ಶುಕ್ರವಾರ, ಫೆಬ್ರವರಿ 26, 2021
26 °C

ಅರಮನೆ ನಗರಿಯಲ್ಲಿ ಗೆದ್ದ ರಾಯಲ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಮನೆ ನಗರಿಯಲ್ಲಿ ಗೆದ್ದ ರಾಯಲ್ಸ್

ಜೈಪುರ (ಪಿಟಿಐ): ಬ್ರಾಡ್ ಹಾಡ್ಜ್ ಹಾಗೂ ಅಶೋಕ್ ಮೆನಾರಿಯ ಅವರ ಬ್ಯಾಟಿಂಗ್ ಬಲ. ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್‌ಮನ್‌ಗಳ ವೈಫಲ್ಯ. ಈ ಎರಡು ಅಂಶಗಳು ರಾಜಸ್ತಾನ ರಾಯಲ್ಸ್ ತಂಡದ ಗೆಲುವಿಗೆ ಕಾರಣವಾದವು. ಇದರಿಂದ ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ಸ್ ತಂಡ ತವರು ನೆಲದಲ್ಲಿಯೇ ಮತ್ತೊಂದು ಗೆಲುವು ಸಾಧಿಸಿತು.ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರಾಯಲ್ಸ್ ತಂಡ 22 ರನ್‌ಗಳ ಗೆಲುವು ಪಡೆಯಿತು. ಮೊದಲ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯದಿಂದ ಕೋಲ್ಕತ್ತ ತಂಡ ಡೆಲ್ಲಿ ಡೇರ್‌ಡೆವಿಲ್ಸ್ ಎದುರು ಸೋಲು ಕಂಡಿತ್ತು.ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ, ರಾಯಲ್ಸ್ ನಿಗದಿತ ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. ಈ ಮೊತ್ತವನ್ನು ಮುಟ್ಟುವಲ್ಲಿ ಚಡಪಡಿಸಿದ ಗಂಭೀರ್ ಪಡೆ 20 ಓವರ್‌ಗಳಾಗುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 142 ರನ್ ಮಾತ್ರ ಕಲೆ ಹಾಕುವಲ್ಲಿ ಶಕ್ತವಾಯಿತು.165 ರನ್‌ಗಳ ಗುರಿ ಮುಟ್ಟಲು ಪರದಾಡಿದ ಕೋಲ್ಕತ್ತ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಜಾಕ್ ಕಾಲಿಸ್ (5), ಬ್ರೆಂಡನ್ ಮೆಕ್ಲಮ್ (2) ಹಾಗೂ ನಾಯಕ ಗೌತಮ್ ಗಂಭೀರ್ (0) ಅವರು ಬೇಗನೇ ಔಟಾದರು. ಮೂರು ವಿಕೆಟ್‌ಗಳು ಪತನವಾದಾಗ ಈ ತಂಡದ ಮೊತ್ತ ಕೇವಲ ಎಂಟು.100 ರನ್‌ಗಳ ಗಡಿ ಮುಟ್ಟುವುದೇ ದೊಡ್ಡ ಸವಾಲು ಎನಿಸಿದಾಗ ಮನೋಜ್ ತಿವಾರಿ (59, 49ಎಸೆತ, 7ಬೌಂಡರಿ) ನೆರವಾದರು. ಈ ಆಟಗಾರನ ಜೊತೆ ಸೇರಿದ ಯೂಸುಫ್ ಪಠಾಣ್ ನಾಲ್ಕನೇ ವಿಕೆಟ್‌ಗೆ 41 ರನ್‌ಗಳನ್ನು ಕಲೆ ಹಾಕಿದರು. ಆಗ ತಂಡ ಚೇತರಿಕೆ ಹಾದಿ ಹಿಡಿದು ರನ್ ಗಳಿಕೆಗೆ ಮುಂದಾಯಿತು. ತಿವಾರಿ ಅಗತ್ಯಕ್ಕೆ ತಕ್ಕಂತೆ ಚೆಂಡನ್ನು ಲೀಲಾಜಾಲವಾಗಿ ಬಾರಿಸುತ್ತಿದ್ದರೆ, ಕ್ರೀಸ್‌ನ ಇನ್ನೊಂದು ಬದಿಯಿದ್ದ ಬ್ಯಾಟ್ಸ್‌ಮನ್‌ಗಳು ಒಬ್ಬೊಬ್ಬರಾಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದರು. ಸಿದ್ಧಾರ್ಥ ತ್ರಿವೇದಿ ಎಸೆತದಲ್ಲಿ ಪಠಾಣ್ ವಿಕೆಟ್ ಒಪ್ಪಿಸಿದರು. ನಂತರ ಬಂದ ಬ್ರೆಟ್ ಲೀ (25, 11ಎಸೆತ, 2ಬೌಂಡರಿ, 2 ಸಿಕ್ಸರ್) ಸಿಡಿಸಿ ಗೆಲುವಿನ ಆಸೆಯನ್ನು ಚಿಗುರಿಸಿದರು. ಕೆವೊನ್ ಕೂಪರ್ ಎಸೆತದಲ್ಲಿ ಲೀ ಬೌಲ್ಡ್ ಆಗುತ್ತಿದ್ದಂತೆ ಕೋಲ್ಕತ್ತ ತಂಡದ ಗೆಲುವಿನ ಆಸೆ ಅಸ್ತಮಿಸಿತು.ರಾಯಲ್ಸ್‌ನ ಅಂಕಿತ್ ಚವ್ಹಾಣ್ (23ಕ್ಕೆ2), ಅಮಿತ್ ಸಿಂಗ್ (30ಕ್ಕೆ2), ಕೂಪರ್ (28ಕ್ಕೆ3) ಹಾಗೂ ಸಿದ್ಧಾರ್ಥ ತ್ರಿವೇದಿ (25ಕ್ಕೆ2) ಅವರ ಸಮರ್ಥವಾದ ಬೌಲಿಂಗ್ ದಾಳಿ ಕೋಲ್ಕತ್ತದ ತಂಡದ ಗೆಲುವಿನ ಕನಸನ್ನು ನುಚ್ಚು ನೂರು ಮಾಡಿತು.ಆರಂಭಿಕ ಸಂಕಷ್ಟ: ರಾಯಲ್ಸ್ ತಂಡದ ಅಜಿಂಕ್ಯ ರಹಾನೆ ಈ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ `ಹೀರೋ~ ಆಗಿದ್ದ ರಹಾನೆ ಕೋಲ್ಕತ್ತ ಎದುರು `ಸೊನ್ನೆ~ ಸುತ್ತಿದರು. ಆದ್ದರಿಂದ ಈ ತಂಡ ಆರಂಭಿಕ ಸಂಕಷ್ಟ ಅನುಭವಿಸಿತು.ಕರ್ನಾಟಕದ ಕ್ರಿಕೆಟಿಗ ರಾಹುಲ್ ದ್ರಾವಿಡ್ 24 ಎಸೆತಗಳಲ್ಲಿ ಎರಡು ಬೌಂಡರಿ, ಎರಡು ಸಿಕ್ಸರ್ ಸೇರಿದಂತೆ 26 ರನ್ ಗಳಿಸಿ ರನ್‌ಔಟ್ ಬಲೆಗೆ ಬಿದ್ದರು. ಕೊಂಚ ಹೊತ್ತು ಕ್ರೀಸ್‌ಗೆ ಕಚ್ಚಿಕೊಂಡು ನಿಂತಿದ್ದ ಅಶೋಕ್ ಮೆನಾರಿಯ (40, 30ಎಸೆತ, 4ಬೌಂಡರಿ, 1 ಸಿಕ್ಸರ್) ಹಾಗೂ ಬ್ರಾಡ್ ಹಾಡ್ಜ್ ನಾಲ್ಕನೇ ವಿಕೆಟ್‌ಗೆ 64 ರನ್‌ಗಳನ್ನು ಕಲೆ ಹಾಕಿದರು. ಕೇವಲ 29 ಎಸೆತಗಳನ್ನು ಎದುರಿಸಿದ ಹಾಡ್ಜ್ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದಂತೆ 44 ರನ್ ಗಳಿಸಿದರು. ಆಗಲೇ ರಾಯಲ್ಸ್ ತಂಡದ ಮೊತ್ತ 150ರ ಗಡಿ ದಾಟಿತು.ಆರಂಭದಲ್ಲಿ ವಿಕೆಟ್ ಪಡೆದು ಕೊಂಚ ಹಿಡಿತ ಸಾಧಿಸಿದ್ದ ಕೋಲ್ಕತ್ತ ನಂತರ ಹಿಡಿತ ಸಡಿಲಿಸಿತು. ವೇಗವಾಗಿ ರನ್ ಕಲೆ ಹಾಕಲು ಯತ್ನಿಸುತ್ತಿದ್ದ ಹಾಡ್ಜ್ ಅವರಿಗೆ ಬ್ರೆಟ್ ಲೀ ಪೆಟ್ಟು ನೀಡಿದರು. ಅವರು ಔಟಾಗುವ ವೇಳೆಗೆ ತಂಡದ ಮೊತ್ತ 152. ಕೊನೆಯಲ್ಲಿ ಬಂದ ಒವೇಸ್ ಶಾ 11 ಎಸೆತಗಳಲ್ಲಿ 23 ರನ್ ಸಿಡಿಸಿದರು. ಇದರಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದೆ. ಕೋಲ್ಕತ್ತ ತಂಡದ ಜಾಕ್ ಕಾಲಿಸ್ (35), ಸುನಿಲ್ ನರೇನ್ (29) ಹಾಗೂ ಯೂಸುಫ್ ಪಠಾಣ್ (2 ಓವರ್‌ಗೆ 28) ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದರು.

ಸ್ಕೋರ್ ವಿವರ:

ರಾಜಸ್ತಾನ ರಾಯಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 164

ರಾಹುಲ್ ದ್ರಾವಿಡ್ ರನ್‌ಔಟ್ (ಇಕ್ಬಾಲ್ ಅಬ್ದುಲ್ಲಾ/ರಜತ್ ಭಾಟಿಯಾ)  26

ಅಜಿಂಕ್ಯ ರಹಾನೆ ರನ್‌ಔಟ್ (ಗೌತಮ್ ಗಂಭೀರ್)  00

ಶ್ರೀವತ್ಸ ಗೋಸ್ವಾಮಿ ಬಿ ರಜತ್ ಭಾಟಿಯಾ  23

ಅಶೋಕ್ ಮೆನಾರಿಯ ಬಿ ಬ್ರೆಟ್ ಲೀ  40

ಬ್ರಾಡ್ ಹಾಡ್ಜ್ ಸಿ ಬ್ರೆಂಡನ್ ಮೆಕ್ಲಮ್ ಬಿ ಬ್ರೆಟ್ ಲೀ  44

ಒವೇಸ್ ಶಾ ಔಟಾಗದೆ  23

ಕೆವೊನ್ ಕೂಪರ್ ಔಟಾಗದೆ  05

ಇತರೆ: (ವೈಡ್-2, ನೋ ಬಾಲ್-1)  03

ವಿಕೆಟ್ ಪತನ: 1-1 (ರಹಾನೆ;1.3), 2-44 (ದ್ರಾವಿಡ್; 6.4), 3-61 (ಗೋಸ್ವಾಮಿ; 8.4), 4-125 (ಹಾಡ್ಜ್; 16.1), 5-152 (ಮೆನಾರಿಯ; 18.4).

ಬೌಲಿಂಗ್: ಬ್ರೆಟ್ ಲೀ 4-0-29-2, ಜಾಕ್ ಕಾಲಿಸ್ 4-0-35-0, ಸುನಿಲ್ ನರೇನ್ 4-0-29-0, ಇಕ್ಬಾಲ್ ಅಬ್ದುಲ್ಲಾ 2-0-16-0, ರಜತ್ ಭಾಟಿಯಾ 4-0-27-1, ಯೂಸುಫ್ ಪಠಾಣ್ 2-0-28-0.

ಕೋಲ್ಕತ್ತ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 142

ಜಾಕ್ ಕಾಲಿಸ್ ಸಿ ರಾಹುಲ್ ದ್ರಾವಿಡ್ ಬಿ ಅಮಿತ್ ಸಿಂಗ್ 05

ಬ್ರೆಂಡನ್ ಮೆಕ್ಲಮ್ ಎಲ್‌ಬಿಡಬ್ಲ್ಯು ಬಿ ಅಂಕಿತ್ ಚವ್ಹಾಣ್ 02

ಗೌತಮ್ ಗಂಭೀರ್ ಸಿ ಗೋಸ್ವಾಮಿ ಬಿ ಅಮಿತ್ ಸಿಂಗ್  00

ಮನೋಜ್ ತಿವಾರಿ ಬಿ ಜಾನ್ ಬೋಥಾ  59

ದೇವವ್ರತ್ ದಾಸ್ ಬಿ ಕೆವೊನ್ ಕೂಪರ್  12

ಯೂಸುಫ್ ಪಠಾಣ್ ಸಿ ಹಾಡ್ಜ್ ಬಿ ಸಿದ್ಧಾರ್ಥ ತ್ರಿವೇದಿ  15

ರಜತ್ ಭಾಟಿಯಾ ಸಿ ಮತ್ತು ಬಿ ಸಿದ್ಧಾರ್ಥ ತ್ರಿವೇದಿ  08

ಲಕ್ಷ್ಮಿ ರತನ್ ಶುಕ್ಲಾ ಸಿ ಒವೇಸ್ ಶಾ ಬಿ ಅಂಕಿತ್ ಚವ್ಹಾಣ್  08

ಬ್ರೆಟ್ ಲೀ ಬಿ ಕೆವೊನ್ ಕೂಪರ್  25

ಸುನಿಲ್ ನರೇನ್ ಬಿ ಕೆವೊನ್ ಕೂಪರ್  00

ಇಕ್ಬಾಲ್ ಅಬ್ದುಲ್ಲಾ ಔಟಾಗದೆ  01

ಇತರೆ: (ಬೈ-1, ಲೆಗ್ ಬೈ-1,ವೈಡ್-5)  07

ವಿಕೆಟ್ ಪತನ: 1-8 (ಕಾಲಿಸ್; 1.5), 2-8 (ಗಂಭೀರ್; 1.6), 3-8 (ಮೆಕ್ಲಮ್; 2.1), 4-25 (ದಾಸ್; 5.4), 5-66 (ಪಠಾಣ್; 10.2), 6-77 (ಭಾಟಿಯಾ; 12.2), 7-94 (ಶುಕ್ಲಾ; 14.4), 8-132 (ಲೀ; 18.2), 9-132 (ಸುನಿಲ್; 18.3), 10-142 (ತಿವಾರಿ; 19.6).

ಬೌಲಿಂಗ್: ಅಂಕಿತ್ ಚವ್ಹಾಣ್ 4-0-23-2, ಅಮಿತ್ ಸಿಂಗ್ 4-0-30-2, ಕೆವೊನ್ ಕೂಪರ್ 4-0-28-3, ಸಿದ್ಧಾರ್ಥ ತ್ರಿವೇದಿ 4-1-25-2, ಜಾನ್ ಬೋಥಾ 4-0-34-1.

ಫಲಿತಾಂಶ: ರಾಜಸ್ತಾನ ರಾಯಲ್ಸ್‌ಗೆ 22 ರನ್ ಗೆಲುವು

ಪಂದ್ಯ ಶ್ರೇಷ್ಠ: ಬ್ರಾಡ್ ಹಾಡ್ಜ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.