ಶುಕ್ರವಾರ, ಮೇ 14, 2021
31 °C

ಅರಮನೆ ಮೈದಾನದಲ್ಲಿ ಪುಸ್ತಕ ಪ್ರಪಂಚ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಹಣ ತೆಗೆದುಕೊಳ್ಳುವುದು ಮಾತ್ರವೇ ಭ್ರಷ್ಟಾಚಾರವಲ್ಲ. ವಿದ್ಯಾರ್ಥಿಗಳಿಗೆ ಬೋಧಕರು ಸರಿಯಾಗಿ ಪಾಠ ಮಾಡದಿರುವುದು ಮತ್ತು ಬೋಧನೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದದಿರುವುದೂ ಒಂದು ರೀತಿಯ ಭ್ರಷ್ಟಾಚಾರವೇ~ ಎಂದು ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ನುಡಿದರು.ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಇಂಡ್ಯಾ ಕಾಮಿಕ್ಸ್ ಜಂಟಿಯಾಗಿ ನಗರದ ಅರಮನೆ ಮೈದಾನದಲ್ಲಿ ಶುಕ್ರವಾರದಿಂದ 10 ದಿನಗಳವರೆಗೆ ಏರ್ಪಡಿಸಿದ `ಪುಸ್ತಕ ಪ್ರಪಂಚ~ ಪುಸ್ತಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.`ಪ್ರಾಧ್ಯಾಪಕರಲ್ಲಿ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ. ಆದರೆ ಸಂಬಳ ಹೆಚ್ಚುತ್ತಿದೆ. ಗ್ರಂಥಾಲಯಗಳಿಗೆ ನಿತ್ಯ ಹೋಗದ ಪ್ರಾಧ್ಯಾಪಕರ ವೇತನ ಹೆಚ್ಚಳವನ್ನು ತಡೆಹಿಡಿಯಬೇಕು~ ಎಂದು ಸಲಹೆ ನೀಡಿದರು.`ಹಿಂದೆ ಹಲವು ರಾಜಕಾರಣಿಗಳು ರಾಜಕೀಯ ಕಾರಣಕ್ಕಾಗಿ ಜೈಲಿಗೆ ಹೋಗುತ್ತಿದ್ದರು. ಹಾಗೆ ಹೋಗುವವರ ಘನತೆಯೂ ಹೆಚ್ಚುತ್ತಿತ್ತು. ಆದರೆ ಇದೀಗ ಭ್ರಷ್ಟಾಚಾರದ ಆರೋಪದ ಮೇಲೆ ರಾಜಕಾರಣಿಗಳು ಜೈಲು ಸೇರುತ್ತಿದ್ದಾರೆ~ ಎಂದು ವ್ಯಂಗ್ಯವಾಡಿದರು.ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಮಾತನಾಡಿ, `1947ಕ್ಕೂ ಮೊದಲು ಕನ್ನಡದಲ್ಲಿ ಕೇವಲ 100ರಿಂದ 200 ಪುಸ್ತಕಗಳು ಪ್ರಕಟವಾಗುತ್ತಿದ್ದವು. ಆದರೆ ಈಗ ಪ್ರತಿವರ್ಷ 4 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಪುಸ್ತಕಗಳ ಬೆಲೆ ಹೆಚ್ಚಳವಾಗಿದ್ದರೂ ಓದುವ ಸಂಸ್ಕೃತಿ ಕಡಿಮೆಯಾಗಿಲ್ಲ. ನಗರ ಪ್ರದೇಶಗಳಲ್ಲದೇ ಗ್ರಾಮೀಣ ಪ್ರದೇಶದವರೂ ಪುಸ್ತ ಓದುವ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದಾರೆ~ ಎಂದು ಹೇಳಿದರು.ಸಚಿವ ಡಾ.ವಿ.ಎಸ್.ಆಚಾರ್ಯ ಮಾತನಾಡಿ, `ವಿಶ್ವವಿದ್ಯಾಲಯವೊಂದು 250 ಮಾರಾಟ ಮಳಿಗೆಗಳನ್ನು ಹೊಂದಿದ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಿರುವುದು ಶ್ಲಾಘನೀಯ. ಇತರ ವಿ.ವಿ.ಗಳೂ ಇಂಥ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಪುಸ್ತಕ ಪ್ರಕಟಿಸಲು ಅಸಾಧ್ಯವಾದ ಲೇಖಕರನ್ನು ಪ್ರೋತ್ಸಾಹಿಸಲು ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಹಲವಾರು ಪ್ರೋತ್ಸಾಹಕ ಕ್ರಮಗಳನ್ನು ಕೈಗೊಂಡಿದೆ~ ಎಂದರು.ಬೆಂಗಳೂರು ವಿ.ವಿ.ಕುಲಪತಿ ಡಾ.ಎನ್.ಪ್ರಭುದೇವ್, `ಈ ಮೇಳದಲ್ಲಿ ವಿ.ವಿ.ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿ ಎಂಬ ಉದ್ದೇಶದಿಂದ ದಿನಾಲು 60 ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪ್ರಾಂಶುಪಾಲರು ಈ ಮೇಳದಲ್ಲಿ ಭಾಗವಹಿಸಬೇಕು ಎಂಬ ಸೂಚಿಸಲಾಗಿದೆ. 10 ದಿನಗಳಲ್ಲಿ 600 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವಂತಾಗುತ್ತದೆ. ಪುಸ್ತಕ ಕೊಳ್ಳುವ ಕಾಲೇಜುಗಳಿಗೆ ರಿಯಾಯಿತಿಯನ್ನೂ ನೀಡಲಾಗುತ್ತಿದೆ. ವಿ.ವಿ.ಗ್ರಂಥಾಲಯಕ್ಕೂ 1.20 ಕೋಟಿ ಮೌಲ್ಯದ ಪುಸ್ತಕ ಖರೀದಿಗೆ ಪುಸ್ತಕಗಳನ್ನು ಇದೇ ಮೇಳದಲ್ಲಿ ಗುರುತಿಸಲಾಗುವುದು~ ಎಂದು ಹೇಳಿದರು.ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಬೆಂಗಳೂರು ವಿ.ವಿ. ಕುಲಸಚಿವ ಡಾ.ಆರ್.ಎಂ.ರಂಗನಾಥ್, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಆರ್.ಸುಬ್ರಹ್ಮಣ್ಯ, ಗ್ರಂಥಾಲಯಾಧಿಕಾರಿ ಡಾ.ಪಿ.ವಿ.ಕೊಣ್ಣೂರ, ಇಂಡ್ಯಾ ಕಾಮಿಕ್ಸ್‌ನ ಮುಖ್ಯಸ್ಥ ರಘುರಾಮ್ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.