ಅರಮನೆ ಅಂಗಳಕ್ಕೆ ಯೋಗ ದಸರಾ

7

ಅರಮನೆ ಅಂಗಳಕ್ಕೆ ಯೋಗ ದಸರಾ

Published:
Updated:

ಮೈಸೂರು: ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ನಡೆಯುತ್ತಿದ್ದ ಯೋಗ ದಸರಾ ಇದೇ ಮೊದಲ ಬಾರಿಗೆ ಅರಮನೆ ಅಂಗಳಕ್ಕೆ ಲಗ್ಗೆ ಇಟ್ಟಿದೆ.ಅ.20 ರಂದು ಬೆಳಿಗ್ಗೆ 6.30ಕ್ಕೆ 1500 ಯೋಗಾ ಪಟುಗಳು ಸಾಮೂಹಿಕ ಸೂರ್ಯ ನಮಸ್ಕಾರ ಮಾಡುವ ಮೂಲಕ ಯೋಗ ದಸರಾ ಚಾಲನೆ ಪಡೆಯಲಿದೆ. ಎಸ್. ಎ.ಆರ್.ಪ್ರಸನ್ನ ವೆಂಕಟಚಾರ್ಯರು ಉದ್ಘಾಟನೆ ಮಾಡಲಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಭಾಗವಹಿಸಲಿದ್ದಾರೆ. ಮೇಯರ್ ಎಂ.ಸಿ.ರಾಜೇಶ್ವರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ದಸರಾ ಯೋಗ ಉಪ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎನ್.ನಾಗೇಶ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಯೋಗ ದಸರಾ ಅಂಗವಾಗಿ ಉಪನ್ಯಾಸ ಮಾಲಿಕೆ, ಪ್ರಾತ್ಯಕ್ಷಿಕೆ, ಯೋಗ ಸಪ್ತಾಹ ಸೇರಿದಂತೆ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳಿಗಾಗಿ ಅ.12 ರಿಂದ 18ರ ವರೆಗೆ ಯೋಗ ವಿಕಸನ- ಉಪನ್ಯಾಸ ಮಾಲೆ ಆರಂಭವಾಗಿದೆ. ಪ್ರತಿದಿನ ಬೆಳಿಗ್ಗೆ 9.30 ರಿಂದ 1.30ರ ವರೆಗೆ ಜೆಎಸ್‌ಎಸ್ ಪಾಲಿಟೆಕ್ನಿಕ್, ಜೆಎಸ್‌ಎಸ್ ಪದವಿ ಕಾಲೇಜು, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಮಹಾಜನ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿವೆ. ಹಿರಿಯ ನಾಗರಿಕರಿಗಾಗಿ ಬಾಪೂಜಿ ವೃದ್ಧಾಶ್ರಮದಲ್ಲಿ ಯೋಗ ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ ಎಂದು ವಿವರಿಸಿದರು.ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಯೋಗ ಜ್ಞಾನ ವಿಕಸನ ಶಿಬಿರವನ್ನು ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪ ದಲ್ಲಿ ಅ.15ರಂದು ಬೆಳಿಗ್ಗೆ 9.30ರಿಂದ 1.30ರ ವರೆಗೆ ಏರ್ಪ ಡಿಸಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ವಚನಾನಂದ ಸ್ವಾಮೀಜಿ, ಡಾ.ಕೆ.ರಾಘವೇಂದ್ರ ಪೈ ಉಪನ್ಯಾಸ ನೀಡಲಿದ್ದಾರೆ. ಅದೇ ದಿನ ಬೆಳಿಗ್ಗೆ 7ರಿಂದ 8ರ ವರೆಗೆ ಪೌರಕಾರ್ಮಿಕರಿಗಾಗಿ ಯೋಗ ಪ್ರಾತ್ಯಕ್ಷಿಕೆ ಶಿಬಿರ ಆಯೋಜಿಸಲಾಗಿದೆ. ಅ.16 ರಿಂದ 22ರ ವರೆಗೆ ಯೋಗ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಕೈದಿಗಳಿಗಾಗಿ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಪ್ರತಿ ದಿನ ಬೆಳಿಗ್ಗೆ 7.30 ರಿಂದ 8.30ರ ವರೆಗೆ ಯೋಗ ಶಿಬಿರ ನಡೆಯಲಿದೆ ಎಂದರು.ದಸರಾ ಯೋಗ ಉಪ ಸಮಿತಿಯ ಅಧ್ಯಕ್ಷ ವಚನಾನಂದ ಸ್ವಾಮೀಜಿ, ಉಪಾಧ್ಯಕ್ಷರಾದ ಮಮತಾ ಕದಮ್, ಗಣೇಶ್ ಕುಮಾರ್, ರವಿಶಂಕರ್, ಧನ್ಯಕುಮಾರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry