ಅರಣ್ಯ ಸಿಬ್ಬಂದಿ ಸನ್ನದ್ಧ ಜನ ಜಾಗೃತಿಗೆ ಕ್ರಮ

7

ಅರಣ್ಯ ಸಿಬ್ಬಂದಿ ಸನ್ನದ್ಧ ಜನ ಜಾಗೃತಿಗೆ ಕ್ರಮ

Published:
Updated:

*ಕಾಡು ಪ್ರಾಣಿಗಳು ನಾಡಿಗೆ ಬರಲು ಪ್ರಮುಖ ಕಾರಣಗಳೇನು?

ಇದಕ್ಕೆ ಅನೇಕ ಕಾರಣಗಳಿವೆ. ರಕ್ಷಿತಾರಣ್ಯದ ಸುತ್ತಮುತ್ತ ಖಾಲಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿರುವುದು, ಕಾಡಿನ ಹೊರವಲಯದಲ್ಲಿ ಮರಗಳ ನಾಶ, ಕಾಡಿನ ಪಕ್ಕದ ಜಮೀನಿನಲ್ಲಿ ಕಬ್ಬು, ಬಾಳೆ ಮುಂತಾದ ಬೆಳೆಗಳನ್ನು ಬೆಳೆಸುವುದು, ಆನೆ ಕಾರಿಡಾರಿನ ಪಕ್ಕದಲ್ಲಿ ಕಾಫಿ ಎಸ್ಟೇಟ್‌, ತೋಟಗಳನ್ನು ಮಾಡುವುದು, ಕಾಡಿನ ಮಧ್ಯೆ ಬೃಹತ್‌ ಅಣೆಕಟ್ಟುಗಳು, ನಾಲೆಗಳು, ವಿದ್ಯುತ್‌ ಸ್ಥಾವರಗಳ ನಿರ್ಮಾಣ, ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಕಾಡಿನ ನಡುವೆ ರಸ್ತೆ, ಕಟ್ಟಡಗಳ ನಿರ್ಮಾಣ. ರೆಸಾರ್ಟ್‌ಗಳನ್ನು ಸ್ಥಾಪಿಸುವುದು, ತ್ಯಾಜ್ಯಗಳನ್ನು ಕಾಡಿನ ಅಂಚಿನಲ್ಲಿ ಸುರಿಯುವುದು ಮುಂತಾದ ಚಟುವಟಿಕೆಗಳು ಪ್ರಾಣಿಗಳು ನಾಡಿಗೆ ಬರಲು ಪ್ರಮುಖ ಕಾರಣ.*ನಾಡಿಗೆ ಬರುವ ಪ್ರಾಣಿಗಳ ಸಾವಿಗೆ ಪ್ರಮುಖ ಕಾರಣವೇನು?

ನಾಡಿಗೆ ಬಂದ ಪ್ರಾಣಿಗಳು ಇಂಥದ್ದೇ ಕಾರಣದಿಂದ ಸಾಯುತ್ತಿವೆ ಎಂದು ಹೇಳಲು ಸಾಧ್ಯವಿಲ್ಲ. ಆದರೂ ವಿದ್ಯುತ್‌ ಸ್ಪರ್ಶ, ಹಳ್ಳಗಳಿಗೆ ಬೀಳುವುದು, ವಿಷಪ್ರಾಶನ, ರೈತರು ಪ್ರಾಣಿಗಳಿಂದ ಬೆಳೆ ರಕ್ಷಣೆಗೆಂದು ಅಳವಡಿಸುವ ಸಾಧನಗಳು, ಕಾಡಿನ ನಡುವೆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಿಲುಕುವುದು ಪ್ರಮುಖ ಕಾರಣಗಳು.*ಯಾವ ಪ್ರಾಣಿಗಳು ಹೆಚ್ಚಾಗಿ ನಾಡಿಗೆ ಬರುತ್ತಿವೆ?

ಕರ್ನಾಟಕದಲ್ಲಿ ಹೆಚ್ಚಾಗಿ ಆನೆಗಳು ನಾಡಿಗೆ ಬರುತ್ತಿವೆ. ಇನ್ನು ಚಿರತೆ, ಕರಡಿ, ಹುಲಿಗಳೂ ಅಲ್ಲಲ್ಲಿ ಬರುತ್ತಿವೆ. ರಕ್ಷಿತಾರಣ್ಯಗಳ ಸುತ್ತಲಿನ ಪ್ರದೇಶದಲ್ಲಿಯೇ ಈ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ.*ಪ್ರಾಣಿಗಳು ನಾಡಿಗೆ ಬಾರದಂತೆ ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?

ವನ್ಯಪ್ರಾಣಿಗಳು ಅರಣ್ಯ ಪ್ರದೇಶದಿಂದ ಪಕ್ಕದ ಕೃಷಿ ಭೂಮಿಗೆ  ಬರುವುದನ್ನು ತಡೆಯಲು ಸೂಕ್ಷ್ಮ ಪ್ರದೇಶಗಳ ಅರಣ್ಯದ ಅಂಚಿನಲ್ಲಿ ಕಾಡಾನೆ ನಿರೋಧಕ ಕಂದಕ ಮತ್ತು ಸೌರಶಕ್ತಿ ಬೇಲಿ ನಿರ್ಮಿಸಲಾಗುತ್ತಿದೆ.  ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ, ಹಾವಳಿ ನಡೆಸುವ ಕಾಡಾನೆಗಳನ್ನು ಪುನಃ ಕಾಡಿಗೆ ಹಿಮ್ಮೆಟ್ಟಿಸುವ ಸಲುವಾಗಿ ಕಾಡಾನೆ ತಡೆ ತಂಡಗಳನ್ನು ರಚಿಸಲಾಗಿದೆ.ಪ್ರತಿ ತಂಡದಲ್ಲೂ ಸ್ಥಳೀಯರ ಜೊತೆಗೆ ನಾಲ್ವರು ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಿಬ್ಬಂದಿಗೆ ವಾಕಿಟಾಕಿ, ಗನ್ ಹಾಗೂ ವಾಹನಗಳ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ವನ್ಯಜೀವಿ ಹಾವಳಿ ಹೆಚ್ಚಾಗಿ ಕಂಡುಬರುವ ಸೂಕ್ಷ್ಮ ಪ್ರದೇಶಗಳಲ್ಲಿ ಅವಶ್ಯಕತೆಗನುಗುಣವಾಗಿ ‘ಕ್ಷಿಪ್ರ ಪ್ರತಿಕ್ರಿಯಾ ಪಡೆ’ಗಳನ್ನು ರಚಿಸಲಾಗಿದೆ.ವನ್ಯಜೀವಿಗಳ ದಾಳಿ ಸಮಯದಲ್ಲಿ ಏನು ಮಾಡಬೇಕು ಮತ್ತು ಮಾಡಬಾರದು ಎಂಬ ಬಗ್ಗೆ ಸಾರ್ವಜನಿಕರಿಗೆ ಸೂಚನಾ ಫಲಕ,  ಸಭೆ ನಡೆಸುವ ಮುಖಾಂತರ ಜಾಗೃತಿ ಮೂಡಿಸಲಾಗುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ನೀರಿನ ಸೌಕರ್ಯವನ್ನು ಸತತವಾಗಿ ಒದಗಿಸಿ, ವನ್ಯಪ್ರಾಣಿಗಳ ಆವಾಸ ಸ್ಥಾನವನ್ನು ಅಭಿವೃದ್ಧಿಗೊಳಿಸ­ಲಾಗುತ್ತಿದೆ. ಪ್ರಾಣಿಗಳಿಗೆ ವರ್ಷವಿಡೀ ಕುಡಿಯುವ ನೀರು ದೊರಕುವಂತೆ ರಕ್ಷಿತಾರಣ್ಯಗಳಲ್ಲಿ ಕೆರೆಗಳ ಹೂಳು ತೆಗೆಯುವುದು, ಚೆಕ್‌ಡ್ಯಾಮ್, ನಾಲಾಬಂದಿ ಇತ್ಯಾದಿ ಕೆಲಸಗಳನ್ನು  ನಿರ್ವಹಿಸಲಾಗುತ್ತಿದೆ.*ಕಾಡು ಪ್ರಾಣಿಗಳ ದಾಳಿಯಿಂದ ಮೃತರಾದವರ ಕುಟುಂಬದವರಿಗೆ ನೀಡುವ ಪರಿಹಾರವೆಷ್ಟು?

ಮೃತ ವ್ಯಕ್ತಿಯು ಅರಣ್ಯ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರಲಿಲ್ಲ ಹಾಗೂ ವನ್ಯಪ್ರಾಣಿಯಿಂದಲೇ ಸಾವು ಸಂಭವಿಸಿದೆ ಎಂಬುದು  ದೃಢಪಟ್ಟರೆ ವಾರಸುದಾರರಿಗೆ ₨ ೫ ಲಕ್ಷ ಪರಿಹಾರ ನೀಡಲಾಗುತ್ತಿದೆ.  ಹಿಂದೆ ಈ ಮೊತ್ತ ₨೩.೫೦ ಲಕ್ಷ ಇತ್ತು.*ಕಾಡುಪ್ರಾಣಿ ಹಾವಳಿ ಕಂಡುಬಂದಾಗ ಇಲಾಖೆಯನ್ನು ಸಂಪರ್ಕಿಸುವ ವ್ಯವಸ್ಥೆ ಹೇಗೆ?

ತುರ್ತು ಸಂದರ್ಭದಲ್ಲಿ ಕೂಡಲೇ ಕ್ರಮ ಕೈಗೊಳ್ಳಲು ದಿನದ ೨೪ ಗಂಟೆಗಳೂ ಸೇವೆ ಒದಗಿಸುವ ಶುಲ್ಕರಹಿತ ಸೇವಾ ಸಂಖ್ಯೆ ೧೮೦೦೪೨೫೧೩೧೪ನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry