`ಅರಬ್ಬಿ ಕಲ್ಯಾಣಂ'ಗೆ ಅಮಾಯಕ ಯುವತಿಯರ ಬಲಿ

7
ರಾಜ್ಯ ವಾರ್ತಾಪತ್ರ ಕೇರಳ

`ಅರಬ್ಬಿ ಕಲ್ಯಾಣಂ'ಗೆ ಅಮಾಯಕ ಯುವತಿಯರ ಬಲಿ

Published:
Updated:

ತಿರುವನಂತಪುರ (ಪಿಟಿಐ):  ಬಹುಕೋಟಿ ಸೌರಫಲಕ ಹಗರಣ ತಣ್ಣಗಾಗುತ್ತಲೇ  `ಅರಬ್ಬಿ ಕಲ್ಯಾಣಂ' ಎಂಬ ಹೊಸ ಸಾಮಾಜಿಕ ಅನಿಷ್ಟ ಪದ್ಧತಿಯೊಂದು ಕೇರಳದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ.ಹಣದ ಆಸೆ, ಆಮಿಷಗಳಿಗಾಗಿ 18 ವರ್ಷ ತುಂಬದ ಬಡ, ನಿರ್ಗತಿಕ ಮತ್ತು ಅಸಹಾಯಕ ಬಾಲಕಿಯರನ್ನು ಬಲವಂತವಾಗಿ ಅರಬ್ ರಾಷ್ಟ್ರಗಳ ಶ್ರೀಮಂತರಿಗೆ ಮದುವೆ ಮಾಡಿಕೊಡಲಾಗುತ್ತಿದೆ. `ಅರಬ್ಬಿ ಕಲ್ಯಾಣಂ' (ಅರಬ್ ವ್ಯಕ್ತಿಯೊಡನೆ ವಿವಾಹ) ಎಂದು ಕುಖ್ಯಾತವಾಗಿರುವ ಇಂಥ ಮದುವೆಗಳಿಗೆ ಅರಬ್ ರಾಷ್ಟ್ರಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕೇರಳ ಹುಲುಸಾದ ನೆಲ ಎನಿಸಿದೆ.ಕೊಯಿಕ್ಕೋಡ್‌ನ ಅನಾಥಾಶ್ರಮದ 17 ವರ್ಷದ ಯುವತಿಯನ್ನು ಸೌದಿ ಯುವಕನೊಬ್ಬನಿಗೆ ಮದುವೆ ಮಾಡಿದ ಪ್ರಕರಣ ಇಡೀ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಎರಡು ವಾರ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಸೌದಿ ಪ್ರಜೆ ಅವಳಿಗೆ ದೂರವಾಣಿಯಲ್ಲಿಯೇ ಮೂರು ಬಾರಿ `ತಲಾಖ್' (ವಿಚ್ಛೇದನ) ನೀಡಿ ಪಲಾಯನ ಮಾಡಿದ್ದ.

 

ದೇಶದಲ್ಲಿಯೇ ಅತಿ ಹೆಚ್ಚು ಸಾಕ್ಷರತೆಯ ಪ್ರಮಾಣ ಮತ್ತು ಹೆಚ್ಚು ಸುಶಿಕ್ಷಿತ ಮಹಿಳೆಯರನ್ನು ಹೊಂದಿರುವ ರಾಜ್ಯ ಎಂಬ ಖ್ಯಾತಿಯ ರಾಜ್ಯದ ಮಹಿಳೆಯರೇ ಇಂಥ ಅನಿಷ್ಟ ಪದ್ಧತಿಯೊಂದಕ್ಕೆ ಬಲಿಯಾಗುತ್ತಿರುವುದು ಆತಂಕ ಮೂಡಿಸಿದೆ. ಕೇವಲ ಬಡ ಅಲ್ಪಸಂಖ್ಯಾತ ವರ್ಗದ ಯುವತಿಯರು ಮಾತ್ರವಲ್ಲ, ಹಿಂದುಳಿದ ಬುಡಕಟ್ಟು ಜನಾಂಗದ ಮಹಿಳೆಯರೂ ಈ `ಗಡಿಯಾಚೆಗಿನ ವಿವಾಹ'ಗಳಿಗೆ ಬಲವಂತವಾಗಿ ಕೊರಳೊಡ್ಡುತ್ತಿದ್ದಾರೆ.ಮದುವೆಯಾಗಲು ಬರುವ ವರನ ಮೂಲಸ್ಥಾನದ ಮೇಲೆ ಇಂಥ ಮದುವೆಗಳನ್ನು `ಅರಬ್ಬಿ ಕಲ್ಯಾಣಂ' `ಮೈಸೂರು ಕಲ್ಯಾಣಂ' `ಮಲೈ ಕಲ್ಯಾಣಂ' ಎಂಬ ವೈವಿಧ್ಯಮಯ ಹೆಸರುಗಳಿಂದ ಕರೆಯಲಾಗುತ್ತಿದೆ. ಇಂಥ ಮದುವೆಗಳಿಗೆ ವಧುವಿನ ಒಪ್ಪಿಗೆ ಕಡ್ಡಾಯವಾಗಿ ಬೇಕಾಗಿಲ್ಲ. ವಧುವಿನ ಬಡ ಪೋಷಕರು ಒಪ್ಪಿದರೆ ಸಾಕು. ವಧು ಚಿಕ್ಕವಳಾಗಿರಬೇಕು. ಆದರೆ, ವರನಿಗೆ ವಯಸ್ಸಿನ ನಿರ್ಬಂಧವಿಲ್ಲ. 20ರ ಹುಡುಗರಿಂದ 70 ವರ್ಷದ  ಮುದುಕರೂ ಇಲ್ಲಿ ಮದುವೆಯ ಗಂಡುಗಳೇ!`ಅರಬ್ಬಿ ಕಲ್ಯಾಣಂ' ಹಾವಳಿ ಜೋರಾಗಿರುವ ಕೊಯಿಕ್ಕೋಡ್, ಮಲಪ್ಪುರಂ, ಕಣ್ಣೂರು, ತ್ರಿಶೂರ್, ಕಾಸರಗೋಡು ಮತ್ತು ತಿರುವನಂತಪುರ ಇಂಥ ಮದುವೆಗಳಿಗೆ ಚಿಟಿಕೆ ಹೊಡೆಯುವುದರಲ್ಲಿ ಸೂಕ್ತ `ವಧು'ಗಳು ದೊರೆಯುವ ದೊಡ್ಡ ಮಾರುಕಟ್ಟೆಗಳಾಗಿ ಬದಲಾಗಿವೆ. ದಲ್ಲಾಳಿಗಳ ದೊಡ್ಡ ದಂಡು ಈ ಭಾಗಗಳಲ್ಲಿ  ಹುಟ್ಟಿಕೊಂಡಿದ್ದು, ಈ  ಮದುವೆಗಳು ಅವರಿಗೆ ಲಕ್ಷಾಂತರ ರೂಪಾಯಿ ಲಾಭ ತಂದುಕೊಡುತ್ತಿವೆ.ಸದಾ ಹೆಣ್ಣು ಹೆತ್ತ ಬಡ ಪೋಷಕರ ಶೋಧದಲ್ಲಿರುವ ಈ ದಲ್ಲಾಳಿಗಳು ಬೀಸುವ ಬಲೆಗೆ ಅಸಹಾಯಕ ಪೋಷಕರು ಸುಲಭವಾಗಿ ಬೀಳುತ್ತಾರೆ. ಸ್ಥಳೀಯ ವರಗಳ ಭಾರಿ ವರದಕ್ಷಿಣೆ, ಉಡುಗೊರೆಗಳ ಬೇಡಿಕೆ ಪೂರೈಸಲಾಗದ ಪೋಷಕರು ಈ ವಿದೇಶಿ ಅತಿಥಿ ವರಗಳು ಒಡ್ಡುವ ಭಾರಿ ಉಡುಗೊರೆ, ಕೈತುಂಬಾ ಹಣ, ಒಡವೆಗಳ ಆಮಿಷಕ್ಕೆ ಮನಸೋಲುತ್ತಾರೆ. ಏನನ್ನೂ ಯೋಚಿಸದೆ ಅವರಿಗೆ ತಮ್ಮ ಮಕ್ಕಳನ್ನು ಒಪ್ಪಿಸುತ್ತಾರೆ. ವಧುವಿನ ಬಂಧುಗಳು, ಕೆಲವೊಮ್ಮೆ ಸಮುದಾಯದ ಮುಖಂಡರು ಸಾಕ್ಷಿಯಾಗಿರುತ್ತಾರೆ.ಒಂದು ತಿಂಗಳ ಅವಧಿಗೆ ಇಲ್ಲಿಗೆ ಬರುವ ಕೊಲ್ಲಿ ರಾಷ್ಟ್ರಗಳ ವರಗಳು ಮದುವೆ ಎಂಬ ಶಾಸ್ತ್ರ ಮುಗಿದ ತಕ್ಷಣ ವಧುವನ್ನು ಮಧುಚಂದ್ರಕ್ಕೆ ಕರೆದೊಯ್ಯುತ್ತಾರೆ. ವಾರ ಅಥವಾ ಒಂದು ತಿಂಗಳಲ್ಲಿ ಮಧುಚಂದ್ರ ಮುಗಿಸಿ ಪತ್ನಿಯನ್ನು ತವರಿನಲ್ಲಿ ಬಿಟ್ಟು ಕೊಲ್ಲಿಗೆ ಮರಳುತ್ತಾರೆ. ಅತ್ತ ಮಧು ಹೀರಿದ ದುಂಬಿ ಮತ್ತೆಂದೂ ಮುಖ ತೋರಿಸದೆ ದೂರದ ಊರಿಗೆ ಹಾರಿ ಹೋದರೆ, ಇತ್ತ ಹದಿಹರೆಯದ ಅಮಾಯಕ ಯುವತಿ ಜೀವನಪೂರ್ಣ ಕಣ್ಣೀರಲ್ಲಿ ಕೈತೊಳೆಯುತ್ತಾ ವಿಧವೆಯಂತೆ ದಿನ ದೂಡುತ್ತಾಳೆ.ಅನೇಕ ಸ್ವಯಂಸೇವಾ ಸಂಸ್ಥೆಗಳು ಈ ಸಾಮಾಜಿಕ ಅನಿಷ್ಟದ ವಿರುದ್ಧ ಹೋರಾಟ ನಡೆಸುತ್ತಿವೆಯಾದರೂ, ಸಂಪೂರ್ಣವಾಗಿ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಬಡತನ, ಅನಕ್ಷರತೆ, ಅನಿವಾರ್ಯತೆ, ಸಾಮಾಜಿಕ ಹಿನ್ನೆಲೆ, ವರದಕ್ಷಿಣೆಯ ಅಟ್ಟಹಾಸ ಮತ್ತು ಕಾನೂನಿನಲ್ಲಿರುವ ಲೋಪದೋಷಗಳು `ಅರಬ್ಬಿ ಕಲ್ಯಾಣಂ' ಇಷ್ಟು ಪ್ರಮಾಣದಲ್ಲಿ ನಡೆಯಲು ಕಾರಣ ಎನ್ನುವುದು ಮಹಿಳಾ ಹಕ್ಕುಗಳ ಹೋರಾಟಗಾರ ವಿ.ಪಿ. ಝಹಾರಾ ಅಭಿಪ್ರಾಯ.60 ಮತ್ತು 70ರ ದಶಕದಿಂದಲೇ ಈ ಅನಿಷ್ಟ ಪದ್ಧತಿ ರಾಜ್ಯದಲ್ಲಿ ಜಾರಿಯಲ್ಲಿದೆ. ವ್ಯವಸ್ಥಿತವಾಗಿ ನಡೆಯುವ ಇಂಥ ಮದುವೆಗಳು ಬೆಳಕಿಗೆ ಬರುವುದು ಅಲ್ಲೊಂದು, ಇಲ್ಲೊಂದು ಮಾತ್ರ. ಅನ್ಯಾಯಕ್ಕೊಳಗಾದ ಬಹುತೇಕ ಮಹಿಳೆಯರು ಸಾರ್ವಜನಿಕವಾಗಿ ತಮಗಾದ ನೋವನ್ನು ತೋಡಿಕೊಳ್ಳಲು ಹಿಂದೇಟು ಹಾಕುತ್ತಾರೆ. ಈ ಕುರಿತು ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ ಝಹರಾ.ಕೇರಳದ ಉತ್ತರದ ಭಾಗದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಮೈಸೂರು ಜಿಲ್ಲೆಯ ಅನೇಕರು ಇಲ್ಲಿಯ ಯುವತಿಯರನ್ನು ಮದುವೆಯಾಗಿ ತಮ್ಮಂದಿಗೆ ಕರೆದೊಯ್ಯುತ್ತಾರೆ. `ಮೈಸೂರು ಕಲ್ಯಾಣಂ' ಎಂದು ಕರೆಯಲಾಗುವ ಈ ಮದುವೆಗಳು `ಅರಬ್ಬಿ ಕಲ್ಯಾಣಂ'ಗಿಂತ ಹೆಚ್ಚು ಕಾಲ ಬಾಳುತ್ತವೆಯಾದರೂ ಕೆಲವು ದಿನಗಳ ನಂತರ ಯುವತಿಯರನ್ನು ಮನೆಯಿಂದ ಹೊರ ಹಾಕಲಾಗುತ್ತದೆ.`ಮಲೈ ಕಲ್ಯಾಣಂ' ಎಂದು ಕರೆಯಲಾಗುವ ಮಾಲ್ಡೀವ್ಸ್ ಪ್ರಜೆಗಳೊಂದಿಗಿನ ಮದುವೆ ಜೀವಿತಾವಧಿ ಕೂಡ ಅತ್ಯಲ್ಪ. ಚಿಕಿತ್ಸೆ ಹಾಗೂ ಇನ್ನಿತರ ಕಾರಣಗಳಿಗಾಗಿ ಕೇರಳಕ್ಕೆ ಬರುವ ಮಾಲ್ಡೀವ್ಸ್ ಪ್ರಜೆಗಳು ಇಲ್ಲಿರುವ ವಾರ ಅಥವಾ ಎರಡು ವಾರಕ್ಕೆ ಸ್ಥಳೀಯ ಯುವತಿಯರನ್ನು ಮದುವೆಯಾಗುತ್ತಾರೆ. ಅವರು ಇಲ್ಲಿರುವಷ್ಟು ದಿನ ಯುವತಿಯೊಂದಿಗೆ ಕಾಲ ಕಳೆದು ಮರಳುತ್ತಾರೆ. ಅಲ್ಲಿಗೆ ಆ ಮದುವೆ ಕೊನೆಗೊಳ್ಳುತ್ತದೆ. ರಾಜ್ಯ ಮಹಿಳಾ ಆಯೋಗದ ಅಧ್ಯಯನ ವರದಿಯ ಅನ್ವಯ `ಮೈಸೂರು ಕಲ್ಯಾಣಂ'ವಿವಾಹ ಬಂಧನಕ್ಕೆ ಒಳಗಾದ 9 ಸಾವಿರ ಯುವತಿಯರಲ್ಲಿ 2500 ಯುವತಿಯರು ನಿರಾಶ್ರಿತರಾಗಿದ್ದು, 300 ಜನ ನಾಪತ್ತೆಯಾಗಿದ್ದಾರೆ.`ಮೈಸೂರು ಕಲ್ಯಾಣಂ'ನಂತೆ `ಹರಿಯಾಣ ಕಲ್ಯಾಣಂ' ಮತ್ತು `ತಮಿಳುನಾಡು ಕಲ್ಯಾಣಂ' ಕೂಡಾ ಅಲ್ಲಲ್ಲಿ ನಡೆಯುತ್ತಿವೆ. ಖಾದಿಜಾ ಮುಮ್ತಾಜ್ ಅವರಂತಹ ಲೇಖಕಿಯರೂ ಈ ಮದುವೆಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಜಾಗೃತಿಯ ಜೊತೆ ಕಠಿಣ ಕಾನೂನು ಕ್ರಮದಿಂದ ರಾಜ್ಯಕ್ಕೆ ಅಂಟಿರುವ ಕಳಂಕವನ್ನು ತೊಡೆದು ಹಾಕಬಹುದು ಎನ್ನುವುದು ಅವರ ಆಶಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry