ~ ಎಂದು  ವಿಶ್ಲೇಷಿಸಿದರು.`ಕಾವೇರಿ ಉಗಮ ಪ್ರದೇಶದಲ್ಲಿ ಇನ್ನುಮುಂದೆ  ಮರ ಕಡಿಯಲು ಅವಕಾಶ ನೀಡಬಾರದು~ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.`ಗಂಗಾ ನದಿ ನೀರನ್ನು ಪವಿತ್ರ ಎನ್ನುತ್ತಲೇ ನಾವು ಅದನ್ನು ಉಪಯೋಗಿಸಿದರೆ ಕ್ಯಾನ್ಸರ್ ಬರುವಷ್ಟು ಮಾಲಿನ್ಯ ಮಾಡಿ ಬಿಟ್ಟಿದ್ದೇವೆ~ ಎಂದು ಹೇಳಿದರು.`ನರಭಕ್ಷಕ ಹುಲಿಗಳನ್ನು ಬೇಟೆಯಾಡಿದ್ದ ಜಿಮ್ ಕಾರ್ಬೆಟ್ ಅವರನ್ನು ನಾನು ಭೇಟಿ ಮಾಡಿದ್ದೆ. ಅವರ ಪರಿಸರ ಕಳಕಳಿ ಅನನ್ಯ. ಕಾಡಿನ ಎಷ್ಟೋ ಕೌತುಕಗಳನ್ನು ನಾನು ಅವರಿಂದ ಕೇಳಿ, ಅವರ ಪುಸ್ತಕಗಳನ್ನು ಓದಿ ತಿಳಿದುಕೊಂಡಿದ್ದೇನೆ. ಕಾಡಿನ ಮೇಲೆ ಪ್ರೀತಿ ಬೆಳೆಸಿಕೊಳ್ಳಲು ಇಂತಹ ಸಾಹಿತ್ಯ ಪೂರಕ~ ಎಂದರು.ರಾಜ್ಯ ವನ್ಯಜೀವಿ ಮಂಡಳಿಯ ಸಹ ಉಪಾಧ್ಯಕ್ಷ ಅನಿಲ್ ಕುಂಬ್ಳೆ ಮಾತನಾಡಿ, `ರಾಜ್ಯದಲ್ಲಿ 1200 ಚದರ ಕಿ.ಮೀ. ಪ್ರದೇಶವನ್ನು ಈ ವರ್ಷ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಪರಿವರ್ತಿಸಲಾಗಿದ್ದು, ದೇಶದಲ್ಲೇ ಇದೊಂದು ದಾಖಲೆ~ ಎಂದು ಹೆಮ್ಮೆಯಿಂದ ಹೇಳಿದರು. `ಅರಣ್ಯ ಸಂರಕ್ಷಣೆ ಮತ್ತು ಆರ್ಥಿಕ ಬೆಳವಣಿಗೆ ಜೊತೆ-ಜೊತೆಗೆ ಹೆಜ್ಜೆ ಹಾಕುವುದು ಕಷ್ಟಸಾಧ್ಯ. ಆದರೆ, ಕಾಡನ್ನು ಉಳಿಸಿಕೊಳ್ಳುವುದೇ ನಮ್ಮ  ಆದ್ಯತೆ ಆಗಬೇಕು~ ಎಂದು ಹೇಳಿದರು.ಶಾಸಕ ದಿನೇಶ್ ಗುಂಡೂರಾವ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಕೆ. ವರ್ಮಾ, ದೀಪಕ್‌ಶರ್ಮಾ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್. ಶ್ರೀಧರನ್, ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಕಾರ್ಯದರ್ಶಿ ಮೋಹನ್ ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry