ಅರಮನೆ ನಗರಿಯಲ್ಲಿ `ಕಿತ್ತಳೆ' ನಾಡಿನ ಕ್ರಿಕೆಟಿಗರು

7
ಉತ್ತಮ ಪ್ರದರ್ಶನದ ಗುರಿ: ಸಾಯಿರಾಜ್

ಅರಮನೆ ನಗರಿಯಲ್ಲಿ `ಕಿತ್ತಳೆ' ನಾಡಿನ ಕ್ರಿಕೆಟಿಗರು

Published:
Updated:

ಮೈಸೂರು: `ಕಿತ್ತಳೆ ಹಣ್ಣಿನ ಬೀಡು' ವಿದರ್ಭ ಕ್ರಿಕೆಟ್ ತಂಡವು ಬುಧವಾರ ಬೆಳಗಿನ ಜಾವ ನಾಲ್ಕು ಗಂಟೆಗೆ `ಅರಮನೆ ನಗರಿ'ಗೆ ಬಂದಿಳಿದಿದೆ.ಡಿಸೆಂಬರ್ 15 ರಿಂದ 18ರವರೆಗೆ ಇಲ್ಲಿಯ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ `ಬಿ' ಗುಂಪಿನ ಆರನೇ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ವಿದರ್ಭ ಆಡಲಿದೆ. ಆಟಗಾರರು ಗುರುವಾರದಿಂದ ಅಭ್ಯಾಸ ಆರಂಭಿಸಲಿದ್ದಾರೆ.2001ರಲ್ಲಿ ಭಾರತದ ಟೆಸ್ಟ್ ಮತ್ತು ಏಕದಿನ  ತಂಡಗಳಲ್ಲಿ ಆಡಿದ್ದ ಸಾಯಿರಾಜ್ ಬಹುತುಳೆ ನಾಯಕ ಮತ್ತು ತರಬೇತುದಾರರಾಗಿರುವ ತಂಡ ಇದು. ಎರಡು ಟೆಸ್ಟ್ ಮತ್ತು ಎಂಟು ಏಕದಿನ ಪಂದ್ಯಗಳನ್ನು ಆಡಿರುವ ಎಡಗೈ ಬ್ಯಾಟ್ಸ್‌ಮನ್ ಮತ್ತು ಲೆಗ್‌ಸ್ಪಿನ್ನರ್ ಸಾಯಿರಾಜ್ 185 ಪ್ರಥಮ ದರ್ಜೆ ಪಂದ್ಯಗಳಿಂದ 629 ವಿಕೆಟ್‌ಗಳನ್ನು ಗಳಿಸಿದ್ದಾರೆ.ಪ್ರಸಕ್ತ ಋತುವಿನ ಐದು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದು ಮತ್ತು ನಾಲ್ಕು ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ವಿದರ್ಭ ಅಂಕಗಳ ಪಟ್ಟಿಯಲ್ಲಿ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಮಂಗಳವಾರ ನಾಗಪುರದಲ್ಲಿ ಉತ್ತರ ಪ್ರದೇಶ ವಿರುದ್ಧದ ಪಂದ್ಯ `ಸಮ' ಮಾಡಿಕೊಂಡ ಸಮಾಧಾನದಲ್ಲಿದ್ದ ಸಾಯಿರಾಜ್ `ಪ್ರಜಾವಾಣಿ'ಯೊಂದಿಗೆ ಮಾತನಾಡಿದರು.ಪ್ರಸಕ್ತ ರಣಜಿ ಋತುವಿನಲ್ಲಿ ಗೆಲುವಿನೊಂದಿಗೆ ಆರಂಭಿಸಿದ್ದ ವಿದರ್ಭ ತಂಡದ ಪ್ರದರ್ಶನ ನಂತರದ ಪಂದ್ಯಗಳಲ್ಲಿ ಕಡಿಮೆಯಾಗಲು ಕಾರಣವೇನು?

