ಮಂಗಳವಾರ, ಮೇ 11, 2021
25 °C

ಅರಣ್ಯ ಭೂಮಿ ಒತ್ತುವರಿ: 10ರಂದು ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನೇಕ ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಹಾಗೂ ಮನೆಗಳನ್ನು ಕಟ್ಟಿಕೊಂಡಿರುವವರನ್ನು ಒಕ್ಕಲೆಬ್ಬಿಸುತ್ತಿರುವ ಪ್ರಕರಣ ಸಂಬಂಧ ಚರ್ಚಿಸಲು ಸೋಮವಾರ ಜನಪ್ರತಿನಿಧಿಗಳ ಸಭೆ ಕರೆಯಲಾಗುವುದು ಎಂದು ಅರಣ್ಯ ಸಚಿವ ರಮಾನಾಥ ರೈ ಬುಧವಾರ ವಿಧಾನಸಭೆಯಲ್ಲಿ ಹೇಳಿದರು.ಶೂನ್ಯ ವೇಳೆಯಲ್ಲಿ ಸಾಗುವಳಿ ಭೂಮಿ ತೆರವು ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಗೋವಿಂದ ಕಾರಜೋಳ, ಸಿ.ಟಿ.ರವಿ, ಡಿ.ಎನ್.ಜೀವರಾಜ್, ಜೆಡಿಎಸ್‌ನ ವೈ.ಎಸ್.ವಿ.ದತ್ತ, ಬಿ.ಬಿ.ನಿಂಗಯ್ಯ ಮೊದಲಾದವರು ಗುರುವಾರದ (ಜೂನ್ 6) ಒಳಗೆ ಸಾಗುವಳಿ ಭೂಮಿ ತೆರವಿಗೆ ನೋಟಿಸ್ ನೀಡಲಾಗಿದೆ. ಇದು ಸರಿಯಲ್ಲ. ಇದನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.`ಇದೊಂದು ವಿಶಿಷ್ಟವಾದ ಪ್ರಶ್ನೆ. ಎಲ್ಲ ಕಡೆ ಈ ಸಮಸ್ಯೆ ಇದೆ. ಇದಕ್ಕೆ ಬೇರೆ ಬೇರೆ ಆಯಾಮಗಳಿವೆ. ಬಹಳಷ್ಟು ಸದಸ್ಯರಿಗೆ ಸಮಸ್ಯೆ ಬಗ್ಗೆ ಮೂಲತಃ ಅರಿವಿಲ್ಲ. ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತಿದ್ದೇವೆ. ಅರಣ್ಯಭೂಮಿ ಸಾಗುವಳಿ ಮಾಡುತ್ತಿರುವ ಪ್ರದೇಶದ ಜನಪ್ರತಿನಿಧಿಗಳ ಸಭೆ ಕರೆಯಿರಿ' ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸಲಹೆ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ರಮಾನಾಥ ರೈ, `ಸೋಮವಾರ ಸಭೆ ಕರೆಯಲಾಗುವುದು. ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೇ ಮಾಡಿರುವ ಕುರಿತು ಯೋಚಿಸಲಾಗುವುದು. ಬಡವರ ಬಗ್ಗೆ ನಮಗೂ ಕಾಳಜಿ ಇದೆ. ಅವರಿಗೆ ತೊಂದರೆಯನ್ನುಂಟು ಮಾಡುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪರಿಹಾರ ಕಂಡುಕೊಳ್ಳಲಾಗುವುದು' ಎಂದು ಭರವಸೆ ನೀಡಿದರು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಾಗುವಳಿ ಭೂಮಿ ತೆರವುಗೊಳಿಸಲಾಗುತ್ತಿದೆ. ಕೃಷಿಕರಿಗೆ ತೊಂದರೆ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.