ಸೋಮವಾರ, ಮೇ 17, 2021
23 °C

ಅರಳಲಿದೆ ಕನಸು 6 ಜಿಲ್ಲೆಗಳಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹೈದರಾಬಾದ್- ಕರ್ನಾಟಕ ಭಾಗದ ಜನರ ಒಂದೂವರೆ ದಶಕಗಳ ಕನಸು ಈಡೇರುವ ಕಾಲ ಸಮೀಪಿಸುತ್ತಿದೆ. ತೀವ್ರ ನಿರ್ಲಕ್ಷ್ಯಕ್ಕೊಳಗಾಗಿರುವ ಗುಲ್ಬರ್ಗ, ಯಾದಗಿರಿ, ಬೀದರ್,  ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಅವಕಾಶವಾಗುವಂತೆ ಸಂವಿಧಾನದ 371ನೇ ಕಲಮಿಗೆ ಅಗತ್ಯ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಆರು ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಜತೆಗೆ ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ ಸೇರಿದಂತೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರತ್ಯೇಕ ಮೀಸಲಾತಿ ಒದಗಿಸುವ ಕುರಿತು ಸರ್ಕಾರ ಪರಿಶೀಲಿಸುತ್ತಿದೆ. ಉದ್ಯೋಗ ಮೀಸಲಾತಿ ವ್ಯಾಪ್ತಿಗೆ ರಾಜ್ಯ ಮಟ್ಟದ ಗ್ರೂಪ್ `ಎ~ ಮತ್ತು ಗ್ರೂಪ್ `ಬಿ~ ಹುದ್ದೆಗಳು ಸೇರಿಸಬಹುದು. ಈ ಬಗ್ಗೆ ರಾಜ್ಯ ನಿರ್ಧರಿಸಬೇಕು ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಸಂವಿಧಾನ ತಿದ್ದುಪಡಿ ಕರಡು ಈಗಾಗಲೇ ಸಿದ್ಧವಾಗಿದ್ದು, ಕಾನೂನು ಹಾಗೂ ಗೃಹ ಸೇರಿದಂತೆ ಹಲವು ಸಚಿವಾಲಯಗಳು ಪರಿಶೀಲಿಸಿವೆ. ಕೇಂದ್ರ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಕಾರ್ಮಿಕ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ, ಹೈದರಾಬಾದ್- ಕರ್ನಾಟಕ ಭಾಗದ ಲೋಕಸಭಾ ಸದಸ್ಯರಾದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ಕೆ.ಬಿ. ಶಾಣಪ್ಪ ತಿದ್ದುಪಡಿ ಕರಡಿನ ಮುಖ್ಯಾಂಶಗಳನ್ನು ಅಧ್ಯಯನ ಮಾಡಿ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಆಂಧ್ರದ ತೆಲಂಗಾಣಕ್ಕಿಂತ ಉತ್ತಮವಾದ ಸ್ಥಾನಮಾನ ಹೈದರಾಬಾದ್-ಕರ್ನಾಟಕ ಭಾಗಕ್ಕೆ ಸಿಗಲಿದೆ. ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ಪ್ರತ್ಯೇಕ `ಅಭಿವೃದ್ಧಿ ಮಂಡಳಿ~ ಅಸ್ತಿತ್ವಕ್ಕೆ ಬರಲಿದೆ. ಚುನಾಯಿತ ಹಾಗೂ ನಾಮಕರಣ ಸದಸ್ಯರು ಮಂಡಳಿಯಲ್ಲಿರುತ್ತಾರೆ. ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯದಿಂದ ಬರುವ ಹಣ ನೇರವಾಗಿ ಮಂಡಳಿಗೆ  ಬಿಡುಗಡೆ ಆಗಲಿದೆ. ಮಂಡಳಿ ಅಗತ್ಯ ತೀರ್ಮಾನಗಳನ್ನು ಕೈಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ಕುರಿತು ರಾಜ್ಯ ಸರ್ಕಾರ ಪ್ರತ್ಯೇಕ ನಿಯಮ ರೂಪಿಸಬೇಕಾಗುತ್ತದೆ. ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ಮಾಡುವುದರಿಂದ ಅತೀ ಹೆಚ್ಚು ಹಣ ಅಭಿವೃದ್ಧಿಗೆ ದೊರೆಯಲಿದೆ. ಆದರೆ, ಯೋಜನೆಗಳನ್ನು ಗುರುತಿಸಿ ಹಣ ಬಿಡುಗಡೆ ಮಾಡಲು ಚಿಂತಿಸಲಾಗುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಮೊದಲಿಗೆ ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ವಿಶೇಷ ಸ್ಥಾನಮಾನ (ಅಭಿವೃದ್ಧಿಗೆ ಮಾತ್ರ) ನೀಡುವುದಾಗಿ ಯುಪಿಎ ಸರ್ಕಾರ ಹೇಳಿತ್ತು. ಆದರೆ, ಪ್ರಗತಿ ಪಥದಲ್ಲಿ ಈ ಭಾಗದ ಜನ ಹಿಂದುಳಿದಿದ್ದಾರೆ ಎಂದು ಮನವರಿಕೆಯಾದ ಬಳಿಕ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸುವುದಕ್ಕೆ ಸಮ್ಮತಿಸಿದೆ.

ವಿಶೇಷ ಸ್ಥಾನಮಾನ ಕುರಿತು ಸಂಪುಟ ಯಾವಾಗ ತೀರ್ಮಾನ ಕೈಗೊಳ್ಳಲಿದೆ ಎಂದು ಗೊತ್ತಾಗಿಲ್ಲ. ಗುರಿ ತಲುಪಲು ಇನ್ನು ಬಹಳ ದೂರ ಕ್ರಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಕೇಂದ್ರದಲ್ಲಿರುವ ಜನ ಪ್ರತಿನಿಧಿಗಳು ಒತ್ತಡ ಮುಂದುವರಿಸಬೇಕಿದೆ. ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಗೆ ಮೊದಲು ತೀರ್ಮಾನ ಸಾಧ್ಯವಾಗಬಹುದು ಎಂಬ ವಿಶ್ವಾಸವನ್ನು ಮೂಲಗಳು ವ್ಯಕ್ತಪಡಿಸಿವೆ.

ಈಚೆಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಜಯಪ್ರಕಾಶ್ ಹೆಗ್ಡೆ ಅವರನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪರಿಚಯಿಸಿದ ವೇಳೆ ವಿಶೇಷ ಸ್ಥಾನಮಾನ ಕುರಿತು ಮನವಿ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

`ಹಿಂದಿನ ಎನ್‌ಡಿಎ ಸರ್ಕಾರ ಹೈದರಾಬಾದ್- ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕೊಡಲು ಸಾದ್ಯವಿಲ್ಲ~ ಎಂಬ ಕಾರಣ ನೀಡಿ ಪ್ರಸ್ತಾವನೆ ತಿರಸ್ಕರಿಸಿತ್ತು. ಈಗ ಯುಪಿಎ ಸರ್ಕಾರ ಒಪ್ಪಿಕೊಂಡಿದೆ. ಸಂವಿಧಾನ ತಿದ್ದುಪಡಿ ಕರಡು ಸಂಪುಟದ ಒಪ್ಪಿಗೆ ಪಡೆದ ಬಳಿಕ ಸಂಸತ್ತಿನ ಯಾವುದಾದರೂ ಒಂದು ಸದನದಲ್ಲಿ ಮಂಡನೆ ಆಗಬೇಕು. ಬಳಿಕ ಸ್ಥಾಯಿ ಸಮಿತಿ ಪರಿಶೀಲನೆಗೆ ಹೋಗಬೇಕು.

ಲೋಕಸಭೆಯಲ್ಲಿ ಮಸೂದೆ ಮಂಡನೆಯಾದರೆ ಅದರ ಅವಧಿ ಮುಗಿಯುವುದರೊಳಗೆ ಅಂಗೀಕಾರ ಪಡೆಯಬೇಕು. ಲೋಕಸಭೆ ಅವಧಿ 2014ಕ್ಕೆ ಮುಗಿಯಲಿದೆ. ಈ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಮಸೂದೆ ವ್ಯರ್ಥವಾಗಲಿದೆ. ರಾಜ್ಯಸಭೆಯಲ್ಲಿ ಮಂಡನೆಯಾದರೆ ಈ ಸಮಸ್ಯೆ ಇರುವುದಿಲ್ಲ.

ಹೈದರಾಬಾದ್- ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಬೇಕೆಂಬ ಕೂಗು ಮೊದಲ ಬಾರಿಗೆ ಕೇಳಿ ಬಂದಿದ್ದು 1996ರಲ್ಲಿ. ಅನಂತರ ವೈಜನಾಥ್ ಪಾಟೀಲರ ನೇತೃತ್ವದಲ್ಲಿ ಹೋರಾಟವೂ ನಡೆದಿತ್ತು. ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕ ಸಚಿವರಾದ ಬಳಿಕ ನಡೆದ ಸತತ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ ಬೇಡಿಕೆಗೆ ಸ್ಪಂದಿಸಲು ಮುಂದಾಗಿದೆ. ಗೃಹ ಸಚಿವ ಪಿ. ಚಿದಂಬರಂ ಶನಿವಾರ ಹೈದರಾಬಾದ್- ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತು ಸಚಿವ ಸಂಪುಟ ಸದ್ಯದಲ್ಲೇ ತೀರ್ಮಾನಿಸಲಿದೆ ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.