ಮೊದಲ ಪಂದ್ಯದಲ್ಲಿ ನಮ್ಮಂದಿಗೆ ಉಮೇಶ್ ಯಾದವ್ ಇದ್ದರು. ನಂತರದ ಪಂದ್ಯಗಳಲ್ಲಿ ಅವರ ಸೇವೆ ತಂಡಕ್ಕೆ ಲಭ್ಯವಾಗಲಿಲ್ಲ. ಅವರೀಗ ಗಾಯಗೊಂಡಿರುವುದರಿಂದ ಮುಂದಿನ ಪಂದ್ಯಗಳಿಗೂ ಅವರು ಲಭ್ಯರಾಗುವುದಿಲ್ಲ. ಆದರೆ ಕಳೆದ ಐದು ಪಂದ್ಯಗಳಲ್ಲಿ ಯಾವುದನ್ನೂ ಸೋತಿಲ್ಲ ಎನ್ನುವುದು ಮುಖ್ಯ.ವಿದರ್ಭದ ಸಾಮರ್ಥ್ಯದ ಬಗ್ಗೆ.

ತಂಡದಲ್ಲಿ ಹೇಮಂಗ್ ಬದಾನಿ, ಶಿವಸುಂದರ್ ದಾಸ್ ಅವರಂತಹ ಹಿರಿಯ ಆಟಗಾರರಿದ್ದಾರೆ. ಬರೋಡಾ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ್ದ ಬದಾನಿ, ಕಳೆದ ಐದು ಪಂದ್ಯಗಳಲ್ಲಿ ಒಟ್ಟು 16 ವಿಕೆಟ್ ಗಳಿಸಿರುವ ಯುವ ಬೌಲರ್ ಶ್ರೀಕಾಂತ್ ವಾಘ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ವಾಘ್ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಯುವ ಮತ್ತು ಅನುಭವಿ ಆಟಗಾರರಿಂದ ಕೂಡಿದ ತಂಡ ನಮ್ಮದಾಗಿದೆ.ಕರ್ನಾಟಕ ತಂಡ ಕುರಿತು?

ಕರ್ನಾಟಕ ತಂಡವು ಯಾವಾಗಲೂ ಉತ್ತಮವಾಗಿಯೇ ಇದೆ. ಕಳೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಉತ್ತಮ ಬೌಲರ್‌ಗಳು ತಂಡದಲ್ಲಿದ್ದಾರೆ. ಅನುಭವಿ ಬ್ಯಾಟಿಂಗ್ ಪಡೆಯೂ ಅವರಲ್ಲಿದೆ. ಇದೆಲ್ಲದರ ಜೊತೆಗೆ ತವರು ನೆಲದಲ್ಲಿಯೇ ಆಡುತ್ತಿರುವ ಮನೋಬಲವೂ ಅವರಲ್ಲಿರುತ್ತದೆ. ಆದ್ದರಿಂದ ನಾವೂ ಕೂಡ ಉತ್ತಮ ಪೈಪೋಟಿ ನೀಡಲು ಸಿದ್ಧರಾಗಿದ್ದೇವೆ.ಮೈಸೂರು ಭೇಟಿಯ ಕುರಿತು.

ನಾವು ಪ್ರಥಮ ಬಾರಿಗೆ ಮೈಸೂರಿಗೆ ಬಂದಿದ್ದೇವೆ. ಗುರುವಾರದಿಂದ ಅಭ್ಯಾಸ ಆರಂಭಿಸುತ್ತೇವೆ. ಇವತ್ತು ಮಧ್ಯಾಹ್ನದವರೆಗೂ ಎಲ್ಲ ಆಟಗಾರರೂ ಹೋಟೆಲ್‌ನಲ್ಲಿಯೇ ವಿಶ್ರಾಂತಿ ಪಡೆದರು. ಆರಂಭಿಕ ಬ್ಯಾಟ್ಸ್‌ಮನ್ ಫಯಾಜ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹೇಮಂಗ್ ಬದಾನಿ, ಶಿವಸುಂದರ್ ದಾಸ್, ಶ್ರೀಕಾಂತ್ ವಾಘ್ ಮಾತ್ರ ಮಧ್ಯಾಹ್ನ ಮೈಸೂರು ಸುತ್ತಾಡಿಕೊಂಡು ಬಂದಿದ್ದಾರೆ. ಇಲ್ಲಿಯ ಅರಮನೆಯ ದೀಪಾಲಂಕಾರ ನೋಡುವ ಆಸೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry